Homeಕರ್ನಾಟಕಕನ್ನಡ ವಿವಿ ಮೇಲೆ ಪುರೋಹಿತಶಾಹಿ ಆಕ್ರಮಣ: ಪ್ರೊ. ಟಿ ಆರ್ ಸಿ

ಕನ್ನಡ ವಿವಿ ಮೇಲೆ ಪುರೋಹಿತಶಾಹಿ ಆಕ್ರಮಣ: ಪ್ರೊ. ಟಿ ಆರ್ ಸಿ

- Advertisement -
- Advertisement -

ರಾಷ್ಟ್ರಮಟ್ಟದಲ್ಲಿ ಪುರೋಹಿತಶಾಹಿಯು ಹೇಗೆ ದೆಹಲಿಯ ಜೆಎನ್‌ಯು ಮೇಲೆ, ನಾಡಿನ ಬುದ್ಧಿಜೀವಿಗಳ ಮೇಲೆ, ಸಾಮಾಜಿಕ ಕಾರ್ಯಕರ್ತರ ಮೇಲೆ ಆಕ್ರಮಣ ಮಾಡುತ್ತಿದೆಯೋ ಅದೇ ರೀತಿಯಲ್ಲಿ ಕರ್ನಾಟಕದಲ್ಲಿ ಕನ್ನಡ ವಿವಿಯನ್ನು ನಾಶ ಮಾಡುವ ದಿಶೆಯಲ್ಲಿ ಅನುದಾನ ಕಡಿತವನ್ನು ಒಂದು ತಂತ್ರವಾಗಿ ಪುರೋಹಿತಶಾಹಿ ಸರ್ಕಾರ ಬಳಸುತ್ತಿದೆ. ಇದು ಕೇವಲ ಆರಂಭ, ಮುಂದೆ ಇನ್ನೂ ಭಯಂಕರವಾದ ಹುನ್ನಾರಗಳು ಸರದಿಯಲ್ಲಿ ಕಾಯುತ್ತಾ ನಿಂತಿವೆ.

ಅನೇಕರು ಕನ್ನಡ ವಿವಿಯನ್ನು ಕನ್ನಡ ’ಭಾಷಾ’ ವಿಶ್ವವಿದ್ಯಾಲಯ ಎಂದು ಭಾವಿಸಿದ್ದಾರೆ. ವಾಸ್ತವವಾಗಿ ಇದು ಎಲ್ಲ ವಿಶ್ವವಿದ್ಯಾಲಯಗಳಂತೆ ಜ್ಞಾನದ ಎಲ್ಲ ಕ್ಷೇತ್ರಗಳಲ್ಲಿಯೂ (ಸಮಾಜ ವಿಜ್ಞಾನ, ಮಾನವಿಕ, ಲಲಿತಕಲೆಗಳು, ವಿಜ್ಞಾನ (ಪೂರ್ಣರೂಪದಲ್ಲಿ ಈ ನಿಕಾಯ ರೂಪುಗೊಂಡಿಲ್ಲ) ಅಧ್ಯಯನ, ಸಂಶೋಧನೆ, ಪ್ರಶಿಕ್ಷಣ ನಡೆಸುವ, ಅಂಗನವಾಡಿ ಕಾರ್ಯಕರ್ತೆಯರಿಗೆ, ಪಂಚಾಯತ್ ರಾಜ್ ಸಂಸ್ಥೆಗಳ ಚುನಾಯಿತ ಸದಸ್ಯರಿಗೆ ತರಬೇತಿ ನೀಡುವ ಹಾಗೂ ಮಾನವ ಹಕ್ಕುಗಳ ಬಗ್ಗೆ, ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಕಾರ್ಯಾಗಾರಗಳನ್ನು ಮತ್ತು ಕಾನೂನು ಜಾಗೃತಿ ಶಿಬಿರಗಳನ್ನು ನಡೆಸುವ ರಾಜ್ಯದ ಪ್ರಮುಖ ವಿಶ್ವವಿದ್ಯಾಲಯವಾಗಿದೆ.

