Homeಕರ್ನಾಟಕಕುವೆಂಪು ಕ್ರಾಂತಿ ಕಹಳೆ-50 ಕಾರ್ಯಕ್ರಮದಲ್ಲಿ ಕೆ.ವಿ. ನಾರಾಯಣ ಅವರ ಮಾತುಗಳು

ಕುವೆಂಪು ಕ್ರಾಂತಿ ಕಹಳೆ-50 ಕಾರ್ಯಕ್ರಮದಲ್ಲಿ ಕೆ.ವಿ. ನಾರಾಯಣ ಅವರ ಮಾತುಗಳು

- Advertisement -
- Advertisement -

ಕುವೆಂಪು ಅವರ ಎರಡೂ ಭಾಷಣಗಳನ್ನು ನೇರವಾಗಿ ಕೇಳಿರುವ ವ್ಯಕ್ತಿ ಎಂದು ನನ್ನನ್ನು ಈ ಕಾರ್ಯಕ್ರಮಕ್ಕೆ ಕರೆಯಲಾಗಿದೆ ಎಂದು ಹೇಳಿದರು. ನನ್ನ ಹಾಗೆ ಎರಡೂ ಭಾಷಣಗಳನ್ನು ಕೇಳಿರುವ ವ್ಯಕ್ತಿಗಳು ಹಲವರು ಇದ್ದಾರೆ. ಒಬ್ಬರು ಇಲ್ಲೇ ಕುಳಿತಿದ್ದಾರೆ; ಕಾಳೇಗೌಡ ನಾಗವಾರ ಅವರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಹೋದ್ಯೋಗಿಗಳಾಗಿದ್ದರಿಂದ ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವ ಭಾಷಣವನ್ನು ಕಂಠೀರವ ಸ್ಟೇಡಿಯಂನಲ್ಲಿ ಒಟ್ಟಿಗೆ ಕೇಳುವ ಅವಕಾಶ ದೊರೆತಿತ್ತು. ಮೈಸೂರಿನಲ್ಲಿ ಕುವೆಂಪು ನೀಡಿದ ಉಪನ್ಯಾಸವನ್ನು ಕೇಳುವುದಕ್ಕೋಸ್ಕರ ನಾನು ಬೆಂಗಳೂರಿನಿಂದ ಬಂದಿರಲಿಲ್ಲ; ಆದರೆ ಅಕಸ್ಮಾತ್ ಕುವೆಂಪು ಅವರ ಉಪನ್ಯಾಸಕ್ಕೆ ಸಾಕ್ಷಿಯಾದಂತಹ ಅವಕಾಶ ಒದಗಿಬಂತು. ಆ ಉಪನ್ಯಾಸಕ್ಕೆ ನನಗೆ ಬರುವುದಕ್ಕೆ ಇಷ್ಟ ಇರಲಿಲ್ಲ. ಯಾಕೆಂದರೆ ಸಾಹಿತಿ ಕಲಾವಿದರ ಬಳಗದ (ಅಂದು ಕುವೆಂಪು ’ಕರ್ನಾಟಕ ಬರಹಗಾರರು ಮತ್ತು ಕಲಾವಿದರ ಒಕ್ಕೂಟ’ವನ್ನು ಉದ್ಘಾಟಿಸಿ ಭಾಷಣ ಮಾಡಿದರು – ಸಂ) ಚೌಕಟ್ಟಿನ ಬಗೆಗೆ ನನಗೆ ತಕರಾರುಗಳಿದ್ದವು. ಆ ಬಳಗಕ್ಕೆ ಖಚಿತವಾದ ತಾತ್ವಿಕತೆಯಿಲ್ಲ ಅನ್ನುವ ಒಂದು ತಕರಾರು ಕೂಡ ಇತ್ತು. ನಾನು ಈ ಮಾತನ್ನು ಐವತ್ತು ವರ್ಷದ ಹಿಂದಿನ ಪೀಳಿಗೆಯವರ ನೆಲೆಯಿಂದ ಹೇಳುತ್ತಿದ್ದೇನೆ. ಅಂದರೆ ಆಗ ನಮಗೆ ಕೆಲವು ತಕರಾರುಗಳಿದ್ದವು; ಆ ತಕರಾರುಗಳಿಂದ ನಮಗೆ ಆ ಬಳಗದ ಬಗೆಗೆ ಸ್ವಲ್ಪ ಭಿನ್ನಾಭಿಪ್ರಾಯಗಳಿದ್ದವು.

ಕುವೆಂಪು ನನ್ನ ಬದುಕಿನೊಳಗೆ ಬಂದದ್ದು ಅವರ ಪದ್ಯಗಳ ಮುಖಾಂತರ. ಅವರ ವೈಚಾರಿಕ ಬರಹಗಳನ್ನು ನನಗೆ ಓದಲು ಅವಕಾಶ ಸಿಕ್ಕಿದ್ದು 1964ರಲ್ಲಿ. ಎಪ್ಪತ್ತು ವರ್ಷಗಳ ಹಿಂದೆ ಅದು. ನೆಹರು ಅವರು ತೀರಿಕೊಂಡ ಸಂದರ್ಭದಲ್ಲಿ ಅವರು ಒಂದು ಪತ್ರಿಕೆಗೆ ಶ್ರದ್ಧಾಂಜಲಿ ಲೇಖನವನ್ನು ಬರೆದರು. ಆ ಲೇಖನದಲ್ಲಿ ನನಗೆ ಗಮನ ಸೆಳೆದದ್ದು ಎರಡು ವಿಷಯಗಳು; ವೈಚಾರಿಕ ಪ್ರಜ್ಞೆ ಅಥವಾ ವೈಚಾರಿಕ ದೃಷ್ಟಿ ಮತ್ತು ವಿಜ್ಞಾನ ದೃಷ್ಟಿ. ಐವತ್ತು ವರ್ಷಗಳು ಕಳೆದರೂ ಕೂಡ, ಅವರು ಈ ಎರಡು ವಿಷಯಗಳನ್ನು ಯಾಕೆ ಪ್ರಸ್ತಾಪ ಮಾಡಿದ್ದರು, ಇವೆರಡೂ ಒಂದೇನಾ ಇಲ್ಲವೇ ಬೇರೆಬೇರೇನಾ ಅಂತ ಯೋಚಿಸುತ್ತಿರುತ್ತೇನೆ. ಯಾಕೆಂದರೆ ಈ ಎರಡು ಮಾತುಗಳನ್ನು ಅವರು ಹಲವು ಸಂದರ್ಭಗಳಲ್ಲಿ ಹಲವು ಉಪನ್ಯಾಸಗಳಲ್ಲಿ ಹಲವು ಸಂದರ್ಶನಗಳಲ್ಲಿ ಮತ್ತೆಮತ್ತೆ ಮುಂದಿನ ಎರಡು ದಶಕಗಳ ಕಾಲದಲ್ಲಿ ಉಲ್ಲೇಖಿಸುತ್ತಾರೆ. 64ರ ನಂತರದ ಮುಂದಿನ ಸುಮಾರು ಮೂವತ್ತು ವರ್ಷಗಳ ಕಾಲ ಅವರ ಬರಹ ಮತ್ತು ಮಾತುಕತೆಗಳನ್ನು ನೀವು ಗಮನಿಸಿದರೆ ಈ ಎರಡು ಪದಗಳನ್ನು ಅವರು ಒಟ್ಟಿಗೆ ಬಳಸುತ್ತಾರೆ. ವೈಚಾರಿಕ ಪ್ರಜ್ಞೆ ಅಥವಾ ವೈಚಾರಿಕ ದೃಷ್ಟಿ ಮತ್ತು ವಿಜ್ಞಾನ ದೃಷ್ಟಿ ಇವೆರಡೂ ಒಟ್ಟಿಗೆ ಇರಬೇಕು; ಒಂದು ಇದ್ದು ಇನ್ನೊಂದು ಇಲ್ಲದಿದ್ದರೆ ಏನು ತೊಂದರೆಯಾಗಬಹುದು ಎಂದು ವಿವರಿಸುವ ಉದಾಹರಣೆಗಳನ್ನು ಕೊಡುತ್ತಾರೆ. ಇವತ್ತಿಗೂ ಇವೆರಡನ್ನೂ ಯಾವ ರೀತಿ ಗ್ರಹಿಸಬೇಕು ಎನ್ನುವುದು ನನಗೆ ನಿರ್ವಿವಾದವೆಂಬಂತೆ ಸ್ಪಷ್ಟವಾಗಿಲ್ಲ. ಒಂದನ್ನು ಸಾಮರ್ಥ್ಯ ಇನ್ನೊಂದನ್ನು ಆವಿಷ್ಕಾರ ಅನ್ನುವ ರೀತಿಯಲ್ಲಿ ಗ್ರಹಿಸಬಹುದೇ? ವೈಚಾರಿಕತೆ ಅನ್ನುವುದು ಒಂದು ಸಾಮರ್ಥ್ಯ, ವಿಜ್ಞಾನ ಬುದ್ಧಿ ಅನ್ನುವುದು ಆವಿಷ್ಕಾರ ಅನ್ನುವ ಅರ್ಥದಲ್ಲಿ ನಾನು ಬಳಸುವುದಕ್ಕೆ ಇಷ್ಟಪಡುತ್ತೇನೆ. ನಿಜಕ್ಕೂ ಇದು ಸರಿಯೋ ತಪ್ಪೋ ಗೊತ್ತಿಲ್ಲ. ಕುವೆಂಪು ಅವರ ಅಷ್ಟೂ ಬರಹಗಳನ್ನು ಓದಿದರೂ ಕೂಡ ಇವೆರಡಕ್ಕೂ ವ್ಯತ್ಯಾಸ ಮಾಡಲು ಬೇಕಿರುವಂತಹ ಎಳೆಗಳು ನನಗೆ ದೊರಕಿಲ್ಲ. ಹೆಚ್ಚಿನ ವಿವರಗಳು ಸಿಕ್ಕಿಲ್ಲವಾದ್ದರಿಂದ ಅರ್ಥಮಾಡಿಕೊಳ್ಳಲು ಒಂದು ದಾರಿಯನ್ನು ನಾನು ಕಂಡುಕೊಂಡೆ.

