ಚುನಾವಣೆ ಸಂದರ್ಭದಲ್ಲಿ ಹಲವಾರು ಸಮೀಕ್ಷೆಗಳು ಬರುತ್ತವೆ ಹೋಗುತ್ತವೆ, ಆದರೆ ಕನ್ನಡದ ಡಿಜಿಟಲ್ ಮಾಧ್ಯಮವೊಂದು ಮಾಡಿದ ಸಮೀಕ್ಷೆ ನಿಖರವಾಗಿದೆ. ‘ಈದಿನ’ ಮಾಧ್ಯಮ ಮಾಡಿದ್ದ ಚುನಾವಣಾಪೂರ್ವ ಸಮೀಕ್ಷೆಯ ಅಂಕಿ-ಅಂಶಗಳು ಈಗ ಎಲ್ಲರೂ ನಿಬ್ಬೇರಿಸುವುದಕ್ಕೆ ಕಾರಣವಾಗಿವೆ.
‘ಈದಿನ’ ನಡೆಸಿದ ಸಮೀಕ್ಷೆಯನ್ನು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅಲ್ಲಗಳೆದಿದ್ದರು. ಇದೊಂದು ಕೃತಕವಾಗಿ ಸೃಷ್ಟಿಸಲಾದ ಸಮೀಕ್ಷೆ ಎಂದು ಟೀಕಿಸಿದ್ದ ಅವರು ಈಗ ಮುಖಭಂಗ ಅನುಭವಿಸಿದ್ದಾರೆ.
“ನಮ್ಮ ಸಮೀಕ್ಷೆ ನಿಖರವಾಗಿದೆ. ನೀವು ಬಂದು ಪರಿಶೀಲನೆ ಮಾಡಬಹುದು” ಎಂದು ಈದಿನ ಮಾಧ್ಯಮ ಸಂತೋಷ್ ಅವರಿಗೆ ಸವಾಲು ಹಾಕಿತ್ತು.
ಈದಿನ ಸಮೀಕ್ಷೆ ಏನು ಹೇಳಿತ್ತು?
‘ಈದಿನ’ ಮಾಧ್ಯಮ ಮಾಡಿರುವ ಮೆಗಾ ಸರ್ವೇ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದಿತ್ತು. 132ರಿಂದ 140 ಸ್ಥಾನಗಳನ್ನು ಕಾಂಗ್ರೆಸ್ ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿತ್ತು.
“ಕಾಂಗ್ರೆಸ್‌ಗೆ ಸ್ಪಷ್ಟವಾದ ಮತ್ತು ಯಾವುದೇ ಆತಂಕಕ್ಕೆ ಎಡೆಯಿಲ್ಲದ ರೀತಿಯ ಬಹುಮತ ಲಭ್ಯವಾಗಲಿದೆ ಎಂದು ಈ ಸಮೀಕ್ಷೆಯ ಅಂಕಿ-ಅಂಶಗಳು ತಿಳಿಸುತ್ತಿವೆ. ಇನ್ನೊಂದು ಆಪರೇಷನ್ ಕಮಲದ ಸಾಧ್ಯತೆಯನ್ನೂ ಇಲ್ಲವಾಗಿಸುವ ಹಾಗೆ 113ಅನ್ನು ಸಲೀಸಾಗಿ ದಾಟಲಿದೆ ಎಂದು ತೋರುತ್ತಿದೆ” ಎಂದು ‘ಈದಿನ’ ವರದಿ ಪ್ರಕಟಿಸಿತ್ತು.
“ಈ ಹಿಂದೆ ಇಂತಹ ಬಹುಮತವನ್ನು ಪಡೆದುಕೊಂಡಿದ್ದದ್ದು 2013 ಮತ್ತು 1999ರಲ್ಲಿ. ಈ ಸಾರಿ ಅವೆರಡನ್ನೂ ದಾಟಲಿದ್ದು, 1989ರ ನಂತರ ಮೂರು ದಶಕಗಳಲ್ಲಿ ಇದೇ ಅತಿ ದೊಡ್ಡ ಸಾಧನೆಯಾಗಬಹುದು” ಎಂದು ಈದಿನ ಹೇಳಿತ್ತು.