ರಾಜ್ಯದಲ್ಲಿ ಬುಡುಕಟ್ಟು ಅಧ್ಯಯನ ವಿಭಾಗವನ್ನು ಹೊಂದಿರುವ ಏಕೈಕ ವಿವಿ ಇದಾಗಿದೆ. ಈ ವಿಭಾಗದ ವಿದ್ವಾಂಸರು ತಳಮಟ್ಟದ ಬುಡಕಟ್ಟುಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ ಮತ್ತು ಆ ಬುಡಕಟ್ಟುಗಳ ಯುವ ಜನಾಂಗಕ್ಕೆ ಕಾರ್ಯಾಗಾರಗಳನ್ನು ಅದು ಏರ್ಪಡಿಸುತ್ತಿದೆ. ಇಲ್ಲಿನ ಒಂದು ವಿಶೇಷತೆಯೆಂದರೆ ಅದು ಸಾಹಿತ್ಯ, ಚರಿತ್ರೆ, ಪುರಾತತ್ವ, ಅರ್ಥಶಾಸ್ತ್ರ-ಸಮಾಜಶಾಸ್ತ್ರ, ಮಹಿಳಾ ಅಧ್ಯಯನ, ರಾಜ್ಯಶಾಸ್ತ್ರ – ಹೀಗೆ ಯಾವುದೇ ಜ್ಞಾನಶಾಖೆಯಾಗಲಿ ಅವುಗಳ ಬಗ್ಗೆ ಅಧ್ಯಯನ ಇಲ್ಲಿ ಕನ್ನಡದಲ್ಲಿ ನಡೆಯುತ್ತದೆ. ಆ ಮಟ್ಟಿಗೆ ಇದು ಕನ್ನಡ ಭಾಷಾ ವಿಶ್ವವಿದ್ಯಾಲಯ. ಇದು ಕನ್ನಡ ಭಾಷೆ-ಸಾಹಿತ್ಯಗಳಿಗೆ ಮಾತ್ರ ಸಂಬಂಧಿಸಿದಂತೆ ಅಧ್ಯಯನ ನಡೆಸುವ ವಿವಿಯಲ್ಲ. ಅಲ್ಲದೆ ಇದು ಏಕಾಕಾರಿ ಸಂಶೋಧನ ವಿಶ್ವವಿದ್ಯಾಲಯ (ಯೂನಿಟರಿ).

ಇದು ಆರಂಭವಾದಾಗಿನಿಂದ ಇಲ್ಲಿನ ವಿದ್ವಾಂಸರು ರಾಜ್ಯದಲ್ಲಿ ಪ್ರಗತಿಪರ ಚಿಂತನೆಗೆ, ಸಾಮಾಜಿಕ ಚಳವಳಿಗಳಿಗೆ ಇಂಬಾಗಿ ನಿಲ್ಲುತ್ತಾ ಬಂದಿದ್ದಾರೆ. ಇದನ್ನು ಕರ್ನಾಟಕದ ಬುದ್ಧಿಜೀವಿಗಳ ಕೋಶ ಎಂದರೆ ತಪ್ಪಾಗುವುದಿಲ್ಲ. ಸುಮಾರು ಹತ್ತು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ 80 ಎಕರೆ ಜಮೀನನ್ನು ಖಾಸಗಿ ಟ್ರಸ್ಟಿಗೆ ನೀಡುವ ನಿರ್ಧಾರವನ್ನು ಅಂದಿನ ಕುಲಪತಿ ಜೊತೆ ಸೇರಿ ಪುರೋಹಿತಶಾಹಿ ಸರ್ಕಾರ ತೀವ್ರ ಪ್ರಯತ್ನ ನಡೆಸಿತು. ಅದನ್ನು ನಿಲ್ಲಿಸುವುದರಲ್ಲಿ ನಾಡಿನ ಪ್ರಗತಿಪರರೆಲ್ಲರೂ ವಿವಿ ಜೊತೆ ನಿಂತು ಹೋರಾಟ ಮಾಡಿ ವಿವಿಯ ಜಮೀನನ್ನು ಉಳಿಸಲಾಯಿತು. ಇಲ್ಲಿನ ವಿದ್ವ್ವಾಂಸರು ಬರೆದ ಬರಹಗಳನ್ನು 2007-08ರ ನಂತರ ಸೂಕ್ಷ್ಮ ಪರಾಮರ್ಶೆಗೆ ಒಳಪಡಿಸುವ ಪ್ರಯತ್ನವನ್ನು ಪುರೋಹಿತಶಾಹಿ ನಡೆಸಿತು. ಪುರೋಹಿತಶಾಹಿ ವಿರುದ್ಧ ಯಾರು ಏನೆಲ್ಲ ಬರೆದಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ, ನಂತರ ಅವರನ್ನು ಕಪ್ಪುಪಟ್ಟಿಗೆ ಸೇರಿಸುವ ಹುನ್ನಾರ ಅದಾಗಿತ್ತು. ಅಂದು ವಿವಿಯ ಆಡಳಿತ ಮಂಡಳಿಯಲ್ಲಿ (ಸಿಂಡಿಕೇಟ್) ಪುರೋಹಿತ ಬುದ್ಧಿಯ ಜನರೇ ತುಂಬಿದ್ದರು.

