ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮದ (ಟಿಎಎಸ್‌ಎಂಎಸಿ) ಕೇಂದ್ರ ಕಚೇರಿ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯವನ್ನು (ಇಡಿ) ಗುರುವಾರ (ಮೇ.22) ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಮುಂದಿನ ತನಿಖೆಗೆ ತಡೆ ನೀಡಿದೆ.
“ಇಡಿ ಎಲ್ಲಾ ಮಿತಿಗಳನ್ನು ಮೀರುತ್ತಿದೆ, ದೇಶದ ಒಕ್ಕೂಟ ವ್ಯವಸ್ಥೆಯನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತಿದೆ. ನಿಗಮದ ವಿರುದ್ಧ ಅಪರಾಧ ಆರೋಪ ಹೇಗೆ ಸಾಧ್ಯ?” ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್ ಗವಾಯಿ ಅವರು ಇಡಿ ಪರ ಸುಪ್ರೀಂ ಕೋರ್ಟ್‌ಗೆ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರನ್ನು ಪ್ರಶ್ನಿಸಿದ್ದಾರೆ.
ಟಿಎಎಸ್‌ಎಂಎಸಿ ಪ್ರಧಾನ ಕಛೇರಿಯ ಮೇಲೆ ಇಡಿ ದಾಳಿ ನಡೆಸಿದ್ದರ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಸರ್ಕಾರ ಮತ್ತು ಟಿಎಎಸ್‌ಎಂಎಸಿ ಸಲ್ಲಿಸಿದ್ದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಎ.ಜಿ ಮಸಿಹ್ ಅವರ ಪೀಠ ಗುರುವಾರ ವಿಚಾರಣೆ ನಡೆಸಿದೆ.
ಸರ್ಕಾರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, “2014-21ರ ನಡುವೆ ನಿಗಮದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪಗಳ ಸಂಬಂಧ ಮದ್ಯದಂಗಡಿ ನಿರ್ವಾಹಕರ ವಿರುದ್ಧ ರಾಜ್ಯ ಸರ್ಕಾರ 41 ಎಫ್‌ಐಆರ್‌ಗಳನ್ನು ದಾಖಲಿಸಿದೆ. ಆದಾಗ್ಯೂ, 2025 ರಲ್ಲಿ ಇಡಿ ಟಿಎಎಸ್‌ಎಂಎಸಿ ಪ್ರಧಾನ ಕಚೇರಿ ಮೇಲೆ ದಾಳಿ ಮಾಡಿ ಅಧಿಕಾರಿಗಳ ಫೋನ್‌ಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದೆ” ಎಂದು ಆರೋಪಿಸಿದ್ದಾರೆ.
“ಇದು ಮದ್ಯದಂಗಡಿಗಳಿಗೆ ಪರಾವನಿಗೆ ನೀಡುವ ನಿಗಮ. ಮಳಿಗೆಗಳನ್ನು ನೀಡಿದ ಕೆಲವರು ವಾಸ್ತವವಾಗಿ ಹಣವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ. ಆದ್ದರಿಂದ, ಸರ್ಕಾರ 2014-21ರ ಅವಧಿಯಲ್ಲಿ ಹಲವು ವ್ಯಕ್ತಿಗಳ ವಿರುದ್ಧ 41 ಎಫ್‌ಐಆರ್‌ಗಳನ್ನು ದಾಖಲಿಸಿದೆ, ನಿಗಮದ ವಿರುದ್ಧ ಅಲ್ಲ. ಇಡಿ 2025ರಲ್ಲಿ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ನಿಗಮದ ಪ್ರಧಾನ ಕಚೇರಿ ಮೇಲೆ ದಾಳಿ ಮಾಡಿದೆ. ಎಲ್ಲರ ಪೋನ್‌ಗಳನ್ನು ಕದ್ದಾಲಿಸಿದೆ” ಎಂದು ಹೇಳಿದ್ದಾರೆ.
ಈ ಹಂತದಲ್ಲಿ ಪ್ರತಿಕ್ರಿಯಿಸಿದ ಸಿಜೆಐ ಗವಾಯಿ ಅವರು, “ನಿಗಮದ ವಿರುದ್ಧ ಅಪರಾಧ ಆರೋಪ ಹೇಗೆ ಸಾಧ್ಯ?” ಎಂದು ಇಡಿ ಪರ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರನ್ನು ಪ್ರಶ್ನಿಸಿದ್ದಾರೆ. “ನೀವು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಬಹುದು, ಆದರೆ ನಿಗಮದ ವಿರುದ್ಧ ಕ್ರಿಮಿನಲ್ ಪ್ರಕರಣ ಹೇಗೆ? ನಿಮ್ಮ ಇಡಿ ಎಲ್ಲಾ ಮಿತಿಗಳನ್ನು ಮೀರುತ್ತಿದೆ” ಎಂದು ಕಿಡಿಕಾರಿದ್ದಾರೆ.
