ಬೆಂಗಳೂರು ಮೂಲದ ವೈದ್ಯೆಯೊಬ್ಬರು ತನ್ನ 8 ವರ್ಷದ ಮಗಳಿಗೆ ಆಹಾರ ನೀಡಲು ಸಾಧ್ಯವಾಗ ಕಾರಣಕ್ಕೆ ವಿಷವುಣಿಸಿರುವ ಆಘಾತಕಾರಿ ಘಟನೆ ತಮಿಳುನಾಡಿನ ಅವಿನಾಶಿಯಲ್ಲಿ ಶುಕ್ರವಾರ ನಡೆದಿದೆ.
“ಆರೋಪಿ ಡಾ.ಶೈಲಜಾ (39) ಕ್ಲಿನಿಕ್ ನಡೆಸುತ್ತಿದ್ದರು. ಕೆಲವು ಕಾರಣಗಳಿಂದಾಗಿ ಆಕೆಯ ಕ್ಲಿನಿಕ್ ತಿಂಗಳ ಹಿಂದೆ ಮುಚ್ಚಲ್ಪಟ್ಟಿತು. ನಂತರ, ಆಕೆ ತನ್ನ ತಂದೆಯ ಮೇಲೆ ಅವಲಂಬಿತವಾಗಿ, ತಂದೆಯ ಪಿಂಚಣಿ ಹಣದಿಂದ ಬದುಕುತ್ತಿದ್ದರು. ನಿರುದ್ಯೋಗದಿಂದಾಗಿ ಅವರು ತೀವ್ರ ಖಿನ್ನತೆಗೆ ಒಳಗಾಗಿದ್ದರು. ಹಾಗಾಗಿ ತನ್ನ ಮಗಳನ್ನು ಕೊಲ್ಲಲು ನಿರ್ಧರಿಸಿದರು” ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ಶೈಲಾಜಾ ಶುಕ್ರವಾರ, ತಿರುಪ್ಪೂರ್‌ಗೆ ಪ್ರಯಾಣಿಸುತ್ತಿದ್ದರು. ಆದರೆ ಸೆವೂರ್ ಬಳಿ ಇಳಿದು ಮಗಳಿಗೆ ಇಲಿ ಪಾಷಾಣವನ್ನು ಕೊಟ್ಟಿದ್ದರು. ಹಾಗಾಗಿ ಬಾಲಕಿ ಶೀಘ್ರದಲ್ಲೇ ಪ್ರಜ್ಞೆ ತಪ್ಪಿದಳು. ನಂತರ ಆಕೆ ಪ್ರಜ್ಞೆತಪ್ಪಿದ ಮಗಳನ್ನು ಹೊತ್ತೊಯ್ಯುವಾಗ ಸ್ಥಳೀಯರು ನೋಡುತ್ತಿದ್ದಂತೆ ಮಗುವನ್ನು ನೆಲಕ್ಕೆ ಎಸೆದು ಓಡಿಹೋದರು. ಆಘಾತಕ್ಕೊಳಗಾದ ನಿವಾಸಿಗಳು ಮಗುವನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: 24 ದಲಿತ ಕುಟುಂಬಗಳಿಗೆ ಬಹಿಷ್ಕಾರ – ಗ್ರಾಮೀಣ ಅಭಿವೃದ್ಧಿ ಸಮಿತಿ ಸದಸ್ಯರ ವಿರುದ್ಧ ಪ್ರಕರಣ!
ಮಗುವಿನ ಸ್ಥಿತಿ ಗಂಭೀರವಾಗಿದ್ದರಿಂದ ಶುಕ್ರವಾರ ಸಂಜೆ ಕೊಯಮತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದರ ನಡುವೆ, ಶೈಲಜಾ ಸೆವೂರ್ ಬಸ್ ನಿಲ್ದಾಣದ ಬಳಿ ಅಲೆದಾಡುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.
ವಿಚಾರಣೆ ವೇಳೆ ಮಾತನಾಡಿದ ಶೈಲಾಜಾ, “ತಂಜಾವೂರು ಮೂಲದ ಮುತ್ತುಸಾಮಿ (40) ಎಂಬಾತನನ್ನು ಮದುವೆಯಾಗಿದ್ದು, ತನ್ನ ಗಂಡ ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. 5 ವರ್ಷಗಳ ಹಿಂದೆ ನಮಗೆ ವಿಚ್ಚೇದನವಾಗಿತ್ತು” ಎಂದು ಹೇಳಿದ್ದಾರೆ.
“ಬಾಲಕಿಗೆ ಆಹಾರ ನೀಡಲು ಸಾಧ್ಯವಾಗದ ಕಾರಣ ಮಗುವನ್ನು ಕೊಲ್ಲಲು ಶೈಲಾಜಾ ನಿರ್ಧರಿಸಿದ್ದಳು. ಆಕೆಯ ಮಾನಸಿಕ ಸ್ಥಿತಿ ಅಸ್ಥಿರವಾಗಿದೆ. ಹಾಗಾಗಿ ಆಕೆಯನ್ನು ಅವಿನಾಶಿಯ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮತ್ತೊಂದು ಮಾತುಕತೆಗೆ ಮುಂದಾದ ಕೇಂದ್ರ – ತಮ್ಮ ನಿಲುವು ಸ್ಪಷ್ಟಪಡಿಸಿದ ರೈತ ಮುಖಂಡರು