ಇನ್ನೊಂದು ಪ್ರಶ್ನೆ ನನ್ನನ್ನು ಯಾವಾಗಲೂ ಕಾಡುತ್ತಿರುತ್ತದೆ. ಎರಡು ಉಪನ್ಯಾಸಗಳಲ್ಲಿ ಒಂದು ಕಡೆ ಸಂಸ್ಕೃತಿ ಕ್ರಾಂತಿ ಎನ್ನುತ್ತಾರೆ, ಇನ್ನೊಂದು ವಿಚಾರ ಕ್ರಾಂತಿ ಎನ್ನುತ್ತಾರೆ. ಯಾಕೆ ಸಾಮಾಜಿಕ ಕ್ರಾಂತಿ ಎಂದು ಬಳಸುವುದಿಲ್ಲ? ರಾಜಕೀಯ ಕ್ರಾಂತಿ ಎಂದು ಬಳಸಲಿಲ್ಲ? ಆರ್ಥಿಕ ಕ್ರಾಂತಿ ಎಂದು ಬಳಸಲಿಲ್ಲ? ಅವುಗಳ ಬಗ್ಗೆ ಕುವೆಂಪು ಅವರಿಗೆ ಅರಿವು ಇರಲಿಲ್ಲ ಅಂತ ಅಲ್ಲ. ಎಲ್ಲದಕ್ಕಿಂತಲೂ ಮುಖ್ಯವಾದದ್ದು, ಈ ವಿಚಾರ ಕ್ರಾಂತಿ ಮತ್ತು ಸಂಸ್ಕೃತ ಕ್ರಾಂತಿ ಎಂದು ಯಾಕೆ ತಿಳಿದರು ಅನ್ನುವುದು ನನ್ನ ಇನ್ನೊಂದು ಪ್ರಶ್ನೆ.

ಬಸವಲಿಂಗಪ್ಪ

ಕುವೆಂಪು ಅವರ ಈ ಉಪನ್ಯಾಸಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಮೂರು ದಾರಿಗಳಿವೆ: ಒಂದು ಆ ಕಾಲದಲ್ಲೇ ನಿಂತು ಉಪನ್ಯಾಸಗಳನ್ನು ಅರ್ಥಮಾಡಿಕೊಳ್ಳುವುದು- ಯಾಕೆ ಆ ಮಾತುಗಳನ್ನು ಆಡಿದರು ಎಂದು. ಎರಡನೆಯದು ಕಳೆದ ಐವತ್ತು ವರ್ಷಗಳಲ್ಲಿ ಕನ್ನಡ ಮನಸ್ಸು ಈ ಉಪನ್ಯಾಸಗಳನ್ನು ಹೇಗೆ ಅರಗಿಸಿಕೊಂಡಿದೆ, ಗ್ರಹಿಸಿದೆ, ಜಾರಿಗೆ ತಂದುಕೊಳ್ಳಲು ಪ್ರಯತ್ನ ಪಡುತ್ತಿದೆ, ಪರಿಷ್ಕರಿಸಿದೆ ಎಂದು ತಿಳಿದುಕೊಳ್ಳುವ ಪ್ರಯತ್ನ. ಮೂರನೆಯದು ಇವತ್ತಿನ ತಲೆಮಾರಿನವರು ಈ ಉಪನ್ಯಾಸಗಳನ್ನು ಹೇಗೆ ಗ್ರಹಿಸುತ್ತಾರೆ ಎಂದು ಅರ್ಥಮಾಡಿಕೊಳ್ಳುವ ಪ್ರಯತ್ನ.

