ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅಸಹಜ ಸಾವಿನ ತನಿಖೆ ಜೊತೆಗೆ ಡ್ರಗ್ಸ್ ಕೇಸ್ ಕೂಡ ಸೇರಿಕೊಂಡಿದ್ದು, ಈ ಸಂಬಂಧ ನಟಿ ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್‌ರನ್ನು ಈ ವಾರ ವಿಚಾರಣೆಗೆ ಕರೆಯಬಹುದು ಎಂದು ಎನ್‌ಸಿಬಿ ಮೂಲಗಳು ತಿಳಿಸಿವೆ. ತನ್ನ ಗೆಳೆಯ ಸುಶಾಂತ್ ಸಿಂಗ್ ರಜಪೂತ್‌ಗೆ ಡ್ರಗ್ಸ್ ಒದಗಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ನಟಿ ರಿಯಾ ಚಕ್ರವರ್ತಿಯನ್ನು ಪ್ರಶ್ನಿಸುವಾಗ ಅವರ ಇವರ ಹೆಸರುಗಳು ಕೇಳಿಬಂದಿವೆ ಎಂದು ವರದಿಯಾಗಿದೆ.
ನಟಿ ರಿಯಾ ಚಕ್ರವರ್ತಿಯ ಮೊಬೈಲ್ ಫೋನ್‌ನಿಂದ ಮರುಪಡೆಯಲಾದ ವಾಟ್ಸಾಪ್ ಸಂದೇಶದ ಆಧಾರದ ಮೇಲೆ ಫೆಡರಲ್ ಏಜೆನ್ಸಿ ಮೊದಲ ಪ್ರಕರಣ ನೋಂದಾಯಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವಾರದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಈ ನಟಿಯರಿಗೆ ಸಮನ್ಸ್ ನೀಡಬಹುದು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಬಿಹಾರ ಚುನಾವಣೆವರೆಗೂ ಮುಂದುವರೆಯಲಿದೆ ಸುಶಾಂತ್ ಸಿಂಗ್- ಕಂಗನಾ ವಿವಾದಗಳು
ಇನ್ನು 59 ಗ್ರಾಂ ಗಾಂಜಾ ವಶಪಡಿಸಿಕೊಂಡ ಆಧಾರದ ಮೇಲೆ ಏಜೆನ್ಸಿ ಎರಡನೇ ಪ್ರಕರಣವನ್ನು ದಾಖಲಿಸಿದೆ. ಇದರಲ್ಲಿ ರಿಯಾ ಚಕ್ರವರ್ತಿ ಸೇರಿದಂತೆ 15ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ರಿಯಾ ಚಕ್ರವರ್ತಿಯಲ್ಲದೆ, ಈ ತಿಂಗಳ ಆರಂಭದಲ್ಲಿ ಆಕೆಯ ಸಹೋದರ ಶೋಯಿಕ್ ಚಕ್ರವರ್ತಿ, ಸುಶಾಂತ್ ಸಿಂಗ್ ರಜಪೂತ್ ಅವರ ಇಬ್ಬರು ಉದ್ಯೋಗಿಗಳು ಮತ್ತು ಬಾಲಿವುಡ್ ಜೊತೆ ಸಂಬಂಧ ಹೊಂದಿರುವ ಡ್ರಗ್ಸ್ ಮಾರಾಟಗಾರರನ್ನು ಬಂಧಿಸಲಾಗಿದೆ. ರಿಯಾ ಚಕ್ರವರ್ತಿಗೆ ಸೆ.22ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಅವರನ್ನು ಬೈಕುಲಾ ಜೈಲಿನಲ್ಲಿ ಇರಿಸಲಾಗಿದೆ.
“ರಿಯಾ ಚಕ್ರವರ್ತಿಯ ಮೊಬೈಲ್‌ನಿಂದ ಮರುಪಡೆಯಲಾದ ವಾಟ್ಸಾಪ್ ಸಂದೇಶಗಳ ಆಧಾರದ ಮೇಲೆ ನೋಂದಾಯಿಸಲಾದ ಮೊದಲ ಪ್ರಕರಣದ ಪ್ರಾಥಮಿಕ ತನಿಖೆಯ ಸಮಯದಲ್ಲಿ, ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್ ಸೇರಿದಂತೆ ಇತರ ಕೆಲವು ನಟರ ಹೆಸರುಗಳು ಬಂದಿವೆ. ಇಬ್ಬರೂ ಈ ವಾರ ತನಿಖೆಗೆ ಬರಲು ಶೀಘ್ರದಲ್ಲೇ ಸಮನ್ಸ್ ನೀಡಲಾಗುವುದು ಎಂದು ತನಿಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಸುಶಾಂತ್ ಸಿಂಗ್ ಪ್ರಕರಣ: ಕೇಂದ್ರಕ್ಕೆ ಬಾಂಬೆ ಹೈಕೋರ್ಟ್ ನೋಟಿಸ್
ನಟಿ ಶ್ರದ್ಧಾ ಕಪೂರ್, ಸುಶಾಂತ್ ಸಿಂಗ್ ರಜಪೂತ್ ಅವರ ಲೋನಾವ್ಲಾ ಫಾರ್ಮ್ ಹೌಸ್‌ನಲ್ಲಿ ನಡೆದ ಚಿಚ್ಚೋರೆ ಚಿತ್ರದ ಯಶಸ್ಸಿನ ಪಾಟಿಯಲ್ಲಿ ಭಾಗವಹಿಸಿದ್ದರು. ಪ್ರಕರಣದಲ್ಲಿ ನಟಿ ರಾಕುಲ್ ಪ್ರೀತ್ ಹೆಸರು ಕೂಡ ಕೇಳಿಬಂದಿತ್ತು.

34 ವರ್ಷದ ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ 14 ರಂದು ಮುಂಬೈನ ತನ್ನ ಅಪಾರ್ಟ್ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮತ್ತು ಜಾರಿ ನಿರ್ದೇಶನಾಲಯಗಳು ನಡೆಸುತ್ತಿವೆ. ಅಸಹಜ ಸಾವು ಪ್ರಕರಣಕ್ಕೆ ಡ್ರಗ್ಸ್ ಕೇಸ್ ಕೂಡ ಸೇರ್ಪಡೆಯಾಗಿದೆ.


