ಭಾರತ- ಪಾಕಿಸ್ತಾನದ ಮೇಲೆ ವ್ಯಾಪಾರ ಒತ್ತಡವನ್ನು ಹೆಚ್ಚಿಸುವ ಮೂಲಕ ಉಭಯ ರಾಷ್ಟ್ರಗಳ ನಡುವಿನ ಯುದ್ಧವನ್ನು ತಪ್ಪಿಸಿದೆ ಎಂಬ ತಮ್ಮ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ (ಅ.29) ಪುನರುಚ್ಚರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರನ್ನು ‘ಅತ್ಯಂತ ಸುಂದರ’ ಮತ್ತು ‘ಕಠಿಣ ವ್ಯಕ್ತಿ’ ಎಂದು ಹೊಗಳಿದ ಟ್ರಂಪ್, ಅಮೆರಿಕ ಅಧ್ಯಕ್ಷರು ಪ್ರಧಾನಿಗೆ ಕರೆ ಮಾಡಿ ಮಾತನಾಡಿದ ಎರಡು ದಿನಗಳಲ್ಲಿ ಭಾರತ ಒತ್ತಡಕ್ಕೆ ಮಣಿದು ಯುದ್ಧವನ್ನು ನಿಲ್ಲಿಸಿತು ಎಂದು ಹೇಳಿದ್ದಾರೆ.
“ಪ್ರಧಾನಿ ಮೋದಿ ಅತ್ಯಂತ ಸುಂದರ ವ್ಯಕ್ತಿ. ಅವರೊಬ್ಬ ಕಿಲ್ಲರ್ ಮತ್ತು ಕಠಿಣ ವ್ಯಕ್ತಿ. ಅವರು ಹೋರಾಡುತ್ತೇವೆ ಎಂದರು, ಆಗ ನಾನು ವಾವ್, ಇದು ನನಗೆ ಗೊತ್ತಿರುವ ಅದೇ ವ್ಯಕ್ತಿನಾ? ಅಂದೆ” ಎಂದು ದಕ್ಷಿಣ ಕೊರಿಯಾದ ಜಿಯೊಂಗ್ಜುನಲ್ಲಿ ನಡೆದ ಎಪಿಇಸಿ (ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ) ಸಿಇಒ ಶೃಂಗಸಭೆಯಲ್ಲಿ ಟ್ರಂಪ್ ಹೇಳಿದ್ದಾರೆ.
#WATCH | US President Donald Trump says, "I'm doing a trade deal with India, and I have great respect and love for Prime Minister Modi. We have a great relationship. Likewise, the Prime Minister of Pakistan is a great guy. They have a Field Marshal. You know why he's a Field… pic.twitter.com/ZbxkpSnBl1
— ANI (@ANI) October 29, 2025
ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಅವರನ್ನೂ ಹೊಗಳಿದ ಟ್ರಂಪ್, ಅವರನ್ನು ‘ಶ್ರೇಷ್ಠ ಹೋರಾಟಗಾರ’ ಎಂದು ಕರೆದಿದ್ದಾರೆ.
“ಪಾಕಿಸ್ತಾನದ ಪ್ರಧಾನಿ ಒಬ್ಬ ಮಹಾನ್ ವ್ಯಕ್ತಿ. ಅವರ ಬಳಿ ಫೀಲ್ಡ್ ಮಾರ್ಷಲ್ ಇದ್ದಾರೆ. ಅವರು ಫೀಲ್ಡ್ ಮಾರ್ಷಲ್ ಯಾಕೆ ಅಂತ ನಿಮಗೆ ಗೊತ್ತಾ? ಅವರು ಒಬ್ಬ ಮಹಾನ್ ಹೋರಾಟಗಾರ. ಹಾಗಾಗಿ, ನನಗೆ ಅವರೆಲ್ಲರ ಪರಿಚಯವಿದೆ” ಎಂದು ಟ್ರಂಪ್ ಹೇಳಿದ್ದಾರೆ.
