HomeUncategorizedಈಕ್ವೆಡಾರ್‌ ದೇಶದ ಮಹಿಳೆಯರಿಗೆ ಅವರ ಗರ್ಭಕೋಶದ ಮೇಲೆ ಹಕ್ಕಿಲ್ಲ

ಈಕ್ವೆಡಾರ್‌ ದೇಶದ ಮಹಿಳೆಯರಿಗೆ ಅವರ ಗರ್ಭಕೋಶದ ಮೇಲೆ ಹಕ್ಕಿಲ್ಲ

- Advertisement -
- Advertisement -

ತಾಯ್ತನ ಎನ್ನುವುದು ಹೆಣ್ಣಿನ ಹೊಣೆಯೂ ಹೌದು, ಅದರ ಆಯ್ಕೆ ಅವಳ ಹಕ್ಕೂ ಹೌದು. ಆದರೆ `ಅದು ಅವಳ ಹೊಣೆ ಮಾತ್ರ’ ಎಂದು ಜಗತ್ತಿನ ಅನೇಕ ದೇಶಗಳು ಕಟ್ಟುನಿಟ್ಟು ಮಾಡಿವೆ. ಹೆಣ್ಣಿನ ಸಮ್ಮತಿ ಇಲ್ಲದೆ ಸಂಭೋಗ ನಡೆದಿರಬಹುದು, ಅತ್ಯಾಚಾರ ಆಗಿರಬಹುದು, ಬಲಾತ್ಕಾರ ನಡೆದಿರಬಹುದು- ಗಂಡಸು ಏನಾದರೂ ಮಾಡಿರಲಿ, ಅದರಿಂದ ಅವಳು ಬಸಿರಾದರೆ ಒಂಬತ್ತು ತಿಂಗಳು ಹೊತ್ತು ಮಗುವನ್ನು ಹೆರಲೇಬೇಕೇ ಹೊರತು, ಗರ್ಭಪಾತ ಮಾಡಿಸಲು ಅವಳಿಗೆ ಹಕ್ಕಿಲ್ಲ ಎಂದು ಆ ದೇಶಗಳ ಕಾನೂನುಗಳು ಹೇಳುತ್ತವೆ. ಕೆಲವೇ ದಿನಗಳ ಹಿಂದೆ, ಈಕ್ವೆಡಾರ್ ದೇಶ ಇದನ್ನು ಮತ್ತೊಮ್ಮೆ ಗಟ್ಟಿಗೊಳಿಸಿತು. ಅತ್ಯಾಚಾರದಿಂದ ಆಗುವ ಬಸಿರನ್ನು ತೆಗೆಸಿಕೊಳ್ಳಲು ಅನುಮತಿ ನೀಡುವ ತಿದ್ದುಪಡಿ ಪ್ರಸ್ತಾವನೆ ಅಲ್ಲಿನ ಸಂಸತ್ತಿನಲ್ಲಿ ಕೇವಲ ಐದು ಮತಗಳಿಂದ ಸೋಲು ಕಂಡಿತು.

ಈಕ್ವೆಡಾರ್ ದೇಶದಲ್ಲಿ 1938 ರಿಂದ ಜಾರಿಯಲ್ಲಿರುವ ಅತ್ಯಂತ ಹಳೆಯ ಕೊಳೆತ ಕಾನೂನಿನ ಪ್ರಕಾರ, ಮಾನಸಿಕ ಅಸ್ವಾಸ್ಥ್ಯ ಇರುವ ಹೆಣ್ಣಿನ ಮೇಲೆ ಅತ್ಯಾಚಾರ ನಡೆದು ಬಸಿರಾದರೆ ಮಾತ್ರ ಗರ್ಭ ತೆಗೆಸಲು ಅವಕಾಶವಿದೆ. ಇದು ಬಿಟ್ಟರೆ ಗರ್ಭದಿಂದ ಹೆಣ್ಣಿನ ಜೀವಕ್ಕೇ ತೊಂದರೆ ಇದ್ದರೆ ಮಾತ್ರ ಗರ್ಭಪಾತ ಮಾಡಿಸಬಹುದು. ಇವೆರಡು ಬಿಟ್ಟರೆ ಇನ್ನಾವ ಕಾರಣಕ್ಕೂ ಗರ್ಭಪಾತ ಮಾಡಿಸಲು ಅವಕಾಶವಿಲ್ಲ. ಏನಾದರೂ ಗರ್ಭ ತೆಗೆಸಿದರೆ, ಅದನ್ನು ಅಪರಾಧ ಎಂದು ಪರಿಗಣಿಸಿ ಸೆರೆಮನೆಗೆ ದೂಡಲಾಗುತ್ತದೆ. ಅಂದರೆ ಹೆಣ್ಣಿನ ಗರ್ಭಕೋಶ, ತಾಯ್ತನದ ಆಯ್ಕೆ ಯಾವುವೂ ಅವಳಿಗೆ ಸೇರಿಲ್ಲ, ಎಲ್ಲವೂ ಪುರುಷಾಧಿಪತ್ಯ, ಅದು ರೂಪಿಸುವ ಕಾನೂನು, ಮತ್ತು ಧರ್ಮವನ್ನು ಹೊದ್ದುಕೊಂಡ ಪುರುಷ ಅಹಂಕಾರದ ಹಿಡಿತದಲ್ಲಿ ಇವೆ. ಹೆಣ್ಣನ್ನು ಬಸಿರು ಮಾಡುವುದೂ ಅದನ್ನು ಉಳಿಸುವುದೂ ಗಂಡಸಿನ ಧರ್ಮ ಎಂದು ಧರ್ಮದ ಹೆಸರಿನಲ್ಲೂ ಹೇಳಲಾಗಿದೆ. ಕೆಥೊಲಿಕ್ ಕ್ರೈಸ್ತ ಧರ್ಮದ ಪ್ರಾಬಲ್ಯ ಇರುವ ಈಕ್ವೆಡಾರ್ ಇದನ್ನೇ ಎತ್ತಿ ಹಿಡಿದಿದೆ.

