ತಾಳೆ ಮರಗಳಿಂದ ಇಳಿಸಿದ ಪಾನೀಯವಾದ ಶೇಂದಿಯನ್ನು ಸೇವನೆ ಮಾಡಿದರೆ ಕ್ಯಾನ್ಸರ್ ಸೇರಿದಂತೆ 15 ವಿವಿಧ ಕಾಯಿಲೆಗಳನ್ನು ಗುಣವಾಗುತ್ತದೆ ಎಂದು ತೆಲಂಗಾಣದ ಅಬಕಾರಿ ಸಚಿವ ವಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.
ಜಂಗಾಂವ್ ಜಿಲ್ಲೆಯ ರಘುನಾಥ್‌ಪಲ್ಲಿ ಬ್ಲಾಕ್‌ನ ಮಂಡಲಗುಡೆಂ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸರ್ವಾಯ್ ಪಾಪಣ್ಣ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವ ತಾಳೆ ಮರಗಳಿಂದ ನೈಸರ್ಗಿಕವಾಗಿ ಹೊರತೆಗೆಯಲಾದ ಶೇಂದಿಯು ಔಷಧೀಯ ಮೌಲ್ಯವನ್ನು ಹೊಂದಿದೆ ಎಂದು ಸಾಬೀತುಪಡಿಸುವ ಅಧ್ಯಯನಗಳಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಐತಿಹಾಸಿಕ ಕುಸಿತಕ್ಕೆ ಸಾಕ್ಷಿಯಾದ ಭಾರತದ ಆರ್ಥಿಕತೆ; ವರ್ಷದ ಮೊದಲ ತ್ರೈಮಾಸಿಕದಲ್ಲೇ ಶೇ.-23.9 ರಷ್ಟು ಕುಸಿತ!
“ಶೇಂದಿ 15 ರೋಗಗಳನ್ನು ಗುಣಪಡಿಸುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಕ್ಯಾನ್ಸರ್ ಸಹ ಗುಣಪಡಿಸಬಹುದು. ಇದನ್ನು ಹಿಂದೆ ಬಡವನ ಮದ್ಯವೆಂದು ಪರಿಗಣಿಸಲಾಗಿತ್ತು, ಆದರೆ ಈಗ ಮರ್ಸಿಡಿಸ್ ಬೆಂಜ್ ಕಾರುಗಳಲ್ಲಿ ಪ್ರಯಾಣಿಸುವ ಜನರು ಕೂಡ ಶೇಂದಿ ಸೇವಿಸಲು ಆಸಕ್ತಿ ತೋರಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ. ತೆಲಂಗಾಣ ಸರ್ಕಾರವು ಶೇಂದಿ ಟ್ಯಾಪಿಂಗ್ ಅನ್ನು ವೃತ್ತಿಯಾಗಿ ಉತ್ತೇಜಿಸುತ್ತಿದೆ ಎಂದು ಅವರು ಹೇಳಿದರು.
ಅಬಕಾರಿ ಸಚಿವ ಶೇಂದಿ ಬಳಕೆ ಉತ್ತೇಜಿಸುತ್ತಿರುವುದು ಇದೇ ಮೊದಲಲ್ಲ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ವೈನ್ ಅಂಗಡಿಗಳು ಮುಚ್ಚಿದ ಹಿನ್ನೆಲೆಯಲ್ಲಿ, ಎಲ್ಲಾ ಜಿಲ್ಲೆಗಳಲ್ಲಿ ಶೇಂದಿ ಟ್ಯಾಪ್ಪರ್‌ಗಳಿಗೆ ಮದ್ಯಕ್ಕೆ ಪರ್ಯಾಯವಾಗಿ ಶೇಂದಿ ಮಾರಾಟ ಮಾಡಲು ಅನುಮತಿ ನೀಡಲಾಗುವುದು ಎಂದು ಮೇ ತಿಂಗಳಲ್ಲಿ ಗೌಡ್ ಘೋಷಿಸಿದ್ದರು.
ಜೂನ್ ತಿಂಗಳಲ್ಲಿ ಸಚಿವರು ಶೇಂದಿಯ ಮತ್ತೊಂದು ರೂಪವಾದ ’ನೀರಾ’ ಎಂಬ ಪಾಮ್-ವೈನ್ ಅನ್ನು ಪರಿಚಯಿಸಿದ್ದರು. ಇದು ತೆಲಂಗಾಣ ಪಾಮ್ ನೀರಾ ಮತ್ತು ಪಾಮ್ ಪ್ರಾಡಕ್ಟ್ಸ್ ರಿಸರ್ಚ್ ಫೌಂಡೇಶನ್ ತಯಾರಿಸಿದ ಅದರ ಉಪ ಉತ್ಪನ್ನಗಳಾಗಿದೆ.
ಇದನ್ನೂ ಓದಿ: ಕೊರೊನಾ ವಿಚಾರದಲ್ಲಿ ತಬ್ಲೀಘಿಗಳನ್ನು ’ಬಲಿಪಶು’ ಮಾಡಲಾಗಿದೆ: ಬಾಂಬೆ ಹೈಕೋರ್ಟ್
“ನೀರಾ ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಲು ಸಹಾಯ ಮಾಡುತ್ತದೆ, ಮಧುಮೇಹವನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಮತ್ತು ಮೂತ್ರನಾಳವನ್ನು ಪರಿಪೂರ್ಣ ಆರೋಗ್ಯದಲ್ಲಿಡಲು ಸಹಾಯ ಮಾಡುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಮಲಬದ್ಧತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀರಾದಲ್ಲಿನ ಪೋಷಕಾಂಶಗಳಾದ ಪೊಟ್ಯಾಸಿಯಮ್ ಮತ್ತು ಕಬ್ಬಿಣವು ಶ್ವಾಸಕೋಶದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ” ಎಂದು ಅವರು ಹೇಳಿದ್ದರು.
ತಲೆನೋವಿಗೆ ಚಿಕಿತ್ಸೆ ನೀಡಲು ಮತ್ತು ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ನೀರಾ ಸಹಕಾರಿಯಾಗಿದೆ ಎಂದು ಹೇಳಿದ ಗೌಡ್, ಹೆಚ್ಚಿನ ನೀರಾ ಉಪ-ಉತ್ಪನ್ನಗಳ ತಯಾರಿಕೆಯನ್ನು ಸರ್ಕಾರ ಪ್ರೋತ್ಸಾಹಿಸುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಕೊರೊನಾ, ನಿರುದ್ಯೋಗದ ಕುರಿತು ಎಚ್ಚರಿಸಿದ್ದೆ, ಮಾಧ್ಯಮಗಳು ಅಣಕಿಸಿದ್ದವು: ರಾಹುಲ್ ಗಾಂಧಿ