ಜಾತಿಯಿಂದ ಅವರಲ್ಲಿ ಅನೇಕರು ದಲಿತ ವರ್ಗಕ್ಕೆ, ಹಿಂದುಳಿದ ವರ್ಗಕ್ಕೆ, ಮಹಿಳಾ ವರ್ಗಕ್ಕೆ ಸೇರಿದ್ದರೂ ಬೌದ್ಧಿಕವಾಗಿ ಇವರೆಲ್ಲ ಪುರೋಹಿತಶಾಹಿಯ ಅಡಿಯಾಳಾಗಿದ್ದರು. ಇದರ ನಾಯಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ಉಳಿದವರೆಲ್ಲರೂ ತಲೆ ಬಾಗಬೇಕಾಗಿತ್ತು. ಹೀಗೆ ಪುರೋಹಿತಶಾಹಿಯನ್ನು ಪೋಷಿಸುವ ಪರಿವಾರ ಸಂಘಟನೆಗಳು ಕನ್ನಡ ವಿವಿಯನ್ನು ಆರಂಭದಿಂದಲೂ ದ್ವೇಷಿಸುತ್ತಾ ಬಂದಿವೆ. ಕನ್ನಡ ವಿವಿ ಬಗ್ಗೆ ಆರ್‌ಎಸ್‌ಎಸ್ ಪರಿವಾರಕ್ಕೆ ಇನ್ನಿಲ್ಲದ ವಿರೋಧವಿದೆ. ಇಂದು ಕನ್ನಡ ವಿವಿಯು ಅನುದಾನ ಕಡಿತ ಮತ್ತು ಖಾಲಿಯಿರುವ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಾತಿ ಸಮಸ್ಯೆಯನ್ನು ಎದುರಿಸುತ್ತಿದೆ. ಇಲ್ಲಿ ಬೋಧಕರಲ್ಲಿ ಶೇ.60 ಕ್ಕಿಂತ ಅಧಿಕ ದಲಿತ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದವರಿರುವುದು ಆರ್‌ಎಸ್‌ಎಸ್‌ಗೆ ನುಂಗಲಾರದ ತುತ್ತಾಗಿದೆ. ಚಾತುರ್ವರ್ಣಕ್ಕೆ ಜೀತದಾಳಾಗಿರಬೇಕಾದ ದಲಿತರು-ಶೂದ್ರರು, ಹಿಂದುಳಿದ ವರ್ಗಗಳು ಸ್ವಾಬಿಮಾನದಿಂದ, ತೀಕ್ಷ್ಣ ಬುದ್ಧಿಮತ್ತೆಯಿಂದ ಮೇಲೆ ಬರುತ್ತಿರುವುದು ಪುರೋಹಿತಶಾಹಿಗೆ ತಡೆದುಕೊಳ್ಳಲಾಗುತ್ತಿಲ್ಲ.

ಆರ್‌ಎಸ್‌ಎಸ್‌ಗೆ ಬಹುಪ್ರಿಯವಾಗಿರುವ ಸಂಸ್ಕೃತಕ್ಕೆ ಒಂದು ಭಾಷೆಯಾಗಿ ಇಲ್ಲಿನ ವಿದ್ವಾಂಸರಿಗೆ ದ್ವೇಷವಿಲ್ಲದಿದ್ದರೂ ಪ್ರಾಂತೀಯ ಭಾಷೆಗಳು ಮತ್ತು ಸಂಸ್ಕೃತ ಭಾಷೆಗಳ ಅಭಿವೃದ್ಧಿಗೆ ಅನುದಾನ ನೀಡುವಾಗ ಭಾರತ ಸರ್ಕಾರವು ಅನುಸರಿಸುತ್ತಿರುವ ತಾರತಮ್ಯದ ಬಗ್ಗೆ ವಿರೋಧವಿದೆ. ನಮ್ಮ ರಾಜ್ಯದಲ್ಲಿ 2011ರ ಜನಗಣತಿ ಪ್ರಕಾರ ಸಂಸ್ಕೃತವನ್ನು ತಾಯಿ ಭಾಷೆಯಾಗಿ ವರದಿ ಮಾಡಿರುವವರ ಸಂಖ್ಯೆ 1218. ಭಾರತದಲ್ಲಿ ಇವರ ಸಂಖ್ಯೆ 24821. ಕರ್ನಾಟಕದಲ್ಲಿ ಲಂಬಾಣಿ ಭಾಷೆಯ ಜನರ ಸಂಖ್ಯೆ 9.74 ಲಕ್ಷವಾದರೆ ಉರ್ದು ಭಾಷೆಯವರ ಸಂಖ್ಯೆ 66.18 ಲಕ್ಷ (ಮೂಲ: ಭಾಷಾಗಣತಿ ವರದಿ. 2011. ಸಿ-16, ಪಾಪ್ಯುಲೇಶನ್ ಬೈ ಮದರ್ ಟಂಗ್. ಗೃಹ ಮಂತ್ರಾಲಯ, ಭಾರತ ಸರ್ಕಾರ). ಲಂಬಾಣಿ ಭಾಷೆಯ ಅಭಿವೃದ್ಧಿಗೆ ಕೇಂದ್ರವು ಯಾವ ರೀತಿಯಲ್ಲಿ ನೆರವು ನೀಡತ್ತಿದೆ? ಈ ಭಾಷೆಗಳನ್ನು ಮೂಲೆಗುಂಪು ಮಾಡಿ ಸಂಸ್ಕೃತದಲ್ಲಿ ವಾರ್ತೆ, ವಿಶ್ವವಿದ್ಯಾಲಯ, ಸಂಶೋಧನಾ ಸಂಸ್ಥೆಗಳನ್ನು ಒಕ್ಕೂಟ ಸರ್ಕಾರವು, ಹಾಗೆಯೇ ರಾಜ್ಯ ಸರ್ಕಾರಗಳು ಎಗ್ಗಿಲ್ಲದೆ ಪ್ರೋತ್ಸಾಹಿಸುತ್ತಿವೆ. ಇದು ಕನ್ನಡವನ್ನು ಸೇರಿಸಿಕೊಂಡು ದೇಶಿ ಭಾಷೆಗಳಿಗೆ ಮಾಡುತ್ತಿರುವ ಅನ್ಯಾಯ. ಪ್ರಾಸಂಗಿಕವಾಗಿ ಈ ಶತಮಾನದ 2009ನೆ ಇಸವಿಯಲ್ಲಿ ಕರ್ನಾಟಕ ಸರ್ಕಾರವು ಸಂಸ್ಕೃತ ವೇದ ವಿಶ್ವವಿದ್ಯಾಲಯ ಸ್ಥಾಪಿಸಲು ಹೊರಟಾಗ ಅದನ್ನು ತೀವ್ರವಾಗಿ ವಿರೋಧಿಸಿದ ಕನ್ನಡ ವಿವಿಯ ವಿದ್ವಾಂಸರಲ್ಲಿ ನಾನು ಮುಂಚೂಣಿಯಲ್ಲಿದ್ದೆ (ನೋಡಿ: ನನ್ನ ಲೇಖನ ’ಸಂಸ್ಕೃತ-ವೇದ ವಿವಿಯ ಪ್ರಸ್ತುತತೆ’. ಪ್ರಜಾವಾಣಿ. 29, ಮೇ, 2009). ನಮ್ಮ ಮಧ್ಯಪ್ರವೇಶದಿಂದಾಗಿ ಅದು ವೇದ ವಿವಿಯಾಗುವುದಕ್ಕೆ ಪ್ರತಿಯಾಗಿ ಕರ್ನಾಟಕ ಸಂಸ್ಕೃತ ವಿವಿಯಾಯಿತು.

