ಗೆಳೆಯರೇ ಮತ್ತು ಸ್ನೇಹಿತರೇ, ಒಂದೆರಡು ವಾರಗಳ ಮೊದಲು, ಕುವೆಂಪು ಅವರ “ಮಲೆಗಳಲ್ಲಿ ಮದುಮಗಳು” ಕಾದಂಬರಿ ಎರಡನೇ ಬಾರಿಗೆ ಇಂಗ್ಲಿಷ್ ಭಾಷೆಗೆ ಅನುವಾದ ಆಗಿದೆ; ಅದನ್ನ ವನಮಾಲಾ ವಿಶ್ವನಾಥ್ ಅವರು ಅನುವಾದ ಮಾಡಿ ಪೂರೈಸಿದ್ದಾರೆ ಎಂಬ ಸುದ್ದಿ ನನಗೆ ತಿಳಿದು, ಸುಮಾರು ನಲ್ವತ್ತು ವರ್ಷಗಳಿಂದ ಪರಿಚಿತರಾಗಿರುವ ವನಮಾಲಾ ಅವರಿಗೆ ಒಂದು ಅಭಿನಂದನೆಯ ಮಾತನ್ನು ನಾನು ಹೇಳಿದೆ. ಅಭಿನಂದನೆ ಹೇಳಿದ್ದೇ ತಪ್ಪಾಯ್ತು ಅನಿಸಿತು ನನ್ಗೆ (ನಗು). ಯಾಕಂದ್ರೆ ತಕ್ಷಣವೇ ಅವರು- ತಕ್ಷಣವೇ ಅಲ್ಲ, ಸ್ವಲ್ಪ ಸಮಯದ ನಂತರ; ಸ್ವಲ್ಪ ಯೋಚಿಸಿದ್ರು ಅಂತ ಕಾಣ್ತದೆ- ಈ ಪುಸ್ತಕದ ಬಿಡುಗಡೆ ಸಮಾರಂಭಕ್ಕೆ ನೀವು ಬಂದು ಅದನ್ನು ನೆರವೇರಿಸಿಕೊಡಬೇಕೆಂದು ನನ್ನನ್ನ ಕರೆದ್ರು. ಈ ಅನುವಾದವನ್ನ, ಅದೂ ಇಂಗ್ಲಿಷ್ ಅನುವಾದವನ್ನ ಬಿಡುಗಡೆ ಮಾಡಲು ನಾನು ಸಮರ್ಥನಲ್ಲ ಎಂದು ನಾನು ಹೇಳಿದೆ. “ಇಲ್ಲ, ಪರ್ವಾಗಿಲ್ಲ; ನೀವೇ ಇದನ್ನು ಬಿಡುಗಡೆ ಮಾಡಿ ಕೊಡ್ಬೇಕು, ಇಂಗ್ಲಿಷ್ ಅನುವಾದದ ಬಗ್ಗೆ ಮಾತಾಡಲು ಬೇರೆಯವರು ಇರ್ತಾರೆ” ಅಂತ ಹೇಳಿ, ಈ ಕೆಲಸವನ್ನ ನನ್ಗೆ ವಹಿಸಿದ್ರು. “ನಾನೀ ಪುಸ್ತಕವನ್ನು ಅನುವಾದ ಮಾಡುವ ದುಸ್ಸಾಹಸವನ್ನ ಪೂರೈಸಿದ್ದೇನೆ” ಅಂತ ಅವರು ಒಂದು ಸಂದೇಶದಲ್ಲಿ ಹೇಳಿದ್ರು. ’ದುಸ್ಸಾಹಸವಲ್ಲ ಇದು… ಇದೊಂದು ಮಹತ್ ಯಾತ್ರೆ. ಈ ಕೆಲಸವನ್ನು ಪೂರೈಸಿ, ನೀವು ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ’ ಎಂದು ನಾನವ್ರಿಗೆ ಹೇಳಿದೆ. ಅವರು ಈ ಕೃತಿಯ ಅನುವಾದ ಅಲ್ಲದೇ ಹರಿಶ್ಚಂದ್ರ ಕಾವ್ಯವನ್ನ ಮೂರ್ತಿ ಕ್ಲಾಸಿಕ್ಸ್ ಸರಣಿಗಾಗಿ ಇಂಗ್ಲಿಷ್‌ಗೆ ಅನುವಾದ ಮಾಡಿಕೊಟ್ಟಿದ್ದಾರೆ. ವಡ್ಡಾರಾಧನೆಯನ್ನ ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. ಅದಲ್ಲದೆ, ಕನ್ನಡದ ಹಲವು ಕತೆಗಳನ್ನ, ಕೃತಿಗಳನ್ನ ಅನುವಾದ ಮಾಡಿಕೊಟ್ಟಿದ್ದಾರೆ. ನಿರಂತರವಾಗಿ ಮಹತ್ವದ, ಬೇರೆಬೇರೆ ಮಜಲುಗಳ ಕೃತಿಗಳನ್ನ ಅನುವಾದ ಮಾಡಿಕೊಟ್ಟು, ಕನ್ನಡದ ಬಗ್ಗೆ ಇಂಗ್ಲಿಷಿನ ಓದುಗರಿಗೆ ಒಂದು ಅಧಿಕೃತ ವಾಯ್ಸ್ ಆಗಿ ಈಗಾಗಲೇ ಪರಿಗಣಿತರಾಗಿದ್ದಾರೆ. ಈ ಕೆಲಸವನ್ನ ಇನ್ನಷ್ಟು ಮುಂದುವರಿಸಬೇಕು ಅಂತ ನಾನವರನ್ನು ಕೇಳಿಕೊಂಡಿದ್ದೇನೆ.
ಈಗಾಗಲೇ ಕಡಿದಾಳ್ ಪ್ರಕಾಶ್ ಅವರು ಮಾತನಾಡುತ್ತಾ, ಹಿಂದೆ 2020ರಲ್ಲಿ ಪ್ರಕಟವಾದ ಒಂದು ಅನುವಾದದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಅದಲ್ಲದೇನೆ ಈ ಕೃತಿ ಹಿಂದಿ ಭಾಷೆಗೆ ಕೂಡಾ ಅನುವಾದ ಆಗಿದೆ. 1987-88ರ ಸುಮಾರಿನಲ್ಲಿ ಬಿ.ಆರ್. ನಾರಾಯಣ್ ಅವರು- ಇಲ್ಲಿಯವರೇ, ಕೆಂಗೇರಿಯಲ್ಲಿ ಇರುತ್ತಿದ್ದವರು- ಇದನ್ನು “ಪಹಾಡಿ ಕನ್ಯಾ” ಎಂಬ ಹೆಸರಿನಲ್ಲಿ ಹಿಂದಿಗೆ ಅನುವಾದ ಮಾಡಿದ್ದಾರೆ. ಈ ಕೃತಿ ಭಾರತದ ಬೇರೆ ಭಾಷೆಗಳಿಗೆ ಅನುವಾದ ಆಗಿದೆಯೋ ಇಲ್ಲವೋ ಎಂಬ ಬಗ್ಗೆ ನನ್ನಲ್ಲಿ ಮಾಹಿತಿ ಇಲ್ಲ. ನನಗೆ ಗೊತ್ತಿಲ್ಲ.
ಇಂತಹ ಅನುವಾದಗಳಿಗೆ ಯಾರು ಓದುಗರು ಎಂಬ ಪ್ರಶ್ನೆ ಬರ್ತದೆ. ನನ್ನಂತವರು ಇದಕ್ಕೆ ಓದುಗರಾಗಲು ಸಾಧ್ಯವೇ ಇಲ್ಲ. ಯಾಕೆ ಸಾಧ್ಯವಿಲ್ಲ? ಯಾಕಂದ್ರೆ, ಕನ್ನಡದ ಓದುಗರಾಗಿ ಇದ್ದುಕೊಂಡು, ಕನ್ನಡ ಕೃತಿಗಳನ್ನು ಅವರು ಇಂಗ್ಲಿಷಿನಲ್ಲಿ ಓದುವ ಜವಾಬ್ದಾರಿಯನ್ನಾಗಲೀ, ಅಪೇಕ್ಷೆಯನ್ನಾಗಲೀ ಇಟ್ಟುಕೊಳ್ಳುವುದಕ್ಕೆ ಆಗುವುದಿಲ್ಲ. ಯಾಕಂದ್ರೆ, ಆ ಕನ್ನಡ ಕೃತಿಗಳನ್ನು ನಾವು ಇಂಗ್ಲಿಷಿನಲ್ಲಿ ಓದ್ತಾ ಹೋದಹಾಗೆ ನಮ್ಮ ಮನಸ್ಸಿನೊಳಗಡೆ ಇದೆಯಲ್ಲ, ನಾವು ಐವತ್ತು ವರ್ಷಗಳಿಂದ ಓದುತ್ತಾ ಬಂದಿರುವ ಕೃತಿಗಳು- ನಾನು ಕೂಡಾ ಹೆಚ್ಚು ಸಾರಿ ರೀವಿಸಿಟ್ ಮಾಡಿರುವ ಕೃತಿಗಳಲ್ಲಿ ’ಮಲೆಗಳಲ್ಲಿ ಮದುಮಗಳು’ ಕೂಡ ಒಂದು- ಅದರ ಒಂದೊಂದು ವಾಕ್ಯವೂ, ಒಂದೊಂದು ಪುಟವೂ ಮನಸ್ಸಿನ ಭಾಗವಾಗಿರೋದ್ರಿಂದ, ಅಂದ್ರೆ ಬಾಯಿಪಾಠ ಮಾಡಿದ್ದೇವೆ ಎಂದಲ್ಲ, ಆದ್ರೆ ಓದ್ತಾ ಹೋದಹಾಗೆ ಗೊತ್ತಾಗ್ತದೆ- ಹಾಗಾಗಿ ಅದನ್ನು ಇಂಗ್ಲಿಷಿನಲ್ಲಿ ಓದುವಾಗ ಆ ನೆನಪನ್ನು ಬಿಟ್ಟು ಓದುವುದು ಕಷ್ಟ. ಓದುವ ವೇಗ ಕಡಿಮೆಯಾಗ್ತದೆ ಮತ್ತು ಅದರ ಅನುಭವ ಕೂಡಾ ಬೇರೆ ತರ ಆಗ್ತದೆ. ಆದ್ರಿಂದ ನನ್ನಂತವರು ಒಳ್ಳೆಯ ಓದುಗರು ಅಥವಾ ಸರಿಯಾದ ಓದುಗರು ಅಲ್ಲ.
