ಮುಂಬರುವ ದಿನಗಳಲ್ಲಿ ಭಾರತವು ತನ್ನ ಯುವಜನರಿಗೆ ಉದ್ಯೋಗ ನೀಡಲು ಸಾಧ್ಯವಾಗುವುದಿಲ್ಲ ಎಂದು ರಾಹುಲ್ ಗಾಂಧಿ ಭವಿಷ್ಯ ನುಡಿದಿದ್ದಾರೆ. ಕೊರೊನಾ, ನಿರುದ್ಯೋಗದ ಕುರಿತು ಎಚ್ಚರಿಸಿದ್ದೆ, ಮಾಧ್ಯಮಗಳು ಅಣಕಿಸಿದ್ದವು ಎಂದು ಅವರು ಹೇಳಿದರು.
ನರೇಂದ್ರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಮುಂದಿನ 6-7 ತಿಂಗಳಲ್ಲಿ ನಿರುದ್ಯೋಗ ಬಿಕ್ಕಟ್ಟು ಮನೆಯ ಬಾಗಿಲಿಗೆ ಬರಲಿದೆ. ಭಾರತವು ಯುವಜನರಿಗೆ ಉದ್ಯೋಗವನ್ನು ಒದಗಿಸಲು ಸಾಧ್ಯವಿಲ್ಲವೆಂಬುದು ಸ್ಪಷ್ಟವಾಗಿದೆ. 70 ವರ್ಷಗಳಲ್ಲಿ ನಮ್ಮ ದೇಶವು ಇಂಥ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ” ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
“ಕೊರೊನಾದಿಂದ ಭಾರೀ ನಷ್ಟವಾಗಲಿದೆ ಎಂದು ನಾನು ದೇಶಕ್ಕೆ ಎಚ್ಚರಿಕೆ ನೀಡಿದಾಗ ಮಾಧ್ಯಮಗಳು ನನ್ನನ್ನು ಗೇಲಿ ಮಾಡಿದ್ದವು. ನೀವು ನನ್ನನ್ನು ನಂಬದಿದ್ದರೆ, ನನ್ನ ಮಾತನ್ನು ಕೇಳಬೇಡಿ. ಇಂದು ನಾನು ಹೇಳುತ್ತಿದ್ದೇನೆ ನಮ್ಮ ದೇಶವು ಯುವಜನರಿಗೆ ಉದ್ಯೋಗಗಳನ್ನು ನೀಡಲು ಸಾಧ್ಯವಿಲ್ಲ. ನೀವು ಇದನ್ನು ಒಪ್ಪದಿದ್ದರೆ ಆರು-ಏಳು ತಿಂಗಳು ಕಾಯಿರಿ” ಎಂದು ಅವರು ಎಚ್ಚರಿಸಿದ್ದಾರೆ.
ಅಸಂಘಟಿತ ವಲಯದಲ್ಲಿ ಉದ್ಯೋಗ ನೀಡುವವರು ಆರ್ಥಿಕ ಬಿಕ್ಕಟ್ಟಿನಿಂದ ಮುಗ್ಗರಿಸಿರುವುದೇ ಇದಕ್ಕೆ ಕಾರಣ ಎಂದು ಅವರು ವಿವರಿಸಿದರು. “90% ಉದ್ಯೋಗವು ಅಸಂಘಟಿತ ವಲಯದಲ್ಲಿದೆ. ಪಿಎಂ ಮೋದಿ ಈ ವ್ಯವಸ್ಥೆಯನ್ನು ನಾಶಪಡಿಸಿದ್ದಾರೆ. ಕಂಪನಿಗಳು ಒಂದರ ನಂತರ ಒಂದರಂತೆ ಮುಚ್ಚುತ್ತಿರುವುದನ್ನು ನೀವು ನೋಡುತ್ತಿದ್ದೀರಿ. ಮೊರೊಟೋರಿಯಂ ಅವಧಿಯ ನಂತರ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ) ನಾಶವಾಗುತ್ತವೆ ಎಂದು ಹೇಳಿದರು.
COVID-19 ವಿರುದ್ಧದ ದೇಶದ ಹೋರಾಟದ ನಡುವೆ ಕಂಪನಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಾಣಿಜ್ಯ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಉದ್ಯಮಗಳಿಗೆ ಸಾಲ ಮರುಪಾವತಿಯನ್ನು 6 ತಿಂಗಳವರೆಗೆ ನಿಷೇಧಿಸಿತ್ತು. ಆದರೆ, ಈ ನಿಷೇಧದಿಂದ ಉದ್ಯಮಗಳಿಗೆ ಯಾವುದೇ ಉಪಯೋಗವಿಲ್ಲ. ಇಂತಹ ಸಂದರ್ಭದಲ್ಲಿ ಬಡ್ಡಿ ಸಾಲ ನೀಡುವುದು ಸರ್ಕಾರದ ಕೆಲಸವಲ್ಲ ಎಂದಿದ್ದಾರೆ.
ವೈರಸ್ ಹರಡುವಿಕೆಯನ್ನು ನಿಧಾನಗೊಳಿಸಲು ವಿಸ್ತೃತ ಲಾಕ್‌ಡೌನ್‌ನಿಂದ ಅನೇಕ ವ್ಯವಹಾರಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಕಳೆದ ನಾಲ್ಕು ತಿಂಗಳಲ್ಲಿ ಸುಮಾರು ಎರಡು ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ನಿರುದ್ಯೋಗದ ಬಗ್ಗೆ ಸತ್ಯವನ್ನು ದೇಶದಿಂದ ಮರೆಮಾಡಲು ಸಾಧ್ಯವಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.
2 ಕೋಟಿ ಕುಟುಂಬಗಳ ಭವಿಷ್ಯವು ಕತ್ತಲೆಯಲ್ಲಿದೆ. ಫೇಸ್‌ಬುಕ್‌ನಲ್ಲಿ ನಕಲಿ ಸುದ್ದಿ ಮತ್ತು ದ್ವೇಷವನ್ನು ಹರಡುವ ಮೂಲಕ ನಿರುದ್ಯೋಗ ಮತ್ತು ಆರ್ಥಿಕತೆಯ ವಿನಾಶದ ಬಗ್ಗೆ ಸತ್ಯವನ್ನು ದೇಶದಿಂದ ಮರೆಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕೆಲವು ಬಿಜೆಪಿ ನಾಯಕರ ಪೋಸ್ಟ್‌ಗಳಿಗೆ ದ್ವೇಷ ಭಾಷಣ ನಿಯಮಗಳನ್ನು ಅನ್ವಯಿಸುವುದನ್ನು ಹಿರಿಯ ಫೇಸ್‌ಬುಕ್ ಅಧಿಕಾರಿಗಳು ವಿರೋಧಿಸಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ (ಡಬ್ಲ್ಯುಎಸ್‌ಜೆ) ವರದಿಯನ್ನು ಅವರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದ ನಿರುದ್ಯೋಗ ದರ, ದೇಶದ ಒಟ್ಟು ನಿರುದ್ಯೋಗ ದರಕ್ಕಿಂತ ಉತ್ತಮ: ಮಮತಾ ಬ್ಯಾನರ್ಜಿ