PC : Prajavani

ಕನ್ನಡ ವಿವಿಗೆ ಅನುದಾನ ಕಡಿತದ ಕ್ರಮವನ್ನು ಕೇಂದ್ರ ಸರ್ಕಾರದ ಪುರೋಹಿತಶಾಹಿ ಭಾಷಾ ತಾರತಮ್ಯ ನೀತಿಯ ಹಿನ್ನೆಲೆಯಲ್ಲಿ ನೋಡುವ ಅಗತ್ಯವಿದೆ. ಇದು ವೇದಾಗಮ ಪ್ರಣೀತ ಚಾತುರ್ವರ್ಣ ವ್ಯವಸ್ಥೆಯ ಪುನರ್‌ಸ್ಥಾಪನೆಯ ಬೃಹತ್ ಕಾರ್ಯಸೂಚಿಯ ಭಾಗವಾಗಿ ಪುರೋಹಿತಶಾಹಿ ಸರ್ಕಾರಗಳು ನಡೆಸುತ್ತಿರುವ ಪ್ರಯತ್ನವಾಗಿದೆ. ವೈದಿಕತೆಯ ಘಮಲಿರುವ ಲಿಖಿತ ಸಾಹಿತ್ಯಕ್ಕೆ ಪ್ರತಿಯಾಗಿ ನಾಡಿನ ಶೂದ್ರರು, ದಲಿತರು, ಬುಡಕಟ್ಟು ಸಮುದಾಯಗಳು ಕಟ್ಟಿರುವ ಅವೈದಿಕ ಮೌಖಿಕ ಸಾಹಿತ್ಯವನ್ನು ಲಿಖಿತ ಸಾಹಿತ್ಯಕ್ಕೆ ಸಮಾನಾಂತರ ಮಟ್ಟದ್ದೆಂದು ಸಾರುವ ಮತ್ತು ಅವುಗಳನ್ನು ಚರ್ಚೆಯ ಮುಂಚೂಣಿಗೆ ತರುವ ಮಹೋನ್ನತ ಕಾರ್ಯವನ್ನು ಕನ್ನಡ ವಿವಿಯು ನಿರಂತರವಾಗಿ ನಡೆಸುತ್ತಾ ಬಂದಿದೆ. ಕರ್ನಾಟಕದ ಇಡೀ ಸಮುದಾಯದ (ಎಲ್ಲರನ್ನೂ ಒಳಗೊಳ್ಳುವ-ಇನ್‌ಕ್ಲೂಸಿವ್) ಚರಿತ್ರೆ, ಪರಂಪರೆ, ಸಾಹಿತ್ಯ, ಅಭಿವೃದ್ಧಿ, ಪುರಾತತ್ವ, ಜಾನಪದ, ಬುಡಕಟ್ಟು ಪುರಾಣಗಳು, ಸ್ತ್ರೀವಾದ ಮುಂತಾದ ಸಾಂಸ್ಕೃತಿಕ ಸಂಪತ್ತನ್ನು ಗುರುತಿಸುವ, ಪರಿಚಯಿಸುವ, ಕಟ್ಟುವ, ಬೆಳೆಸುವ ಮಹತ್‌ಕಾರ್ಯದಲ್ಲಿ ಅದು ತೊಡಗಿದೆ.