ಹಾಗಾಗಿ, ಇದರ ಓದುಗರು ಯಾರು? ಕನ್ನಡದವ್ರೇ ಇದ್ದಾರೆ. ಅವರು ಕನ್ನಡ ಮಾತಾಡಬಲ್ಲರು; ಆದ್ರೆ, ಓದಲು ಬರಲ್ಲ. ಕನ್ನಡ ಓದಲು ಬರದವರು, ಆದ್ರೆ ಮಾತಾಡಬಲ್ಲವ್ರು ಈಗ ಹೆಚ್ಚಾಗಿದ್ದಾರೆ. ಪುರಂದರದಾಸರು ಹೇಳಿದಂತೆ, ಅವರ ಸಂತತಿ ಸಾವಿರವಾಗಲಿ. ಕನ್ನಡವನ್ನ ಮಾಧ್ಯಮವಾಗಿ ಬಳಸಲಾಗದವರು, ಕನ್ನಡವನ್ನ ಒಂದು ಭಾಷೆಯಾಗಿ ಕಲಿಯದಿದ್ದವರು, ಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ. ಆದ್ರೆ ಕನ್ನಡದ ಬಗ್ಗೆ ಆಸಕ್ತಿಯನ್ನ, ಕನ್ನಡದ ಬಗ್ಗೆ ಆಸಕ್ತಿಯನ್ನ ಉಳಿಸಿಕೊಂಡಿರತಕ್ಕಂತ ಹೊಸ ತಲೆಮಾರು- ಸುಮಾರು ಮೂವತ್ತರ ವಯಸ್ಸಿನ- ಅದರ ಆಚೆಈಚೆ ಇರತಕ್ಕಂತ ಓದುಗರು ಕರ್ನಾಟಕದಲ್ಲಿ, ಭಾರತದಲ್ಲೂ ಅಲ್ಲದೇ ವಿದೇಶಗಳಲ್ಲೂ ಹೆಚ್ಚು ಜನರು ಇದ್ದಾರೆ. ಇವರು ಇನ್ನೊಂದು ಬಗೆಯ ಓದುಗರು. ಮೂರನೇ ಬಗೆಯ ಓದುಗರು- ಭಾರತೀಯ ಭಾಷೆಯನ್ನು ಬಲ್ಲವರಾಗಿದ್ದು, ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಉಳ್ಳವರಾಗಿದ್ದು, ಅದನ್ನು ಓದುವ ಅವಕಾಶ ಸಿಕ್ಕಿರದಂತವ್ರು- ಇಂಗ್ಲಿಷ್ ಭಾಷೆಯನ್ನು ಬಲ್ಲವರಾಗಿ, ದ್ವಿಭಾಷಿಕರಾಗಿದ್ರೆ, ಅವರು ಓದುವ ಅವಕಾಶವನ್ನು ಪಡಕೊಳ್ತಾರೆ. ಇನ್ನು ನಾಲ್ಕನೇ ಬಗೆಯ ಓದುಗರು- ಜಗತ್ತಿನ ಬೇರೆಬೇರೆ ಭಾಷೆಗಳವರು- ಅವರು ಇಂಗ್ಲಿಷ್ ಭಾಷೆಯನ್ನು ಬಲ್ಲವರಾಗಿದ್ದರೆ, ಅವರೂ ಕೂಡಾ ಓದುವ ಅವಕಾಶವನ್ನು ಪಡಕೊಳ್ತಾರೆ. ಈ ನಾಲ್ಕು ಬಗೆಯ ಓದುಗರ ಕುರಿತು ಯಾಕೆ ಹೇಳಿದೆ ಅಂದ್ರೆ, ಈ ನಾಲ್ಕೂ ಬಗೆಯ ಓದುಗರು ಓದುವ ಬಗೆಗಳು ಮತ್ತು ಪಡಕೊಳ್ಳುವ ಅನುಭವಗಳು ಬೇರೆಬೇರೆಯಾಗಿರ್ತವೆ. ಬೇರೆಬೇರೆ ಭಾಷೆಗಳ ಕೃತಿಗಳು, ಯುರೋಪಿಯನ್ ಭಾಷೆಗಳಿಗೆ ಮರು ಅನುವಾದವಾದ್ರೆ, ಅದನ್ನು ಓದುವವರು ಬೇರೆ ಬಗೆಯವರಾಗಿರ್ತಾರೆ. ಅವರು ಸ್ವಲ್ಪ ಹೆಚ್ಚು ಅಕೆಡೆಮಿಕ್ ವಲಯದಲ್ಲಿರ್ತಾರೆ. ಅಕೆಡೆಮಿಕ್ ವಲಯದಲ್ಲಿ ಈ ಬಗೆಯ ಅನುವಾದ ಕೃತಿಗಳನ್ನ ಸಾಂಸ್ಕೃತಿಕ ಅಧ್ಯಯನದ ಭಾಗವಾಗಿ ಪರಿಗಣಿಸಲಾಗ್ತದೆ. ಮತ್ತು ಈ ಬಗೆಯ ಕೃತಿಗಳನ್ನು ತರಗತಿಗಳಲ್ಲಿ ಅದರ ಚೌಕಟ್ಟಿಗೆ ತಕ್ಕಂತೆ ಬಹಳ ವಿವರವಾದ ಅಧ್ಯಯನವನ್ನ ಮಾಡ್ತಾರೆ. ಅದರ ಬಗ್ಗೆ ಬರಹಗಳನ್ನು ಪ್ರಕಟಿಸತಕ್ಕಂತವರು ಆಗಿರ್ತಾರೆ ಎಂಬುದನ್ನ ನಾವು ನೋಡಿದ್ದೇವೆ. ಇಂತಹ ಒಂದು ಅವಕಾಶವನ್ನ ಈ ಕೃತಿ ತೆರೆಯುತ್ತಾ ಇದೆ ಎಂಬುದು ಬಹಳ ಮುಖ್ಯ. ಇದು ಕನ್ನಡ ಸಾಹಿತ್ಯದ ಒಂದು ವಿಶಿಷ್ಟ ವಲಯವನ್ನ ಪ್ರತಿನಿಧಿಸುವಂತಹ ಒಂದು ಕೃತಿ. ಯಾಕೆ ವಿಶಿಷ್ಟ ವಲಯ ಎಂಬುದನ್ನ ಸೂಕ್ಷ್ಮವಾಗಿ ಹೇಳೋದಕ್ಕೆ ಮುಂದೆ ಪ್ರಯತ್ನಪಡ್ತೀನಿ.
ಭಾರತೀಯ ಭಾಷೆಗಳನ್ನ ಮಾತಾಡಬಲ್ಲಂತಹ ಓದುಗರಿಗೂ ಇದು ಇನ್ನೂ ಕುತೂಹಲಕಾರಿಯಾದ ಓದು ಎಂದು ಹೇಳ್ಬೇಕು. ಯಾಕೆಂದ್ರೆ, ಭಾರತೀಯ ಭಾಷೆಗಳಲ್ಲಿ ಕಾದಂಬರಿಯ ಒಂದು ದೊಡ್ದ ಪರಂಪರೆಯಿದೆ. ಈ ಓದುಗರು ಈ ಕೃತಿಗಳನ್ನು ಹೇಗೆ ಓದ್ತಾರೆ ಎಂಬುದರ ಕುರಿತು ಕೆಲವು ತಾತ್ವಿಕ ನಿಲುವುಗಳಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ 1954ರ ಸುಮಾರಿಗೆ ಆರಂಭವಾದಾಗ ಅದು ಒಂದು ನಿಲುವನ್ನು ಪ್ರಕಟಿಸಿತು. ಅದು ಒಂದು ಧ್ಯೇಯವನ್ನು- ಒಂದು ಮೋಟೊವನ್ನು ಪ್ರಕಟಿಸಿತು. ಅದು ಏನಂದ್ರೆ, ಭಾರತೀಯ ಸಾಹಿತ್ಯ- ಅದು ಒಂದೇ ಸಾಹಿತ್ಯ; ಬೇರೆಬೇರೆ ಭಾಷೆಗಳಲ್ಲಿ ಪ್ರಕಟವಾಗ್ತದೆ. ಅಂದ್ರೆ, ಭಾರತೀಯ ಸಾಹಿತ್ಯ ಯಾವುದೇ ಭಾಷೆಯಲ್ಲಿರಲಿ- ಅದು ಕನ್ನಡದಲ್ಲಿರಲಿ, ಪಂಜಾಬಿಯಲ್ಲಿರಲಿ, ಬಂಗಾಳಿಯಲ್ಲಿರಲಿ, ಅದು ಒಂದೇ ಸಾಹಿತ್ಯ. ಇದಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿ ಒಂದು ವಾದವಿದೆ. ಭಾಷೆ ಒಂದೇ ಆಗಿರಬಹುದು- ಆದರೆ, ಅದ್ರಲ್ಲಿ ಬೇರೆಬೇರೆ ಸಾಹಿತ್ಯಗಳಿವೆ ಎಂಬುದು ಈ ವಾದ. ಉದಾಹರಣೆಗೆ ಇಂಗ್ಲಿಷ್ ಭಾಷೆ ಒಂದೇ ಆಗಿರಬಹುದು; ಆದ್ರೆ, ಅದ್ರಲ್ಲಿ ಬೇರೆಬೇರೆ ಬಗೆಯ ಸಾಹಿತ್ಯಗಳಿವೆ- ಅದು ಆಫ್ರಿಕನ್ ಆಗಿರಬಹುದು, ಇಂಡಿಯನ್ ಆಗಿರಬಹುದು, ಶ್ರೀಲಂಕನ್ ಅಥವಾ ಪಾಕಿಸ್ತಾನದ್ದಿರಬಹುದು. ಇಂಗ್ಲಿಷ್ ಭಾಷೆಯಲ್ಲೇ ಬೇರೆಬೇರೆ ರೀತಿಯ ಸಾಹಿತ್ಯಗಳಿವೆ. ಅದನ್ನ ಕಾಮನ್‌ವೆಲ್ತ್ ಲಿಟರೇಚರ್ ಅಂತಾರೆ.
