ಸರ್ಕಾರಿ ಶಾಲೆಗಳ ಮೂಲಭೂತ ಸೌಲಭ್ಯಗಳನ್ನು ನಿರ್ವಹಿಸುವುದಕ್ಕಾಗಿ ಮಕ್ಕಳ ಪೋಷಕರಿಂದ ಮಾಸಿಕ 100 ರೂ ದೇಣಿಗೆ ಸಂಗ್ರಹಿಸಬೇಕೆಂದು ಶಿಕ್ಷಣ ಇಲಾಖೆ ಸುತ್ತೋಲೆ ಕಳಿಸುವುದರಲ್ಲಿ ನಮ್ಮ ಪಾತ್ರವಿಲ್ಲವೆಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆಂದು ಪ್ರಜಾವಾಣಿ ವರದಿ ಮಾಡಿದೆ.
ಶಾಲೆಗಳಲ್ಲಿ ಅಗತ್ಯವಿರುವ ಖರ್ಚು ವೆಚ್ಚಗಳಿಗಾಗಿ ಪೋಷಕರಿಂದ 100 ರೂ ದೇಣಿಗೆ ಸಂಗ್ರಹಿಸಲು ಎಸ್‌ಡಿಎಂಸಿಗಳಿಗೆ ಅನುಮತಿ ನೀಡಿ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಇದರಲ್ಲಿ ಮುಖ್ಯಮಂತ್ರಿಗಳ ಅಥವಾ ನನ್ನ ಪಾತ್ರವಿಲ್ಲ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.
ಮುಂದುವರಿದು ಈ ರೀತಿ ದೇಣಿಗೆ ಸಂಗ್ರಹಿಸಿಲು ಆರ್‌ಟಿಇ ಕಾಯ್ದೆಯಲ್ಲಿ ಅವಕಾಶವಿದೆ. ಎಸ್‌ಡಿಎಂಸಿಯವರು ಮನವಿ ಮಾಡಿದ್ದರು. ಈ ರೀತಿ ಸುತ್ತೋಲೆ ಹೊರಡಿಸುವುದಕ್ಕೆ ಅಧಿಕಾರಿಗಳಿಗೆ ಕಾನೂನಿನಲ್ಲಿ ಅವಕಾಶವಿದೆ. ಎಲ್ಲವನ್ನು ಸರ್ಕಾರದ ಗಮನಕ್ಕೆ ತರಬೇಕಾಗಿಲ್ಲ ಎಂದು ಸಹ ಸಚಿವರು ಸಮರ್ಥಿಸಿಕೊಂಡಿದ್ದಾರೆ.
ಆ ನಂತರ ಇದು ಕಾಂಗ್ರೆಸ್ ಸರ್ಕಾರ ಆರಂಭ ಮಾಡಿತ್ತು. ಅವರು ಎಲ್‌ಕೆಜಿ, ಯುಕೆಜಿ ಶಾಲೆಗಳನ್ನು ಆರಂಭಿಸಿದರು. ಆದರೆ ಅಲ್ಲಿ ಪಾಠ ಮಾಡುವವರಿಗೆ ಸಂಬಳ ನೀಡುತ್ತಿಲ್ಲ. ಹಾಗಾಗಿ ಸುತ್ತೋಲೆ ಹೊರಡಿಸಲಾಗಿದೆ. ಸಿದ್ದರಾಮಯ್ಯನವರು ಈಗ ವಿರೋಧಿಸುವುದು ಸರಿಯಿಲ್ಲ. ಎಸ್‌ಡಿಎಂಸಿಯವರು ಹಣ ದುರುಪಯೋಗ ಮಾಡಿಕೊಳ್ಳುವುದು ಕಂಡುಬಂದರೆ ಸುತ್ತೋಲೆ ವಾಪಸ್ ಪಡೆಯಲಾಗುವುದು ಎಂದು ಬಿ.ಸಿ ನಾಗೇಶ್ ಹೇಳಿದ್ದಾರೆ.