ಕನ್ನಡ ವಿವಿಯ ವಿಶೇಷತೆಯೆಂದರೆ ಇಲ್ಲಿನ ಅಧ್ಯಯನ ವಿಭಾಗಗಳು ಬಹುಶಿಸ್ತೀಯ ಅಧ್ಯಯನ ವಿಧಾನವನ್ನು ಶ್ರದ್ಧೆಯಿಂದ ಅನುಸರಿಸುತ್ತಿವೆ. ಈ ಕಾರಣದಿಂದಾಗಿಯೇ ವಿವಿಯ ಪ್ರಸಾರಾಂಗವು ಅಧ್ಯಯನ ವಿಧಾನಗಳ ಬಗ್ಗೆ(ಮೆಥೆಡಾಲಜಿ)ಅನೇಕ ಕೃತಿಗಳನ್ನು ಪ್ರಕಟಿಸಿದೆ. ಇದು ಕನ್ನಡ ವಿವಿಯ ವಿಶಿಷ್ಟತೆಯಾಗಿದೆ. ಇಲ್ಲಿ ಸಾಹಿತ್ಯದ ತಜ್ಞರು ಅಭಿವೃದ್ಧಿ ಬಗ್ಗೆ, ಜಾನಪದ ವಿದ್ವಾಂಸರು ಸಮಾಜದಲ್ಲಿನ ತಳವರ್ಗಗಳ ಬದುಕು-ಬವಣೆ ಬಗ್ಗೆ, ಪರಿಸರ ರಕ್ಷಣೆ ಬಗ್ಗೆ ಅರ್ಥಶಾಸ್ತ್ರದ ಅಧ್ಯಾಪಕರು ಸಾಹಿತ್ಯದ ಬಗ್ಗೆ, ಪುರಾತತ್ವ ವಿದ್ವಾಂಸರು ಚರಿತ್ರೆಯಲ್ಲಿನ ಕೆರೆ-ಕಟ್ಟೆಗಳ ನಿರ್ವಹಣೆ ಬಗ್ಗೆ ಮಾತನಾಡಬಲ್ಲರು, ಸಂಶೋಧನಾ ಪ್ರಬಂಧಗಳನ್ನು ಬರೆಯಬಲ್ಲರು ಎಂದೇ ಕನ್ನಡ ವಿವಿಯ ಪುಸ್ತಕಗಳು ರಾಜ್ಯದಾದ್ಯಂತ ಜನರ ಮನ್ನಣೆ ಗಳಿಸಿವೆ. ವಿವಿಯ ಎಲ್ಲ ವಿಭಾಗಗಳ ವಿದ್ವಾಂಸರು ತಮ್ಮ ಅಧ್ಯಯನಗಳಲ್ಲಿ ಪ್ರಜ್ಞಾಪೂರ್ವಕವಾಗಿ ಮತ್ತು ಸಹಜವೆನ್ನುವಂತೆ ಸ್ತ್ರೀವಾದಿ ಧೋರಣೆಯನ್ನು ಅಳವಡಿಸಿಕೊಂಡಿದ್ದಾರೆ. ದೇಶದಲ್ಲಿನ ಭಾಷಾ ವಿವಿಗಳಿಗೆ ಭಿನ್ನವಾಗಿ (ಉದಾ: ತೆಲುಗು ವಿವಿ) ಬೋಧನಾ ವಿಶ್ವವಿದ್ಯಾಲಯವಾಗುವುದಕ್ಕೆ ಪ್ರತಿಯಾಗಿ ಸಂಶೋಧನಾ ವಿವಿಯಾಗಿ ಇದು ಬೆಳೆಯುತ್ತಿದೆ. ಕನ್ನಡ ವಿವಿಯು ಆರಂಭದಿಂದಲೂ ’ನ್ಯಾಕ್ (ಎನ್‌ಎಎಸಿ)ಮೌಲ್ಯಮಾಪನದಲ್ಲಿ ಉನ್ನತ ಶ್ರೇಣಿಯನ್ನು ಗಳಿಸುತ್ತಾ ಬಂದಿದೆ. ಆದರೆ ಇದೀಗ ಇದನ್ನು ಬೋಧನಾ ವಿವಿಯಾಗಿ ಮಾಡಲು ಮತ್ತು ಸಾಂಪ್ರದಾಯಿಕ ವಿವಿಗಳಂತೆ ಪದವಿ ಕಾಲೇಜುಗಳಿಗೆ ಸಂಲಗ್ನ ನೀಡುವ ಒಕ್ಕೂಟ ವಿವಿಯನ್ನಾಗಿ ಮಾಡುವ ಹುನ್ನಾರವೂ ನಡೆದಿದೆ.

