ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಕ್ರಮ ಕೈಗೊಂಡಿರುವುದು ಹಾಗೂ ಪಕ್ಷದ ಮುಖಂಡರನ್ನು ಬಂಧಿಸಿರುವ ದೆಹಲಿ ಪೊಲೀಸರ ಕ್ರಮವನ್ನು ವಿರೋಧಿಸಿ ರಾಜ್ಯ ಕಾಂಗ್ರೆಸ್ ಮುಖಂಡರು ಗುರುವಾರ (ಜೂನ್.16) ರಾಜಭವನಕ್ಕೆ ಪಾದಯಾತ್ರೆ ಆರಂಭಿಸಿರುವ ಕಾಂಗ್ರೆಸ್, ರಾಜಭವನ ಮುತ್ತಿಗೆ ಹಾಕಲಿದೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಿಂದ ರಾಜಭವನದ ವರೆಗೆ ಪಾದಯಾತ್ರೆ ಮತ್ತು ರಾಜಭವನ ಮುತ್ತಿಗೆ ನಡೆಸಲಿದೆ. ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣವನ್ನು ಖಂಡಿಸುವ ಈ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕಾಂಗ್ರೆಸ್ ಕರೆ ನೀಡಿತ್ತು. ಬೆಳಗ್ಗೆ 10 ಗಂಟೆಯಿಂದ ಪಾದಯಾತ್ರೆ ಆರಂಭವಾಗಿದೆ.
ಬುಧವಾರ ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಗೆ ದೆಹಲಿ ಪೊಲೀಸರು ಬಲವಂತವಾಗಿ ನುಗ್ಗಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದ್ದರು. ಒಕ್ಕೂಟ ಸರ್ಕಾರ ತನಿಖಾ ಸಂಸ್ಥೆಗಳನ್ನು, ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ದೇಶಾದ್ಯಂತ ರಾಜಭವನ ಚಲೋಗೆ ಕರೆ ನೀಡಿದ್ದರು.
ಇದನ್ನೂ ಓದಿ: ಪಠ್ಯಪುಸ್ತಕ ಹಗರಣ ಅಪ್‌ಡೇಟ್ | ಬಿಜೆಪಿಗರೆ ನೀವು ತುಕ್ಡೆ ಗ್ಯಾಂಗಿನ ನಾಯಕರು: ಸಿದ್ದರಾಮಯ್ಯ ಆಕ್ರೋಶ
ಈಗಾಗಲೇ ಆರಂಭವಾಗಿರುವ ಪಾದಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದಾರೆ.
ಪಾದಯಾತ್ರೆಯಲ್ಲಿ ಮಾತನಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ’ಬಿಜೆಪಿ ಸರ್ಕಾರ ಸುಳ್ಳು ಪ್ರಕರಣಗಳನ್ನು ಹಾಕಿ ನಮ್ಮ ನಾಯಕರಾದ ರಾಹುಲ್ ಗಾಂಧಿ ಮತ್ತು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿದೆ. ನಕಲಿ ಪ್ರಕರಣಗಳ ಮೂಲಕ ಅವರನ್ನು ಬಂಧಿಸಲು ಪ್ರಯತ್ನ ಪಡಲಾಗುತ್ತಿದೆ. ನಮ್ಮ ನಾಯಕರ ಮೇಲೆ ಹಲ್ಲೆ ನಡೆಸಲಾಗುತ್ತಿದೆ” ಎಂದಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, “ಬಿಜೆಪಿ ಸರ್ಕಾರ ತನಿಖೆ ಹೆಸರಿನಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಇದರ ಹಿಂದೆ ದುರುದ್ದೇಶವಿದೆ. ಕಾಂಗ್ರೆಸ್ ಎಂದಿಗೂ ದ್ವೇಷ ರಾಜಕಾರಾಣ ಮಾಡಿಲ್ಲ. ಆದರೆ ಬಿಜೆಪಿ ಅದನ್ನು ಮಾಡುತ್ತಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಮೇಲೆ ಸುಳ್ಳು ಕೇಸ್ ಹಾಕಿ ಅವರ ವರ್ಚಸ್ಸು ಕಡಿಮೆ ಮಾಡಲು ಪ್ರಯತ್ನ ಮಾಡ್ತಿದೆ. ಮೂರು ದಿನಗಳ ಕಾಲ 30 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದಾರೆ. ಬಿಜೆಪಿ ಸರ್ಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಇಂತಹ ಕೆಲಸ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕಾಂಗ್ರೆಸ್ ಪ್ರಧಾನ ಕಚೇರಿಯನ್ನು ಪೊಲೀಸರು ಆಕ್ರಮಿಸಿಕೊಂಡಿದ್ದಾರೆ. ಅಲ್ಲಿಗೆ ಕಾಂಗ್ರೆಸ್ ನಾಯಕರನ್ನು ಹೋಗಲು ಬಿಡುತ್ತಿಲ್ಲ. ಹೋದವರ ಮೇಲೆ ಹಲ್ಲೆ ಮಾಡಲಾಗುತ್ತಿದೆ. ಇಂತಹ ನೀಚ ಕೃತ್ಯ ಬಿಜೆಪಿ ಮಾಡುತ್ತಿದೆ. ಸಂವಿಧಾನ ಬದ್ಧ ಪ್ರತಿಭಟಿಸುವ ಹಕ್ಕನ್ನು ಬಿಜೆಪಿ ಕಿತ್ತುಕೊಳ್ಳುತ್ತಿದೆ. ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇಂತಹದ್ದು ನಡೆದಿರಲಿಲ್ಲ. ಇದಕ್ಕೆ ಅವಕಾಶ ನೀಡಬಾರದು. ಎಲ್ಲಾ ಬಿಜೆಪಿಯೇತರ ಪಕ್ಷಗಳು ಇದನ್ನು ಪ್ರತಿಭಟಿಸಬೇಕು. ಮಮತಾ ಬ್ಯಾನರ್ಜಿ, ಶರದ್ ಪವಾರ್, ಸ್ಟಾಲಿನ್, ಕಮ್ಯೂನಿಸ್ಟ್ ಪಾರ್ಟಿ ಸೇರಿದಂತೆ ಎಲ್ಲ ವಿರೋಧ ಪಕ್ಷಗಳು ಇದನ್ನು ಖಂಡಿಸಬೇಕು, ಇದು ದೇಶದ ಮೇಲೆ ನಡೆಯುತ್ತಿರುವ ಪ್ರಹಾರ, ಪ್ರಜಾಪ್ರಭುತ್ವದ ಮೇಲಿನ ಪ್ರಹಾರ” ಎಂದಿದ್ದಾರೆ.
ಇದನ್ನೂ ಓದಿ: ದೆಹಲಿ: ಕಾಂಗ್ರೆಸ್ ಕಚೇರಿಗೆ ನುಗ್ಗಿ ಮುಖಂಡರು, ಕಾರ್ಯಕರ್ತರ ಮೇಲೆ ಪೊಲೀಸರ ಹಲ್ಲೆ- ಆರೋಪ