ಇವೆರಡೂ ಆರೇಳು ತಿಂಗಳುಗಳ ಅಂತರದಲ್ಲಿ ಮಾಡಿರುವಂತಹ ಉಪನ್ಯಾಸಗಳು. ಏಪ್ರಿಲ್‌ನಲ್ಲಿ (1974) ಮೈಸೂರಿನಲ್ಲಿ, ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ. ನಾನು ಮೊದಲು ಅವರನ್ನು ನೋಡಿದ್ದು 74ನೇ ಇಸವಿಯಲ್ಲಿ; ಅವರು ಉಪನ್ಯಾಸವೊಂದನ್ನು ಕೊಡುತ್ತಿದ್ದಾಗ. ಅವರು ಆ ಉಪನ್ಯಾಸ ಕೊಡುವ ವೇಳೆ, ಕರ್ನಾಟಕದಲ್ಲಿ, ಭಾರತದಲ್ಲಿ ಮತ್ತು ಇಡೀ ಜಗತ್ತಿನಲ್ಲಿ ಬಗೆಬಗೆಯ ತಲ್ಲಣಗಳು ತುಂಬಿಕೊಂಡ ಕಾಲ ಅದು. ಕರ್ನಾಟಕದಲ್ಲಿ ತುಂಬಾ ಬದಲಾವಣೆಗಳು ಆಗುತ್ತಿದ್ದವು. ಈ ಉಪನ್ಯಾಸ ಕೊಡುವುದಕ್ಕೆ ಆರೇಳು ತಿಂಗಳು ಹಿಂದೆ ಮೈಸೂರಿನ ಪುರಭವನದಲ್ಲಿ ಬಸವಲಿಂಗಪ್ಪನವರು ಮಾಡಿದ ಉಪನ್ಯಾಸ ಮತ್ತು ಆದರಿಂದ ಉಂಟಾದಂತಹ ಅಲ್ಲೋಲಕಲ್ಲೋಲಗಳು; ಆದರಿಂದ ಅವರು ಮಂತ್ರಿಮಂಡಲಕ್ಕೆ ರಾಜೀನಾಮೆ ಕೊಡಬೇಕಾಗಿ ಬಂದಿದ್ದು. ಈ ಪ್ರಸಂಗ ನಡೆದಿದ್ದು ದೇವರಾಜು ಅರಸು ಸರ್ಕಾರ ಆಳ್ವಿಕೆಯಲ್ಲಿದ್ದಾಗ. ಅವರ ಸಂಪುಟದ ಕೆಲವು ನಿರ್ಧಾರಗಳಿಂದಾಗಿ ಮತ್ತು ಆ ಮೂಲಕ ತರುತ್ತಿದ್ದಂತ ಬದಲಾವಣೆಗಳು ನಡೆಯುತ್ತಿದ್ದ ಕಾಲ ಅದು. ಬಸವಲಿಂಗಪ್ಪ ಅವರು ಪೌರಾಡಳಿತ ಸಚಿವರಾಗಿ ಮಲ ಹೊರುವ ಪದ್ಧತಿಯನ್ನು ನಿಷೇಧ ಮಾಡಿದ್ದು. ಪುರಸಭೆಗಳ ಮುಖ್ಯ ಅಧಿಕಾರಿಗಳನ್ನು ನೇಮಕ ಮಾಡುವಾಗ ಮೊದಲೇ ಇದ್ದಂತ ಕರ್ನಾಟಕ ಮುನ್ಸಿಪಾಲಿಟಿ ಆಕ್ಟ್ ನಿಜವಾಗಿ ಜಾರಿ ಮಾಡಲು ಬೇಕಾದಂತಹ ಕ್ರಮವನ್ನು ಕೈಗೊಂಡದ್ದು, ಭೂಸುಧಾರಣೆಗೆ ಸಂಬಂಧಪಟ್ಟ ಚಿಂತನೆಗಳು ಮತ್ತು ಕ್ರಮಗಳು, ಹಾವನೂರು ಆಯೋಗದ ವರದಿ ಇದರ ಜೊತೆಗೆ ಹಲವು ಬಗೆಯ ವೈಚಾರಿಕ ಚಿಂತನೆಗಳು, ಸಾಮಾಜಿಕ ಚಳವಳಿಗಳು ನಡೆಯುತ್ತಿದ್ದವು. ಬಹಳ ಮುಖ್ಯವಾಗಿ ವಿಚಾರವ ಮಂಡನೆಯಲ್ಲಿ ಕಮ್ಯುನಿಸ್ಟರ ಹಲವು ಪಂಥಗಳು ಕ್ರಿಯಾಶೀಲವಾಗಿದ್ದವು ಮತ್ತು ತೀವ್ರವಾದ ಉಗ್ರಹೋರಾಟದಲ್ಲಿ ತೊಡಗಿದ ನಕ್ಸಲೀಯ ಚಳವಳಿಯ ಪ್ರಭಾವ ಕೂಡ ಕರ್ನಾಟಕದಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿತ್ತು. ನಕ್ಸಲೀಯ ಚಳವಳಿಯ ವಿಚಾರವನ್ನು ಯುವಕರಲ್ಲಿ ನೆಲೆಗೊಳಿಸಲು ಕಾರ್ಯನಿರತವಾಗಿದ್ದ ಒಂದು ಗುಂಪು ಮೈಸೂರಿನಲ್ಲಿತ್ತು.

ಕಾರ್ಮಿಕ ಚಳುವಳಿಯಲ್ಲಿದ್ದವರು ಒಡನಾಡಿ ಎನ್ನುವ ಪತ್ರಿಕೆಯನ್ನು ಹೊರತರುತ್ತಿದ್ದರು. ಅದೇ ಕಾಲದ ಜೆಪಿ ಚಳವಳಿಗೆ ನಮ್ಮ ಯುವಜನತೆ, ಚಿಂತಕರು ಆಕರ್ಷಿತರಾದಷ್ಟು ನಕ್ಸಲೀಯ ಚಳವಳಿಗೆ ಆಕರ್ಷಿತರಾಗಿರಲಿಲ್ಲ. ಜೆಪಿ ಚಳವಳಿಯ ಬಗ್ಗೆ ಕುವೆಂಪು ಅವರಿಗೆ ಸಹಾನುಭೂತಿ ಇದ್ದಂತೆ ತೋರುತ್ತದೆ; ಒಂದು ಉಪನ್ಯಾಸದಲ್ಲಿ ಅವರು ಜಯಪ್ರಕಾಶರ ಚಳವಳಿಯ ಬಗ್ಗೆ ಒಂದು ಸಮ್ಮತಿಯ ಮಾತನ್ನೂ ಆಡುತ್ತಾರೆ. ಆದರೆ ಜೆಪಿ ಚಳವಳಿಯನ್ನು ಆ ಕಾಲದ ಯುವಕರು ಗ್ರಹಿಸಿದ ಕ್ರಮದಲ್ಲಿ ಎಲ್ಲೋ ತಪ್ಪಿದೆ ಎಂದು ಐವತ್ತು ವರ್ಷ ಆದಮೇಲೆ ಅನಿಸುತ್ತಿದೆ. ಇದನ್ನು ವಿವರಿಸುವ ನೆಲೆಯ ಒಂದು ಪುಸ್ತಕ ಕೂಡಾ ಬಂದಿದೆ: ’ಜೆಪಿ ಟು ಬಿಜೆಪಿ’ ಅಂತ. ಅಂದರೆ ಜೆಪಿ ಆಗ ಯಾವ ಚಿಂತನಾಕ್ರಮಗಳನ್ನು ಆಧರಿಸಿ ಒಂದು ಚಳುವಳಿಯನ್ನು ಹೂಡಿದ್ದರೋ, ಅದರಲ್ಲಿ ಅಂತರ್ಗತವಾದ ಅಪಾಯಗಳು ಐವತ್ತು ವರ್ಷಗಳು ಆದಮೇಲೆ ಈಗ ದೊಡ್ಡದಾಗಿ ಕಾಣಿಸುತ್ತಿವೆ. ಅಲ್ಲದೆ ಆ ಚಳವಳಿಯ ಹಿಂದೆ ಇದ್ದ ಶಕ್ತಿಗಳು ಯಾವುವು? ಬಿಹಾರ, ಗುಜರಾತ್, ಮಹಾರಾಷ್ಟ್ರದಲ್ಲಿ ಇದ್ದಂತಹ ಲಾಬಿಗಳ ವಿಚಾರದಲ್ಲಿ ಅವೆಲ್ಲವೂ ನಮಗೆ ತಿಳಿದಿದ್ದು ಬಹಳ ತಡವಾಗಿ.