ಸರಿಸುಮಾರು 2015ರವರೆಗೆ ಕನ್ನಡ ವಿವಿಯು ವಿವಿಧ ವಿಷಯಗಳಿಗೆ ಸಂಬಂಧಿಸಿದ ನಿಯತಕಾಲಿಕೆಗಳನ್ನು (ಕನ್ನಡ ಅಧ್ಯಯನ, ಅಭಿವೃದ್ಧಿ ಅಧ್ಯಯನ, ಜಾನಪದ ಅಧ್ಯಯನ, ಮಹಿಳಾ ಅಧ್ಯಯನ ಇತ್ಯಾದಿ)ಅತ್ಯಂತ ಶಿಸ್ತಿನಿಂತ ಪ್ರಕಟಿಸಿಕೊಂಡು ಬರುತಿತ್ತು. ಸಂಶೋಧನಾ ವಿವಿಯ ಹೆಸರಿಗೆ ತಕ್ಕಂತೆ ಅದು ನಡೆದುಕೊಂಡು ಬರುತ್ತಿತ್ತು. ಆದರೆ ಸರ್ಕಾರದ ಬೆಂಬಲವಿಲ್ಲದೆ, ಅನುದಾನವಿಲ್ಲದೆ ವಿವಿಯು ಅವುಗಳ ಪ್ರಕಟಣೆಯನ್ನು ಈಗ ನಿಲ್ಲಿಸಿದೆ ಅಥವಾ ಅನಿಯತವಾಗಿ ಪ್ರಕಟಿಸುತ್ತಿದೆ. ’ಕನ್ನಡ ಸ್ಟಡೀಸ್ ಎಂಬ ಇಂಗ್ಲಿಷ್‌ನ ಅರ್ಧ ವಾರ್ಷಿಕವನ್ನು ಅದು ಪ್ರಕಟಿಸುತ್ತಿತ್ತು. ಕನ್ನಡ ವಿವಿಯಲ್ಲಿ ಅಧ್ಯಯನಗಳು ಕನ್ನಡದಲ್ಲಿ ನಡೆಯಬೇಕು, ನಿಜ. ಆದರೆ ಇಲ್ಲಿ ಇಂಗ್ಲಿಷ್‌ನಲ್ಲಿ ಅಧ್ಯಯನ ಪ್ರಬಂಧಗಳನ್ನು ಪ್ರಕಟಿಸುವುದಕ್ಕೆ ನಿಷೇಧವೇನಿಲ್ಲ. ಉದಾ: ಕರ್ನಾಟಕ ಸರ್ಕಾರದ ಯೋಜನಾ ಇಲಾಖೆಯು 2006-08ರ ಅವಧಿಯಲ್ಲಿ ಯುಎನ್‌ಡಿಪಿ ಪ್ರಾಯೋಜಿತ ಜಿಲ್ಲಾ ಮಾನವ ಅಭಿವೃದ್ಧಿ ವರದಿ ಸಿದ್ಧಪಡಿಸುವ ಯೋಜನೆಯಲ್ಲಿ ನಾನು ಭಾಗವಹಿಸಿದ್ದೆ. ಅದರ ಭಾಗವಾಗಿ ನಾನು ’ವಿಜಾಪುರ ಡಿಸ್ರ್ಟಿಕ್ಟ್ ಹೂಮನ್ ಡೆವಲಪ್‌ಮೆಂಟ್ ರಿಪೋರ್ಟ್ 2008’ ಸಿದ್ಧಪಡಿಸಿಕೊಟ್ಟಿದ್ದೆ.

ಅದಕ್ಕೆ ಯುಎನ್‌ಡಿಪಿ ಮತ್ತು ಅಂದಿನ ಯೋಜನಾ ಆಯೋಗ ಸ್ಥಾಪಿಸಿದ್ದ ’ಮಾನವ ವಿಕಾಸ್ ಪ್ರಶಸ್ತಿಯಲ್ಲಿ ರಾಷ್ಟ್ರದಲ್ಲಿ ನಾನು ಸಿದ್ಧಪಡಿಸಿದ್ದ ವರದಿಯು ಎರಡನೆಯ ಸ್ಥಾನ ಪಡೆದಿತ್ತು (ಕನ್ನಡ ವಿಶ್ವವಿದ್ಯಾಲಯದ ಹೆಸರು ಯುಎನ್‌ಡಿಪಿಯಲ್ಲಿ ದಾಖಲಾಗುವುದು ಸದರಿ ವರದಿಯಿಂದ ಸಾಧ್ಯವಾಯಿತು). ರಾಜ್ಯದ 30 ಜಿಲ್ಲೆಗಳ ಮಾನವ ಅಭಿವೃದ್ಧಿ ವರದಿಗಳ ಸಿದ್ಧತೆಯಲ್ಲಿ ಕನ್ನಡ ವಿವಿಯ ಡಾ. ಎಂ. ಚಂದ್ರಪೂಜಾರಿ ಅವರು ’ದಲಿತ ಅಭಿವೃದ್ಧಿ ಸೂಚ್ಯಂಕ’ವನ್ನು ಸಿದ್ಧಪಡಿಸಿಕೊಟ್ಟಿದ್ದಾರೆ. ಅದನ್ನು 30 ಜಿಲ್ಲಾ ಮಾನವ ಅಭಿವೃದ್ಧಿ ವರದಿಗಳಲ್ಲಿ ಅಳವಡಿಸಿಕೊಂಡು ರಾಜ್ಯದ ದಲಿತರ ಅಭಿವೃದ್ಧಿ- ದುಸ್ಥಿತಿಯನ್ನು ಮಾಪನ ಮಾಡುವ ಪ್ರಯತ್ನ ನಡೆಸಲಾಯಿತು. ಇಂಗ್ಲಿಷ್‌ನಲ್ಲಿ ವಿವಿಯು ಅನೇಕ ಉತ್ಕೃಷ್ಟ ಕೃತಿಗಳನ್ನು ಪ್ರಕಟಿಸಿದೆ. ಕನ್ನಡ ದೇಶದಲ್ಲಿನ ಚಿಂತನಾ ಪ್ರಣಾಳಿಕೆಯನ್ನು ಜಾಗತಿಕ ಮಟ್ಟಕ್ಕೆ ಒಯ್ಯುವ ಉನ್ನತ ಆಶಯ ಕನ್ನಡ ವಿವಿಯದ್ದಾಗಿದೆ. ಇದೆಲ್ಲವೂ ಇಂದು ಮಣ್ಣು ಪಾಲಾಗುತ್ತಿವೆ. ಕನ್ನಡ ವಿವಿಯ ಅನೇಕ ವಿದ್ವಾಂಸರು ವಿವಿಧ ಫೆಲೋಶಿಪ್‌ಗಳನ್ನು ಪಡೆದು ವಿದೇಶದ ವಿವಿಗಳಲ್ಲಿ ಕನ್ನಡ ನಾಡಿನ ಚರಿತ್ರೆ, ಸಾಹಿತ್ಯ, ಅಭಿವೃದ್ಧಿ ಮುಂತಾದ ವಿಷಯಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

