ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಮುಖಂಡರು ಮತದಾರರಿಗೆ ಹಣ, ಮದ್ಯ ಮತ್ತು ಇತರೆ ಮೌಲ್ಯಯುತ ಉಡುಗೊರೆಗಳನ್ನು ನೀಡುತ್ತಿರುವ ಆರೋಪ ಕೇಳಿಬಂದಿದ್ದು, ಕೂಡಲೇ ಹಣ ಹಂಚಿದ ಬಿಜೆಪಿ ಅಭ್ಯರ್ಥಿಯನ್ನು (ರಾಜೇಶ್ ಗೌಡ) ಅನರ್ಹಗೊಳಿಸಬೇಕೆಂದು ಕಾಂಗ್ರೆಸ್ ಮುಖಂಡರು ಚುನಾವಣಾ ಆಯೋಗಕ್ಕೆ ದೂರು ನೀಡಿ ಒತ್ತಾಯಿಸಿದ್ದಾರೆ.
ಕೆಪಿಸಿಸಿಯ ಕಾನೂನು ಸುಧಾರಣಾ ವಿಭಾಗದ ಅಧ್ಯಕ್ಷ ಮತ್ತು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ನೇತೃತ್ವದ ನಿಯೋಗ ಬೆಂಗಳೂರಿನಲ್ಲಿ ರಾಜ್ಯ ಚುನಾವಣಾಧಿಕಾರಿಗಳನ್ನು ಭೇಟಿ ಮಾಡಿ, ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಮತ್ತು ಅವರ ಏಜೆಂಟರು ಮತ್ತು ಪಕ್ಷದ ಕಾರ್ಯಕರ್ತರು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಹಣ ಹಂಚಿಕೆ ಅಡೆತಡೆಯಿಲ್ಲದೆ ಸಾಗುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಅವರು ಹುಲಿಕುಂಟೆ ಹೋಬಳಿಯ ಚಿರತಹಳ್ಳಿಯಲ್ಲಿ ಅಕ್ಟೋಬರ್ 26ರಂದು ರಾತ್ರಿ 9.30ರ ಸಮಯದಲ್ಲಿ ಮಹಿಳೆಯರನ್ನು ಒಂದೆಡೆ ಸೇರಿಸಿ ಹಣ ಹಂಚಿಕೆ ಮಾಡಿದ್ದಾರೆ. ಹಾಸನದ ಬಿಜೆಪಿ ಶಾಸಕ ಪ್ರೀತಂಗೌಡ ಹೇಳಿದರೆಂದು ಹಣ ಹಂಚಿಕೆ ಮಾಡುತ್ತಿದ್ದೇವೆ ಎಂದು ಭಾಷಣಕಾರರು ಹೇಳಿದ್ದಾರೆ. ಮತದಾರರ ಮೇಲೆ ಪ್ರಭಾವ ಬೀರುವ ಹಿನ್ನೆಲೆಯಲ್ಲಿ ಲಂಚ, ಭ್ರಷ್ಟಾಚಾರಕ್ಕೆ ಬಿಜೆಪಿ ಅಭ್ಯರ್ಥಿ, ಏಜೆಂಟರು ಮತ್ತು ಬಿಜೆಪಿ ಮುಖಂಡರು ಎಡೆಮಾಡಿಕೊಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಶಿರಾ ಉಪಚುನಾವಣೆ: ಮತದಾರರಿಗೆ ಹಣ ಹಂಚುತ್ತಿರುವ ಬಿಜೆಪಿ?
ಶಿರಾ ಕ್ಷೇತ್ರದ ಸುಮಾರು ಒಂದು ಲಕ್ಷ ಮತದಾರರಿಗೆ ಬಿಜೆಪಿ ಮುಖಂಡರು ಹಣ ಹಂಚಿಕೆ ಮಾಡಿದ್ದಾರೆಂಬ ಆರೋಪ ಇದೆ. ಕನಿಷ್ಠ 2 ಕೋಟಿ ರೂಗಳಷ್ಟು ಹಣ ಹಂಚಿಕೆ ಮಾಡಲಾಗಿದೆ. ಇದು ಭಾರತ ದಂಡ ಸಂಹಿತೆ 171 ಬಿ, ಸಿ, ಇ, ಮತ್ತು ಜಿ ಪ್ರಕಾರ ಅಪರಾಧವಾಗಿದ್ದು ಅಭ್ಯರ್ಥಿಯನ್ನು ಕೂಡಲೇ ಅನರ್ಹಗೊಳಿಸಬೇಕು ಎಂದು ದೂರಿನಲ್ಲಿ ಕಾಂಗ್ರೆಸ್ ಆಗ್ರಹಿಸಿದೆ.
ಚುನಾವಣೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಯಬೇಕು. ಆದರೆ ಹಣ, ಮದ್ಯ, ಉಡುಗೊರೆಗಳನ್ನು ಹಂಚುವ ಮೂಲಕ ಕಾನೂನುಗಳನ್ನು ಗಾಳಿಗೆ ತೂರಲಾಗಿದೆ. ಇದು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬುದನ್ನು ತೋರಿಸುತ್ತದೆ. ಇದೇ ವೇಳೆ ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ಗೌಡರು ಕೂಡ ಹಣ ಹಂಚಿಕೆ ಮಾಡಿದ್ದಾರೆ ಎಂಬುದಕ್ಕೆ ಅವರು ಮಾತನಾಡಿರುವ ಆಡಿಯೋವನ್ನು ದೂರಿನ ಜೊತೆ ನೀಡಲಾಗಿದೆ. ದೊಡ್ಡ ಪ್ರಮಾಣದಲ್ಲಿ ಹಣ ವರ್ಗಾವಣೆಯಾಗಿದೆ. ಹೀಗಾಗಿ ಈ ಅಕ್ರಮದಲ್ಲಿ ತೊಡಗಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.
ನಿಯೋಗದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಅಧ್ಯಕ್ಷ ಪೊನ್ನಣ್ಣ ಹಾಗೂ ಬಸವರಾಜು ಇದ್ದರು.
ಇದನ್ನೂ ಓದಿ: ಶಿರಾ ಉಪಚುನಾವಣೆ: ಹಿರಿಯರು, ವಿಶೇಷಚೇತನರಿಗೆ ಹಣ ಹಂಚಿಕೆ ಆರೋಪ


