Homeಅಂಕಣಗಳುಎಲೆಮರೆಯಿಂದಅಮಲ್ ದೆಪ್ಪಡೇ, ಓ ಅಕಲ್ ತಪ್ಪಡೇ..: ಅಮಲು ಸೇವಿಸದಿರಿ... ಓ ಮತಿ ತಪ್ಪದಿರಿ

ಅಮಲ್ ದೆಪ್ಪಡೇ, ಓ ಅಕಲ್ ತಪ್ಪಡೇ..: ಅಮಲು ಸೇವಿಸದಿರಿ… ಓ ಮತಿ ತಪ್ಪದಿರಿ

- Advertisement -
- Advertisement -

ತುಳು ಭಾಷೆ ಅರಿಯದವರು ಈ ಶೀರ್ಷಿಕೆ ನೋಡಿ ಗಲಿಬಿಲಿಗೊಳ್ಳಬಹುದು.. ಇದು ತುಳು, ಕನ್ನಡ ಮತ್ತು ಹವ್ಯಕ ಭಾಷೆಯ ಕವಿ ನನ್ನೂರಿನ ನರ್ಕಳ ಮಾರಪ್ಪ ಶೆಟ್ಟರ ಪ್ರಸಿದ್ಧ ಕವನವೊಂದರ ಸಾಲು. ಇದು ತುಳುನಾಡಿನಲ್ಲಿ ಮದ್ಯಪಾನ ವಿರೋಧೀ ಜನಜಾಗೃತಿ ಸಭೆಗಳಲ್ಲಿ ಲಾವಣಿಯಂತೆ ಹಾಡಲ್ಪಡುತ್ತಿದ್ದ ಸಾಲುಗಳು..
ಇದರರ್ಥ “ಅಮಲು ಸೇವಿಸದಿರಿ… ಓ ಮತಿ ತಪ್ಪದಿರಿ..”

ಕರ್ನಾಟಕ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಹೊರತಂದ `ಶತಮಾನದ ಬೆಳಕು’ ಎಂಬ ಗ್ರಂಥದಲ್ಲಿ ಇಸ್ಮತ್ ಪಜೀರ್ ಬರೆದ `ಕನ್ನಡದ ಸಹೋದರ ಭಾಷೆಗಳಲ್ಲಿ ಸಾಹಿತ್ಯದ ಬೆಳವಣಿಗೆ’ ಎಂಬ ದೀರ್ಘ ಪ್ರಬಂಧವೊಂದನ್ನು ಓದುತ್ತಿದ್ದಂತೆ ನರ್ಕಳ ಮಾರಪ್ಪ ಶೆಟ್ಟರ ಹೆಸರು ಕಣ್ಣಿಗೆ ಬಿತ್ತು. ಅಲ್ಲಿಂದ ಈ ಶೆಟ್ಟರ ಜಾಡು ಹಿಡಿದು ಹೊರಟೆ. ಕಾರಣ ನರ್ಕಳವೆಂಬುವುದು ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ನನ್ನೂರು ಕುಳಾಲು ಎಂಬಲ್ಲಿರುವ ಒಂದು ಪುಟ್ಟ ಹಳ್ಳಿ. ಶೆಟ್ಟರ ಬಗ್ಗೆ ನನ್ನೂರಿನಲ್ಲಿ ವಿಚಾರಿಸಿದಾಗ ಗೊತ್ತಿಲ್ಲ ಎಂದವರೇ ಎಲ್ಲಾ. ಸೋಜಿಗವೇನೆಂದರೆ, ಇಸ್ಮತ್ ನರ್ಕಳ ಮಾರಪ್ಪ ಶೆಟ್ಟರ ಸಾಹಿತ್ಯದ ಕುರಿತಂತೆ “ಶತಮಾನದ ಬೆಳಕು” ಎಂಬ ಗ್ರಂಥದಲ್ಲಿ ಚರ್ಚೆ ನಡೆಸಿದ್ದಾರಾದರೂ ಅವರಿಗೂ ಈ ನರ್ಕಳ ನನ್ನೂರಿನ ಪಕ್ಕದ ಹಳ್ಳಿ ಎಂದು ಗೊತ್ತೇ ಇರಲಿಲ್ಲ.

