ನೋಂದಣಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಥವಾ ಶಾಸನಬದ್ಧ ಬಾಧ್ಯತೆಗಳನ್ನು ಪೂರೈಸದ ಕಾರಣಕ್ಕಾಗಿ ಚುನಾವಣಾ ಆಯೋಗವು ಶನಿವಾರ (ಆ.9) 334 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳನ್ನು (ಆರ್‌ಯುಪಿಪಿ) ಪಟ್ಟಿಯಿಂದ ತೆಗೆದುಹಾಕಿದೆ.
ತನ್ನ ಕ್ರಮ ‘ರಾಜಕೀಯ ಕ್ಷೇತ್ರವನ್ನು ಶುದ್ಧೀಕರಿಸುವ ಸಮಗ್ರ ಮತ್ತು ನಿರಂತರ ಕಾರ್ಯತಂತ್ರದ ಒಂದು ಭಾಗ ಎಂದು ಚುನಾವಣಾ ಆಯೋಗ ಹೇಳಿಕೊಂಡಿದೆ. ಇತ್ತೀಚಿನ ಶುದ್ದೀಕರಣದ ಬಳಿಕ ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ ಸಂಖ್ಯೆ 2,854 ರಿಂದ 2,520ಕ್ಕೆ ಇಳಿದಿದೆ ಎಂದು ವರದಿಗಳು ಹೇಳಿವೆ.
ಪಟ್ಟಿಯಿಂದ ತೆಗೆದುಹಾಕಲಾದ ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳಿಗೆ ಇನ್ನು ಮುಂದೆ ಜನತಾ ಪ್ರಾತಿನಿಧ್ಯ ಕಾಯ್ದೆ, 1951ರ ಸೆಕ್ಷನ್ 29B ಮತ್ತು ಸೆಕ್ಷನ್ 29C,ಆದಾಯ ತೆರಿಗೆ ಕಾಯ್ದೆ, 1961ರ ಸಂಬಂಧಿತ ನಿಬಂಧನೆಗಳು ಮತ್ತು ಚುನಾವಣಾ ಚಿಹ್ನೆಗಳು (ಮೀಸಲಾತಿ ಮತ್ತು ಹಂಚಿಕೆ) ಆದೇಶ, 1968ರ ಅಡಿಯಲ್ಲಿ ಆದಾಯ ತೆರಿಗೆ ರಿಯಾಯಿತಿಗಳು ದೊರೆಯುವುದಿಲ್ಲ.
ಮಾರ್ಗಸೂಚಿಗಳ ಪ್ರಕಾರ, ಒಂದು ಪಕ್ಷವು ಆರು ವರ್ಷಗಳ ಕಾಲ ನಿರಂತರವಾಗಿ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೆ, ಅದನ್ನು ನೋಂದಾಯಿತ ಪಕ್ಷಗಳ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ.
ಚುನಾವಣಾ ಆಯೋಗ ತನ್ನ ಮಾರ್ಗಸೂಚಿಗಳು ಮತ್ತು ಜನ ಪ್ರತಿನಿಧಿಗಳ ಕಾಯ್ದೆಯಡಿಯಲ್ಲಿ ಸೂಚಿಸಲಾದ ಮೇಲಿನ ಷರತ್ತುಗಳ ಅನುಸರಣೆಗೆ ಸಂಬಂಧಿಸಿದಂತೆ 345 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ ಪರಿಶೀಲನಾ ವಿಚಾರಣೆಗಳನ್ನು ನಡೆಸುವಂತೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ (ಸಿಇಒ) ನಿರ್ದೇಶನ ನೀಡಿತ್ತು.
ಸಿಇಒಗಳ ವರದಿಗಳ ಆಧಾರದ ಮೇಲೆ, 345 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ ಪೈಕಿ 334 ಪಕ್ಷಗಳು ಮೇಲಿನ ಷರತ್ತುಗಳನ್ನು ಪಾಲಿಸುತ್ತಿಲ್ಲ ಎಂದು ಕಂಡುಬಂದಿದೆ. ಉಳಿದ ಪ್ರಕರಣಗಳನ್ನು ಮರುಪರಿಶೀಲನೆಗಾಗಿ ಸಿಇಒಗಳಿಗೆ ಹಿಂತಿರುಗಿಸಲಾಗಿದೆ” ಎಂದು ಚುನಾವಣಾ ಆಯೋಗ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎನ್ನುವ ಷರತ್ತನ್ನು ಪಟ್ಟಿಯಿಂದ ಕೈಬಿಟ್ಟ ಪಕ್ಷಗಳು ಪಾಲಿಸಿಲ್ಲ. 2019ರಿಂದ ಇದುವರೆಗಿನ ಆರು ವರ್ಷಗಳ ಅವಧಿಯಲ್ಲಿ ಈ ಪಕ್ಷಗಳು ಒಂದೇ ಒಂದು ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಮತ್ತು ನೋಂದಾಯಿಸಿಕೊಂಡಿರುವ ವಿಳಾಸದಲ್ಲಿಯೂ ಈ ಪಕ್ಷಗಳ ಕಚೇರಿಯೂ ಪತ್ತೆಯಾಗಿಲ್ಲ ಎಂದು ಆಯೋಗ ಹೇಳಿದೆ.