ಈ ಹೇಳಿಕೆಗಳು ಅಥವಾ ಸ್ಟೇಟ್ಮೆಂಟ್‌ಗಳು ಬಂದು ಸುಮಾರು ಐವತ್ತು ವರ್ಷಗಳಾದ್ವು. ಆದ್ರೆ ಈಗ ಐವತ್ತು ವರ್ಷಗಳ ನಂತರ ನೋಡಿದಾಗ, ಈ ಎರಡೂ ಹೇಳಿಕೆಗಳು ಪೂರ್ಣ ಪ್ರಮಾಣದಲ್ಲಿ ನಿಜವಲ್ಲ. ಇಡೀ ಕಾಮನ್‌ವೆಲ್ತ್ ಲಿಟರೇಚರ್ ಬಗ್ಗೆ ಮಾತನಾಡುವಷ್ಟು ನನಗೆ ಜ್ಞಾನ ಇಲ್ಲ; ಆದ್ರೆ, ಭಾರತೀಯ ಭಾಷೆಗಳ ಸಾಹಿತ್ಯದ ಕುರಿತು- ಬೇರೆಬೇರೆ ಭಾಷೆಗಳು; ಒಂದೇ ಸಾಹಿತ್ಯ ಎನ್ನೋದು- ಸಾಹಿತ್ಯವನ್ನು ನೋಡುವ ತುಂಬಾ ಸರಳವಾದ ದಾರಿ ಅಂತ ನನಗನಿಸ್ತದೆ. ಆದ್ರೆ, ಭಾರತೀಯತೆ, ಅಂದ್ರೆ ಇಂಡಿಯನ್‌ನೆಸ್ ಅಂತ ಏನಿದೆ- ಅದು ಎಲ್ಲಾ ಭಾಷೆಗಳಲ್ಲೂ ಮಿನಿಮಲ್ ಆಗಿ ಇರಬಹುದು, ಇಲ್ಲಂತಲ್ಲ. ಆದ್ರೆ ಅದ್ರ ಆಚೆಗೆ, ಆಯಾ ಭಾಷೆಗಳ ಭಾಷಾ ಸಂಸ್ಕೃತಿಗಳ, ಭಾಷಾ ವೈಶಿಷ್ಟ್ಯಗಳ, ಸಾಹಿತ್ಯಿಕ ಪರಂಪರೆಗಳ ಎಷ್ಟೋ ಅಂಶಗಳು ಆಯಾ ಕೃತಿಗಳಲ್ಲಿ ಅನನ್ಯವಾಗಿ ಮೂಡಿರ್ತವೆ. ಉದಾಹರಣೆಗೆ ಕನ್ನಡದ ಓದುಗರಿಗೆ ಭಾರತೀಯ ಭಾಷೆಗಳಲ್ಲಿ ಪ್ರಕಟವಾದ ನಾನಾ ಕೃತಿಗಳ ಪರಿಚಯ ಇದೆ. ಉದಾಹರಣೆಗೆ, ನಾನಕ್ ಸಿಂಗ್ ಅವ್ರ ’ಬಿಳಿಯ ರಕ್ತ’ ಇರಬಹುದು, ಶ್ರೀಲಾಲ್ ಶುಕ್ಲಾ ಅವ್ರ ’ದರ್ಬಾರಿ ರಾಗ’ ಇರಬಹುದು, ಫಣೀಶ್ವರನಾಥ್ ರೇಣು ಅವ್ರ ’ಮೈಲಾ ಆಂಚಲ್’ ಇರಬಹುದು, ಪನ್ನಾಲಾಲ್ ಪಟೇಲ್ ಅವ್ರ ’ಮಳೇಲ ಜೀವ’ ಇರಬಹುದು- ’ಜನುಮದ ಜೋಡಿ’ ಅಂತ ಕನ್ನಡದಲ್ಲಿ ಅನುವಾದ ಆಗಿದೆ, ವೆಂಕಟೇಶ ಮಾಡಗೂಳ್ಕರ್ ಅವರ ’ಬನಗರವಾಡಿ’ ಇರಬಹುದು, ಹರಿನಾರಾಯಣ ಆಪ್ಟೆಯವರ ’ಯಾರು ಲಕ್ಷಿಸುವವರು?’ ಇರಬಹುದು, ಬಂಗಾಳದ ಹಲವಾರು ಕಾದಂಬರಿಗಳು- ರವೀಂದ್ರನಾಥ ಟ್ಯಾಗೋರ್ ಅವರ ’ಗೋರಾ’ ಇರಬಹುದು, ಶರಶ್ಚಂದ್ರ ಚಟರ್ಜಿಯವರ ’ಶೇಷ ಪ್ರಶ್ನೆ’ ಇರಬಹುದು, ಅವರದ್ದೇ ’ಪಥೇರ್ ದಾಬಿ’ ಇರಬಹುದು- ’ಅಧಿಕಾರ’ ಎಂದು ಕನ್ನಡಕ್ಕೆ ಅನುವಾದ ಆಗಿದೆ, ವಿಭೂತಿಭೂಷಣ ವಂದೋಪಾಧ್ಯಾಯ ಅವರ ’ಮಹಾ ಯಾತ್ರಿಕ’ ಇರಬಹುದು, ತಕಳಿ ಶಿವಶಂಕರ ಪಿಳ್ಳೈ ಅವರ ’ಏಣಿಯ ಮೆಟ್ಟಿಲುಗಳು’, ’ಹಗ್ಗ’ ಅಥವಾ, ’ಕಯರ್’ ಹೀಗೆ ನಾವು ಹಲವಾರು ಕಾದಂಬರಿಗಳನ್ನ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡ್ಕೊಂಡು ಓದಿದೀವಿ. ಅವುಗಳನ್ನ ಓದಿದಾಗ, ಅವುಗಳ ಅನುಭವ- ಒಂದೇ ಸಾಹಿತ್ಯ ಬೇರೆಬೇರೆ ಭಾಷೆಗಳಲ್ಲಿ ಬಂದಿವೆ ಅಂತ ಅನಿಸೋದಿಲ್ಲ. ಅವುಗಳಲ್ಲಿ ಆಯಾ ಭಾಷೆಗಳ, ಆಯಾ ನೆಲದ, ಆಯಾ ಸಾಹಿತ್ಯ, ಸಂಸ್ಕೃತಿ, ಪರಂಪರೆಗಳ ಯಾವ್ಯಾವ ಅಂಶಗಳಿವೆ- ಅವು ನಮಗೆ ಪರಿಚಯ ಆಗೋದು ಈ ಕಾದಂಬರಿಗಳ ಮೂಲಕ. ಇವೆಲ್ಲವುಗಳಲ್ಲಿ ಕೆಲವು ಸಾಮಾನ್ಯ ಲಕ್ಷಣಗಳಿವೆ. ಇವೆಲ್ಲವೂ ಆಧುನಿಕ ಕಾಲಕ್ಕೆ ತೆರೆದುಕೊಳ್ಳತಕ್ಕಂತ ಭಾರತದ ಬೇರೆಬೇರೆ ಪ್ರದೇಶಗಳಲ್ಲಿ ಸೃಷ್ಟಿಯಾದಂತ ಕಾದಂಬರಿಗಳು.
’ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ನೋಡಿದ್ರೆ, ಅದು ಪ್ರಕಟವಾದ ಕಾಲವನ್ನು ನೋಡಿದ್ರೆ, ಅದು ಇಪ್ಪತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಪ್ರಕಟವಾದ ಕಾದಂಬರಿ. 67ರಲ್ಲಿ ಪ್ರಕಟವಾದದ್ದು- ಹಾಗಂತ ನಾವು ಸಾಮಾನ್ಯವಾಗಿ ತಿಳ್ಕೋತೇವೆ. ಆದ್ರೆ ವಾಸ್ತವದಲ್ಲಿ ಕುವೆಂಪು- ಸುಮಾರು 1937ರಲ್ಲಿ ’ಕಾನೂರು ಹೆಗ್ಗಡತಿ’ಯನ್ನು ಪ್ರಕಟಿಸಿ ಆದ ಮೇಲೆ, ಸುಮಾರು ನಾಲ್ಕು ವರ್ಷಗಳಲ್ಲೇ- 1940ರ ಹೊತ್ತಿಗೇನೆ ಈ ಕಾದಂಬರಿ ಬರೆಯಲು ಆರಂಭ ಮಾಡಿದ್ರು. ಅದರ ಮೊದಲ ಎರಡು ಅಧ್ಯಾಯಗಳು ಶಿವಮೊಗ್ಗದಲ್ಲಿ ಪ್ರಕಟವಾಗ್ತಿದ್ದ, ಕೂಡಲಿ ಚಿದಂಬರ ಅವರು ತರ್ತಾ ಇದ್ದ ಕರ್ನಾಟಕ ಸಂಘದ ಪತ್ರಿಕೆಯಲ್ಲಿ ಪ್ರಕಟವಾಗಿದ್ವು. ಅದರ ನಂತರ ಅವರು ತಮ್ಮನ್ನು ತಾವು ಸಂಪೂರ್ಣವಾಗಿ ’ಶ್ರೀ ರಾಮಾಯಣ ದರ್ಶನಂ’ ಕೃತಿಗೆ ತೊಡಗಿಸಿಕೊಂಡ್ರು. ಇದಾದ ಒಂಭತ್ತು ವರ್ಷಗಳ ನಂತರ, ’ಶ್ರೀ ರಾಮಾಯಣ ದರ್ಶನಂ’ ಕೃತಿಯನ್ನ ಮುಗಿಸಿದ ಮೇಲೆ ಅವರು ಮತ್ತೆ ಅದನ್ನು ಕೈಗೆತ್ತಿಕೊಳ್ತಾರೆ. ಸುಮಾರು 1949ರಲ್ಲಿ ’ಶ್ರೀ ರಾಮಾಯಣ ದರ್ಶನಂ’ ಮುಗಿಸಿದ್ರು. ಅಲ್ಲಿಂದ ಸುಮಾರು 1962ರವರೆಗೆ, ಕುವೆಂಪು ಅವರ ಸಾರ್ವಜನಿಕ ಜೀವನದಲ್ಲಿ ಬಹಳ ಮುಖ್ಯವಾದ ಅವಧಿಯಿದು. ಯಾಕೆಂದ್ರೆ ಅವರು ಆ ಅವಧಿಯಲ್ಲಿ ಯೂನಿವರ್ಸಿಟಿ ಪ್ರೊಫೆಸರ್ ಆದ್ರು, ಆನಂತರ ವೈಸ್ ಚಾನ್ಸಲರ್ ಆದ್ರು, ಆಡಳಿತದಲ್ಲಿ ತೊಡಗಿಕೊಂಡಿದ್ರು. ಸಾರ್ವಜನಿಕವಾಗಿ ತುಂಬಾ ಹೆಚ್ಚಾಗಿ ತೊಡಗಿಸಿಕೊಂಡಿದ್ದ ಅವಧಿಯಿದು. ಈ ಅವಧಿಯಲ್ಲಿ ಅವರು ಈ ಕೃತಿಯನ್ನ ರಚಿಸಿದರು. ಅದು ತುಂಬಾ ಇಂಪಾರ್ಟೆಂಟ್ ಅಂತ ನನಗನಿಸತ್ತೆ. ಯಾಕೆಂದ್ರೆ ಆಗ ಅವರು ಅದನ್ನು ಹೇಗೆ ಇಂಟರ್ನಲೈಸ್ ಮಾಡಿಕೊಂಡ್ರು ಎಂಬುದು ಬಹಳ ದೊಡ್ಡ ಪ್ರಶ್ನೆ. ಮಲೆಗಳಲ್ಲಿ ಮದುಮಗಳು ಮೊದಲೇ ಅವರ ಮನಸ್ಸಿನಲ್ಲಿ ನೆಲೆಗೊಂಡಿರಬಹುದಾದ ಒಂದು ಕೃತಿ. ಸುಜನಾ ಅವರು ಒಂದು ಸೆಮಿನಾರ್‌ನಲ್ಲಿ ಮಾತಾಡ್ತಾ, ’ಶ್ರೀ ರಾಮಾಯಣ ದರ್ಶನಂ’ ಮತ್ತು ’ಮಲೆಗಳಲ್ಲಿ ಮದುಮಗಳು’ ಕೃತಿಗಳಲ್ಲಿ ಇರುವ ತಾತ್ವಿಕತೆ ಒಂದೇ; ಒಂದು ಅಂತಸ್ಥ ಕೃತಿ, ಇನ್ನೊಂದು ಬಹಿರ್ ಕೃತಿ ಅಂತ ಅವರು ಬೆಂಗಳೂರು ವಿಶ್ವವಿದ್ಯಾಲಯದ ಸೆಮಿನಾರ್ ಒಂದರಲ್ಲಿ ಮಾತಾಡ್ತಾ ಹೇಳಿದ್ರು. ಹಾಗಂತ ಅನಿಸತ್ತೆ ಕೂಡ; ನಿಜ ಅದು. ’ಮಲೆಗಳಲ್ಲಿ ಮದುಮಗಳು’ ಆ ತಾತ್ವಿಕತೆಯ ಒಂದು ಉದಾಹರಣೆಯಾಗಿ ಕಾಣಿಸತ್ತೆ; ನಿದರ್ಶನವಾಗಿ ಕಾಣಿಸತ್ತೆ. ಇದನ್ನ ಒಪ್ಪೋದು ಬಿಡುವುದು ಬೇರೆಯೇ ವಿಚಾರ. ಏನಿದ್ರೂ, ಇಪ್ಪತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಬಂದು, ಕನ್ನಡದ ಬಹುಮುಖ್ಯ ಕಾದಂಬರಿಗಳು ಪ್ರಕಟವಾಗಿ, ಕಾದಂಬರಿಗಳು ಬೇರೆಬೇರೆ ಮಜಲುಗಳನ್ನು ದಾಟಿದ ಮೇಲೆ ಮಲೆಗಳಲ್ಲಿ ಮದುಮಗಳು ಪ್ರಕಟವಾದದ್ದು ಅಂದರೂ, ಇಪ್ಪತ್ತನೆಯ ಶತಮಾನದ ಅತ್ಯಂತ ಶ್ರೇಷ್ಟ ಕೃತಿಗಳಲ್ಲಿ- ಕನ್ನಡದ ಶ್ರೇಷ್ಠ ಸಾಹಿತ್ಯ ಕೃತಿಗಳಲ್ಲಿ ಅದು ಒಂದಾಗುವುದಕ್ಕೆ- ಸಾಧ್ಯವಾಗಿದೆ. ಇಪ್ಪತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಪ್ರಕಟವಾದರೂ ಕೂಡ, ಅದರ ಮಹತ್ವ ಶತಮಾನದ ಉದ್ದಕ್ಕೂ ಇದೆ ಅಂತ ನಾವು ನೋಡಬಹುದು.
ಈ ಕಾದಂಬರಿ ಯಾಕೆ ಅನನ್ಯ? ಕಾದಂಬರಿಯ ಫಾರ್ಮ್‌ಗಳ ಬಗ್ಗೆ ಇರುವ ನಮ್ಮ ಎಲ್ಲಾ ತಿಳಿವಳಿಕೆಗಳನ್ನ ಇದು ಬುಡಮೇಲು ಮಾಡತ್ತೆ. ಕಾದಂಬರಿಯ ಈ ಫಾರ್ಮ್ ಅಂದ್ರೆ ಏನು- ಈ ಬಗ್ಗೆ ಹಲವಾರು ತಾತ್ವಿಕ ನಿಲುವುಗಳಿವೆ, ನಿದರ್ಶನಗಳಿವೆ- ಯುರೋಪಿಯನ್ ನಾವೆಲ್ಸ್- ಫ್ರೆಂಚ್ ಕಾದಂಬರಿಗಳಿವೆ, ಇಂಗ್ಲಿಷ್ ಕಾದಂಬರಿಗಳಿವೆ, ಇಟಾಲಿಯನ್ ಕಾದಂಬರಿಗಳಿವೆ, ಸ್ಪ್ಯಾನಿಷ್ ಕಾದಂಬರಿಗಳಿವೆ, ಭಾರತದ ವಿವಿಧ ಭಾಷೆಗಳ ಕಾದಂಬರಿಗಳಿವೆ. ಇವೆಲ್ಲವನ್ನೂ ಕೂಡಾ ಗಮನಿಸಿದಾಗ- ವಾಲ್ಟರ್ ಬೆಂಜಮಿನ್ ಮುಂತಾದವರು, ಯಾವುದೆಲ್ಲಾ ನಾವೆಲ್ ಎಂಬ ಥಿಯರಿಯನ್ನು, ಯಾವ ಕಾಲದಲ್ಲಿ ಕಾದಂಬರಿಗಳು ಸೃಷ್ಟಿಯಾಗ್ತವೆ, ಅವುಗಳಲ್ಲಿ ಇರಬಹುದಾದ ಸ್ವರೂಪ ಏನು ಇತ್ಯಾದಿಗಳ ಬಗ್ಗೆ ಸಾಹಿತ್ಯ ವಿದ್ಯಾರ್ಥಿಗಳಿಗೆ ತಾತ್ವಿಕ ನಿಲುವುಗಳನ್ನ ಪರಿಚಯ ಮಾಡಿಕೊಟ್ಟಿದ್ದಾರೆ. ಆದರೆ, ಈ ಕಾದಂಬರಿ ಈ ಎಲ್ಲ ನಿಲುವುಗಳನ್ನು, ತಾತ್ವಿಕತೆಗಳನ್ನು ಸಂಪೂರ್ಣವಾಗಿ ಭಗ್ನಗೊಳಿಸ್ತದೆ. ಬೇರೆ ರೀತಿಯಲ್ಲಿ ಕೃತಿಯ ಮೈ ಆಕಾರ ಪಡೆಯತ್ತೆ. ಅದು ಬಹಳ ಕುತೂಹಲಕಾರಿಯಾದ ಸಂಗತಿ. ಅದು ಯಾಕೆ ಆ ರೀತಿ ಆಗತ್ತೆ, ಅದಕ್ಕೆ ಕಾರಣಗಳೇನಿವೆ ಎಂಬುದನ್ನ ನಾವು ನೋಡ್ಬೇಕಾಗತ್ತೆ.
ಇದನ್ನೂ ಓದಿ: ಕುವೆಂಪು ಕ್ರಾಂತಿ ಕಹಳೆ-50 ಕಾರ್ಯಕ್ರಮದಲ್ಲಿ ಕೆ.ವಿ. ನಾರಾಯಣ ಅವರ ಮಾತುಗಳು
ಈ ಕಾದಂಬರಿ ಪ್ರಕಟವಾದ ನಂತರ ಮೊದಮೊದಲು ಬಂದ ವಿಮರ್ಶೆಗಳಲ್ಲಿ ಪ್ರೊ. ಎಂ.ಜಿ. ಕೃಷ್ಣಮೂರ್ತಿಯವರು ಈ ಕಾದಂಬರಿಯನ್ನು ಡಿಸ್‌ಮಿಸ್ ಮಾಡಿದ್ರು; ಇದು ಕೇಂದ್ರವೇ ಇಲ್ಲತಕ್ಕಂತ ಒಂದು ಕಾದಂಬರಿ ಎಂದು. ಎಂ.ಜಿ.ಕೆ.ಯವರು ತರಬೇತಿ ಪಡೆದಂತ ಸಾಹಿತ್ಯ ಸಿದ್ಧಾಂತಗಳಲ್ಲಿ ಸಾಹಿತ್ಯ ಕೃತಿಗಳಿಗೆ ಒಂದು ಕೇಂದ್ರ ಬೇಕು. ಪ್ರೊಟಾಗನಿಸ್ಟ್ ಇಲ್ಲ, ಇಡೀ ಕೃತಿಯನ್ನು ಹಿಡಿದಿಡಬಲ್ಲಂಥ ಒಂದು ಕೇಂದ್ರ ಬಿಂದು ಇದರಲ್ಲಿಲ್ಲ; ಎಲ್ಲಾ ಚೆಲ್ಲಾಪಿಲ್ಲಿಯಾಗಿದೆ ಅಂತ ಹೇಳಿ, ಈ ಕಾದಂಬರಿಯನ್ನು ಡಿಸ್‌ಮಿಸ್ ಮಾಡಿದ್ರು. ಇದು ಹೊಸದರಲ್ಲಿ, ನಾಲ್ಕೈದು ವರ್ಷಗಳಲ್ಲಿ ಬಂದ ವಿಮರ್ಶೆ. ಅನಂತರದ ಮೂವತ್ತು, ನಲ್ವತ್ತು ವರ್ಷಗಳ ಕಾಲ ಕನ್ನಡ ವಿಮರ್ಶೆಗೇ ಈ ಕಾದಂಬರಿಯನ್ನ ಅರಗಿಸಿಕೊಳ್ಳಬೇಕಾಗಿ ಬಂತು. ಈಗಲೂ ಕೂಡಾ ಸಂಪೂರ್ಣವಾಗಿ ಅರ್ಥ ಮಾಡ್ಕೊಂಡಿದ್ದೇವೋ ಇಲ್ಲವೋ ಗೊತ್ತಿಲ್ಲ. ಯಾಕೆಂದ್ರೆ ಒಂಬತ್ತು ಗಂಟೆಗಳ ಕಾಲದಷ್ಟು ದೀರ್ಘ ರಂಗರೂಪವನ್ನ ನೂರಾರು ಪ್ರದರ್ಶನಗಳಲ್ಲಿ ಮೈಸೂರು, ಬೆಂಗಳೂರಿನ ಜನ ಕಂಡಾಗ್ಯೂ ಕೂಡಾ, ಆ ಕಾದಂಬರಿಯ ಮಹತ್ವ- ತಿರುಳು ಏನು, ಅದು ನಿಜವಾಗಿಯೂ ಏನನ್ನ ಪ್ರಪೋಸ್ ಮಾಡುತ್ತೆ ಎಂಬುದರ ಅರಿವು ಅವರಿಗೆ ಬರತ್ತಾ, ಇಲ್ವ ಎಂಬುದರ ಬಗ್ಗೆ ನನಗಿನ್ನೂ ಸಂದೇಹ ಇದೆ. ಯಾಕಂದ್ರೆ, ಅದರ ಎಕ್ಸಾಟಿಕ್ ನೇಚರಿಗೆ ಪ್ರೇಕ್ಷಕರು ಮಚ್ಚಿಕೊಂಡ ಹಾಗೆ, ಅದರ ಒಳಗೆ ಇರತಕ್ಕಂತ ಪ್ರಧಾನ ಜೀವಂತ ಬಿಂದು ಏನಿದೆ, ಅದಕ್ಕೆ ತೆರೆದುಕೊಳ್ಳೋದಕ್ಕೆ ಬಹಳ ಸಿದ್ಧತೆ ಬೇಕಾಗ್ತದೆ. ಇದು ಕಾದಂಬರಿಯ ಅನನ್ಯತೆ ಏನಿದೆ, ಅದನ್ನ ಪ್ರಕಟಿಸ್ತದೆ ಅಂತ ನನಗೆ ಕಾಣತ್ತೆ.