ನಾನು ಶೆಟ್ಟರ ಕುರಿತ ಹುಡುಕಾಟ ಬಿಡಲಿಲ್ಲ. ವರ್ಷಗಳ ನಂತರ ಹೊಸಕಟ್ಟಡಕ್ಕೆ ಸ್ಥಳಾಂತರಗೊಂಡ ಸಾಲೆತ್ತೂರಿನ ಸಾರ್ವಜನಿಕ ಗ್ರಂಥಾಲಯಕ್ಕೆ ನರ್ಕಳ ಮಾರಪ್ಪ ಶೆಟ್ಟರ ಹೆಸರಿಟ್ಟಿರುವುದನ್ನು ನೋಡಿದ್ದೇ ತಡ ಲೈಬ್ರರಿಯ ಮೆಟ್ಟಿಲು ಹತ್ತಿದೆ. ಗ್ರಂಥಪಾಲಕಿಯ ಬಳಿ ಶೆಟ್ಟರ ಬಗ್ಗೆ ವಿಚಾರಿಸಿದಾಗ ಆಕೆ “ನರ್ಕಳ ಮಾರಪ್ಪ ಶೆಟ್ಟರ ಬದುಕು ಮತ್ತು ಬರಹ” ಎಂಬ ಗ್ರಂಥವೊಂದನ್ನು ಉಡುಗೊರೆಯಾಗಿ ನೀಡಿದರು. ಅಲ್ಲಲ್ಲಿ ಚದುರಿಹೋಗಿದ್ದ ಅವರ ಬದುಕು ಮತ್ತು ಬರಹವನ್ನು ಸಾದ್ಯಂತ ಸಂಗ್ರಹಿಸಿ ಗ್ರಂಥ ರೂಪಕ್ಕಿಳಿಸಿದ್ದು 1989ರ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ, ಮಾರಪ್ಪ ಶೆಟ್ಟರ ಮಗನಾದ ನರ್ಕಳ ರಘುನಾಥ ಶೆಟ್ಟರು… ಅದೂ ಬಹಳ ತಡವಾಗಿ.

ಇಂತಹ ಘನ ವ್ಯಕ್ತಿತ್ವವನ್ನು ಹೊಸ ಪೀಳಿಗೆಗೆ ಪರಿಚಯಿಸದ ನಮ್ಮೂರಿನ ಜನರ ಬಗ್ಗೆ, ನಾ ಕಲಿತ ಕುಳಾಲು ಶಾಲೆಯಲ್ಲಿ ಅಧ್ಯಾಪಕನಾಗಿ ಸೇವೆ ಸಲ್ಲಿಸಿದ್ದರೂ ಅವರ ಬಗ್ಗೆ ಪರಿಚಯಿಸಿ ಕೊಡದ ನನ್ನ ಶಿಕ್ಷಕರ ಬಗ್ಗೆ, ಸ್ವಾತಂತ್ರ‍್ಯ ಹೋರಾಟಗಾರನಾಗಿದ್ದರೂ ಕನಿಷ್ಟ ಸ್ವಾತಂತ್ರ‍್ಯ ದಿನದಂದಾದರೂ ಸ್ಮರಿಸದಿರುವುದರ ಬಗ್ಗೆ ಖೇದವಿದೆ.

1894ರಲ್ಲಿ ನರ್ಕಳದಲ್ಲಿ ಜನಿಸಿದ ಮಾರಪ್ಪ ಶೆಟ್ರು ನರ್ಕಳ ಮನೆತನದ ಅವಿಭಕ್ತ ಕುಟುಂಬದ ಮೊದಲ ವಿದ್ಯಾವಂತ. ನಮ್ಮೂರಿಗೂ ಅವರೇ ಮೊದಲಿಗರಿರಬೇಕು. ಎಳವೆಯಲ್ಲೇ ಅಧ್ಯಾಪಕನಾಗಬೇಕೆಂಬ ಕನಸ ಹೊತ್ತಿದ್ದ ಶೆಟ್ಟರು ತನ್ನ ಹದಿನಾಲ್ಕನೇ ವಯಸ್ಸಿಗೇ ತಾನು ಕಲಿತ ಸಾಲೆತ್ತೂರು ಶಾಲೆಯಲ್ಲೇ ಅಧ್ಯಾಪಕರಾದರು..!! ಅವರ ಅಧ್ಯಾಪನದ ಕನಸನ್ನು ನನಸಾಗಿಸಿದವರು ತುಳುನಾಡಿನ ಮಹಾಕವಿ ಪಂಜೆ ಮಂಗೇಶರಾಯರು. ಆಗಿನ ಬ್ರಿಟಿಷ್ ಸರಕಾರದ ನಿಯಮದಂತೆ ಶಾಲಾ ಇನ್ಸ್ಪೆಕ್ಟರ್‌ಗಳೇ ಜಾಣ ವಿದ್ಯಾರ್ಥಿಗಳನ್ನು ಗುರುತಿಸಿ ಶಿಕ್ಷಕರಾಗಿ ನೇಮಿಸಬೇಕಿತ್ತು. ಜೊತೆಗೆ ಶಿಕ್ಷಕ ತರಬೇತಿಗೆ ಶಿಫಾರಸು ಮಾಡಬೇಕಿತ್ತು.

ಶೆಟ್ಟರು ಸಾಲೆತ್ತೂರು ಶಾಲೆಯಲ್ಲಿ ೪ನೇ ತರಗತಿಯಲ್ಲಿ (ಫಾರಂ) ವ್ಯಾಸಂಗ ಮಾಡುತ್ತಿದ್ದಾಗ ಶಾಲಾ ಪರೀಕ್ಷಾಧಿಕಾರಿಯಾಗಿ ಬಂದ ಪಂಜೆಯವರು ಶೆಟ್ಟರನ್ನು ಮೂರು ರೂಪಾಯಿ ಮಾಸಿಕ ವೇತನದೊಂದಿಗೆ ಅದೇ ಶಾಲೆಗೆ ಅಧ್ಯಾಪಕರನ್ನಾಗಿ ನೇಮಿಸಿದರು. ಆರು ವರ್ಷಗಳ ನಂತರ ತರಬೇತಿ ಪಡೆದು ಅಧಿಕೃತ ಶಿಕ್ಷಕರಾದರು. ಕೊಡ್ಲಮೊಗರು, ಮೂಡಂಬೈಲು, ಅಡ್ಯನಡ್ಕ ಅಷ್ಟೇ ಅಲ್ಲದೇ ನಾ ಕಲಿತ ಕುಳಾಲು ಶಾಲೆಯಲ್ಲೂ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಇನ್ನೂ ಕೆಲವೆಡೆ ಅಧ್ಯಾಪಕನಾಗಿ ಸೇವೆ ಸಲ್ಲಿಸಿದ್ದರೂ ಅದರ ದಾಖಲೆಗಳು ಲಭ್ಯವಾಗಿಲ್ಲ. ಅಧ್ಯಾಪನದ ಜೊತೆಜೊತೆಗೆ ಅಕ್ಷರ ಬಿತ್ತುವ ಕಾಯಕದಲ್ಲೂ ತೊಡಗಿಸಿಕೊಂಡರು. ಶಾಲೆಯೇ ಇಲ್ಲದ ಮೂಡಂಬೈಲಿನಲ್ಲಿ ಮಕ್ಕಳನ್ನೆಲ್ಲಾ ಕೂಡಿಸಿ ಸಣ್ಣ ಗುಡಿಸಲೊಂದರಲ್ಲಿ ಶಾಲೆಯನ್ನು ಪ್ರಾರಂಭಿಸಿದರು. ಮಂಗಳೂರಿನ ಬಿಜೈಯಲ್ಲಿ ಲೂರ್ಡ್ಸ್ ಪ್ರೌಢಶಾಲೆ ಸ್ಥಾಪನೆಗೆ ತನು, ಮನ, ಧನದೊಂದಿಗೆ ಶ್ರಮಿಸಿದರು. ವಯಸ್ಕರಿಗಾಗಿ ಅಡ್ಯನಡ್ಕದಲ್ಲಿ ರಾತ್ರಿ ಶಾಲೆ ಪ್ರಾರಂಭಿಸಿದರು. ಶೆಟ್ಟರ ಪಾಠ ಮಾಡುವ ಪ್ರಾಯೋಗಿಕ ಶೈಲಿ ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಮೂಡಿಸುತ್ತಿತ್ತು.ನಾನೀಗ ನನ್ನ ಮಗಳಿಗೆ ಅಕ್ಷರ ಬರೆಯಲು ಸುಲಭವಾಗುವಂತೆ  slanting line, standing line, curves  ಹೀಗೆ ಏನೆಲ್ಲಾ ಕಲಿಸುತ್ತೇನೋ ಇದನ್ನೆಲ್ಲಾ ಶೆಟ್ಟರು ಸ್ವಾತಂತ್ರ‍್ಯ ಪೂರ್ವದಲ್ಲೇ ಕನ್ನಡ ಅಕ್ಷರ ಕಲಿಸಲು ಬಳಸುತ್ತಿದ್ದರು. ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಕೆಲವು ಕೈ ಕಸುಬು, ಗುಡಿ ಕೈಗಾರಿಕೆಗಳನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸುತ್ತಿದ್ದರು.