ಈ ಎರಡು ಉಪನ್ಯಾಸಗಳು ತಲ್ಲಣಗಳು ತುಂಬಿದ್ದ ಆ ಪರಿಸರದಲ್ಲಿ ಹುಟ್ಟಿದ್ದು; ಒಂದು ನಿರ್ವಾತ ಪ್ರದೇಶದಲ್ಲಿ ಕುವೆಂಪು ಅವರು ಮಾತನಾಡುತ್ತಿರಲಿಲ್ಲ. ಈ ಎಲ್ಲವೂ ಕೂಡ ಅವರ ಪ್ರಜ್ಞೆಯಲ್ಲಿ ಇದ್ದವು. ಅದಕ್ಕೆ ಅವರದೇ ಆದ ಪ್ರತಿಕ್ರಿಯೆಗಳನ್ನು ಕೊಡುತ್ತಿದ್ದರು. ಅವರು ನಕ್ಸಲೀಯ ಅಥವಾ ಉಗ್ರ ಹೋರಾಟದ ಬಗೆಗೆ ಸಹಾನುಭೂತಿ ಇದ್ದವರಲ್ಲ. ಬೇರೊಂದು ಕಡೆಯಲ್ಲಿ- ಪಶ್ಚಿಮಬಂಗಾಳದಲ್ಲಿ ನಡೆಯುತ್ತಿದ್ದ ಈ ಚಳವಳಿಯನ್ನು ಸೈನ್ಯವನ್ನು ಬಳಸಿಯಾದರೂ ಹತ್ತಿಕ್ಕಬೇಕು ಎಂದು ಅವರು ಬರೆಯುತ್ತಾರೆ. ಆ ರೀತಿಯ ಹೋರಾಟಗಾರರು ರಕ್ತಪಾತದ ದಾರಿ ಹಿಡಿದು ಅಥವಾ ಬಂದೂಕನ್ನು ಬಳಸಿ ಪಾರ್ಲಿಮೆಂಟರಿ ಡೆಮಾಕ್ರಸಿಯನ್ನು ತಳಕೆಳಗು ಮಾಡುತ್ತಾರೆ ಎಂದು ಅವರು ತಿಳಿದು ಅದನ್ನು ವಿರೋಧಿಸಿದ್ದರು. ಹಾಗೆ ಅವರು ತೀವ್ರವಾದ ವಿಚಾರವಾದವನ್ನು ಕೂಡಾ ವಿರೋಧಿಸುತ್ತಿದ್ದರು. ಅವರು ಇನ್ನೊಂದು ಉಪನ್ಯಾಸದಲ್ಲಿ ಇದನ್ನು ಬಹಳ ಸ್ಪಷ್ಟವಾಗಿ ಹೇಳುತ್ತಾರೆ; ವಿಚಾರವಾದ ಒಬ್ಬನನ್ನು ನಾಸ್ತಿಕವಾದಿಯನ್ನಾಗಿ ಮಾಡುತ್ತದೆ ಎಂದು ವಿವರಿಸುತ್ತಾರೆ. ಹೀಗೆ ನಾಸ್ತಿಕವಾದಿಯಾಗುವುದು ಅಗತ್ಯವಿಲ್ಲ; ನೀವು ಅಜ್ಞೇಯತಾವಾದಿಯಾಗಬಹುದೇ ಹೊರತು ನಾಸ್ತಿಕವಾದಿಯಾಗಬಾರದು ಎಂದು ಕುವೆಂಪು ವಾದಿಸಿದ್ದಾರೆ.

ತೀವ್ರವಾದಿ ಹೋರಾಟ ಮತ್ತು ತೀವ್ರವಿಚಾರವಾದ ಇವೆರಡನ್ನೂ ವಿರೋಧಿಸುವ ನಿರಾಕರಿಸುವ ಕುವೆಂಪು ಪ್ರತಿಪಾದಿಸುವ ದಾರಿ ಯಾವುದು?

ಜಯಪ್ರಕಾಶ್ ನಾರಾಯಣ್

ಕುವೆಂಪು ಅವರು ಸಂಸ್ಕೃತಿ ಕ್ರಾಂತಿ ಮತ್ತು ವಿಚಾರ ಕ್ರಾಂತಿ ಎಂಬ ಎರಡು ಪದಗಳನ್ನು ಬಳಸಿದ್ದರಿಂದ, ಸಮಾಜದಲ್ಲಿ ಸಾಂಸ್ಕೃತಿಕ ಮತ್ತು ವೈಚಾರಿಕ ಕ್ರಾಂತಿ ಆದರೆ ಬಹುಮುಖ್ಯವಾದ ಬದಲಾವಣೆಗಳು ಆಗುತ್ತವೆ ಎಂದು ಪ್ರತಿಪಾದಿಸುವಂತಿದೆ. ಇವತ್ತು ಪ್ರತಿಕ್ರಿಯಿಸಿದ ಇಬ್ಬರು ಮೂವರು ಜನರಲ್ಲಿ ಬಹಳ ಸ್ಪಷ್ಟವಾಗಿ ಕುವೆಂಪು ಅವರ ಪ್ರತಿಪಾದಿಸಿದ ನೆಲೆಯಲ್ಲೇ ಅದನ್ನು ಗ್ರಹಿಸಿದಂತೆ ಒಪ್ಪಿದಂತೆ ಕಾಣುತ್ತದೆ. ಈ ಎರಡೂ ಕ್ರಾಂತಿಗಳು ಆರಂಭಗೊಳ್ಳುವುದು ವ್ಯಕ್ತಿಯ ನೆಲೆಯಲ್ಲಿ.

ತಮ್ಮ ಲೋಕಗ್ರಹಿಕೆ ಮತ್ತು ಆಚರಣೆಗಳನ್ನು ವ್ಯಕ್ತಿ ಬದಲಿಸಿಕೊಳ್ಳಬೇಕು ಎಂದು ಕುವೆಂಪು ಸೂಚಿಸುತ್ತಿದ್ದಾರೆ. ಅಂದರೆ ವೈಯಕ್ತಿಕವಾದ ಬದಲಾವಣೆಗಳ ಮುಖಾಂತರ ಈ ಜಗತ್ತನ್ನು ಬದಲಾಯಿಸಬಹುದು ಎಂಬ ನೆಲೆಯ ಗ್ರಹಿಕೆ. ವ್ಯಕ್ತಿಯ ಹಂತದಲ್ಲಿ ಬದಲಾವಣೆಯಾದರೆ ಈ ಜಗತ್ತಿನಲ್ಲಿ ಇರುವ ತೊಂದರೆಗಳು ನಿವಾರಣೆಯಾಗುವುದಕ್ಕೆ ಸಾಧ್ಯ ಎನ್ನುವುದು ಭಾವನಾವಾದಿಗಳ ಪ್ರತಿಪಾದನೆ. ಇದು ಒಂದು ಆಲೋಚನಾಕ್ರಮ; ವ್ಯಕ್ತಿಯ ಹಂತದಲ್ಲಿ ಬದಲಾವಣೆಯಾದರೆ ಸಮಾಜದಲ್ಲಿ ಯಾವ ರೀತಿ ಬದಲಾವಣೆ ಪ್ರಾರಂಭವಾಗುತ್ತದೆ? ನಾನು ಜಾತಿಯನ್ನು ಬಿಟ್ಟೆ ಎಂದು ಹೇಳಿದರೆ ಜಾತಿಪದ್ಧತಿಗೆ ಸೇರ್ಪಡೆಯಾಗುವಂತಹ ಒಬ್ಬ ವ್ಯಕ್ತಿ ಕಡಿಮೆಯಾಗುತ್ತಾನೆ ಎಂದಲ್ಲವೇ? ಅದರಿಂದ ಜಾತಿವ್ಯವಸ್ಥೆ ಕುಸಿದುಬೀಳುತ್ತದೆ ಎಂದು ಹೇಳಬಹುದೇ?