ಸಚಿವರ ಈ ದ್ವಂದ್ವ ಹೇಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. “ಸಚಿವರಾಗಿ ಆಡಳಿತದ ಮೇಲೆ ಹಿಡಿತವಿಲ್ಲವೆಂದರೆ ಹೇಗೆ? ನಿಮಗಿಲ್ಲದಿದ್ದರೆ ಮುಖ್ಯಮಂತ್ರಿಗಳಿಗೂ ಇಲ್ಲವೇ? ಸರ್ಕಾರಿ ಶಾಲೆಗಳನ್ನು ನಡೆಸಲು ಸಾಧ್ಯವಿಲ್ಲದಿದ್ದರೆ ರಾಜೀನಾಮೆ ಕೊಟ್ಟು ಹೋಗಿ” ಎಂಬು ಅಭಿಪ್ರಾಯಗಳು ಕೇಳಿಬಂದಿವೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯ್ತುಕ್ತರು ಅಕ್ಟೋಬರ್ 19 ರಂದು ಸುತ್ತೋಲೆಯೊಂದನ್ನು ಹೊರಡಿಸಿದ್ದು, ‘ನಮ್ಮ ಶಾಲೆ – ನನ್ನ ಕೊಡುಗೆ’ ಯೋಜನೆ ಹೆಸರಿನಲ್ಲಿ ಪೋಷಕರು ನೀಡುವ ದೇಣಿಗೆಯನ್ನು ವಿದ್ಯುತ್ ಬಿಲ್, ಶೌಚಾಲಯ ನಿರ್ವಹಣೆಯಂತಹ ಮೂಲಭೂತ ಸೌಲಭ್ಯಗಳಿಗೆ ಬಳಸಬೇಕು. ರಸೀದಿ ನೀಡುವ, ಪ್ರತ್ಯೇಕ ಲೆಕ್ಕಪತ್ರ ಇಡುವ ಹೊಣೆಗಾರಿಕೆ ಎಸ್‌ಡಿಎಂಸಿಯದ್ದಾಗಿರುತ್ತದೆ ಎಂದು ತಿಳಿಸಿದ್ದಾರೆ.
ಈ ಯೋಜನೆ ಘೋಷಣೆಯಾಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸುತ್ತಿರುವವರು ಬಡವರು, ದಲಿತರು ಮತ್ತು ಹಿಂದುಳಿದ ಸಮುದಾಯಗಳೆ ಹೆಚ್ಚಿದ್ದಾರೆ. ಈಗಾಗಲೇ ಬೆಲೆ ಏರಿಕೆ, ನಿರುದ್ಯೋಗದಿಂದ ಬಸವಳಿದಿರುವ ಅಂತವರ ಹೊಟ್ಟೆ ಮೇಲೆ ಹೊಡೆಯಲು ಸರ್ಕಾರ ಮುಂದಾಗಿರುವುದು ಸರಿಯಲ್ಲ ಎಂಬ ಮಾತುಗಳು ಕೇಳಿಬಂದಿವೆ.
ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಕೆ.ವಾಸುದೇವರೆಡ್ಡಿಯವರು ನಾನುಗೌರಿ.ಕಾಂ ಜೊತೆ ಮಾತನಾಡಿ, “ಹೊಸ ಶಿಕ್ಷಣ ನೀತಿಯು ಸ್ಥಳೀಯವಾಗಿಯೇ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳಬೇಕು ಎಂದು ಹೇಳುತ್ತದೆಯೆ ಹೊರತು ಸರ್ಕಾರ ನೀಡುವ ಅನುದಾನದ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಆ ನೀತಿಯ ಅನುಷ್ಟಾನದ ಭಾಗವಾಗಿ ಸರ್ಕಾರ ಇಂತಹ ಯೋಜನೆಗಳನ್ನು ಜಾರಿಗೆ ತಂದು ಬಡಮಕ್ಕಳನ್ನು ಶಾಲೆಯಿಂದ ಹೊರದೂಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್ ನಂತರ ಸಾವಿರಾರು ಮಕ್ಕಳು ಶಾಲೆಗಳಿಂದ ಡ್ರಾಪ್‌ಔಟ್ ಆಗಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಅಂತಹ ಮಕ್ಕಳ ಪೋಷಕರಿಂದ ವಸೂಲಿಗೆ ಮುಂದಾಗಿರುವುದು ಸರಿಯಲ್ಲ. ಹಿಂದಿನ ಸರ್ಕಾರ ಶಾಲೆಗೆ ಬರುವ ಮಕ್ಕಳಿಗೆ ದಿನಕ್ಕೆ ಎರಡು ರೂನಂತೆ ಪ್ರೋತ್ಸಾಹ ಧನ ನೀಡುತ್ತಿತ್ತು. ಆಂಧ್ರದ ಸರ್ಕಾರ ಸರ್ಕಾರಿ ಶಾಲೆಗೆ ಬರುವ ಹೆಣ್ಣು ಮಕ್ಕಳ ತಾಯಿಯ ಖಾತೆಗೆ ವಾರ್ಷಿಕ 15 ಸಾವಿರ ಪ್ರೋತ್ಸಾಹ ಧನ ನೀಡುತ್ತಿದೆ. ಆದರೆ ಕರ್ನಾಟಕದ ಬಿಜೆಪಿ ಸರ್ಕಾರ ಮಾತ್ರ ಬಡಮಕ್ಕಳಿಂದಲೇ ದೇಣಿಗೆ ವಸೂಲಿ ಮಾಡುವ ಕೀಳು ಮಟ್ಟಕ್ಕೆ ಇಳಿದಿದೆ ಎಂದು ಕಿಡಿಕಾರಿದರು.
ಶಿಕ್ಷಣ ತಜ್ಞ ಡಾ.ವಿ.ಪಿ ನಿರಂಜನಾರಾಧ್ಯರವರು ಮಾತನಾಡಿ, “ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯು ರಾಜ್ಯಸರ್ಕಾರಗಳು ಎಲ್ಲಾ ಮಕ್ಕಳಿಗೆ ಕನಿಷ್ಟ ಪ್ರಾಥಮಿಕ ಶಿಕ್ಷಣವನ್ನು ಉಚಿತವಾಗಿ ಕೊಡಬೇಕೆಂದು ಹೇಳುತ್ತದೆ. ಸಂವಿಧಾನದ 21ಎ ಪ್ರಕಾರ ಶಿಕ್ಷಣ ಮಕ್ಕಳ ಮೂಲಭೂತ ಹಕ್ಕಾಗಿದೆ. ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಎಂದರೆ ಉಚಿತ ಅಷ್ಟೆ. ಯಾವುದೇ ಸ್ವರೂಪದಲ್ಲಿ ಅದಕ್ಕೆ ನಿರ್ಬಂಧಗಳನ್ನು ಹೇರಬಾರದು. ರಾಜ್ಯ ಸರ್ಕಾರ ಅನುದಾನ ಕೊಡಬೇಕು, ಮೂಲಭೂತ ಸೌಲಭ್ಯಗಳನ್ನು ಸ್ಥಳೀಯ ಸರ್ಕಾರಗಳು ಒದಗಿಸಬೇಕು. ಆದರೆ ನಾಗೇಶ್‌ರವರು ಶಿಕ್ಷಣ ಸಚಿವರಾದ ನಂತರ ಕಾನೂನು ಉಲ್ಲಂಘನೆಗಳು ಮಿತಿ ಮೀರಿವೆ. ಅವರನ್ನು ವಜಾಗೊಳಿಸಬೇಕು” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ಜಗ್ಗಿ ವಾಸುದೇವ್‌ಗೆ 100 ಕೋಟಿ ಹಣ ನೀಡಿದೆ. ಸಂಸ್ಕೃತ ವಿವಿಗೆ 250 ಕೋಟಿ ನೀಡಲು ಮುಂದಾಗಿದೆ. ಚಾಣಕ್ಯ ವಿವಿಗೆ ಭೂಮಿ ಮತ್ತು ಹಣ ಕೊಡುತ್ತಿದೆ. ಉಪಯೋಗಕ್ಕೆ ಬಾರದ ವೇದಗಣಿತ ಕಲಿಕೆಗೆ ಹಣ ನೀಡಲು