ಡ್ರಗ್ಸ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಆದಿತ್ಯ ಆಳ್ವ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ. ಮಾಜಿ ಸಚಿವ ಜೀವರಾಜ್ ಆಳ್ವ ಅವರ ಪುತ್ರನಾಗಿರುವ ಆದಿತ್ಯ ಆಳ್ವ, ಡ್ರಗ್ಸ್ ಪ್ರಕರಣದಲ್ಲಿ ತನ್ನ ಹೆಸರು ಕೇಳಿಬರುತ್ತಲೇ ತಲೆಮರೆಸಿಕೊಂಡಿದ್ದ. ಈಗ ಆದಿತ್ಯನನ್ನು ಸೋಮವಾರ ರಾತ್ರಿ ಚೆನ್ನೈನಲ್ಲಿ ಬಂಧಿಸಲಾಗಿದೆ.
“ಡ್ರಗ್ಸ್ ಮಾಫಿಯಾಲ್ಲಿ ಹಲವರ ಹೆಸರು ಕೇಳಿಬಂದಿತ್ತು. ರಾಜ್ಯದ ಸೆಲೆಬ್ರಿಟಿಗಳಿಗೆ ಡ್ರಗ್ಸ್ ಪೂರೈಕೆಯಲ್ಲಿ ಆದಿತ್ಯ ಆಳ್ವ ಪ್ರಮುಖ ಪಾತ್ರ ವಹಿಸಿದ್ದರು. ಅಂದಿನಿಂದ ನಾಪತ್ತೆಯಾಗಿದ್ದ ಆದಿತ್ಯ ಆಳ್ವ ಪತ್ತೆಗೆ ಪೊಲೀಸರು ವಿವಿಧ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದರು” ಎಂದು ಬೆಂಗಳೂರು ಕ್ರೈಮ್ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ: ’ರಾಗಿಣಿ ಬಿಜೆಪಿ ಸದಸ್ಯರಲ್ಲ; ಅವರ ಕಾರ್ಯಚಟುವಟಿಕೆಗಳಿಗೆ ಪಕ್ಷ ಹೊಣೆಯಾಗದು: ಬಿಜೆಪಿ
ಈ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಸಹಿತ ಹಲವರನ್ನು ಬೆಂಗಳೂರು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಈ ಸಂದರ್ಭದಲ್ಲಿ ಆದಿತ್ಯ ಹೆಸರು ಕೇಳಿಬಂದಿದ್ದು, ಪೊಲೀಸರು ಕಾರ್ಯಪ್ರವೃತ್ತರಾಗುತ್ತಲೇ ಅವರು ತಪ್ಪಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಬಂಧನವಾಗಿದ್ದ ಸಂಜನಾಗೆ ಕೋರ್ಟ್ ಜಾಮೀನು ನೀಡಿದೆ.
ಆದಿತ್ಯ ಆಳ್ವನ ಸಂಬಂಧಿ ಬಾಲಿವುಡ್ ನಟ ವಿವೇಕ್ ಓಬರಾಯ್ ಮನೆಯನ್ನೂ ಪೊಲೀಸರು ಶೋಧಿಸಿದ್ದರು.
“ಡ್ರಗ್ ಪೆಡ್ಲರ್ ಆದಿತ್ಯ ಆಳ್ವ ಪರಾರಿಯಾಗಿದ್ದು, ವಿವೇಕ್ ಒಬೆರಾಯ್ ಅವರ ಮನೆಯಲ್ಲಿ ಆದಿತ್ಯ ಆಳ್ವ ಇರುವುದಾಗಿ ನಮಗೆ ಮಾಹಿತಿ ಸಿಕ್ಕಿತು. ಆದ್ದರಿಂದ ನಾವು ಪರಿಶೀಲಿಸಬೇಕಾಗಿತ್ತು. ಇದಕ್ಕಾಗಿ ನ್ಯಾಯಾಲಯದ ವಾರಂಟ್ ಪಡೆಯಲಾಗಿದೆ. ಹಾಗಾಗಿ ಅಪರಾಧ ವಿಭಾಗದ ತಂಡವು ಮುಂಬೈನಲ್ಲಿರುವ ಅವರ ಮನೆಗೆ ಹೋಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು.
ಇದನ್ನೂ ಓದಿ: ಉತ್ತರ ಪ್ರದೇಶ: ’ಪರೀಕ್ಷೆ ಇಲ್ಲ-ಕರೋನಾ ಇಲ್ಲ’ ಎಂದ ನಿವೃತ್ತ ಐಎಎಸ್ ಅಧಿಕಾರಿಯ ಮೇಲೆ ಎಫ್‌ಐಆರ್