“ಇಬ್ಬರು ಪರಮ ಶತ್ರುಗಳ ನಡುವಿನ ಯುದ್ಧವನ್ನು ನಿಲ್ಲಿಸಿದ್ದೇನೆ ಎಂಬ ತನ್ನ ಹೇಳಿಕೆಯನ್ನು ಪುನರಾವರ್ತಿಸಿದ ಟ್ರಂಪ್, “ಇವು ಎರಡು ಪರಮಾಣು ರಾಷ್ಟ್ರಗಳು. ಅವರು ನಿಜವಾಗಿಯೂ ಅದನ್ನು ಬಳಸಲು ಹೊರಟಿದ್ದರು. ನಾನು ಪ್ರಧಾನಿ ಮೋದಿಯವರಿಗೆ ಕರೆ ಮಾಡಿ, ನಾವು ನಿಮ್ಮೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ. ಅದಕ್ಕವರು, ಇಲ್ಲ, ಇಲ್ಲ, ನಾವು ವ್ಯಾಪಾರ ಒಪ್ಪಂದ ಮಾಡಿಕೊಳ್ಳಬೇಕು ಎಂದರು. ನಾನು, ಇಲ್ಲ ನಮಗೆ ಸಾಧ್ಯವಿಲ್ಲ ಎಂದು ಮತ್ತೆ ಹೇಳಿದೆ. ನೀವು ಪಾಕಿಸ್ತಾನದೊಂದಿಗೆ ಯುದ್ಧವನ್ನು ಪ್ರಾರಂಭಿಸುತ್ತಿದ್ದೀರಿ ಎಂದೆ. ತದನಂತರ ನಾನು ಪಾಕಿಸ್ತಾನಕ್ಕೆ ಕರೆ ಮಾಡಿ, ನೀವು ಭಾರತದೊಂದಿಗೆ ಹೋರಾಡುತ್ತಿರುವುದರಿಂದ ನಾವು ನಿಮ್ಮೊಂದಿಗೆ ವ್ಯಾಪಾರ ಮಾಡುವುದಿಲ್ಲ ಎಂದು ಹೇಳಿದೆ. ಅವರು, ‘ಇಲ್ಲ, ಇಲ್ಲ ನೀವು ನಮಗೆ ಹೋರಾಡಲು ಬಿಡಬೇಕು’ ಎಂದರು. ಅವರಿಬ್ಬರೂ ಹಾಗೆ ಹೇಳಿದರು, ಅವರು ಬಲಿಷ್ಠ ಜನರು” ಎಂದಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಎರಡೂ ನಾಯಕರು ಎರಡು ದಿನಗಳ ನಂತರ ತನಗೆ ಕರೆ ಮಾಡಿ ಹೋರಾಟ ನಿಲ್ಲಿಸಿದರು ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
“ಎರಡು ದಿನದ ಬಳಿಕ ಅವರು ನನಗೆ ಕರೆ ಮಾಡಿ ಯುದ್ದ ನಿಲ್ಲಿಸಿದ್ದೇವೆ, ನಮಗೆ ಅರ್ಥವಾಯಿತು ಎಂದು ಹೇಳಿದರು. ಇದು ಹೇಗೆ ಸಾಧ್ಯ? ಎಷ್ಟು ಅದ್ಬುತವಲ್ಲವೇ? ಬೈಡೆನ್ ಹೀಗೆ ಮಾಡುತ್ತಿದ್ದರು ಎಂದು ನೀವು ಭಾವಿಸುತ್ತೀರಾ?” ಎಂದು ಟ್ರಂಪ್ ಪ್ರಶ್ನಿಸಿದ್ದಾರೆ.
ಇದಕ್ಕೂ ಕೆಲವು ಗಂಟೆಗಳ ಮೊದಲು ಟೋಕಿಯೊದಲ್ಲಿ ಮಾತನಾಡಿದ್ದ ಟ್ರಂಪ್, “24 ಗಂಟೆಗಳಲ್ಲಿ ಯುದ್ಧ ನಿಲ್ಲಿಸುವಲ್ಲಿ ಯಶಸ್ವಿಯಾದೆ” ಎಂದು ಹೇಳಿದ್ದರು.
ಮಂಗಳವಾರ ಟೋಕಿಯೊದಲ್ಲಿ ವ್ಯಾಪಾರ ನಾಯಕರೊಂದಿಗೆ ನಡೆದ ಭೋಜನಕೂಟದಲ್ಲಿ ಮಾತನಾಡಿದ್ದ ಟ್ರಂಪ್, “ಭಾರತ-ಪಾಕಿಸ್ತಾನ ಸಂಘರ್ಷದ ಸಮಯದಲ್ಲಿ ‘ಏಳು ಹೊಚ್ಚ ಹೊಸ’ ವಿಮಾನಗಳನ್ನು ಹೊಡೆದುರುಳಿಸಲಾಯಿತು ಎಂದಿದ್ದರು. ಅವು ಯಾವ ದೇಶಕ್ಕೆ ಸೇರಿದವು ಎಂಬುದನ್ನು ಸ್ಪಷ್ಟಪಡಿಸಿಲ್ಲ.
ಸುಡಾನ್‌ನ ಅಲ್-ಪಾಶೆರ್ ನಿಯಂತ್ರಣಕ್ಕೆ ಪಡೆದ ಅರೆಸೈನಿಕ ಪಡೆ ಆರ್‌ಎಸ್‌ಎಫ್ : ವ್ಯಾಪಕ ಹಿಂಸಾಚಾರದ ವರದಿ


