ಟೂಲ್‌ಕಿಟ್ ಪ್ರಕರಣದಲ್ಲಿ ಬಂಧನವಾಗಿದ್ದ ಬೆಂಗಳೂರು ಮೂಲದ ದಿಶಾ ರವಿಗೆ ದೆಹಲಿ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ. ಇದಕ್ಕೆ ಸಂಬಂಧಿಸದಂತೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿದ್ದು, ದಿಶಾಳ ಪೋಷಕರೂ ಕೂಡ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಪತ್ರಕರ್ತರಿಗೆ ಹೇಳಿಕೆ ನೀಡಿದ ದಿಶಾಳ ತಾಯಿ ಮಂಜುಳ, “ಈಗ ವ್ಯವಸ್ಥೆಯ ಮೇಲಿನ ನಮ್ಮ ನಂಬಿಕೆ ಬಲಗೊಂಡಿದೆ. ನಮ್ಮ ಮಗಳಿಗೆ ಜಾಮೀನು ಸಿಕ್ಕಿರುವುದಕ್ಕೆ ಸಂತೋವಾಗಿದೆ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ದಿಶಾಳ ತಂದೆಯೂ ಜೊತೆಗಿದ್ದರು. ತಮ್ಮ ಮಗಳಿಗೆ ಯಾವಾಗಲೂ ಧೈರ್ಯ ಹೇಳುತ್ತಿದ್ದರು ಎಂದು ಮಂಜುಳಾ ಹೇಳಿದರು.
ಇದನ್ನೂ ಓದಿ: ನಾನು ಶಂಖ ಊದುತ್ತೇನೆ, ಮಾಸ್ಕ್ ಧರಿಸುವ ಅಗತ್ಯವಿಲ್ಲ – ಬಿಜೆಪಿ ಸಚಿವೆ ಉಷಾ ಠಾಕೂರ್
“ಈಗ ನಮ್ಮ ಮಗಳು ಹೊರಬರುತ್ತಾಳೆ. ಆಕೆ ಯಾವುದೇ ತಪ್ಪು ಮಾಡಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನನ್ನ ಮಗಳ ಪರವಾಗಿ ನಿಂತ ಎಲ್ಲರಿಗೂ ಧನ್ಯವಾದಗಳು” ಎಂದು ಕೃತಜ್ಞತೆ ಸಲ್ಲಿಸಿದರು.
ದಿಶಾಳ ತಂದೆ ಮಾತನಾಡಿ, “ನಮಗೆ ನ್ಯಾಯ ಸಿಕ್ಕಿದೆ” ಎಂದು ಹೇಳಿದರು.
ಜಾಗತಿಕ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್ ರೈತ ಹೋರಾಟಕ್ಕೆ ಸಂಬಂಧಿಸಿದಂತೆ ಟೂಲ್‌ಕಿಟ್ ಅನ್ನು ಹಂಚಿಕೊಂಡಿದ್ದರು. ಇದನ್ನು 22 ವರ್ಷದ ದಿಶಾ ಕೂಡ ಹಂಚಿಕೊಂಡಿದ್ದರು. ಹಾಗಾಗಿ ಫೆ. 13 ರಂದು ದೆಹಲಿ ಪೊಲೀಸರು ಬೆಂಗಳೂರಿನಿಂದ ದಿಶಾಳನ್ನು ಬಂಧಿಸಿದ್ದರು.
ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಲಕ್ಷಾಂತರ ರೈತರು ಕಳೆದ 90 ದಿನಗಳಿಂದ ದೆಹಲಿಯ ಗಡಿಗಳಲ್ಲಿ ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟವನ್ನು ಹತ್ತಿಕ್ಕಲು ಸರ್ಕಾರವು ಹತ್ತಾರು ಅನೈತಿಕ ಮಾರ್ಗಗಳನ್ನು ಅನುಸರಿಸುತ್ತಿದೆ. ಅದರಲ್ಲಿ ದಿಶಾ ಬಂಧನವೂ ಒಂದು ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪಮೇಲಾ-ಡ್ರಗ್ಸ್ ಪ್ರಕರಣ : ಬಂಗಾಳ ಬಿಜೆಪಿ ನಾಯಕ ರಾಕೇಶ್ ಅರೆಸ್ಟ್


