ನೀಲಿ ಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್ ಜೊತೆಗಿನ ಸಂಬಂಧ ಮುಚ್ಚಿಡಲು ಹಣ ನೀಡಿದ ಪ್ರಕರಣ (ಹಷ್ ಮನಿ ಪ್ರಕರಣ)ದ ಎಲ್ಲಾ ಆರೋಪಗಳಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೋಷಿ ಎಂದು ಸಾಬೀತಾಗಿದೆ. ಜುಲೈ 11ರಂದು ನ್ಯಾಯಾಲಯ ಶಿಕ್ಷೆ ಪ್ರಕಟಿಸುವ ಸಾಧ್ಯತೆಯಿದೆ.
ಈ ಮೂಲಕ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗುತ್ತಿರುವ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಎಂಬ ಕುಖ್ಯಾತಿ ಡೊನಾಲ್ಡ್ ಟ್ರಂಪ್ ಅವರಿಗೆ ಸಂದಿದೆ. ಟ್ರಂಪ್ ಅವರನ್ನು ಅಧ್ಯಕ್ಷೀಯ ಅಭ್ಯರ್ಥಿ ಎಂದು ಘೋಷಿಸಲಿರುವ ರಿಪಬ್ಲಿಕನ್ ಪಕ್ಷದ ಸಮಾವೇಶಕ್ಕೂ ಮುನ್ನ ಈ ಬೆಳವಣಿಗೆ ನಡೆದಿದೆ.
ವಿಚಾರಣೆಯ ಸಮಯದಲ್ಲಿ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಅಲ್ಲಗಳೆದಿರುವ ಟ್ರಂಪ್, ತಾನು ನಿರ್ದೋಷಿ ಎಂದು ವಾದಿಸಿದ್ದು, ನ್ಯಾಯಾಲಯದ ತೀರ್ಪಿನ ವಿರುದ್ದ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ.
Former US President Donald Trump found guilty on all 34 felony charges in hush money trial
Read @ANI Story | https://t.co/u8P0JN50HT#Trump #HushMoneyTrial #US pic.twitter.com/35zuy7pQvc
— ANI Digital (@ani_digital) May 30, 2024
ಟ್ರಂಪ್, 2006ರ ಲೈಂಗಿಕ ಸಂಬಂಧ ಬಾಯ್ಬಿಡದಂತೆ ಸ್ಟಾರ್ಮಿ ಡೇನಿಯಲ್ಸ್‌ಗೆ 1,30,000 ಡಾಲರ್ ಪಾವತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಟ್ರಂಪ್ ಈ ಆರೋಪವನ್ನು ಅಲ್ಲಗಳೆದಿದ್ದು, ಡೇನಿಯಲ್ಸ್ ಸುಳ್ಳು ಹೇಳಿ ತನ್ನನ್ನು ಸುಲಿಗೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡೆನ್ ಅವರು 2020ರಲ್ಲಿ ಗೆಲುವು ಸಾಧಿಸಿದ ನಂತರ ಚುನಾವಣೆಯ ಫಲಿತಾಂಶಗಳನ್ನು ರದ್ದುಗೊಳಿಸಲು ಸಂಚು ರೂಪಿಸಿದ್ದು ಮತ್ತು ಶ್ವೇತ ಭವನವನ್ನು ತೊರೆದ ನಂತರ ರಹಸ್ಯ ದಾಖಲೆಗಳನ್ನು ಸಂಗ್ರಹಿಸಿದ್ದು ಸೇರಿದಂತೆ ಇನ್ನೂ ಹಲವು ಪ್ರಕರಣಗಳು ಟ್ರಂಪ್ ಮೇಲಿವೆ.
ಆರೋಪ ಸಾಬೀತಾದರೂ, ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಟ್ರಂಪ್‌ಗೆ ಯಾವುದೇ ರೀತಿಯ ನಿರ್ಬಂಧವಿಲ್ಲ. ಅಲ್ಲದೆ ಟ್ರಂಪ್ ಸದ್ಯಕ್ಕೆ ಜೈಲಿಗೆ ಹೋಗುವ ಸಾಧ್ಯತೆಯಿಲ್ಲ ಎಂದು ವರದಿಗಳು ಹೇಳಿವೆ.
ಸ್ಟಾರ್ಮಿ ಡೇನಿಯಲ್ಸ್ ಮತ್ತು ಟ್ರಂಪ್ 2006ರಲ್ಲಿ ಲೈಂಗಿಕ ಸಂಬಂಧ ಹೊಂದಿದ್ದರು. ಈ ವಿಚಾರವನ್ನು ಡೇನಿಯಲ್ಸ್ 2011ರಲ್ಲಿ ಬಹಿರಂಗಗೊಳಿಸಿದ್ದರು. ಇದು 2016ರಲ್ಲಿ ಅಧ್ಯಕ್ಷೀಯ ಚುನಾವಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇತ್ತು. ಹಾಗಾಗಿ, ಸ್ಟಾರ್ಮಿ ಡೇನಿಯಲ್ಸ್ ಬಾಯಿ ಮುಚ್ಚಿಸಲು ಟ್ರಂಪ್ ಹಣ ಪಾವತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣವನ್ನು ‘ಹಷ್ ಮನಿ’ ಕೇಸ್ ಎನ್ನಲಾಗುತ್ತದೆ. ಗೌಪ್ಯತೆ ಕಾಪಾಡಲು ನೀಡುವ ಹಣಕ್ಕೆ ‘ಹಷ್ ಮನಿ’ ಎಂದು ಹೇಳಲಾಗುತ್ತದೆ.
ನ್ಯಾಯಾಲಯದ ತೀರ್ಪಿನ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಟ್ರಂಪ್, “ನಾನು ಈ ಪ್ರಕರಣದಲ್ಲಿ ಅಮಾಯಕನಾಗಿದ್ದೇನೆ. ನಿಜವಾದ ತೀರ್ಪು ಮತದಾರರಿಂದ ಬರಲಿದೆ. ಈ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದ್ದು, ನಾನು ಈ ತೀರ್ಪನ್ನು ಒಪ್ಪುವುದಿಲ್ಲ” ಎಂದಿದ್ದಾರೆ.
ಟ್ರಂಪ್ ಪ್ರಕರಣದ ಬಗ್ಗೆ ಮಾತನಾಡಿರುವ ಅಧ್ಯಕ್ಷ ಜೋ ಬೈಡೆನ್, “ಯಾರೂ ಕಾನೂನಿಗಿಂತ ಮೇಲಲ್ಲ ಎಂಬುವುದನ್ನು ತೀರ್ಪು ತೋರಿಸಿದೆ. ನಮ್ಮ ಪ್ರಜಾಪ್ರಭುತ್ವಕ್ಕೆ ಟ್ರಂಪ್ ಒಡ್ಡುವ ಬೆದರಿಕೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ಬಂಧನ: ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಎಸ್‌ಐಟಿ ಅಧಿಕಾರಿಗಳು