“ಬಿಜೆಪಿಯ ಮಟ್ಟಿಗೆ ಹೇಳುವುದಾದರೆ, 2013ರಲ್ಲಿ ಆ ಪಕ್ಷ ಒಡೆದು ಹೋಗಿದ್ದಾಗ ಉದ್ಭವವಾಗಿದ್ದ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಹೊರತುಪಡಿಸಿದರೆ, ಇದು ಅದರ ಅತ್ಯಂತ ಹೀನಾಯ ಸ್ಥಿತಿಯಾಗಿರಲಿದೆ” ಎಂದು ಅಭಿಪ್ರಾಯ ತಾಳಿತ್ತು.
2018ರಲ್ಲಿ ಕಾಂಗ್ರೆಸ್ 38.1% ಮತದಾರರನ್ನು ಸೆಳೆದಿತ್ತು, ಬಿಜೆಪಿ 36.3%, ಜೆಡಿಎಸ್ 18.3%, ಇತರರು 7.4% ಮತಗಳನ್ನು ಪಡೆದಿದ್ದರು. ಈ ಬಾರಿ ಕಾಂಗ್ರೆಸ್ 43%, ಬಿಜೆಪಿ 33%, ಜೆಡಿಎಸ್ 16%, ಇತರರು 8% ಮತಗಳನ್ನು ಪಡೆಯಲಿದ್ದಾರೆ ಎಂದು ಸಮೀಕ್ಷೆ ನುಡಿದಿತ್ತು.
ಕಾಂಗ್ರೆಸ್‌ಗೆ 132-140 ಸ್ಥಾನ, ಬಿಜೆಪಿಗೆ 57- 65 ಸ್ಥಾನ, ಜೆಡಿಎಸ್‌ಗೆ 19-25 ಸ್ಥಾನ, ಇತರರು 1-5 ಸ್ಥಾನಗಳನ್ನು ಪಡೆಯಲಿದ್ದಾರೆ ಎಂದಿತ್ತು ಸರ್ವೇ. ಉತ್ತರ ಕರ್ನಾಟಕದಲ್ಲಿ ಮಿಕ್ಕವರನ್ನು ಕಾಂಗ್ರೆಸ್ ಗುಡಿಸಿ ಹಾಕಲಿದ್ದು ದಕ್ಷಿಣ ಕರ್ನಾಟಕದಲ್ಲೂ ಮುನ್ನಡೆ ಗಳಿಸಲಿದೆ ಎಂದಿತ್ತು.
ಈ ಅಭಿಪ್ರಾಯ ಹೊಂದಿರುವವರಲ್ಲಿ ಶೇ.67ರಷ್ಟು ಜನ ಮತದಾರರು ಈ ಸರ್ಕಾರಕ್ಕೆ ಇನ್ನೊಂದು ಬಾರಿ ಅವಕಾಶ ಕೊಡಬಾರದೆಂಬ ಅಭಿಪ್ರಾಯ ಹೊಂದಿದ್ದಾರೆ. ಶೇ.33ರಷ್ಟು ಮತದಾರರು ಈ ಸರ್ಕಾರಕ್ಕೆ ಇನ್ನೊಮ್ಮೆ ಅವಕಾಶ ಕೊಡಬಹುದೆಂಬ ಅನಿಸಿಕೆ ಹೊಂದಿದ್ದಾರೆ. ಬೊಮ್ಮಾಯಿ ಸರ್ಕಾರ ಮುಂದುವರಿಯಬಾರದು ಎಂದು 67% ಜನರು ಅಭಿಪ್ರಾಯ ತಾಳಿದ್ದಾರೆ. ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ನಡೆಸಲಾದ ಅತಿ ದೊಡ್ಡ ಸಮೀಕ್ಷೆ ಇದಾಗಿದ್ದು 41,169 ಮತದಾರರನ್ನು ಮಾತನಾಡಿಸಲಾಗಿದೆ ಎಂದು ‘ಈದಿನ’ ತಿಳಿಸಿತ್ತು.