ಹಲವು ತಲೆಮಾರುಗಳವರಿಗೆ ಈ ಕಾದಂಬರಿಯ ಓದು ಸಾಧ್ಯವಾಗಿದೆ. ಈ ಕಾದಂಬರಿ ಬರುವ ಹೊಸದರಲ್ಲಿ ನಾನು ಯುವಕನಾಗಿದ್ದೆ, ಈಗ ಮುದುಕನಾಗಿದ್ದೇನೆ- ಎರಡು ತಲೆಮಾರುಗಳು ಕಳೆದುಹೋಗಿವೆ- ಎರಡು ತಲೆಮಾರಿನವರು ಓದಿದ್ದಾರೆ; ಮುಂದಿನ ತಲೆಮಾರಿನವರು ಓದ್ತಿದ್ದಾರೆ- ಕನ್ನಡದಲ್ಲೇ. ಈ ಕಾದಂಬರಿ, ತನ್ನ ಸಾಧ್ಯತೆಗಳನ್ನ ಓದುಗರಿಗೆ ಮತ್ತೆ ಮತ್ತೆ ತೆರವುಗೊಳಿಸ್ತಾನೆ ಇದೆ. ಆದರೆ ಈ ಕಾದಂಬರಿಯನ್ನ ಮತ್ತೆಮತ್ತೆ ಓದಬಹುದಾದರೆ- ಇಂಗ್ಲಿಷ್‌ನಲ್ಲಿ ಒಂದು ಮಾತು ಹೇಳ್ತಾರಲ್ಲ- ಮರ ಮತ್ತು ಕಾಡನ್ನು ಹೋಲಿಕೆ ಮಾಡಿ- ಮರಗಳು ಕಾಣಿಸ್ತವೆ, ಆದ್ರೆ ಕಾಡು ಕಾಣಿಸೋದಿಲ್ಲ ಅಂತ- ಈ ಕಾದಂಬರಿಯನ್ನು ಓದುವಾಗ, ತುಂಬಾ ಸಲ ಮರಗಳು ಕಾಣಿಸ್ತವೆ, ಆದರೆ ನೆಲವನ್ನು ಬಂಧಿಸ್ತಕ್ಕಂತ ಕಾಡು ಯಾವುದು? ಒಂದೇ ಒಂದು ವಾಕ್ಯದೊಳಗಡೆ ಇರುವಂಥದ್ದು- ಪ್ರಸ್ತಾವನಾ ಮೂಲ ವಾಕ್ಯ- ಕುವೆಂಪು ಅವರೇ ಬರೆದಿರುವಂಥ ಮಾತಿದು: ’ನೀರೆಲ್ಲವೂ ತೀರ್ಥ!’- ಆ ಮಾತಿದೆಯಲ್ಲ! ಈ ಮಾತು ಓದಿದಾಗ್ಲೆಲ್ಲ ನಾನು- ನನ್ನಂತ ಬೆಂಗಳೂರಿನ ಕನ್ನಡ ಅಧ್ಯಯನ ಕೇಂದ್ರದ ಅಧ್ಯಾಪಕರಲ್ಲಿ ಇದ್ದ ಕುಹಕ ಮನೋಭಾವದಿಂದ – ನಾನು ಕೂಡಾ ಸ್ವಲ್ಪ ಕುಹಕಿ- ಹೇಳ್ತಿದ್ದೆ: ತೀರ್ಥವು ಕೂಡಾ ನೀರೇ ಅಂತ ಯಾಕೆ ಹೇಳ್ಲಿಲ್ಲ? ಕೊನೆಗೂ ತೀರ್ಥ ಅನ್ನೋದು ನೀರೇ ತಾನೆ? ತೀರ್ಥವೆಲ್ಲಾ ನೀರೇ ಎನ್ನುವ ಬದಲು ನೀರೆಲ್ಲವೂ ತೀರ್ಥ ಅಂದ್ರಲ್ಲಾ, ಯಾಕೆ? ಎರಡನೆಯದು- ಇಲ್ಲಿ ಯಾವುದೂ ಮಹತ್ವದಲ್ಲ; ಯಾವುದೂ ಅಮಹತ್ತಾದುದಲ್ಲ; ಅಂದ್ರೆ ಎಲ್ಲವೂ ಇಂಪಾರ್ಟೆಂಟೇ. ಇಲ್ಲಿ ಕ್ಷುದ್ರವಾದುದು ಯಾವುದೂ ಇಲ್ಲ. ಮಹತ್ತಾದದ್ದು ಏನೂ ಇಲ್ಲ; ಇಲ್ಲಿ ವ್ಯರ್ಥವಾದದ್ದು ಏನೂ ಇಲ್ಲ. ಎಲ್ಲದಕ್ಕೂ ಇಲ್ಲಿ ಇದೆ ಅರ್ಥ ಅಂತ ಹೇಳಿದ್ಮೇಲೆ, ನೀರು ಮತ್ತು ತೀರ್ಥದಲ್ಲಿ ವ್ಯತ್ಯಾಸ ಇಲ್ಲ ಅಂದ ಮೇಲೆ, ನೀರು ತೀರ್ಥ ಆಗ್ಬೇಕಾದ ಸ್ಥಿತಿಗೆ ಯಾಕೆ ಹೋಗ್ಬೇಕು? ಈ ಚಲನೆ ಯಾಕೆ ಬೇಕು? ಕಾದಂಬರಿ ಪ್ರೊಪೋಸ್ ಮಾಡ್ತಾ ಇರ್ತಕ್ಕಂತದ್ದೇ ಅದನ್ನ. ಕಾದಂಬರಿಯ ಚಲನೆಯೇ ಮೇಲ್ಮುಖವಾದ ಚಲನೆ, ಉನ್ಮುಖವಾದ ಚಲನೆ. ಯಾರ್‍ಯಾರು ಈ ಬಗೆಯ ಉನ್ಮುಖವಾದ ಚಲನೆಗೆ ಒಳಪಡ್ತಾರೆ ಅದನ್ನ ಈ ಕಾದಂಬರಿ ಶೋಧಿಸ್ತಾ ಇದೆ.
ಪೂರ್ಣಚಂದ್ರ ತೇಜಸ್ವಿಯವ್ರು ಒಂದು ಕಡೆ ಉಪನ್ಯಾಸದಲ್ಲಿ ಹೇಳಿದ್ರು: ಕುವೆಂಪು ಅವರ ಅತ್ಯಂತ ಪ್ರಮುಖವಾದ ತಿರುಳು ಯಾವುದಂದ್ರೆ, ಅದು ಟ್ರಾನ್ಸೆಂಡೆನ್ಸ್, ಅಂದ್ರೆ ಮೀರುವಿಕೆ, ದಾಟುವಿಕೆ. ದಾಟುವಿಕೆ ಅನ್ನೋದು ಈ ಕಾದಂಬರಿಯ, ಅವರ ಎಲ್ಲಾ ಸಾಹಿತ್ಯದ ಎಸೆನ್ಸ್. ಅವರ ಒಂದು ಪದ್ಯದಲ್ಲಿ ಬರ್ತದೆ: ಹಾರೈಸಿ ಹಾರೈಸಿ ತಾನೆ ಬದಲಾಗುವ ಬೆಳೆಯುವ ಬಗೆಯನ್ನು ಅದರಲ್ಲಿ ಕವಿ ವಿವರಿಸ್ತಾರೆ. ಹೇಗೆ ಬೇರೆಬೇರೆ ವಲಯಗಳಿಂದ ಅನ್ನಮಯವಾಗಿರತಕ್ಕಂತದ್ದು- ಮನೋಮಯವಾಗುವ ಹಂತಕ್ಕೆ ಆನಂದಮಯವಾಗುವ ಹಂತಕ್ಕೆ ಹಾರೈಸುವ ಮುಖಾಂತರವೇ ಬೆಳೀತಾ ಹೋಗ್ತದೆ ಅನ್ನೋದರ ಬಗ್ಗೆ ಹೇಳ್ತಾ ಹೋಗ್ತಾರೆ. ಇದು ಅವರು ನಂಬಿದಂತಹ ತಾತ್ವಿಕತೆ. ಈ ಕಾದಂಬರಿಯಲ್ಲಿ ಈ ದೃಷ್ಟಿಕೋನವನ್ನು ಚಿತ್ರಿಸುವಂತ ವಲಯವೊಂದನ್ನು ಸೃಷ್ಟಿ ಮಾಡಿದ್ದಾರೆ.