ಶೆಟ್ಟರ ಕಲಿಕೆಯ ತುಡಿತ ಅದೆಷ್ಟು ಅದಮ್ಯವಾಗಿತ್ತೆಂದರೆ ಮಧ್ಯವಯಸ್ಸಿನಲ್ಲಿ ಮಗಳೊಂದಿಗೆ SSಐಅ ಪರೀಕ್ಷೆ ಬರೆದು ಅನುತ್ತೀರ್ಣರಾದರು. ಆ ಕಾಲದಲ್ಲೇ ತನ್ನ ಹತ್ತು ಮಂದಿ ಮಕ್ಕಳಲ್ಲಿ ಏಳು ಮಂದಿಯನ್ನು ಪದವೀಧರರನ್ನಾಗಿಸಿದರು. ತನ್ನ 14ರ ಹರೆಯದಿಂದ ೫೮ರ ವರೆಗೆ (1908-1952) ಮಾದರಿ ಶಿಕ್ಷಕರಾಗಿ ಕಾರ್ಯನಿರ್ವಹಿಸುವುದರ ಜೊತೆಜೊತೆಗೆ ಸ್ವಾತಂತ್ರ‍್ಯ ಆಂದೋಲನದಲ್ಲೂ ಭಾಗಿಯಾಗಿದ್ದರು.
ಗಾಂಧೀ ತತ್ವ ಪ್ರಣಾಳಿಕೆಯ ಪ್ರತಿಪಾದಕರಾಗಿ ದ.ಕ ಜಿಲ್ಲೆಯಾದ್ಯಂತ ಸಂಚರಿಸಿ ಹರಿಜನೋದ್ಧಾರ, ಖಾದಿಯ ಮಹತ್ವ, ಮದ್ಯಪಾನ ನಿಷೇಧದ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸಿದರು.

“ಅಮಲ್ ದೆಪ್ಪಡೇ…!ಓ..!
ಅಕಲ್ ತಪ್ಪಡೇ…!!”
ಪರಡೆ ಕಲಿ ಗಂಗಸರೊ.. (ಕುಡಿಯಬೇಡಿರೋ…ಶೇಂದಿ…ಶರಾಬು) ಇತ್ಯಾದಿ ಸ್ವರಚಿತ ಕವನಗಳ ಮೂಲಕ ದ.ಕ.ಜಿಲ್ಲೆಯ ಜನರನ್ನು ತಲುಪಿದರು. ತನ್ನ ಕೊನೆಯುಸಿರಿರುವವರೆಗೂ ಗಾಂಧಿವಾದಿಯಾಗಿಯೇ ಬದುಕಿದರು. ಅವರು ಕನ್ನಡವಲ್ಲದೇ ತುಳು, ಹವ್ಯಕ ಭಾಷೆಗಳಲ್ಲೂ ಸಾಹಿತ್ಯ ಕೃಷಿ ಮಾಡಿದ್ದರು. ತುಳುನಾಡು, ನುಡಿ, ಸಂಸ್ಕೃತಿ, ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ. ಬಾಲಸಾಹಿತ್ಯದಲ್ಲೂ ಪಳಗಿದ ಶೆಟ್ಟರ “ಸುಂದರಿಯ ಚಂದ” ಎಂಬ ಮಕ್ಕಳ ಕತೆಯು ಬಡಗಿಯೊಬ್ಬನು ಕೆತ್ತಿದ ಸುಂದರಿ ಎಂಬ ಬೊಂಬೆಯ ಚಿತ್ರಣವಾಗಿದೆ. ಅಡ್ಯನಡ್ಕ ಶಾಲೆಯ ಅಧ್ಯಾಪಕರಾಗಿದ್ದಾಗ “ಶಿಶು ಜೀವಾಳ” ಎಂಬ ವಿದ್ಯಾರ್ಥಿ ಹಸ್ತಪತ್ರಿಕೆಯನ್ನು ಪ್ರಾರಂಭಿಸಿದರು. ೧೯೨೯ರಲ್ಲಿ ತುಳುವಿನಲ್ಲಿ ರಚಿಸಿದ ‘ಪೊರ್ಲಕಂಟ್’ ಮತ್ತು ‘ಅಮಲ್ ದೆಪ್ಪಡೆ’ ಎಂಬ ಕವನ ಸಂಕಲನಗಳಲ್ಲಿನ ತುಳು ಪದಗಳ ವೈಶಿಷ್ಟ್ಯ ಮತ್ತು ಭಾರ ನೋಡಿದರೆ ಈ ಕಾಲದ ಸಾಹಿತಿಗಳಿಗೆ ಅಚ್ಚರಿಯಾಗಬಹುದು. ತುಳು ಶಬ್ದಗಳ ಹುಟ್ಟು ಮತ್ತು ವಿಕಾಸದ ಬಗ್ಗೆಯೂ ಸಾಕಷ್ಟು ಬರೆದಿರುವ ಇವರು ತುಳು ಭಾಷಾತಜ್ಞನೂ ಹೌದು. ತುಳು ಸ್ಥಳನಾಮಗಳ ಬಗ್ಗೆಯೂ ಸಂಶೋಧನೆಗೈದಿದ್ದಾರೆ.