ಸಮೀಕ್ಷೆಯ ವಿವರಗಳನ್ನು ಸಮೀಕ್ಷಾ ತಜ್ಞ ಹಾಗೂ ರಾಜಕೀಯ ಚಿಂತಕರಾದ ಪ್ರೊ.ಯೋಗೇಂದ್ರ ಯಾದವ್ ಹಂಚಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಮತ್ತು ಯೋಗೇಂದ್ರ ಯಾದವ್ ಅವರ ನಡುವಿನ ಸೌಹಾರ್ದತೆಯನ್ನು ಥಳುಕು ಹಾಕಿದ್ದರು. ದೇಶವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ರಾಹುಲ್ ಅವರು ಮಾಡಿದ ಭಾರತ್ ಜೋಡೋ ಯಾತ್ರೆಗೆ ಅನೇಕ ಕಾಂಗ್ರೆಸ್ಸೇತರರು ಬೆಂಬಲ ನೀಡಿದ್ದರು. ಅದರಲ್ಲಿ ಯೋಗೇಂದ್ರ ಯಾದವ್ ಕೂಡ ಒಬ್ಬರಾಗಿದ್ದು, ಸಂತೋಷ್ ಅವರು ತಮ್ಮ ಟ್ವೀಟ್‌ನಲ್ಲಿ ಅದನ್ನು ಪ್ರಸ್ತಾಪಿಸಿದ್ದಂತಿತ್ತು.
“ತನ್ನ ಯಜಮಾನರನ್ನು ಮೆಚ್ಚಿಸಲು ಪಾದಯಾತ್ರೆಗಳು ಮತ್ತು ಆಂದೋಲನಗಳ ನಡುವೆ ಸಮೀಕ್ಷೆಗಳಿಗೆ ಅವರು ಸಮಯ ಕಂಡುಕೊಂಡಿರುವುದು ನಿಜಕ್ಕೂ ಆಶ್ಚರ್ಯಕರ” ಎಂದು ಯೋಗೇಂದ್ರ ಅವರ ಹೆಸರನ್ನು ಟ್ಯಾಗ್ ಮಾಡಿ ಬಿ ಎಲ್ ಸಂತೊಷ್ ಟ್ವೀಟ್ ಮಾಡಿದ್ದರು.
ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಯೋಗೇಂದ್ರ ಯಾದವ್, “ಸತ್ಯವನ್ನು ಸ್ವಾರಸ್ಯಕರವಾಗಿ ಕಾಣದವರು ಅಡುಗೆಯವರನ್ನೇ (ಈ ಸಂದರ್ಭದಲ್ಲಿ ಕಲ್ಪಿಸಿಕೊಂಡವರು) ದೂಷಿಸುವುದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಶಾಸಕರನ್ನು ಖರೀದಿಸಿ ಬಹುಮತದ ಬೇಳೆ ಬೇಯಿಸಿಕೊಳ್ಳುತ್ತಿದ್ದ ಯಾರೋ ಒಬ್ಬರು ಸಮೀಕ್ಷೆಯಿಂದ ತೊಂದರೆಗೀಡಾಗಿರುವುದು ಅಚ್ಚರಿ ಮೂಡಿಸಿದೆ. ಬಿಜೆಪಿಯ ಆಂತರಿಕ ಸಮೀಕ್ಷೆಗಳಿಗೆ ಈದಿನ ಸಮೀಕ್ಷೆ ಅನುರಣಿಸುತ್ತಿದೆಯೇ?” ಎಂದು ಪ್ರಶ್ನಿಸಿದ್ದರು.



Super news