ತುಂಬಾ ವಿಚಿತ್ರವಾದ ಕಾದಂಬರಿಯಿದು. ಇದು ಎಲ್ಲೋ ಒಂದು ಸಂವೃತ ಲೋಕ; ಮುಚ್ಚಿಕೊಂಡ ಲೋಕ; ಕ್ಲೋಸ್ಡ್ ವರ್ಲ್ಡ್. ಇಲ್ಲಿಗೆ ಹೊರಗಡೆಯಿಂದ ಜನ ಬರಬಹುದೇ ಹೊರತು, ಹೊರಗಡೆಗೆ ಯಾರೂ ಹೋಗೋದೇ ಇಲ್ಲ. ಕೊನೆಗೂ ತಿಮ್ಮಿ ಮತ್ತು ಗುತ್ತಿ ಅವಳ ಬೆಂಬತ್ತಿ, ಮತ್ತವನ ನಾಯಿ- ಕೊನೆಗೆ ನಾಯಿ ಕೂಡಾ ಹೋಗೋದಿಲ್ಲ- ಇವರು ಮಾತ್ರ ಹೊರಗಡೆ ಹೋಗ್ತಾರೆ. ಇನ್ನು ಕೆಲವ್ರು ಹೊರಗಡೆಯಿಂದ ಬರಬಹುದು- ಆಧುನಿಕತೆಯ ಸ್ವರೂಪದಲ್ಲಿ ಬರಬಹುದು- ಅದು ಪಾದ್ರಿ ಇರಬಹುದು, ಅಥ್ವಾ ಪೊಲೀಸ್ನೋರು ಇರಬಹುದು, ಗಡಿಯಾರ ಇರಬಹುದು, ಅಥ್ವಾ ಆಸ್ಪತ್ರೆ ಇರಬಹುದು, ಸ್ಕೂಲ್ ಇರಬಹುದು… ಇವೆಲ್ಲಾ ಬರ್ತವೆ. ಒಂದು ಹಿಸ್ಟಾರಿಕಲ್ ರೆಫರೆನ್ಸ್ ಬರ್ತದೆ ಅದ್ರೊಳಗಡೆ; ಬಟ್ ದೇರ್ ಈಸ್ ನೋ ಹಿಸ್ಟಾರಿಸಿಟಿ. ಚರಿತ್ರೆಯ ಸೂಚನೆ ಇದ್ದರೂ ಚಾರಿತ್ರಿಕತೆಗೆ ಕಾದಂಬರಿ ಕಟ್ಟುಬೀಳೋದಿಲ್ಲ. ನಾನು ಎಲ್ಲೋ ಒಂದ್ಕಡೆ ಬರೀತಾ ಈ ಕಾದಂಬರಿ ’ಇತಿಹಾಸದ ಕಪ್ಪು ಕುಳಿಗೆ ಸಿಲುಕದ ಕೃತಿ’ ಅಂದಿದ್ದೆ. ಕಪ್ಪು ಕುಳಿ ಅಂದ್ರೆ ಬ್ಲ್ಯಾಕ್ ಹೋಲ್- ಎಲ್ಲವನ್ನೂ ನುಂಗಿ ನೊಣೆಯಬಲ್ಲದು ಅದು. ಚರಿತ್ರೆ ಎಂಬ ಬ್ಲ್ಯಾಕ್ ಹೋಲಿಗೆ ಸಿಕ್ಕಾಕೊಳ್ದೇ ಇರೋ ಕೃತಿಯಿದು. ಯಾಕಂದ್ರೆ, ಇದ್ರಲ್ಲಿ ಹಿಸ್ಟಾರಿಸಿಟಿ ಇಲ್ಲ. ಹಿಸ್ಟರಿಯಲ್ಲಿ ಇರಬಹುದಾದ ಟೆಂಪೋರಲ್ ಕಲ್ಪನೆ ಇದೆಯಲ್ಲಾ, ಅಂದ್ರೆ ಕಾರ್ಯ-ಕಾರಣ ಸಂಬಂಧದಲ್ಲಿ- ಒಂದು ಕಾಲ ಇನ್ನೊಂದು ಕಾಲದ ಮೇಲೆ, ಭೂತಕಾಲ ವರ್ತಮಾನದ ಮೇಲೆ, ವರ್ತಮಾನ ಭವಿಷ್ಯದ ಮೇಲೆ ಪರಿಣಾಮ ಬೀರುವ- ಅಂದ್ರೆ ಒಂದು ಕನ್ಸಿಕ್ಯೂಟಿವ್ ಆದಂತ, ಲೀನಿಯರ್ ಆದಂತ ರೀತಿಯಲ್ಲಿ ಚರಿತ್ರೆಯ ಕಲ್ಪನೆ ಇದೆಯಲ್ಲ- ಅದನ್ನ ತಲೆಗೆಳಗು ಮಾಡ್ತದೆ. ಇದು ಒಂದು ಸ್ಪೇಶಿಯಲ್ ಹಿಸ್ಟರಿಯನ್ನ ಪ್ರಪೋಸ್ ಮಾಡ್ತದೆ. ಇವತ್ತು ಆಧುನಿಕ ಚರಿತ್ರಕಾರರು ಸ್ಪೇಶಿಯಲ್ ಹಿಸ್ಟರಿಯ ಬಗ್ಗೆ ಮಾತಾಡ್ತಾ ಇದ್ದಾರೆ. ಅಂದ್ರೆ ಒಂದೇ ಕಾಲಕ್ಕೆ ಬೇರೆಬೇರೆ ಕಡೆಗಳಲ್ಲಿ ನಡೀತಿರತಕ್ಕಂತ ಘಟನೆಗಳು- ಹತ್ತಿರವಾದದ್ದಿರಬಹುದು, ದೂರವಾದದ್ದಿರಬಹುದು, ಅವು ಒಂದು ಇನ್ನೊಂದನ್ನ ಪ್ರಭಾವಿಸ್ತಾ ಇರ್ತವೆ. ಶಿಕಾಗೋನಲ್ಲಿ ವಿವೇಕಾನಂದರು ಮಾಡಿದ ಉಪನ್ಯಾಸ ಇರಬಹುದು ಅಥವಾ ದಕ್ಷಿಣೇಶ್ವರದಲ್ಲಿ ಭವತಾರಿಣಿಯ ವಿಗ್ರಹದ ಮುಂದೆ ಕೂತಂತ ರಾಮಕೃಷ್ಣ ಆಶ್ರಮದ ಒಬ್ಬ ಸನ್ಯಾಸಿ ಇರಬಹುದು, ಅದರ ಜೊತೆಗೆ ಎಲ್ಲೆಲ್ಲೋ ನಡೀತಾ ಇರ್ತಕ್ಕಂತ ಘಟನೆಗಳು- ಅಲ್ಲಿ ನಡೀತಾ ಇರುವ ಘಟನೆಗಳಿಗೂ ಇಲ್ಲಿ ನಡೀತಾ ಇರುವ ಘಟನೆಗಳಿಗೂ ಯಾವ ರೀತಿಯ ಸಂಬಂಧ ಇರ್ತದೆ? ಕಾರ್ಯಕಾರಣ ಸಂಬಂಧ ಅಲ್ಲ ಇದು. ಜ್ಞಾಪ್ಯ- ಜ್ಞಾಪಕ ಸಂಬಂಧವೂ ಅಲ್ಲ; ಗಮ್ಯ-ಗಮಕ ಸಂಬಂಧವೂ ಅಲ್ಲ. ಇಲ್ಲಿ ಒಂದು ವಿಚಿತ್ರವಾದ ಸಂಬಂಧ ಇದೆ. ಈ ಸಂಬಂಧ ಯಾವುದು? ಈ ಸಂಬಂಧದ ಸ್ವರೂಪ ಏನು ಎಂಬುದನ್ನ ಈ ಕಾದಂಬರಿ ಹುಡುಕೋಕೆ ಪ್ರಯತ್ನಪಡ್ತದೆ.
ಅಂದ್ರೆ, ಟೆಂಪೋರಲ್ ಹಿಸ್ಟರಿಯ ಟೈಮಿನ ಸೆನ್ಸ್ ಏನಿದೆ, ಅದರಲ್ಲೂ ಸ್ವಲ್ಪ ಬೇರೆ ರೀತಿಯಲ್ಲಿ ಹೋಗ್ತಾರೆ ಕುವೆಂಪು ಅವರು. ಸಾಮಾನ್ಯವಾಗಿ, ಭೂತಕಾಲ ವರ್ತಮಾನದ ಮೇಲೆ ಪರಿಣಾಮ ಬೀರ್ತದೆ, ವರ್ತಮಾನ ಭವಿಷ್ಯದ ಮೇಲೆ ಪರಿಣಾಮ ಬೀರ್ತದೆ. ಇದ್ರಲ್ಲಿ ಭವಿಷ್ಯ ವರ್ತಮಾನದ ಮೇಲೆ ಪರಿಣಾಮ ಬೀರ್ತದಂತೆ. ಅಂದ್ರೆ, ನಾಳೆ ಆಗಬಹುದಂತದ್ದು, ಇವತ್ತಿನ ಮೇಲೆ ಪರಿಣಾಮ ಬೀರ್ತದಂತೆ. ಈ ಕಾದಂಬರಿಯನ್ನ- ಮೆಚ್ಚಿಕೊಂಡು ಓದಿದಂತವ್ರೂ ಕೂಡಾ ಮುಜುಗರಪಡಬಹುದಾದಂತ ಪ್ರಸಂಗಗಳು ಇದ್ರೊಳಗಡೆ ಇವೆ. ಉದಾಹರಣೆಗೆ, ಗಡ್ಡದಯ್ಯನ ಪ್ರಸಂಗ ಇರಬಹುದು. ಗಡ್ಡದಯ್ಯ, ಮುಕುಂದಯ್ಯನನ್ನ ಪಕ್ಕಕ್ಕೆ ಕರ್ದು, ’ನೀನ್ಯಾರನ್ನ ಹುಡ್ಕೊಂಡು ಬಂದಿದ್ದೀಯೋ ಅವನೀಗಾಗಲೇ ಹುಟ್ಟಿಬಿಟ್ಟಿದ್ದಾನೆ. ನಿನ್ನ ಅಕ್ಕನ ಮಗನಾಗಿ ಹುಟ್ಟಿದ್ದಾನೆ ಅವ್ನು. ನೀನು ಯಾರನ್ನ ಮದ್ವೆ ಆಗ್ತೀಯೋ…’, ’ಇದನ್ನ ಯಾರಿಗೂ ಹೇಳ್ಬೇಡ ನೀನು’ ಈ ತರಹದ ವಿವರಗಳು… ಅಂದ್ರೆ ನಾಳೆ ನಡೆಯುವುದಾದಂತದನ್ನ ಇವತ್ತು… ಇದು ಬಹಳ ವಿಚಿತ್ರವಾದಂತದ್ದು. ಅಂದ್ರೆ, ನಮ್ಮ ಚರಿತ್ರೆಯ ಕಲ್ಪನೆಗಳು, ಅಂದ್ರೆ ಲೀನಿಯರ್ ಚರಿತ್ರೆಯ ಕಲ್ಪನೆಗಳನ್ನ ಕುವೆಂಪು ಇದ್ರಲ್ಲಿ ಸ್ವಲ್ಪ ಬೇರೆ ರೀತಿಯಲ್ಲಿ ಟೆಸ್ಟ್ ಮಾಡ್ತಾ ಇದ್ದಾರೆ- ಕಾಲ ಮತ್ತು ದೇಶಗಳನ್ನು ಜೋಡಿಸುವ ಕ್ರಮದಲ್ಲಿ.