ಉತ್ತರ ಪ್ರದೇಶದಲ್ಲಿನ 115 ಪಕ್ಷಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ದೆಹಲಿ 27, ತಮಿಳುನಾಡು 22, ಹರಿಯಾಣ 21, ಮಧ್ಯಪ್ರದೇಶ 15, ತೆಲಂಗಾಣ 13 ಹಾಗೂ ಗುಜರಾತ್‌ನ 11 ಪಕ್ಷಗಳನ್ನು ಆಯೋಗವು ಪಟ್ಟಿಯಿಂದ ಕೈಬಿಟ್ಟಿದೆ ಎಂದು ವರದಿಯಾಗಿದೆ.
ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಬಿಹಾರದಲ್ಲೂ ಭಾರತೀಯ ಹಿಂದುಳಿದ ಪಕ್ಷ, ಬಿಹಾರ ಜನತಾ ಪಕ್ಷ ಮತ್ತು ಗಾಂಧಿ ಪ್ರಕಾಶ್ ಪಕ್ಷ ಸೇರಿದಂತೆ 17 ಪಕ್ಷಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ.
2022ರಲ್ಲಿ ನಡೆದ ಪರಿಷ್ಕರಣೆಯಲ್ಲಿ 537 ಪಕ್ಷಗಳ ಪೈಕಿ 284 ಪಕ್ಷಗಳನ್ನು ಪಟ್ಟಿಯಿಂದ ಕೈಬಿಡಲಾಗಿತ್ತು.
ಪಟ್ಟಿಯಿಂದ ಕೈಬಿಟ್ಟ ಪಕ್ಷಗಳ ಪೈಕಿ ಕರ್ನಾಟಕದ 12 ಪಕ್ಷಗಳಿವೆ ಎಂದು ವರದಿಯಾಗಿದೆ.
ಅಂಬೇಡ್ಕರ್ ಜನತಾ ಪಕ್ಷ, ಭಾರತೀಯ ಪ್ರಜಾ ಪಕ್ಷ, ಜನ ಸ್ವರಾಜ್ಯ ಪಕ್ಷ,ಕಲ್ಯಾಣ ಕ್ರಾಂತಿ ಪಕ್ಷ,
ಕರ್ನಾಟಕ ಪ್ರಜಾ ವಿಕಾಸ್ ಪಕ್ಷ, ಕರ್ನಾಟಕ ಸ್ವರಾಜ್ಯ ಪಕ್ಷ, ಮಹಿಳಾ ಪ್ರಧಾನ ಪಕ್ಷ, ನಮ್ಮ ಕಾಂಗ್ರೆಸ್
ಪ್ರಜಾ ರೈತ ರಾಜ್ಯ ಪಕ್ಷ, ರಕ್ಷಕ ಸೇನಾ ಸಮನ್ಯಾ ಜನತಾ ಪಕ್ಷ (ಲೋಕ ತಾಂತ್ರಿಕ್) ಮತ್ತು ವಿಚಾರ ಜಾಗೃತಿ ಕಾಂಗ್ರೆಸ್ ಪಕ್ಷ ಪಟ್ಟಿಯಿಂದ ಕೈಬಿಟ್ಟ ಕರ್ನಾಟಕದ ಪಕ್ಷಗಳು ಎಂದು ತಿಳಿದು ಬಂದಿದೆ.
ಉತ್ತರಾಖಂಡ ಮೇಘಸ್ಫೋಟಕ್ಕೆ ಧಾರ್ಮಿಕ ಅಸಹಿಷ್ಣುತೆಯೇ ಕಾರಣ?: ಮಾಜಿ ಸಂಸದ ಹಸನ್ ಹೇಳಿಕೆಗೆ ಭಾರಿ ವಿವಾದ