ಕುವೆಂಪು ಅವರು ಈ ಸಮಾಜದಲ್ಲಿ ಇರುವ ಕೊರತೆಗಳನ್ನು ಗ್ರಹಿಸಿದ್ದರು. ಇಲ್ಲಿ ಅಸಮಾನತೆ ಇದೆ, ಅನ್ಯಾಯ ಇದೆ, ಇಲ್ಲಿ ಒಬ್ಬರು ಇನ್ನೊಬ್ಬರನ್ನು ಶೋಷಿಸುತ್ತಿದ್ದಾರೆ; ಅಂತಹ ಪರಿಸ್ಥಿತಿ ಉಂಟಾಗಲು ಕಾರಣ ಅವರು ಗ್ರಹಿಸಿದ ಪ್ರಕಾರ ಮೌಢ್ಯ. ಮತನಿಷ್ಠೆಗಳು. ಪುರೋಹಿತಶಾಹಿಯ ಪರಿಣಾಮವಾಗಿ ಜನಗಳಲ್ಲಿ ಇರುವಂತಹ ಮತಭ್ರಾಂತಿ. ಇದರಿಂದಾಗಿ ಈ ಸಮಾಜದಲ್ಲಿ ಅಸಮಾನತೆಯ ಪರಿಸ್ಥಿತಿ ಉಂಟಾಗಿದೆಯೆಂದು ಕುವೆಂಪು ವಾದಿಸುತ್ತಿದ್ದಾರೆ. ಆದರೆ ಬಹುಮುಖ್ಯವಾಗಿ ಜನ ಮೌಢ್ಯದಲ್ಲಿ ತಮ್ಮನ್ನು ತಾವು ಮುಳುಗಿಸಿಕೊಂಡಿರುವುದು ವಾಸ್ತವವಾಗಿ ಅಸಮಾನತೆ ಇರುವುದರಿಂದಾಗಿ. ಅಸಮಾನತೆಯೇ ಕಾರಣವಾಗಿ ಈ ಮೌಢ್ಯ ಮತ್ತು ಮತಭ್ರಾಂತಿ- ಇವೆಲ್ಲವು ನಮ್ಮನ್ನು ಆವರಿಸಿಕೊಳ್ಳುತ್ತಿರುವುದು. ಅಂದರೆ ಯಾವುದು ಕಾರಣ ಮತ್ತು ಯಾವುದು ಪರಿಣಾಮ ಎಂದು ತಿಳಿಯುವಲ್ಲಿ ಕುವೆಂಪು ಅವರ ಗ್ರಹಿಕೆ ಸಮಸ್ಯಾತ್ಮಕವಾಗಿದೆ. ಯಾವುದನ್ನು ಮೊದಲು ನಿವಾರಿಸಬೇಕು? ಮೊದಲು ಅಸಮಾನತೆಯನ್ನು ನಿವಾರಿಸದೆ ವೈಚಾರಿಕ ಜಗತ್ತನ್ನು ನಿರ್ಮಿಸಲು ಸಾಧ್ಯವೆ? ಅಥವಾ ವೈಚಾರಿಕ ಜಗತ್ತನ್ನು ನಿರ್ಮಿಸಿದರೆ ಅಸಮಾನತೆ ಪರಿಹಾರವಾಗುತ್ತಾ? ವಿಚಾರ ಕ್ರಾಂತಿಗೆ ಆಹ್ವಾನ ಉಪನ್ಯಾಸದ ಕೊನೆಯಲ್ಲಿ ಅವರು ಒಂದು ಮಾತನ್ನು ಹೇಳುತ್ತಾರೆ: ನಾನು ಈ ದೇಶದಲ್ಲಿ ಏನು ಕೆಲವು ಬದಲಾವಣೆ ಆಗಬೇಕಾಗಿದೆಯೋ ಆ ಬದಲಾವಣೆಗಳ ಬಗ್ಗೆ ಮಾತನಾಡಿಲ್ಲ ಏಕೆಂದರೆ ಅವೆಲ್ಲ ಜನ್ಯ ಅಂದರೆ ಪರಿಣಾಮಗಳು, ಅವೆಲ್ಲ ಉಪವಸ್ತುಗಳು. ಆದರೆ ಮೂಲಭೂತ ಕಾರಣವಾದ ಜನಕ ಸಂಗತಿಯು ಬೇರೆಯೇ ಇದೆ. ಅದೇನೆಂದರೆ ಮತಭ್ರಾಂತಿ, ಮೌಢ್ಯ, ಅವಿಚಾರತೆ; ಇವುಗಳಿಂದ ಈ ರೀತಿಯಾಗುತ್ತಿದೆ ಎನ್ನುತ್ತಾರೆ. ಆದರೆ ನನಗೆ ಈ ಐವತ್ತು ವರ್ಷಗಳ ನಂತರ ಈಗ ಹಿಂದಿರುಗಿ, ಈ ಪರಿಸ್ಥಿತಿಯಲ್ಲಿ ನೋಡಿದಾಗ ಯಾವುದು ಜನಕ ಯಾವುದು ಜನ್ಯ, ಯಾವುದು ಕಾರಣ ಯಾವುದು ಪರಿಣಾಮ- ಇವುಗಳ ಬಗ್ಗೆ ನಾವು ಬೇರೆ ನೆಲೆಯಲ್ಲಿ ಆಲೋಚಿಸಬೇಕಾದ ಅಗತ್ಯವಿದೆ ಅನಿಸುತ್ತದೆ.

ಇದನ್ನೂ ಓದಿ: ಮತೀಯವಾದಿಗಳಿಗೆ ಕುವೆಂಪು ಅವರನ್ನು ಪ್ರಶ್ನಿಸಲು ಸಾಧ್ಯವಾಗುತ್ತಿರಲಿಲ್ಲ: ಬಿ.ಟಿ. ಲಲಿತಾ ನಾಯಕ್