ಸಾಧಾರಣವಾಗಿ ಕಾದಂಬರಿಗಳ ಥಿಯರಿಸ್ಟ್‌ಗಳು ಹೇಳುವ ವಿಧಾನದಲ್ಲಿ ಕಾದಂಬರಿಗಳಲ್ಲಿ ಒಂದು ಕೇಂದ್ರ ಪಾತ್ರ ಇರ್ತದೆ; ಒಂದು ಅಜೆಂಡಾ ಇರ್ತದೆ; ಏನನ್ನೋ ಬದಲಾಯಿಸ್ಬೇಕು ಅಂತ. ಅವ್ರದ್ದೇ ಇನ್ನೊಂದು ಕಾದಂಬರಿ ಕಾನೂರು ಹೆಗ್ಗಡತಿಯೊಳಗಡೆಗೆ, ಕಲಿತುಬಂದಂತ ಹೂವಯ್ಯ ಕೇಂದ್ರ ಪಾತ್ರ- ಅವನದ್ದೊಂದು ಅಜೆಂಡಾ ಇದೆ, ಪ್ರಾಜೆಕ್ಟ್ ಇದೆ, ಏನನ್ನೋ ಚೇಂಜ್ ಮಾಡ್ಬೇಕು ಅಂತ. ಅಲ್ಲಿ ಆ ಕಾದಂಬರಿಯಲ್ಲಿ ಏನಿದೆ- ಸಮ್‌ಥಿಂಗ್ ಈಸ್ ಬೀಯಿಂಗ್ ಪ್ರೊಡ್ಯೂಸ್ಡ್- ಏನನ್ನೋ. ಇಡೀ ’ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ನಥಿಂಗ್ ಈಸ್ ಪ್ರೊಡಕ್ಟಿವ್. ಏನನ್ನೂ ಉತ್ಪಾದನೆ ಮಾಡ್ತ ಇಲ್ಲ ಇಲ್ಲಿ. ಎಲ್ಲವೂ ಕ್ಷುಲ್ಲಕವಾದ ಪಾತ್ರಗಳು; ದಿನನಿತ್ಯದ ಅತ್ಯಂತ ಕ್ಷುಲ್ಲಕವಾದ ಕೆಲಸಗಳು. ಜಗಳ ಆಡೋದು, ಕಿತ್ತಾಡೋದು, ಯಾರ್ದೋ ಹೆಂಡತಿಯನ್ನ ಚುಡಾಯ್ಸಿಕೊಂಡಿರೋತಕ್ಕಂತದ್ದು, ಯಾವ್ದೋ ಹೆಂಗಸರನ್ನ ಹಾರಿಸ್ಕೊಂಡು ಹೋಗ್ತಕ್ಕಂತದ್ದು, ಏಡಿ ಹಿಡೀತಕ್ಕಂತದ್ದು, ಬೇಟೆಯಾಡ್ತತಕ್ಕಂತದ್ದು, ಕೆಲ್ಸ ಕದೀತಕ್ಕಂತದ್ದು, ಕೆಲ್ಸ ತಪ್ಸಿ ಏನೋ ಮಾಡ್ತಕ್ಕಂತದ್ದು, ಹಂದಿ ಹಸಿಗೆ ಮಾಡ್ತಕ್ಕಂತದ್ದು… ಅಂದ್ರೆ, ಬೇಸಿಕ್ ನೆಸೆಸಿಟಿಗೆ ಬೇಕಾಗಿರೋ ಕೆಲ್ಸಗಳಲ್ಲಿ ತೊಡಗಿರ್ತಾರೇ ಹೊರ್ತು ಬೇರೇನಿಲ್ಲ. ಕುವೆಂಪು ಅವ್ರು ಎಷ್ಟೊಂದು ಕ್ಲಿಷ್ಟಕರವಾದ ವಿವರಗಳನ್ನ ಕೊಡ್ತಾ ಹೋಗ್ತಾರಂದ್ರೆ- ಸಂಚುಗಳನ್ನ ಮಾಡ್ತಕ್ಕಂತದ್ದು- ಪ್ರತಿಯೊಂದನ್ನ ಕೂಡಾ ನೋಡಿದ್ರೆ, ಇಲ್ಲಿ ಒಂದು ಮನುಷ್ಯನ ಘನತೆಯನ್ನು ಎತ್ತರಿಸುವ ಏನೊಂದೂ ಇಲ್ಲ- ಆ ರೀತಿಯ ಯಾವ್ದೇ ಪಾತ್ರಗಳು ಇಲ್ಲ ಇದ್ರೊಳ್ಗಡೆ; ಅಂತಾ ಘಟನೆಗಳು ಯಾವ್ದೂ ಇಲ್ಲ ಇದ್ರೊಳ್ಗಡೆ.
ಆದ್ರೂ ಕೂಡ, ಈ ವಿನ್ಯಾಸದ ಒಳಗಡೆಗೆ ಮನುಷ್ಯನ ವಿಕಾಸದ, ಮನುಷ್ಯನ ಪ್ರಜ್ಞೆಯ ಏರುವಿಕೆ ಇದ್ಯಲ್ಲ, ಆ ಏರುವಿಕೆಯ ಗಳಿಗೆಗಳನ್ನ ಈ ಕಾದಂಬರಿ ಚಿತ್ರಿಸ್ತದೆ. ಹೇಗೋ, ಕುವೆಂಪು ಮತ್ತು ತೇಜಸ್ವಿಯವರಿಗೆ ಕೂಡಾ ಈ ಏರುವಿಕೆ ಬಗ್ಗೆ, ಹಾರುವಿಕೆ ಬಗ್ಗೆ ಏನೋ ಬಹಳ ವಿಚಿತ್ರವಾದ ಮೋಹ ಇದೆ. ಏಕೆಂದ್ರೆ, ಈ ಹುಲಿಕಲ್ಲು ಗುಡ್ಡವನ್ನು ಏರಿದಾಗ ಆಗುವ ಒಂದು ಅನುಭವದ ಸ್ವರೂಪ ಇದೆಯಲ್ಲ, ಅದು ಹಲವಾರು ಪಾತ್ರಗಳಿಗೆ ಒಂದು ಟೆಸ್ಟಿಂಗ್ ಪಾಯಿಂಟ್ ಆಗ್ತದೆ. ಈ ಚಿನ್ನಮ್ಮನಂತವರಿರಬಹುದು, ತಿಮ್ಮಿಯಂತವರಿರಬಹುದು, ಅಷ್ಟೇಅಲ್ಲ; ಸುಬ್ಬಣ್ಣ ಹೆಗ್ಗಡೆಯಂತವರಿಗೆ ಕೂಡಾ! ಸುಬ್ಬಣ್ಣ ಹೆಗ್ಗಡೆಯಂತ ಮತ್ತು ಇತರರಿಗೆ… ಏನು ಹೇಳಬಹುದು… ತಮ್ಮ ದೈನಿಕಗಳಿಗೆ ಬದ್ಧವಾಗಿ, ಅತ್ಯಂತ ಕ್ಷುದ್ರ ಅನ್ನೋ ರೀತಿಯಲ್ಲಿ ಬದುಕ್ತಿರೋ ವ್ಯಕ್ತಿ ಕೂಡಾ ಹುಲಿಕಲ್ಲು ಗುಡ್ಡ ಏರ್ತಾ ಹೋದ ಹಾಗೇ ತನ್ನ ಬಾಲ್ಯಕ್ಕೆ ಹೊರಟುಹೋಗ್ತಾನೆ. ಮಸೆಗಲ್ಲು ದಾಟಿದ ತಕ್ಷಣ ಅವನೊಬ್ಬ ಮಗು. ಈ ರೀತಿಯಲ್ಲಿ ಮನುಷ್ಯನ ಪ್ರಜ್ಞೆಯಲ್ಲಿ ಉಂಟಾಗುವ ವಿಕಾಸ- ಅದು ಪ್ರಜ್ಞಾಪೂರ್ವಕವಾಗಿ ಆಗಿರಬಹುದು, ಇಲ್ಲಾ ಕುವೆಂಪು ಅವ್ರೇ ಒಂದ್ಕಡೆ ಹೇಳೋ ಹಾಗೆ, ಅಬುದ್ಧಿಪೂರ್ವಕವಾಗಿ.. ಅವರಲ್ಲಿ ಕುಳಿತಿದ್ದಾಗ ಯಾವುದೋ ರಾಜಕುಮಾರ ಬಂದು, ಯಾವುದೋ ಕಾಲದಲ್ಲಿ ನಡೆದಂತ ಒಂದು ಘಟನೆಯ ಕನಸನ್ನು ಕಾಣ್ತಾರೆ. ಏನೋ ಒಂದು ಬೆಳಕು… ಸೂರ್ಯನನ್ನ ಮಂಜು ಕವಿಯುತ್ತಿದ್ದಂತೆ… ಹೀಗೆ- ಏನೋ ಒಂದು ವಿಚಿತ್ರ ಅನುಭವ ಉಂಟಾಗುತ್ತೆ.
ಮತ್ತೊಂದು ಉದಾಹರಣೆಗೆ, ಈ ತರದ ಹಲವು ಬಗೆಗಳ ಅನುಭವಗಳಿಗೆ ತೆರೆದುಕೊಳ್ಳುವ ವಿಧಾನ ಇರಬಹುದು; ಚಿನ್ನಮ್ಮ ತುಂಬಾ ಚಿಕ್ಕ ಮಗುವಾಗಿದ್ದಾಗ, ಮುಕುಂದಯ್ಯ ತನ್ನ ಹಿಂದಿನ ಜನ್ಮದ ಗಂಡ ಆಗಿದ್ದ ಎಂಬ ನೆನಪಿನಿಂದ ಭೀತಿಯಿಂದ ವರ್ತಿಸತಕ್ಕಂತದ್ದು, ಅವ್ನು ಮನೆಗೆ ಹೋಗುತ್ತಿದ್ದ ದಾರಿ ಅಂತ ಅಜ್ಜಿಗೆ ತೋರಿಸತಕ್ಕಂತದ್ದು, ಈ ರೀತಿ ಏರುವಿಕೆ, ಮೀರುವಿಕೆಯನ್ನ ಇದು ಪ್ರಕಟಿಸ್ತಾ ಹೋಗ್ತಿರುವಂತೆ, ಮಹತ್ವಾಕಾಂಕ್ಷೆಯನ್ನ ಮೈಮೇಲೆ ಹಾಕ್ಕೊಂಡಂತ ಒಂದು ಚೇಂಜ್‌ಅನ್ನು, ಅಜೆಂಡಾವನ್ನು ಇಟ್ಟಕೊಂಡಂತ ಯಾವುದೇ ಒಂದು ಪಾತ್ರವೂ ಇದ್ರೊಳಗಡೆ ಇಲ್ಲ. ಹಾಗಿದ್ರೂ ಕೂಡಾ, ಇಷ್ಟೊಂದು ಮಹತ್ವ ಕೃತಿಯನ್ನ ಸೃಷ್ಟಿ ಮಾಡೋದಕ್ಕೆ ಅವ್ರಿಗೆ ಸಾಧ್ಯವಾಗಿದೆ. (ಇಲ್ಲಿ ಸಮಯ ಮೀರಿದ ಬಗ್ಗೆ ಕೆವಿಎನ್ ಕ್ಷಮೆ ಯಾಚಿಸುತ್ತಾರೆ.)