ಕನ್ನಡದಲ್ಲಿ ‘ಮಂಜಟ್ಟಿ ಕೋಣ’, ಜಾತಿ ಮತ್ತು ವರ್ಣ ಬೇಧ ನೀತಿಯನ್ನು ವಿರೋಧಿಸುವ
`ಕರಿ-ಬಿಳಿ ಕಾಳಗ’, ‘ಕಾಸರಗೋಡು ಕನ್ನಡಿಗರ ಗೋಳಿನ ಕತೆ’ ಇತ್ಯಾದಿ ಕವನಗಳ ಜೊತೆಗೆ ಭಾಮಿನಿ ಹಾಗೂ ವಾರ್ಧಕ ಷಟ್ಪದಿಯಲ್ಲೂ ಬರೆದಿದ್ದಾರೆ. ಚೀನಾ ಆಕ್ರಮಣದ ಸಂದರ್ಭದಲ್ಲಿ ವಾರ್ಧಕ ಷಟ್ಪದಿಯಲ್ಲಿ “ಭಾರತೀಯರೊಂದಾಗಿ” ಎಂಬ ದೇಶಪ್ರೇಮವನ್ನು ಸಾರುವ ಕವನವನ್ನು ಬರೆದು ಆ ಮೂಲಕ ಜಾಗೃತಿ ಮೂಡಿಸಿದ್ದರು. ಯಕ್ಷಗಾನ ಅರ್ಥದಾರಿಯಾಗಿದ್ದ ಶೆಟ್ಟರು “ದಂಡಯಾತ್ರೆ” ಎಂಬ ಯಕ್ಷಗಾನ ಪ್ರಸಂಗವೊಂದನ್ನು ರಚಿಸಿದ್ದರು. ‘ಕೂಸಕ್ಕನ ಮದುವೆ’ ಎಂಬ ನಾಟಕ ಹವ್ಯಕ ಭಾಷಾ ಸಾಹಿತ್ಯಕ್ಕೆ ಶೆಟ್ಟರ ವಿಶೇಷ ಕೊಡುಗೆ. ಸಂಧಿ, ಸಮಾಸ, ಷಟ್ಪದಿಗಳಲ್ಲಿ ಅಪಾರ ಪಾಂಡಿತ್ಯ ಗಳಿಸಿದ್ದ ಶೆಟ್ಟರು “ಗುರುಮಿತ್ರ” ಎಂಬ ಅಧ್ಯಾಪಕರ ಸಂಘದ ಹಸ್ತಪತ್ರಿಕೆಯ ಸಂಪಾದಕರಾಗಿದ್ದರು. ನಿನ್ನೆ ಮೊನ್ನೆಯಷ್ಟೇ ಮೂಲಸ್ವರೂಪವನ್ನು ಉಳಿಸುತ್ತಲೇ ಆಧುನಿಕತೆಯತ್ತ ಮುಖಮಾಡಿರುವ ನನ್ನೂರಿನಲ್ಲಿ ಆ ಕಾಲದಲ್ಲಿ ಓರ್ವ ಅಧ್ಯಾಪಕನಾಗಿ, ಸಾಹಿತಿಯಾಗಿ, ಸ್ವಾತಂತ್ರ‍್ಯ ಹೋರಾಟಗಾರನಾಗಿ ಒಂದು ಅರ್ಥಪೂರ್ಣ ಬದುಕು ಸವೆಸಿದ ನರ್ಕಳ ಮಾರಪ್ಪ ಶೆಟ್ಟರನ್ನು ನನ್ನೂರು ಮರೆತಿರುವುದು ವಿಷಾದನೀಯ…

  • ಮಿಸ್ರಿಯಾ ಐ ಪಜೀರ್, ಯುವ ಬರಹಗಾರ್ತಿ.

ನಾ ಹ್ಯಾಂಗ ಮರೆಯಲಿ ನಿನ್ನ ಗಾಂಧಿ ತಾತ… : ಮಿಸ್ರಿಯಾ ಐ. ಪಜೀರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...