ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನೆ (ಯುಬಿಟಿ) ಶಾಸಕ ಆದಿತ್ಯ ಠಾಕ್ರೆ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಕೆಯ ತಂದೆ ಸತೀಶ್ ಸಾಲಿಯಾನ್ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಇದರಿಂದ ದಿಶಾ ಸಾಲಿಯಾನ್ ಸಾವನ್ನಪ್ಪಿ ಸುಮಾರು 5 ವರ್ಷಗಳ ಬಳಿಕ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಮಹಾರಾಷ್ಟ್ರದಲ್ಲಿ ರಾಜಕೀಯ ಕಾಳಕಗಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿಯ ಸದಸ್ಯರು ಗುರುವಾರ ವಿಧಾನಮಂಡಲದ ಉಭಯ ಸದನಗಳಲ್ಲಿ ದಿಶಾ ಸಾಲಿಯಾನ್ ಸಾವಿನ ವಿಚಾರವನ್ನು ಪ್ರಸ್ತಾಪಿಸಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ಮಹಾಯುತಿ ಶಾಸಕರು ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗಿಳಿದು ದಿಶಾ ಸಾವಿನ ತನಿಖೆಗೆ ಒತ್ತಾಯಿಸಿದರು. ಗೃಹ ಖಾತೆ ಸಚಿವ ಯೋಗೇಶ್ ಕದಮ್ ಅವರು, ಪ್ರಕರಣದ ಎಸ್‌ಐಟಿ ತನಿಖೆ ಇನ್ನೂ ಮುಂದುವರೆದಿದೆ ಮತ್ತು ದಿಶಾ ಸಾಲಿಯಾನ್ ಅವರ ತಂದೆ ರಾಜ್ಯ ಸರ್ಕಾರವನ್ನು ತಮ್ಮ ಅರ್ಜಿಯಲ್ಲಿ ಕಕ್ಷಿದಾರರನ್ನಾಗಿ ಮಾಡಿದ್ದಾರೆ ಎಂದು ತಿಳಿಸಿದರು.
“ನಾವು ನ್ಯಾಯಾಲಯದ ಆದೇಶದಂತೆ ಕಾರ್ಯನಿರ್ವಹಿಸುತ್ತೇವೆ. ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಬಿಡುವುದಿಲ್ಲ” ಎಂದರು.
ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ಆಗಿದ್ದ ದಿಶಾ, ಜೂನ್ 8,2020 ರಂದು ಮುಂಬೈ ಉಪನಗರದ ಮಲಾಡ್‌ನಲ್ಲಿರುವ ಬಹುಮಹಡಿ ಕಟ್ಟಡದ 14 ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು. ಪೊಲೀಸರು ಇದು ಆಕಸ್ಮಿಕ ಸಾವು ಎಂದು ವರದಿ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ, “ಸಿಐಡಿ ತನಿಖೆಯಲ್ಲಿ ಆದಿತ್ಯ ಠಾಕ್ರೆಗೂ ಪ್ರಕರಣಕ್ಕೂ ಯಾವುದೇ ಸಂಬಂಧ ಕಂಡುಬಂದಿಲ್ಲ. ಆದರೂ, ಬಿಜೆಪಿ ನಮ್ಮ ಕುಟುಂಬ ಸದಸ್ಯರನ್ನು ಗುರಿಯಾಗಿಸಿಕೊಂಡು ಮಾನಹಾನಿ ಮಾಡುತ್ತಿದೆ. ಆದಿತ್ಯ ಯಾವುದೇ ತಪ್ಪು ಮಾಡಿಲ್ಲ. ಹೀಗಿರುವಾಗ, ಅವರು ಏಕೆ ಭಯಪಡಬೇಕು? ನಾವು ಯಾವುದೇ ತನಿಖೆಗೆ ಮುಕ್ತರಾಗಿದ್ದೇವೆ” ಎಂದಿದ್ದಾರೆ.
“ನಾಗ್ಪುರ ಹಿಂಸಾಚಾರದಲ್ಲಿ ಬಿಜೆಪಿ ನಾಯಕರ ಬೆರಳುಗಳು ಸುಟ್ಟುಹೋಗಿವೆ. ಆದ್ದರಿಂದ ದಿಶಾ ಸಾಲಿಯಾನ್ ವಿಷಯವನ್ನು ಉದ್ದೇಶಪೂರ್ವಕವಾಗಿ ಕೆಣಕಲಾಗಿದೆ” ಎಂದು ಹೇಳಿದ್ದಾರೆ.
“ಈ ಪ್ರಕರಣವು ಪ್ರಸ್ತುತ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಆದ್ದರಿಂದ, ನಾನು ಪ್ರತಿಕ್ರಿಯೆ ನೀಡುವುದಿಲ್ಲ” ಎಂದು ಆದಿತ್ಯ ಠಾಕ್ರೆ ತಿಳಿಸಿದ್ದಾರೆ.
“ಜೂನ್ 8, 2020ರಂದು ದಿಶಾ ತಮ್ಮ ಮನೆಯಲ್ಲಿ ಪಾರ್ಟಿ ಆಯೋಜಿಸಿದ್ದರು. ಅದರಲ್ಲಿ ಆದಿತ್ಯ ಠಾಕ್ರೆ, ನಟರಾದ ಸೂರಜ್ ಪಾಂಚೋಲಿ ಮತ್ತು ಡಿನೋ ಮೋರಿಯಾ ಸೇರಿದಂತೆ ಇತರರು ಭಾಗವಹಿಸಿದ್ದರು. ಪ್ರತ್ಯಕ್ಷದರ್ಶಿಗಳ ಪ್ರಕಾರ, ದಿಶಾ ಮೇಲೆ ‘ಸಾಮೂಹಿಕ ಅತ್ಯಾಚಾರ’ ಎಸಗಲಾಗಿದೆ. ಆಕೆಯನ್ನು ಬಂಧಿಸಿಟ್ಟು ಕ್ರೂರ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ” ಎಂದು ದಿಶಾ ತಂದೆ ಸತೀಶ್ ಸಾಲಿಯಾನ್ ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಆರೋಪಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.