ಇದನ್ನು ಓದಿ: ಸಂಪಾದಕೀಯ | ಕೊಲೆ, ಅತ್ಯಾಚಾರದ ಬೆದರಿಕೆಗಳಿಗೆ ರಾಜಾಶ್ರಯವಿದ್ದಾಗ…?

ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ಎಗ್ಗುಸಿಗ್ಗಿಲ್ಲದೆ ಸಾಂಕ್ರಾಮಿಕ ರೋಗದಂತೆ ಅತ್ಯಾಚಾರ ನಡೆಯುತ್ತಿದೆ, ತೀರಾ ಕಿರಿಯ ವಯಸ್ಸಿನ ಹುಡುಗಿಯರು ಬಸುರಿಯರಾಗುತ್ತಿದ್ದಾರೆ, ಪ್ರತಿದಿನ ಕನಿಷ್ಠ ಹನ್ನೊಂದು ಅತ್ಯಾಚಾರಗಳಾದರೂ ವರದಿಯಾಗುತ್ತವೆ. ಲೈಂಗಿಕ ಸಂಪರ್ಕಕ್ಕೆ ಸಮ್ಮತಿ ನೀಡಲು ಹದಿನಾಲ್ಕು ವರ್ಷ ಆಗಿರಬೇಕು ಎಂಬ ನಿಯಮ ಆ ದೇಶದಲ್ಲಿದೆ, ಆದರೆ ಪ್ರತಿದಿನ ಆ ವಯಸ್ಸಿಗಿಂತ ಚಿಕ್ಕವರಾದ ಏಳು ಹುಡುಗಿಯರು ಮಗುವಿಗೆ ಜನ್ಮ ನೀಡುತ್ತಾರೆ. 15 ರಿಂದ 19 ವಯಸ್ಸಿನೊಳಗೆ ಮಗು ಹೆರುವ ಹುಡುಗಿಯರಲ್ಲಿ ಬಹುಪಾಲು ಅತ್ಯಾಚಾರದ ಬಲಿಪಶುಗಳೇ ಆಗಿರುತ್ತಾರೆ. ಇಂಥ ಹೀನ ಕೃತ್ಯದಿಂದ ಬೇಡದ ಬಸಿರು ಹೊರುವ ಹೆಣ್ಣು ಮಕ್ಕಳಿಗೆ ಗರ್ಭಪಾತದ ಹಕ್ಕು ನೀಡಬೇಕು ಎಂಬ ಆಂದೋಲನವೇ ಶುರುವಾಗಿ, ತಿದ್ದುಪಡಿಗೆ ಒತ್ತಾಯಿಸಲಾಗಿತ್ತು.

ಆದರೆ ಈ ತಿದ್ದುಪಡಿ ಪ್ರಸ್ತಾವನೆಗೆ ಉಗ್ರ ವಿರೋಧವೂ ಇತ್ತು. ಇದು ಧರ್ಮದ್ರೋಹ, ದೇವರು ಕೊಟ್ಟ ಜೀವವನ್ನು ಹೊಸಕಿಹಾಕಬಾರದು, ಆ ಕಾರಣ ಗರ್ಭಪಾತಕ್ಕೆ ಮುಕ್ತ ಅವಕಾಶ ಕೊಡಬಾರದು ಎಂದು ಅದರ ವಿರೋಧಿಗಳು ಆಗ್ರಹಿಸಿದ್ದರು. ಇದಕ್ಕೆ ಅವಕಾಶ ಕೊಡಬೇಡಿ ಎಂದು ಕ್ಯಾಥೊಲಿಕ್ ಚರ್ಚಿನ ಆರ್ಚ್‍ಬಿಷಪ್ ಬೇರೆ ಕರೆನೀಡಿದ್ದರು. ಹೆಣ್ಣಿನ ಹಕ್ಕನ್ನು ಹತ್ತಿಕ್ಕಿ ಅವಳಿಗೆ ಬೇಡದ ಮಗುವನ್ನು ಉಳಿಸುವುದು ಜೀವಪ್ರೀತಿ ಎನ್ನುವ ಧರ್ಮಾಧಿಕಾರಿಗಳು ಮತ್ತು ಸನಾತನವಾದಿಗಳು ಜಗತ್ತಿನಾದ್ಯಂತ ನಡೆಯುವ ಯುದ್ಧಗಳಲ್ಲಿ ಆಗುವ ಸಾವುನೋವುಗಳ ಬಗ್ಗೆ ಸೊಲ್ಲೆತ್ತುವುದಿಲ್ಲ. ಒಟ್ಟಿನಲ್ಲಿ ಅವರ ಕೈಮೇಲಾಯಿತು. ರಾಜಧಾನಿ ಕ್ವಿಟೋದಲ್ಲಿರುವ ಸಂಸತ್ತಿನಲ್ಲಿ ಮತದಾನ ಆಗುತ್ತಿದ್ದಾಗ ಅದರ ಹೊರಗೆ ಸೇರಿದ್ದ ಗರ್ಭಪಾತ ನಮ್ಮ ಹಕ್ಕು ಎನ್ನುತ್ತಿದ್ದ ಮಹಿಳೆಯರ ಮೇಲೆ ಪೊಲೀಸರು ಮೆಣಸಿನಪುಡಿ ಎರಚಿ ಅವರನ್ನು ದೂರ ಅಟ್ಟಿದರು.