ಕನ್ನಡ ವಿವಿಯು ಪರಿಪೂರ್ಣವಾದ ವಿವಿಯಾಗಿದೆ ಎನ್ನುವುದು ನನ್ನ ಅಭಿಪ್ರಾಯವಲ್ಲ. ಅಲ್ಲಿ ಅನೇಕ ಇತಿಮಿತಿಗಳಿವೆ. ಇದು ಕರ್ನಾಟಕದ ಎಲ್ಲ ವಿವಿಗಳಿಗೂ ಅನ್ವಯವಾಗುವ ಮಾತು. ಕರ್ನಾಟಕದ ಅಸ್ಮಿತೆಯನ್ನು ಅದರ ಬಹುಮುಖಿ ಆಯಾಮಗಳಲ್ಲಿ ಗುರುತಿಸುವ ಮತ್ತು ಬೆಳೆಸುವ ಕಾರ್ಯವನ್ನು ಕನ್ನಡ ವಿವಿಯು ಆರಂಭದಿಂದಲೂ ನಡೆಸಿಕೊಂಡು ಬರುತ್ತಿದೆ. ಕನ್ನಡ ವಿವಿಯನ್ನು ವಿಶಿಷ್ಟ ವಿವಿಯನ್ನಾಗಿ ಮಾಡುವ ಕನಸನ್ನು ಅದರ ಸಂಸ್ಥಾಪಕ ಕುಲಪತಿ-ಕುಲಸಚಿವರು ಮತ್ತು ಅವರ ಜೊತೆ ಸೇರಿಕೊಂಡು ನಾಡಿನ ಖ್ಯಾತ ವಿದ್ವಾಂಸರು ಪ್ರಯತ್ನಿಸಿದರು. ಎಂಜಿನಿಯರಿಂಗ್, ವೈದ್ಯಕೀಯ, ದಂತ ವಿಜ್ಞಾನ, ವಾಸ್ತುವಿಜ್ಞಾನ ಮುಂತಾದವುಗಳನ್ನು ಕನ್ನಡದಲ್ಲಿ ಕಲಿಸುವ ಸಂಸ್ಥೆಗಳನ್ನು ಕನ್ನಡ ವಿವಿಯಲ್ಲಿ ಸ್ಥಾಪಿಸುವ ಮಹದಾಸೆ ಡಾ. ಚಂದ್ರಶೇಖರ ಕಂಬಾರರಿಗಿತ್ತು. ಐಐಟಿ, ಐಐಎಮ್‌ಗಳಿಗೆ ಸಮಾನವಾದ ಸಮಾಜವಿಜ್ಞಾನಗಳನ್ನು ಕನ್ನಡದಲ್ಲಿ ಬೋಧಿಸುವ ಸಂಸ್ಥೆಗಳನ್ನು ನಾಡಿನಲ್ಲಿ ಕಟ್ಟಬೇಕು ಎಂಬ ವಿಷಯದ ಬಗ್ಗೆ ಡಾ. ಯು. ಆರ್. ಅನಂತಮೂರ್ತಿ ಅವರು ವಿವಿಯಲ್ಲಿ ನಮ್ಮೊಡನೆ ಚರ್ಚೆ ಮಾಡುವಾಗ ಮಾತನಾಡುತ್ತಿದ್ದರು. ಅಂತಹ ಕನಸುಗಳನ್ನು ಬಿತ್ತುವವರೂ ಇಂದು ಇಲ್ಲ. ಇನ್ನು ಅಂತಹ ಕನಸುಗಳನ್ನು ಕಾರ್ಯರೂಪಕ್ಕಿಳಿಸುವ ರಾಜಕೀಯ ಮುತ್ಸದ್ಧಿತನದ ನಾಯಕರೂ ಇಂದು ಕಾಣುತ್ತಿಲ್ಲ. ಕಟ್ಟುವುದಕ್ಕಿಂತ ಇಂದು ಕೆಡಹುವ ರಾಜಕಾರಣ ವಿಜೃಂಭಿಸುತ್ತಿದೆ.

