ಚುನಾವಣೆಯಲ್ಲಿ ಸೋತ ದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರಂತೆಯೆ ಭಾರತೀಯ ಜನತಾ ಪಕ್ಷವೂ ವರ್ತಿಸುತ್ತದೆ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
“ನೀವು ಅವರನ್ನು ನೋಡಲಿಲ್ಲವೇ? ಸೋತರೂ ತಾನು ಗೆದ್ದಿದ್ದೇನೆ ಎಂದು ಟ್ರಂಪ್ ಹೇಳುತ್ತಲೇ ಇದ್ದಾರೆ. ಯಾವಾಗ ಬಿಜೆಪಿ ಸೋಲುತ್ತದೆಯೋ ಅಂದು ’ನಾವು ಗೆದ್ದಿದ್ದೇವೆ, ನಾವು ಗೆದ್ದಿದ್ದೇವೆ’ ಎಂದು ಹೇಳುತ್ತದೆ, ಇದರಲ್ಲಿ ಯಾವುದೇ ವ್ಯತ್ಯಾಸವಿಲ್ಲ” ಎಂದು ನಾಡಿಯಾ ಜಿಲ್ಲೆಯಲ್ಲಿ ನಡೆದ ರ್‍ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಅಧ್ಯಕ್ಷರಾಗಿ ಚುನಾಯಿತರಾದ ಜೋ ಬಿಡೆನ್ ವಿಜಯವನ್ನು ಅಮೆರಿಕ ಸಂಸತ್ತು ಪ್ರಮಾಣೀಕರಿಸುವ ಕಾರ್ಯಕ್ರಮದಂದು ಡೊನಾಲ್ಡ್ ಟ್ರಂಪ್ ಬೆಂಬಲಿಗರು ಸಂಸತ್‌ನ ಭದ್ರತೆಯನ್ನು ಉಲ್ಲಂಘಿಸಿ ಗಲಭೆ ನಡೆಸಿದರು. ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಇದನ್ನೂ ಓದಿ: IPS ಅಧಿಕಾರಿಗಳ ವರ್ಗಾವಣೆ: ಮಮತಾ ಬ್ಯಾನರ್ಜಿ ಬೆನ್ನಿಗೆ ನಿಂತ ಕೇಜ್ರೀವಾಲ್
ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ದ ದಾಳಿ ಮಾಡಿದ ಮಮತಾ, “ಹರಿಯಾಣದಲ್ಲಿ ರೈತರು ಪ್ರತಿಭಟಿಸಿದಾಗ ನೀವು ಎಲ್ಲಿದ್ದೀರಿ? ಅವರು ಕಳೆದ ಒಂದು ತಿಂಗಳಿನಿಂದ ಬಿಸಿಲು ಮತ್ತು ಮಳೆಯೆನ್ನದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲವರು ಚಳಿಯಲ್ಲಿ ಮೃತಪಟ್ಟಿದ್ದಾರೆ, ಆದರೆ ನಿಮಗೆ ನ್ಯಾಯ ಕೊಡಲಾಗಿಲ್ಲ” ಎಂದು ಕಿಡಿಕಾರಿದರು.
“ಜೀವನ ಅಷ್ಟು ಸುಲಭವಲ್ಲ ನನ್ನ ಸಹೋದರ. ನೀವು ಯಶಸ್ಸನ್ನು ಸಾಧಿಸಲು ಬಯಸಿದರೆ ಬೀದಿಗಿಳಿಯಬೇಕಾಗುತ್ತದೆ. ಆದರೆ ನಿಮ್ಮ ಬಟ್ಟೆಗಳ ಮೇಲೆ ಒಂದು ಕಳೆಯು ಇಲ್ಲ” ಎಂದು ಅವರು ಬಿಜೆಪಿ ನಾಯಕರನ್ನು ಹಂಗಿಸಿದರು.
ಬಿಜೆಪಿಯನ್ನು ಜಂಕ್ ಪಾರ್ಟಿ ಎಂದು ಕರೆದ ಅವರು, “ಬಿಜೆಪಿ ನನ್ನ ಬಗ್ಗೆ ಭಯಭೀತವಾಗಿದೆ, ಯಾಕೆಂದರೆ ನನ್ನನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಅವರಿಗೆ ಚೆನ್ನಾಗಿ ತಿಳಿದಿದೆ. ನಾನು ಹೋರಾಟದಲ್ಲಿ ಮುಂದೆಯೆ ನಿಲ್ಲುತ್ತೇನೆ, ಅವರಿಗೆ ಬಂಗಾಳವನ್ನು ಮಾರಾಟ ಮಾಡಲು ಬಿಡುವುದಿಲ್ಲ” ಎಂದು ಹೇಳಿದರು.
ಇದನ್ನೂ ಓದಿ:ಜಾತ್ಯತೀತತೆಯ ಮೇಲೆ ದ್ವೇಷ ರಾಜಕೀಯ ಸವಾರಿ ಮಾಡಲು ಠಾಗೋರರ ನೆಲ ಬಿಡುವುದಿಲ್ಲ: ಮಮತಾ ಬ್ಯಾನರ್ಜಿ