“ತಪ್ಪಿತಸ್ಥರ ವಿರುದ್ದ ರಾಜ್ಯ ಸರ್ಕಾರ ಈಗಾಗಲೇ ಪ್ರಕರಣ ದಾಖಲಿಸಿರುವಾಗ ಇಡಿ ಹೇಗೆ ಮಧ್ಯದಲ್ಲಿ ಪ್ರವೇಶಿಸಿದೆ? ಇಡಿ ಪ್ರಕರಣದಲ್ಲಿ ಮಧ್ಯಪ್ರವೇಶಿಸುವ ಬಗ್ಗೆ ಅಫಿಡವಿಟ್ ಸಲ್ಲಿಸಿದೆಯಾ? ಇಡಿ ಒಕ್ಕೂಟ ವ್ಯವಸ್ಥೆಯನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತಿದೆ” ಎಂದು ಸಿಜೆಐ ಖಾರವಾಗಿ ಹೇಳಿದ್ದಾರೆ.
ಪ್ರಕರಣ ಸಂಬಂಧ ಇಡಿಗೆ ನೋಟಿಸ್ ಜಾರಿ ಮಾಡಲು ಪೀಠ ಆದೇಶಿಸಿದೆ. ಅರ್ಜಿದಾರರ ವಿರುದ್ದದ ಮುಂದಿನ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ನೀಡಲಾಗುವುದು ಎಂದು ಪೀಠವು ಆದೇಶದಲ್ಲಿ ತಿಳಿಸಿದೆ. ಇಡಿ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು, ಪ್ರತಿಕ್ರಿಯೆ ಸಲ್ಲಿಸುವುದಾಗಿ ಹೇಳಿದ್ದಾರೆ.
ಟಿಎಎಸ್‌ಎಂಎಸಿ ಅಧಿಕಾರಿಗಳು ಮದ್ಯದ ಬಾಟಲಿಗಳ ಬೆಲೆ ಏರಿಕೆ, ಟೆಂಡರ್ ಬದಲಾವಣೆ, ಲಂಚ ಪಡೆಯುವುದು ಸೇರಿದಂತೆ ವಿವಿಧ ರೀತಿಯ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. 1,000 ಕೋಟಿ ರೂಪಾಯಿಗೂ ಹೆಚ್ಚಿನ ಆರ್ಥಿಕ ಅಕ್ರಮಗಳು ನಡೆದಿವೆ ಎಂಬ ಆರೋಪದ ಮೇಲೆ ಮಾರ್ಚ್ 6 ರಿಂದ ಮಾರ್ಚ್ 8 ರವರೆಗೆ ಟಿಎಎಸ್‌ಎಂಎಸಿ ಪ್ರಧಾನ ಕಚೇರಿಗೆ ದಾಳಿ ನಡೆಸಿದ್ದ ಇಡಿ ಶೋಧ ನಡೆಸಿತ್ತು.
ರಾಜ್ಯ ಸರ್ಕಾರ ಅಥವಾ ಟಿಎಎಸ್‌ಎಂಎಸಿ ಹಲವು ವರ್ಷಗಳಿಂದ ಟಿಎಎಸ್‌ಎಂಎಸಿ ಅಧಿಕಾರಿಗಳ ವಿರುದ್ಧ ದಾಖಲಿಸಿರುವ ಸುಮಾರು 41-46 ಎಫ್ಐಆರ್‌ಗಳಲ್ಲಿ ಇರುವ ಆರೋಪಗಳ ಆಧಾರದ ಮೇಲೆ ಇಡಿ ಹಣ ವರ್ಗಾವಣೆಯನ್ನು ಶಂಕಿಸಿದೆ.
ಮಾರ್ಚ್‌ನಲ್ಲಿ ಟಿಎಎಸ್‌ಎಂಎಸಿ ಕೇಂದ್ರ ಕಚೇರಿ ಮೇಲೆ ಇಡಿ ನಡೆಸಿದ ದಾಳಿ ಮತ್ತು ನಂತರ ಶೋಧ ಕಾರ್ಯವನ್ನು ಡಿಎಂಕೆ ನೇತೃತ್ವದ ರಾಜ್ಯ ಸರ್ಕಾರ ತೀವ್ರವಾಗಿ ಖಂಡಿಸಿದೆ. ರಾಜ್ಯ ಸರ್ಕಾರ ಈಗಾಗಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವಾಗ ಇಡಿ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ ರಾಜ್ಯದ ಅಧಿಕಾರವನ್ನು ಅತಿಕ್ರಮಿಸಿದೆ ಎಂದು ಆರೋಪಿಸಿದೆ.
ಇಡಿ ದಾಳಿಯ ಕಾನೂನುಬದ್ಧತೆಯನ್ನು ತಮಿಳುನಾಡು ಸರ್ಕಾರ ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಆದರೆ, ಹೈಕೋರ್ಟ್ ಸರ್ಕಾರದ ಅರ್ಜಿಯನ್ನು ವಜಾಗೊಳಿಸಿತ್ತು. ಈ ಹಿನ್ನೆಲೆ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಹಿಂದೂ ಧಾರ್ಮಿಕ ದತ್ತಿ ಮಂಡಳಿಗಳ ಜೊತೆ ವಕ್ಫ್ ಬೋರ್ಡ್ ಹೋಲಿಕೆ ಸಲ್ಲದು: ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರದ ವಾದ