ಕನ್ನಡ ವಿವಿ ಎಂದರೆ ದಲಿತರ ಬಗ್ಗೆ, ಶೋಷಿತರ, ಬುಡುಕಟ್ಟುಗಳ, ಪ್ರಾದೇಶಿಕ ಅಸಮಾನತೆ, ಮಹಿಳೆಯರ, ದಲಿತ-ಬುಡಕಟ್ಟು ಮಹಾಕಾವ್ಯಗಳ, ತತ್ವಪದಗಳ, ಬಸವಣ್ಣ, ಕನಕದಾಸ, ಷರೀಫ, ಮಂಟೆಸ್ವಾಮಿ, ಜಾತ್ಯತೀತತೆಯ ಬಗ್ಗೆ ಹೆಚ್ಚು ಮಾತನಾಡುತ್ತದೆ ವಿನಾ ಕರ್ನಾಟಕದ ಹಿಂದಿನ ಸುವರ್ಣಯುಗದ ಬಗ್ಗೆಯಾಗಲಿ, ಯಜ್ಞ-ಯಾಗ-ಹವನ-ಹವಿಸ್ಸುಗಳ ವೈಜ್ಞಾನಿಕತೆಯ ಬಗ್ಗೆಯಾಗಲೀ, ದೇವಾಲಯ ಸಂಸ್ಕೃತಿಯ ಪೋಷಣೆಯ ಬಗ್ಗೆಯಾಗಲಿ ಮಾತನಾಡುವುದಿಲ್ಲ ಎಂಬುದು ನಾಡಿನ ಪುರೋಹಿತಶಾಹಿಯ ಅಭಿಮತ. ಆದ್ದರಿಂದ ಇದನ್ನು ಏನಾದರೂ ಮಾಡಿ ಕೊಲ್ಲಬೇಕೆಂಬುದು ಅದರ ಕಾರ್ಯಸೂಚಿ. ಇದನ್ನು ಆಗುಮಾಡಲು ಬಿಡಬಾರದು. ಕನ್ನಡ ವಿವಿ ಎಂದರೆ ಕರ್ನಾಟಕದ ಹೆಮ್ಮೆಯ ಪತಾಕೆ. ಇಡೀ ನಾಡು ಇದರ ಬಗ್ಗೆ ಗಂಭೀರವಾಗಿ ಚಿಂತಿಸಿ ಅದರ ಅಭಿವೃದ್ಧಿಗಾಗಿ ಸರ್ಕಾರದ ಮೇಲೆ ಒತ್ತಡ ತರುವ ಜವಾಬ್ದಾರಿ ಕರ್ನಾಟಕದ ಜನರ ಮೇಲಿದೆ. ಕನ್ನಡ ವಿವಿಯ ಉಳಿವು ಕರ್ನಾಟಕದ ಉಳಿವು ಎಂಬ ಮಾತು ಉತ್ರ್ಪ್ಪೇಕ್ಷೆಯದ್ದಾದರೂ ಇದು ಕಟುಸತ್ಯವಾಗಿದೆ.

ಡಾ. ಟಿ. ಆರ್. ಚಂದ್ರಶೇಖರ

ಡಾ. ಟಿ. ಆರ್. ಚಂದ್ರಶೇಖರ

ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ – ಸಂಸ್ಕೃತಿಗಳ ಬಗ್ಗೆಯೂ ತಮ್ಮ ಚಿಂತನೆಗಳನ್ನು ಪ್ರಸ್ತುತಪಡಿಸುವ ಪ್ರೊ. ಟಿ.ಆರ್.ಸಿ ಅವರು ಇತ್ತೀಚೆಗೆ ’ಭಾರತದಲ್ಲಿ ಮೀಸಲಾತಿ ಇತಿಹಾಸ ಮತ್ತು ಮಿಲ್ಲರ್ ಸಮಿತಿ ವರದಿ – ಒಂದು ಅಧ್ಯಯನ’ ಎಂಬ ಪುಸ್ತಕವನ್ನು ರಚಿಸಿದ್ದಾರೆ.


ಇದನ್ನೂ ಓದಿ: ಐದು ದಿನಗಳೊಳಗಾಗಿ ಕನ್ನಡ ವಿವಿ ಸಮಸ್ಯೆ ಬಗೆಹರಿಸದಿದ್ದರೆ, ಮುಂದಿನ ಪರಿಣಾಮಗಳಿಗೆ ಸರ್ಕಾರವೆ ಹೊಣೆ: ಕರವೇ ಖಡಕ್ ಎಚ್ಚರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...