ಇನ್ನೊಂದು ಮಾತು ಗಮನಿಸಿ. ಕುವೆಂಪು ಸಂಸ್ಕೃತ ಕ್ರಾಂತಿ ಉಪನ್ಯಾಸದಲ್ಲಿ ಒಂದು ಮಾತನ್ನು ಹೇಳುತ್ತಾರೆ. ಹಳೆಯದೆಲ್ಲವನ್ನು ಕೂಡ ವಿನಾಶಕ್ಕೆ ಯೋಗ್ಯವಾದದ್ದು, ನಾಶಕ್ಕೆ ಕಾರಣವಾದದ್ದು ಎಂದು ತಿಳಿಯಬಾರದು. ಅದರಲ್ಲಿಯೂ ಉತ್ತಮವಾದದ್ದು ಇರುತ್ತದೆ. ಅದನ್ನು ನಾವು ಪರಿಶೀಲಿಸಿ ಬೇಡದೆ ಇರುವುದನ್ನು ತೆಗೆದುಹಾಕಬೇಕು. ಉತ್ತಮವಾದುದ್ದನ್ನು ಅಗತ್ಯವಾದುದ್ದನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು ಎನ್ನುತ್ತಾರೆ. ಅದಕ್ಕವರು ಚಿನ್ನದ ಒಡವೆಗಳನ್ನು ಉದಾಹರಣೆ ಕೊಡುತ್ತಾರೆ. ಒಮ್ಮೆ ದ್ರಾವಿಡ ಚಳವಳಿಯವರು ಬಂದು ಅವರ ಚಿಂತನೆಗಳನ್ನು ಹೇಳಿ, ತಮ್ಮ ಒಂದು ಸಮಾರಂಭದಲ್ಲಿ ಕುವೆಂಪು ಭಾಗವಹಿಸಬೇಕು ಎಂದು ಕೇಳುತ್ತಾರೆ; ಆಗ ಕುವೆಂಪು ಅವರು ಹೀಗೆ ಹೇಳುತ್ತಾರೆ: ನೀವು ರಾಮಾಯಣ ಭಾರತ ಎಲ್ಲವನ್ನೂ ಸಾರಾಸಗಟಾಗಿ ತಿರಸ್ಕರಿಸಬೇಕು ಅನ್ನುತ್ತೀರಿ. ಇದು ಸರಿಯಲ್ಲ. ನಿಮ್ಮ ಮನೆಯಲ್ಲಿ ಅಜ್ಜಿಯ ಹಳೆಯ ಕಾಲದ ಚಿನ್ನದ ಒಡವೆಗಳಿದ್ದರೆ ಎಸೆದುಬಿಡುತ್ತೀರಾ? ಎಸೆಯುವುದಿಲ್ಲ ಅಲ್ಲವೆ.. ಯಾಕೆಂದರೆ ಅದು ಚಿನ್ನ. ನಮ್ಮ ಕಾಲದ ಅಭಿರುಚಿಗೆ ಅನುಗುಣವಾಗಿ ಕರಗಿಸಿ ಅದನ್ನು ಒಡವೆ ಮಾಡಿಸಿ ಹಾಕಿಕೊಳ್ಳುತ್ತೀರಿ ಅಲ್ಲವೇ? ಇದು ಕುವೆಂಪು ಅವರು ನಮ್ಮ ಪರಂಪರೆಯಲ್ಲಿ ಬಂದಂತಹ ಕೆಲವು ಚಿಂತನೆಗಳ ಬಗೆಗೆ ಹೊಂದಿದ್ದ ದೃಷ್ಟಿಕೋನ. ಇದನ್ನು ನಾನು ಬಸವಲಿಂಗಪ್ಪ ಅವರು ಮಂಡಿಸಿದಂತಹ ವಿಚಾರಗಳೊಂದಿಗೆ ಇರಿಸಿ ಗ್ರಹಿಸುವ ಪ್ರಯತ್ನ ಮಾಡುತ್ತೇನೆ. ಬಸವಲಿಂಗಪ್ಪನವರು ಮಲಹೊರುವ ಪದ್ದತಿಯನ್ನು ನಿಷೇಧಿಸಿದ್ದು ಒಂದು ನೆಲೆ; ಭೌತಿಕವಾದ ಮಲವನ್ನು ತಲೆ ಮೇಲೆ ಹೊರುವುದಕ್ಕೆ ನೀಡಿದ ನಿಷೇಧ ಮಾತ್ರ ಅಲ್ಲ ಅದು. ಬೌದ್ಧಿಕವಾದ ತ್ಯಾಜ್ಯವನ್ನು ಕೂಡಾ ನಾನು ಹೊರುವುದಿಲ್ಲ ಎಂದು ಅವರು ಹೇಳಿದರು. ನಮಗೆ ದತ್ತವಾಗಿ ಬಂದಿರುವ ಎಲ್ಲ ಚಿಂತನೆಗಳೂ ದಲಿತರ ಮಟ್ಟಿಗೆ ಬೌದ್ಧಿಕ ತ್ಯಾಜ್ಯಗಳು. ಅದರಲ್ಲಿ ಉಪಯುಕ್ತವಾದದ್ದನ್ನು ಹುಡುಕಿ ಅದನ್ನು ಮಾತ್ರ ತೆಗೆದುಕೊಳ್ಳುತ್ತೇನೆ ಎನ್ನುವುದು ಸಾಧ್ಯವೇ ಇಲ್ಲ. ಅದರಿಂದ ಅದನ್ನು ಇಡಿಯಾಗಿ ನಾವು ತ್ಯಜಿಸಬೇಕು. ಅದಕ್ಕೆ ನಾವು ಹಕ್ಕುದಾರರೂ ಅಲ್ಲ ಹೊಣೆಗಾರರೂ ಅಲ್ಲ. ಯಾವುದಕ್ಕೆ ನಾನು ಹಕ್ಕುದಾರನು ಅಲ್ಲವೋ, ಹೊಣೆಗಾರನು ಅಲ್ಲವೋ, ಅದನ್ನು ನಾನು ಯಾಕೆ ತಲೆ ಮೇಲೆ ಹೊತ್ತು ತಿರುಗಬೇಕು? ದಲಿತರು ಕೇಳಬೇಕಾದ ದೊಡ್ಡ ಪ್ರಶ್ನೆ ಇದು.

ಹಾಗಿದ್ದಲ್ಲಿ ಯಾವುದು ಬೌದ್ಧಿಕ ತ್ಯಾಜ್ಯ? ಉದಾಹರಣೆಗೆ ಅದೇ ಉಪನ್ಯಾಸದಲ್ಲಿ ಅವರು ಅಡಿ ಟಿಪ್ಪಣಿಯಲ್ಲಿ ಒಂದು ಮಾತು ಹೇಳಿದ್ದಾರೆ. ಭಗವದ್ಗೀತೆಯಲ್ಲಿ ನಾಲ್ಕು ವರ್ಣಗಳು ನನ್ನಿಂದ ಸೃಷ್ಟಿಯಾದವು ಎಂದು ಕೃಷ್ಣ ಹೇಳಿದ ಅನ್ನುವ ಮಾತನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂದು ವ್ಯಾಖ್ಯಾನ ಮಾಡುತ್ತಾರೆ. ಚಾತುರ್ವಣ್ಯ ಅನ್ನುವುದು ಬೇರೆಬೇರೆ ಧರ್ಮಚಾರ್ಯರು, ಮಧ್ವಾಚಾರ್ಯರು, ಪ್ರವಚನಕಾರರು ನೀಡಿದ ವ್ಯಾಖ್ಯಾನಗಳನ್ನು ನೀವು ಒಪ್ಪಿಕೊಳ್ಳಬೇಡಿ. ಅದರಲ್ಲಿ ಮನುಷ್ಯನ ಸ್ವಭಾವಗಳಿಗುಣವಾಗಿ ಮತ್ತು ಪೂರ್ವಜನ್ಮದಿಂದ ಅವರು ಪಡೆದುಕೊಂಡಿರುವ ಸಂಸ್ಕಾರಗಳಿಗುಣವಾಗಿ ಹಲವು ಬಗೆಯ ಶ್ರೇಣೀಕರಣಗಳು ಇರ್ತವೆ. ಅದನ್ನು ಭಗವದ್ಗೀತೆಯಲ್ಲಿ ಮಂಡಿಸಲಾಗುತ್ತಿದೆಯೇ ಹೊರತು ಜಾತಿಪದ್ದತಿಯನ್ನು ಅದು ಸಮರ್ಥಿಸಿಲ್ಲ. ಅದನ್ನು ನಾವು ಅರ್ಥಮಾಡಿಕೊಳ್ಳಬೇಕಾದದ್ದು- ಅರವಿಂದರು ಮನೋವೈಜ್ಞಾನಿಕ ನೆಲೆಯಲ್ಲಿ ನೀಡಿರುವ ವಿವರಣೆಯ ನೆಲೆಯಲ್ಲಿ ಎನ್ನುತ್ತಾರೆ. ಈಗ ಇಂದಿನ ಯುವಕರಿಗೆ ನನ್ನ ಪ್ರಶ್ನೆ. ಈ ರೀತಿ ವ್ಯಾಖ್ಯಾನ ಮಾಡುವುದರಿಂದ, ಎಲ್ಲ ಬಗೆಯಲ್ಲೂ ಅಸಮಾನತೆಯನ್ನು ಒಂದು ರೀತಿಯಲ್ಲಿ ಪರೋಕ್ಷವಾಗಿ ಸಮರ್ಥಿಸಿದ ರೀತಿಯಲ್ಲೇ ಆಗುತ್ತದೆಯಲ್ಲವೇ? ಮನುಷ್ಯ ಮನುಷ್ಯರಲ್ಲಿ ಸಮಾನತೆ ಇನ್‌ಬಿಲ್ಟ್ ಆಗಿಲ್ಲ; ಡಿಫಾಲ್ಟ್ ಏನಲ್ಲ ಎನ್ನುವ ಅರ್ಥವನ್ನು ಅದು ಪೋಷಿಸುತ್ತದೆ. ಆದರೆ ನಾವು ಯಾವುದನ್ನು ನಂಬಿಕೊಂಡು ಹೋಗಬೇಕು? ನಾವೆಲ್ಲರೂ ಸಮಾನರು ಎನ್ನುವುದು ನಮಗೆ ಡಿಫಾಲ್ಟ್ ಅನ್ನುವುದನ್ನು. ಆದರೆ ಅದನ್ನು ನಾವು ಕಳೆದುಕೊಂಡಿದ್ದೇವೆ. ಅಸಮಾನತೆಯನ್ನು ನಾವು ಆಚರಿಸುತ್ತಿದ್ದೇವೆ. ಸಮಾನತೆ ಅನ್ನುವುದು ಭಾವ ಅಸಮಾನತೆ ಅನ್ನುವುದು ಅಭಾವ. ಅದನ್ನು ನಾವು ಹಾಗೆ ತಿಳಿಯದೇ ಇರುವುದರಿಂದಾಗಿ ಅಸಮಾನತೆ ಎನ್ನುವುದನ್ನು ಯಾವುದೋ ಒಂದು ನೆಲೆಯಲ್ಲಿ ಸಮರ್ಥಿಸುತ್ತಿರುತ್ತೇವೆ. ನಾನು ಇದನ್ನು ಆರೋಪವನ್ನಾಗಿ ಮಾಡುತ್ತಿಲ್ಲ; ಅರ್ಥ ಮಾಡಿಕೊಳ್ಳುವ ವಿಧಾನವಾಗಿ ನಿಮ್ಮ ಎದುರು ಮಂಡಿಸುತ್ತಿದ್ದೇನೆ. ಕುವೆಂಪು ಅವರು ಈ ಉಪನ್ಯಾಸದಲ್ಲಿ, ಹಳೆಯದೆಲ್ಲವನ್ನು ತ್ಯಜಿಸಬೇಕಿಲ್ಲ ಅದರೊಳಗೆ ಏನೋ ಉಪಯುಕ್ತವಾದದ್ದು ಇದೆ ಎಂಬ ಒಳದಾರಿಯನ್ನು ಸೂಚಿಸಿದರೆ, ಈ ಒಳದಾರಿಯ ಮೂಲಕ ಹಳೆಯ ಎಲ್ಲವನ್ನೂ ಯಾವ ರೀತಿಯಲ್ಲಾದರೂ ನಮ್ಮ ಮೇಲೆ ಹೇರುವ ವ್ಯಾಖ್ಯಾನವನ್ನು ಸೃಷ್ಟಿ ಮಾಡಲು ಸಾಧ್ಯವಿದೆ. ನಾವು ಈ ರೀತಿ ಯೋಚನೆ ಮಾಡುವುದು ಯೋಗ್ಯವೇನೋ ಎಂದು ನನಗೆ ಅನ್ನಿಸುತ್ತಿದೆ. ಯಾವುದಕ್ಕೆ ನಾನು ಹಕ್ಕುದಾರನಲ್ಲವೋ, ಯಾವುದಕ್ಕೆ ನಾನು ಹೊಣೆಗಾರನಲ್ಲವೋ ಅದನ್ನು ತಿರಸ್ಕರಿಸುವುದೇ ಸರಿಯಾದ ದಾರಿ ಎಂದು ನನಗನ್ನಿಸುತ್ತೆ.