ಮುಂದಾಗಿತ್ತು. ಈ ಎಲ್ಲದಕ್ಕೂ ಕೊಡಲು ದುಡ್ಡಿರುವಾಗ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯ ನೀಡಲು ದುಡ್ಡಿಲ್ಲವೇ? ಸರ್ಕಾರ ಭಿಕ್ಷೆ ಬೇಡುತ್ತಿದೆಯೇ? ಬಡವರ ಕೂಲಿಯಲ್ಲಿ ಮಾಸಿಕ 100 ರೂ ಕೊಡಬೇಕು ಎನ್ನುವ ನಿಮಗೆ ಮಾನವೀಯತೆ ಇದೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಲ ಪೋಷಕರು ದೇಣಿಗೆ ಕೊಟ್ಟು, ಕೆಲವರು ಕೊಡದಿದ್ದರೆ ಅದು ಮಕ್ಕಳ ನಡುವಿನ ತಾರತಮ್ಯಕ್ಕೆ ಕಾರಣವಾಗಲಿದೆ. ಇನ್ನು ಪೋಷಕರು, ಎಸ್‌ಡಿಎಂಸಿ ಸದಸ್ಯರು ಮಾಸಿಕ ಸಭೆಗಳಿಗೆ ಹೋಗದಿರಲು ಹಣಕಾಸಿನ ಮುಗ್ಗಟ್ಟು ಸಹ ಪ್ರಧಾನ ಕಾರಣ. ಏಕೆಂದರೆ ಶಾಲಾ ಅಗತ್ಯಗಳಿಗೆ ಶಿಕ್ಷಕರು ಅವರನ್ನು ಒತ್ತಾಯಿಸುವುದು ಸಹಜ. ಇಂತಹ ಸಂದರ್ಭದಲ್ಲಿ ಈ ಸುತ್ತೋಲೆ ಮತ್ತುಷ್ಟು ವಸೂಲಿಗೆ ಅವಕಾಶ ಮಾಡಿಕೊಡುತ್ತಿದ್ದು ಇದರಿಂದ ಪೋಷಕರು ಶಾಲೆಗಳತ್ತ ಸುಳಿಯದಂತೆ ಮಾಡುತ್ತದೆ. ದಲಿತ ಮಕ್ಕಳನ್ನು ಶಾಲೆಯಿಂದ ಹೊರದುಬ್ಬವ ಹುನ್ನಾರವಿದು. ಆನಂತರ ತಿಂಗಳಿಗೆ ನೂರು ರೂ ಕೊಡುವುದಾದರೆ ನಮ್ಮಲ್ಲಿಗೆ ಬನ್ನಿ ಖಾಸಗಿ ಶಿಕ್ಷಣ ಸಂಸ್ಥೆಗಳು ಆಮಿಷವೊಡ್ಡಿ ಎಲ್ಲಾ ಸರ್ಕಾರಿ ಶಾಲೆಗಳನ್ನು ಮುಚ್ಚಿಸಿಬಿಡುತ್ತವೆ. ಈ ಸರ್ಕಾರಕ್ಕೂ ಅದೇ ಬೇಕಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇಷ್ಟು ವರ್ಷ ಸರ್ಕಾರಿ ಶಾಲೆಗಳಿಂದ ಸಂಬಳ ಪಡೆಯುತ್ತಿರುವ ಶಿಕ್ಷಕರು ಬೇಕಾದರೆ ದೇಣಿಗೆ ನೀಡಲಿ. ಗೋವುಗಳನ್ನು ದತ್ತು ಪಡೆಯುವ ಪುಣ್ಯಕೋಟಿ ಯೋಜನೆಗೆ ಸರ್ಕಾರಿ ನೌಕರರು 100 ಕೋಟಿ ರೂಗಳವರೆಗೆ ದೇಣಿಗೆ ಕೊಡುವ ಬದಲು ಅದೇ ಹಣವನ್ನು ಸರ್ಕಾರಿ ಶಾಲೆಗಳಿಗೆ ಕೊಡಬಹುದಲ್ಲವೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ; ಸರ್ಕಾರಿ ಶಾಲಾ ಮಕ್ಕಳ ಪೋಷಕರಿಂದ ಮಾಸಿಕ 100 ದೇಣಿಗೆ: ಸುತ್ತೋಲೆಯ ಹಿಂದಿದೆ ಶಿಕ್ಷಣ ವಂಚಿಸುವ ಉದ್ದೇಶ- ಸಿಪಿಐ(ಎಂ)