ಇದನ್ನು ಓದಿ: ಮುಟ್ಟಿನ ಬಗ್ಗೆ ಭೈರಪ್ಪನವರ ಹೇಳಿಕೆಗೆ ಬಿಸಿಮುಟ್ಟಿಸಿದ ನೆಟ್ಟಿಗರು.. ಇಲ್ಲಿವೆ ನೋಡಿ ಕೆಲ ಸ್ಯಾಂಪಲ್ಸ್..

ಅತ್ಯಾಚಾರದಿಂದ ಬಸಿರಾದರೆ ಮಾತ್ರ ಅದನ್ನು ತೆಗೆಸಲು ಮೆಕ್ಸಿಕೋ, ಬ್ರೆಜಿಲ್, ಚಿಲಿ, ಅರ್ಜೆಂಟೀನ ಮುಂತಾದ ದೇಶಗಳಲ್ಲಿ ಅವಕಾಶವಿದೆ. ಇನ್ನುಳಿದಂತೆ ಗರ್ಭಪಾತ ಹೆಣ್ಣಿನ ಆಯ್ಕೆ ಆಗಿಲ್ಲ. ಆದರೆ, ಹೊಂಡುರಾಸ್, ಎಲ್ ಸಾಲ್ವಡಾರ್, ನಿಕರಾಗುವ ಮುಂತಾದ ದೇಶಗಳಲ್ಲಿ ಅದಕ್ಕೂ ಅವಕಾಶವಿಲ್ಲ. ಅದನ್ನು ಹೊತ್ತು, ಹೆತ್ತು, ಜೀವನವಿಡೀ ಅವಳು ನಿರ್ವಹಿಸಬೇಕು. ಆದ್ದರಿಂದ ಈ ದೇಶಗಳೂ ಸೇರಿ ಜಗತ್ತಿನ ಹಲವು ಭಾಗಗಳಲ್ಲಿ ಹೆಣ್ಣುಮಕ್ಕಳು, ವೈದ್ಯಕೀಯ ತರಬೇತಿ ಇಲ್ಲದ ಜನರಿಂದ ಗುಟ್ಟಾಗಿ ಗರ್ಭಪಾತ ಮಾಡಿಸಿಕೊಂಡು ಸೋಂಕು, ಶಸ್ತ್ರಗಳ ದುರ್ಬಳಕೆ ಮತ್ತಿತರ ಕಾರಣಗಳಿಂದ ಸಾವಿಗೀಡಾಗುತ್ತಾರೆ. ಹೆಣ್ಣಿನ ದೇಹ ತನಗೆ ಸೇರಿದ್ದು ಎಂಬ ಪುರುಷ ಮನೋಭಾವದಿಂದ ಕಾನೂನು ಕೂಡ ಅವಳಿಗೆ ಶತ್ರುವಾಗಿರುತ್ತದೆ. ಆ ಮನೋಭಾವ ಬದಲಾಯಿಸಲು ಪ್ರಯತ್ನಗಳು ನಡೆದರೆ ಮಾತ್ರ ಅವಳ ದುಸ್ಥಿತಿ ಬದಲಾಗಬಹುದು.

ಕೃಪೆ: ಹಿತೈಷಿಣಿ ಮಹಿಳಾ ಪತ್ರಿಕೆ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಮಹಿಳೆಯರ ಗರ್ಭದ ಮೇಲೆ ಅವರಿಗೇ ಹಕ್ಕಿಲ್ಲದಿರುವುದು ಖಂಡನಾರ್ಹ. ಇಂತಹ ಅಮಾನವೀಯ ಕಾನೂನುಗಳನ್ನು ತೊಲಗಿಸಲು ವಿಶ್ವಸಂಸ್ಥೆಯು ಪ್ರಯತ್ನ ಮಾಡಿಬೇಕು

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...