ಸ್ಥಳೀಯ ಯುದ್ಧ ವ್ಯವಸ್ಥೆ ಹಾಗೂ ದೇಶೀಯ ಶಸ್ತ್ರಾಸ್ತ್ರಗಳ ಮೂಲಕ ನಾವು ಮುಂದಿನ ಯುದ್ಧವನ್ನು ಗೆಲ್ಲುತ್ತೇವೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಸೈಬರ್, ಬಾಹ್ಯಾಕಾಶ ತಂತ್ರಜ್ಞಾನ, ಲೇಸರ್, ಎಲೆಕ್ಟ್ರಾನಿಕ್ ವಾರ್ ಫೇರ್, ರೊಬೋಟಿಕ್ಸ್ ಅಭಿವೃದ್ಧಿಯಲ್ಲಿ ಭವಿಷ್ಯವಿದೆ ಎಂದಿದ್ದಾರೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) 41 ನೇ ನಿರ್ದೇಶಕರ ಸಮಾವೇಶದಲ್ಲಿ ಮಾತನಾಡಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ದೇಶದಲ್ಲಿ ರಕ್ಷಣಾ ಸೇವೆಗಳ ಅಗತ್ಯತೆಗಳನ್ನು ಪೂರೈಸಲು ಸ್ಥಳೀಯ ಶಸ್ತ್ರಾಸ್ತ್ರ ವ್ಯವಸ್ಥೆಯನ್ನೇ ಬಳಕೆ ಮಾಡಲಾಗುವುದು. ದೇಶೀಯ ಶಸ್ತ್ರಾಸ್ತ್ರ ವ್ಯವಸ್ಥೆಯ ಮೂಲಕವೇ ಮುಂದಿನ ಯುದ್ಧದಲ್ಲಿ ಹೋರಾಟ ಮಾಡಿ ಗೆಲ್ಲುತ್ತೇವೆ. ಸ್ಥಳೀಯವಾಗಿ ತಯಾರಿಸಲಾಗುವ ಶಸ್ತ್ರಾಸ್ತ್ರ, ಯುದ್ಧ ಸಾಮಗ್ರಿಗಳ ತಯಾರಿಕೆಯಲ್ಲಿ ಡಿಆರ್ ಡಿಒ ಪ್ರಗತಿ ಸಾಧಿಸಿದೆ ಎಂದು ರಾವತ್ ಹೇಳಿದ್ದಾರೆ.
ಸರ್ಕಾರಿ ಸಂಸ್ಥೆಯಾಗಿರುವ ಡಿಆರ್ ಡಿಒ, 52 ಪ್ರಯೋಗಾಲಯಗಳ ಸಂಪರ್ಕ ಹೊಂದಿದೆ. ಏರೋನಾಟಿಕ್ಸ್, ಲ್ಯಾಂಡ್ ಕಾಂಬ್ಯಾಟ್ ಎಂಜಿನಿಯರಿಂಗ್, ಶಸ್ತ್ರಾಸ್ತ್ರ, ಎಲೆಕ್ಟ್ರಾನಿಕ್ಸ್, ಕ್ಷಿಪಣಿ ಮತ್ತು ನೌಕಾ ವ್ಯವಸ್ಥೆಗಳಂತಹ ವಿವಿಧ ಕ್ಷೇತ್ರಗಳನ್ನು ಒಳಗೊಂಡ ಮಿಲಿಟರಿಯ ಸಂಶೋಧನೆ ಮತ್ತು ಅಭಿವೃದ್ಧಿಯ ಕೊಂಡಿಯಾಗಿದೆ. ದೇಶದ ರಕ್ಷಣಾ ಉದ್ಯಮ ಈಗ ಮೊಳಕೆಯೊಡೆಯುತ್ತಿದೆ. ಭವಿಷ್ಯದಲ್ಲಿ ಗಡಿಗಳ ಭದ್ರತೆ, ಯುದ್ಧ ಸಮಯದಲ್ಲಿ ಹೋರಾಟ ನಡೆಸಲು ಬೇಕಾದ ಯುದ್ಧ ಸಾಮಗ್ರಿಗಳ ವ್ಯವಸ್ಥೆಯ ಅಭಿವೃದ್ಧಿಯನ್ನು ನೋಡುವ ಸಮಯ ಬಂದಿದೆ. ಸಂಪರ್ಕ ರಹಿತ ಯುದ್ಧ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳುವಂತೆ ರಾವತ್ ಕರೆ ನೀಡಿದ್ದಾರೆ.
ಭವಿಷ್ಯದಲ್ಲಿ ಯುದ್ಧ ಸ್ಥಿತಿಗತಿ ನಿಭಾಯಿಸಲು ಸೈಬರ್, ಬಾಹ್ಯಾಕಾಶ ತಂತ್ರಜ್ಞಾನ, ಲೇಸರ್, ಎಲೆಕ್ಟ್ರಾನಿಕ್ ಮತ್ತು ರೋಬೋಟಿಕ್ ತಂತ್ರಜ್ಞಾನದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಬೇಕಿದೆ. ಶಸ್ತ್ರಾಸ್ತ್ರಗಳ ವಿನ್ಯಾಸ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಅಧಿಕಾರಿಗಳು ಕೈಗೊಳ್ಳಬೇಕಿದೆ. ಜಂಟಿ ಯೋಜನೆಗಳಲ್ಲಿ ಯಶಸ್ಸು ಮತ್ತು ವೈಫಲ್ಯಗಳನ್ನೂ ಸಹ ಸಮವಾಗಿ ಹಂಚಿಕೊಳ್ಳಬೇಕಾಗುತ್ತದೆ. ಆಗ ಪರಸ್ಪರರು ಬೊಟ್ಟು ಮಾಡಿ ತೋರಿಸಲಾಗುವುದಿಲ್ಲ ಎಂದರು.
ಅಲ್ಲದೇ ದಿ. ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರನ್ನು ಸ್ಮರಿಸಿದ ರಾವತ್, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಮುದಾಯಕ್ಕೆ ಮಾನದಂಡಗಳನ್ನು ನಿಗದಿಪಡಿಸಲಾಗಿದ್ದು, ವಿಜ್ಞಾನಿಗಳಿಗೆ ಇದು ಒಂದು ಸವಾಲಾಗಿದೆ ಎಂದು ಹೇಳಿದರು.