ಕುವೆಂಪು ಅವರು ಏನು ವಿಚಾರ ಮಂಡಿಸಿದ್ದಾರೆ ಅದಕ್ಕೆ ಪ್ರತಿಕ್ರಿಯೆ ಕೊಡುವ ಅಗತ್ಯದ ಜೊತೆಗೆ, ಅವರ ವಿಶ್ಲೇಷಣಾ ವಿಧಾನಕ್ಕೆ ಪರ್ಯಾಯವಾದ ವಿಶ್ಲೇಷಣಾ ವಿಧಾನಗಳು ಇವೆಯೇ ಎಂಬುದನ್ನು ಕಂಡುಕೊಳ್ಳಬೇಕಲ್ಲವೇ? ಅವರ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಎಂದರೇನು ಎಂಬ ಪ್ರಶ್ನೆ ಕೂಡಾ ಮುಖ್ಯ. ಯಾಕೆಂದರೆ ವಿಚಾರವನ್ನು ಹೇಳುವುದು ಬೇರೆ; ಆ ವಿಚಾರದಲ್ಲಿ ನಂಬಿಕೆ ಇಟ್ಟುಕೊಂಡಿರುವುದು ಬೇರೆ. ವೈಚಾರಿಕ ಆಕೃತಿ ಅದು ತನಗೆ ತಾನೇ ಸ್ವಯಂಪೂರ್ಣ ಅಲ್ಲ; ಅದಕ್ಕೊಂದು ಚಲನೆ ಇರುತ್ತದೆ.

ಕುವೆಂಪು ಅವರು ಈ ಉಪನ್ಯಾಸದಲ್ಲಿ ಮೂರು ಪದಗಳನ್ನು ಬಯಸುತ್ತಾರೆ: ನೀವು, ಅವರು ಮತ್ತು ನಾನು. ಅವರು ಎಂದರೆ ಪುರೋಹಿತಶಾಹಿಗಳು, ನೀವು ಎಂದರೆ ಭಾಷಣವನ್ನು ಕೇಳುತ್ತಿರುವ ಪ್ರೇಕ್ಷಕರು, ನಾನು ಎಂದು ಅವರು ಯಾರನ್ನು ಕರೆದುಕೊಳ್ಳುತ್ತಾರೆಂದರೆ, ಯಾವ ಅಪಾಯಕ್ಕೆ ನೀವು ಸಿಲುಕಿದ್ದಿರೋ, ಆ ಅಪಾಯದಿಂದ ಬಿಡುಗಡೆಯಾದವನು ನಾನು ಎಂದು ಅವರನ್ನು. ಪುರೋಹಿತಶಾಹಿಯನ್ನ ಬಡಿದೆಬ್ಬಿಸಿ ಜಗಳ ಮಾಡೋ ಹಾಗೆ ಮಾಡಬೇಡಿ, ಮೊದಲು ನಿಮ್ಮನ್ನು ನೀವು ತಿದ್ದುಕೊಳ್ಳಿ. ಈ ರೀತಿ ಬದಲಾವಣೆಗಳು- ವೈಚಾರಿಕ ಕ್ರಾಂತಿ ಆಗಬೇಕಾದರೆ ಒಂದು ಬೌದ್ಧಿಕ ನೆಲೆಯಲ್ಲಿ ನಡೆಯುತ್ತಿದ್ದರೆ ಸಾಕು. ಇದೇ ಮಾತನ್ನು ಅವರು ಜನತಾ ಪ್ರಜ್ಞೆ ಮತ್ತು ವೈಚಾರಿಕ ಜಾಗೃತಿ ಉಪನ್ಯಾಸದ ಕೊನೆಯ ಭಾಗದಲ್ಲಿ ಬಹಳ ದೀರ್ಘವಾಗಿ ಹೇಳುತ್ತಾರೆ. ಬರವಣಿಗೆ ಬೇಕಿಲ್ಲ ಬರವಣಿಗೆ ಯಾರು ಓದುವುದಿಲ್ಲ. ಅದರ ಬದಲು ಚಿಕ್ಕಚಿಕ್ಕ ಗುಂಪುಗಳಾಗಿ ಹಳ್ಳಿಹಳ್ಳಿಗೆ ಹೋಗಿ ಅಲ್ಲಿಯ ತರುಣರನ್ನು ಕೂರಿಸಿಕೊಂಡು ಅವರಿಗೆ ಈ ವಿಚಾರವನ್ನು ತಿಳಿಸಿ. ಅದರಲ್ಲು ಬಹಳ ಮುಖ್ಯವಾಗಿ ಜನರ ನಡುವೆ ಹೋಗಿ ಕೆಲಸ ಮಾಡಬೇಕು; ಜನರ ಬದುಕಿನ ಕ್ರಮದ ಜೊತೆಯಲ್ಲಿ ಸಂವಾದ ಮಾಡಬೇಕು ಎನ್ನುತ್ತಾರೆ. ಹೆಚ್ಚು ಯುವಕರ ಜತೆಗೆ ಸಂವಾದಕ್ಕೆ ಕರೆ ಕೊಡುತ್ತಾರೆ.