ವನಮಾಲ ಅವರು ಮಾಡಿರುವ ಈ ಅನುವಾದ ಬಹಳ ಕಷ್ಟದ ಕೆಲಸ. ಪ್ರತಿಯೊಂದು ಪದವನ್ನ ನೋಡ್ಬೇಕಾಗ್ತದೆ. ಕುವೆಂಪು ಅವ್ರನ್ನು ಬಿಟ್ರೆ, ಅಷ್ಟೊಂದು ನಿಕಟವಾಗಿ ಓದೋರು ಅನುವಾದಕರು ಮಾತ್ರ. ನಾವು ಓದೋರು ಕೂಡಾ ಕೆಲವೊಂದು ಪದಗಳನ್ನ ಓದೋದೇ ಇಲ್ಲ; ಹಾರಿಸ್ಕೊಂಡು ಹೋಗ್ತೇವೆ. ಕುವೆಂಪು ಅವ್ರ ವೊಕ್ಯಾಬ್ಯುಲರಿ, ಪದ ಸಂಪತ್ತು ಅಭೂತಪೂರ್ವವಾದದ್ದು. ರಾಮಾಯಣದರ್ಶನಂ ಓದಿದ್ರೆ ಗೊತ್ತಾಗ್ತದೆ… ಅವರು ಬಳಸಿದ ಪದಗಳು! ಮತ್ತೆ ಇಲ್ಲಿ ಕನ್ನಡದ ಪದಗಳನ್ನೇ ಅವ್ರು ರೂಪಿಸತಕ್ಕಂತದ್ದು ಮತ್ತು ಇಲ್ಲಿ ಲೆವೆಲ್ಸ್ ಆಫ್ ಸ್ಟೈಲ್ಸ್ ಇದ್ದಾವೆ.
ಇಲ್ಲಿ ಹಲವು ರೀತಿಯ ನಿರೂಪಕರಿದ್ದಾರೆ. ಅಂದ್ರೆ, ಕಾದಂಬರಿಯ ಜಗತ್ತಿನಿಂದ ಹೊರಗೆ ನಿಂತ್ಕೊಂಡು ಕಾದಂಬರಿಯ ಬಗೆಗೆ ಕಾಮೆಂಟ್ ಮಾಡೋ ನಿರೂಪಕರಿದ್ದಾರೆ. ಕಾದಂಬರಿಯ ಒಳಗಡೆ ನಿಂತ್ಕೊಂಡು ಕಾದಂಬರಿಯ ಪಾತ್ರಗಳ ಬಗೆಗೆ ಕಾಮೆಂಟ್ ಮಾಡೋ ನಿರೂಪಕರಿದ್ದಾರೆ. ಮತ್ತೆ ಪಾತ್ರಗಳ ಮನೋಸ್ಥಿತಿಯನ್ನೇ ವಿವರಿಸೋ ನಿರೂಪಕರಿದ್ದಾರೆ ಮತ್ತು ಪಾತ್ರಗಳು ತಮ್ಮಿಂದ ತಾವೇ ಏನ್ಮಾಡ್ತಿವೆ ಅಂತ ತೋರಿಸಿಕೊಡುವಂತ, ವಿವರಿಸುವಂತ ನಿರೂಪಕರಿದ್ದಾರೆ. ನಾಲ್ಕೂ ರೀತಿಯ ನಿರೂಪಕರಲ್ಲಿ ಕುವೆಂಪು ಅವರ ಭಾಷೆ ಸಂಪೂರ್ಣವಾಗಿ ಬೇರೆಬೇರೆ. ಅವರ ವೊಕ್ಯಾಬ್ಯುಲರಿ, ಅಂದ್ರೆ ಪದ ಸಂಪತ್ತು ಮತ್ತು ನಿರೂಪಣಾ ಶೈಲಿ ಎಲ್ಲವೂ ಬೇರೆಬೇರೆ. ಮತ್ತು ಅದ್ರಲ್ಲೂ ಅವರು ಇಲ್ಲಿ ಸಂಸ್ಕೃತ ಮತ್ತು ಕನ್ನಡಗಳ ನಡುವೆ ಲಾಳಿಯಾಡಿಸುವ ವಿಧಾನ ಇದೆಯಲ್ಲ ಅದು ಗಮನಿಸಬೇಕಾದ ಸಂಗತಿ.
ಒಂದು ಇಂಪಾರ್ಟೆಂಟ್ ವಿಷಯ ಹೇಳಿ ನನ್ನ ಮಾತು ಮುಗಿಸ್ತೇನೆ. ಅದನ್ನು ಹೇಳದೆ ಇರುವುದಕ್ಕೆ ನನ್ಗೆ ಸಾಧ್ಯವಾಗುವುದಿಲ್ಲ. ಇಡೀ ಕಾದಂಬರಿಯಲ್ಲಿ ಬಹಳ ಇಂಪಾರ್ಟೆಂಟ್ ವಿಷಯ ಅಂದ್ರೆ, ಸಾಮಾನ್ಯವಾಗಿ ನಾವು ಏಜೆಂಟ್ ಮತ್ತು ಎಕ್ಸ್‌ಪೀರಿಯೆಂಟ್- ನಿಯೋಗಿ ಮತ್ತು ಅನುಭೋಗಿ ಅಂತ ಯಾರನ್ನ ಕರೀತೀವಿ- ಇಲ್ಲಿ ಗಂಡಸು ನಿಯೋಗಿ ಮತ್ತು ಅನುಭೋಗಿ ಹೆಂಗಸು ಎಂಬುದು ನಮ್ಮ ಸಾಮಾನ್ಯವಾದ ಕಲ್ಪನೆ. ಪೇಟ್ರಿಯಾರ್ಕಿಯಲ್, ಅಂದ್ರೆ ಪಿತೃಪ್ರಧಾನ ಕಲ್ಪನೆ ಅದು. ಕುವೆಂಪು ಅದನ್ನೆಲ್ಲವನ್ನ ಇಲ್ಲಿ ಬದಲಿಸ್ತಾರೆ. ಅನುಭೋಗಿ ಹೆಂಗಸಾಗಿರ್ತಾಳೆ ಮತ್ತು ನಿಯೋಗಿ ಗಂಡಸಾಗಿರ್ತಾನೆ. ಯಾಕೆಂದ್ರೆ ಇಲ್ಲಿ ಮುಕುಂದಯ್ಯ ಚಿನ್ನಮ್ಮನನ್ನ ಓಡಿಸ್ಕೊಂಡು ಹೋಗ್ತಾನೆ ಅನ್ನೋದು ತಪ್ಪು. ಚಿನ್ನಮ್ಮನೇ ಓಡಿಸ್ಕೊಂಡು ಹೋಗೋದು. ತಿಮ್ಮಿ ಕ್ರಿಯಾಶೀಲೆಯಾಗ್ತಾಳೇ ಹೊರ್ತು ಗುತ್ತಿ ಅಲ್ಲ… ಹಾರ್ಸ್ಕೊಂಡು ಹೋಗ್ಬೇಕೆಂಬ ಒತ್ತಾಸೆ ಅವನದ್ದು ಇರಬಹುದು. ಮತ್ತೆ ಐತ ಮತ್ತು ಪೀಂಚಲು. ಪೀಂಚಲು ಇಲ್ಲಿ ಐತನಿಗಿಂತ ಹೆಚ್ಚು ಏಜೆಂಟ್ ಆಗಿ ಕಾಣ್ತಾಳೆ. ಇದನ್ನೆಲ್ಲಾ ಇಲ್ಲಿ ವಿವರಿಸಲಿಕ್ಕೆ ನನಗೆ ಸಮಯ ಇಲ್ಲ… ಇದನ್ನೇ ಪಲ್ಲಟ ಅಂತಾರೆ. ಎಲ್ಲಾ ರೀತಿಯಲ್ಲೂ ಕನ್ನಡದ ಅನನ್ಯ ಕಾದಂಬರಿಯಿದು. ಬೇರೆ ಭಾಷೆಯವರು ಇದನ್ನು ಓದಿದರೆ, ತಮ್ಮ ಭಾಷೆಯಲ್ಲಿ ತಾವು ಓದಿದ, ಓದ್ತಾ ಇರತಕ್ಕಂತ ಎಲ್ಲಾ ಕಾದಂಬರಿಗಳಿಗಿಂತ ಅತ್ಯಂತ ಭಿನ್ನ ಅನುಭವಕ್ಕೆ ತಮ್ಮನ್ನು ತಾವು ತೆರಕೊಳ್ತಾರೆ. ಇಂತಾ ಒಂದು ಬಹಳ ಕಷ್ಟದ ಕೆಲಸವನ್ನ ಕೈಗೊಂಡು, ಸಂಪೂರ್ಣಗೊಳಿಸಿದಂತ ವನಮಾಲಾ ಅವರನ್ನ ಮತ್ತೊಮ್ಮೆ ಅಭಿನಂದಿಸ್ತಾ, ನನ್ನ ಮಾತು ಮುಗಿಸ್ತೇನೆ. ನಾನು ಸಮಯ ಮೀರಿದ್ದೇನೆ, ಹೇಗೂ ಸಮಯ ಮೀರ್ತಿರೋವಂತವ್ರು ನಾವು; ಕ್ಷಮಿಸಿ. ನಮಸ್ಕಾರ.
ಪಠ್ಯ ರೂಪಕ್ಕೆ: ನಿಖಿಲ್ ಕೋಲ್ಪೆ

ಕೆ ವಿ ನಾರಾಯಣ
ಭಾಷಾಶಾಸ್ತ್ರಜ್ಞ, ವಿಮರ್ಶಕ. ’ತೊಂಡುಮೇವು’ ಕೆವಿಎನ್ ಅವರ ಬರಹಗಳನ್ನು ಸಂಕಲಿಸಿದ ಸಂಪುಟ ಸರಣಿ. ಇತ್ತೀಚಿಗೆ ಸಾರ್ತ್ರನ ’ಬುದ್ಧಿಜೀವಿಗಳ ಬಿಕ್ಕಟ್ಟು’ ಪುಸ್ತಕವನ್ನು ಕನ್ನಡದಲ್ಲಿ ನಿರೂಪಿಸಿದ್ದಾರೆ.