ಬೇಂದ್ರೆ ಅವರು ಕುವೆಂಪು ಅವರ ಕುರಿತು ಬರೆಯುವಾಗ ಅವರು ’ಯುಗದ ಕವಿ ಜಗದ ಕವಿ’ ಎಂದು ಕರೆದರು. ಏನು ಹಾಗಂದರೆ? ಯುಗದ ಕವಿ ಜಗದ ಕವಿ ಸರಳವಾದ ಅರ್ಥದಲ್ಲಿ ಇದನ್ನು ಹೇಳಬಹುದು. ಇನ್ನು ಕೆಲವರು ದ ಅನ್ನುವುದು ಉಪನಿಷತ್ತಿನ ಪ್ರತ್ಯಯ ಎಂದು ತಿಳಿದುಕೊಂಡು ಯುಗ ದ ಅಂದರೆ ಯುಗ ಕೊಟ್ಟ ಕವಿ, ಜಗ ದ ಅಂದರೆ ಜಗ ಕೊಟ್ಟ ಕವಿ ಎಂದು ಅರ್ಥೈಸುತ್ತಾರೆ. ದ ಅಂದರೆ ಕೊಡುವುದು. ಬೇಂದ್ರೆ ಅವರು ಈ ಎರಡು ಪದಗಳನ್ನು ಯಾಕೆ ಬಳಸಿದರು ಎಂದು ಬಹಳ ಕುತೂಹಲ! ಯುಗ ಅನ್ನುವುದು ಕಾಲವನ್ನು ಸೂಚಿಸುತ್ತದೆ ಜಗ ಎನ್ನುವುದು ಜಾಗವನ್ನು ಸೂಚಿಸುತ್ತದೆ. ಕುವೆಂಪು ಯುಗದ ಕವಿ ಜಗದ ಕವಿ ಎನ್ನುವಾಗ ಬೇಂದ್ರೆಯವರು ಕುವೆಂಪು ಅವರು ಕಾಲ ದೇಶಗಳಿಗೆ ಕಟ್ಟುಬಿದ್ದ ಕವಿ ಎಂದು ಸೂಚಿಸುವಂತಿದೆ. ದಿಟ. ಈಗ ಮತ್ತು ಇಲ್ಲಿ ಎನ್ನುವ ವೈಚಾರಿಕ ನೆಲೆಯಲ್ಲಿ ಬರೆಯುವುದು ಕುವೆಂಪು ಅವರಿಗೆ ಮುಖ್ಯವಾಗಿತ್ತು. ಆದರೆ ಕನ್ನಡ ಮನಸ್ಸು ಇವೆರಡನ್ನು ಬೇರೆಬೇರೆಯಾಗಿ ನೋಡೇ ಇಲ್ಲ; ಅಂದರೆ ಚಾರಿತ್ರಿಕ ಕಾಲ ಮತ್ತು ವಾಸ್ತವ ಕಾಲ, ಹಾಗೆಯೇ ಚಾರಿತ್ರಿಕ ದೇಶ ಮತ್ತು ವಾಸ್ತವ ದೇಶ ಇವೆರಡನ್ನು ಬೇರೆಬೇರೆಯಾಗಿ ನೋಡೇ ಇಲ್ಲ. ಇವೆರಡನ್ನು ಒಟ್ಟೊಟ್ಟಿಗೆ ನೋಡುವುದು ಕನ್ನಡ ಜನಮಾನಸದ ಒಂದು ನೆಲೆ. ಈ ಮನಸ್ಸು ಹೊಂದಿರುವಂತಹ ಕನ್ನಡ ಜನತೆಯ ಜೊತೆಗೆ ಒಂದು ವೈಚಾರಿಕವಾದ ಸಂವಾದದಲ್ಲಿ ತೊಡಗುವ ಕ್ರಮದಲ್ಲಿ ಒಂದು ಹೊಸ ರೀತಿಯ ಚಿಂತನೆ ಅತ್ಯಗತ್ಯ. ಈ ದಿಕ್ಕಿನಲ್ಲಿ ಕುವೆಂಪು ಅವರ ಚಿಂತನೆಗಳು ನಮಗೆ ಚಿಮ್ಮುವ ಹಲಗೆಗಳಾಗಬಹುದು. ಅಂತಿಮವಾದ ನಿರ್ಣಯಗಳಾಗಲಾರವೆಂದು ನನಗೆ ತೋರುತ್ತದೆ. ಕುವೆಂಪು ಅವರು ಕೊನೆಯ ಮಾತುಗಳನ್ನು ಆಡಿದ್ದಾರೆ ಎಂದು ನಾನು ಹೇಳುತ್ತಿಲ್ಲ ಮತ್ತು ನನಗೆ ಹಾಗೆ ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ಅವರು ಕೊನೆಯ ಮಾತನ್ನು ಹುಡುಕುವುದಕ್ಕೆ ಬೇಕಾದ ದಾರಿಯನ್ನು ತೋರಿಸಿದ್ದಾರೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆ ದಾರಿಯಲ್ಲಿ ನಾವು ಸಾಗಬೇಕಾದ ಗುರಿ ಯಾವುದು ಎಂದು ನಮಗೆ ಗೊತ್ತಿಲ್ಲ.

ಕುವೆಂಪು ಅವರು ’ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ’ ಉಪನ್ಯಾಸವನ್ನು ಪ್ರಾರಂಭ ಮಾಡಿದಾಗ ಒಂದು ಮಾತನ್ನು ಹೇಳಿದ್ದರು. ನಾನು ಹೇಳುವುದೆಲ್ಲ ನಿಮಗೆ ಆಪ್ಯಾಯಮಾನವಾಗಿರುತ್ತದೆ ಎಂದು ತಿಳಿದುಕೊಂಡು ನಾನು ಮಾತನಾಡುತ್ತಿಲ್ಲ, ನಿಮಗೆ ಇಷ್ಟವಾಯಿತೋ ನಿಮಗೆ ಒಪ್ಪಿಗೆಯಾಯಿತೋ ಎಂದು ನಾನು ಮಾತನಾಡುತ್ತಿಲ್ಲ ಎಂದು. ನಾನು ಕೂಡ ಇಂದು ಅದೇರೀತಿ ಮಾತನಾಡಿದ್ದು, ನಿಮಗೆ ಇಷ್ಟವಾಯಿತೋ ಅನ್ನುವುದು ಬಹಳ ಮುಖ್ಯವಲ್ಲ. ನನಗೆ ಏನು ಅನ್ನಿಸುತ್ತದೋ ಅದನ್ನು ನಾನು ನಿಮ್ಮ ಜೊತೆ ಹಂಚಿಕೊಳ್ಳುವುದಕ್ಕೆ ನಾನು ಈ ವೇದಿಕೆಯನ್ನು ಬಳಸಿಕೊಂಡಿದ್ದೇನೆ. ದುರುಪಯೋಗ ಪಡಿಸಿಕೊಂಡಿದ್ದೇನೆ ಅನ್ನಿಸಿದ್ದರೆ ಮನ್ನಿಸಿ.

– ಕೆ ವಿ ನಾರಾಯಣ

ಭಾಷಣದಿಂದ ಪಠ್ಯ ರೂಪಕ್ಕೆ: ಲಕ್ಷ್ಮಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...