ಭಾರತದಲ್ಲಿ ಕೊನೆಯದಾಗಿ ವರದಿಯಾಗಿದ್ದು ಎನ್ನಲಾದ ಸತಿ ಸಹಗಮನ ಪ್ರಕರಣದ ಎಂಟು ಮಂದಿ ಆರೋಪಿಗಳನ್ನು ರಾಜಸ್ಥಾನದ ಜೈಪುರದ ವಿಶೇಷ ನ್ಯಾಯಾಲಯವು ಬುಧವಾರ ದೋಷಮುಕ್ತಗೊಳಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ಗಂಡ ಸತ್ತರೆ ಆತನ ಅಂತ್ಯಕ್ರಿಯೆಯ ವೇಳೆ ಹೆಂಡತಿಯೂ ಚಿತೆಗೆ ಹಾರಿ ಪ್ರಾಣ ಬಿಡಬೇಕೆಂಬ ಬಲವಂತ ಈ ಅನಿಷ್ಟ ಪದ್ದತಿಯನ್ನು 1829 ರಲ್ಲಿ ನಿಷೇಧಿಸಲಾಗಿದೆ.
ವರದಿಗಳ ಪ್ರಕಾರ, ಕೊನೆಯದಾಗಿ ಸೆಪ್ಟೆಂಬರ್ 4, 1987ರಂದು ರಾಜಸ್ಥಾನದಲ್ಲಿ ಸತಿ ಪದ್ದತಿ ಆಚರಣೆ ಸಂಬಂಧ ಪ್ರಕರಣವೊಂದು ದಾಖಲಾಗಿತ್ತು. ರೂಪ್ ಕನ್ವರ್ ಎಂಬ ಮಹಿಳೆಯನ್ನು ಆಕೆಯ ಗಂಡನ ಅಂತ್ಯಕ್ರಿಯೆ ವೇಳೆ ಬಲವಂತವಾಗಿ ಚಿತೆಗೆ ತಳ್ಳಿ ಸಜೀವ ದಹನ ಮಾಡಲಾಗಿತ್ತು.
1988ರಲ್ಲಿ, ಈ ಸಂಬಂಧ ಒಟ್ಟು 45 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಕಮಿಷನ್ ಆಫ್ ಸತಿ ಪ್ರಿವೆನ್ಶನ್ ಆಕ್ಟ್- 1987 ರ ಸೆಕ್ಷನ್ 5 ಅನ್ನು ಉಲ್ಲಂಘಿಸಿದ ಆರೋಪವನ್ನು ಅವರ ಮೇಲೆ ಹೊರಿಸಲಾಗಿತ್ತು. ಸೆಕ್ಷನ್ 5 ಸತಿ ಸಹಗಮನ ಪದ್ದತಿಯ ಆಚರಣೆಯ ವೈಭವೀಕರಣ ಅಥವಾ ಪ್ರಚಾರ ಮಾಡುವುದಕ್ಕೆ ಶಿಕ್ಷೆಯನ್ನು ಸೂಚಿಸುತ್ತದೆ.
ಬುಧವಾರ, ನ್ಯಾಯಾಲಯವು 45 ಆರೋಪಿಗಳಲ್ಲಿ ಎಂಟು ಜನರನ್ನು ದೋಷಮುಕ್ತಗೊಳಿಸಿದೆ ಎಂದು ಪರ ಅವರ ವಕೀಲ ಅಮನ್ ಚೈನ್ ಸಿಂಗ್ ಶೇಖಾವತ್ ಹೇಳಿದ್ದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಆರೋಪಿಗಳ ಪರ ವಕೀಲರ ಪ್ರಕಾರ, ಕಮಿಷನ್ ಆಫ್ ಸತಿ ಪ್ರಿವೆನ್ಶನ್ ಆಕ್ಟ್- 1987 ರ ಸೆಕ್ಷನ್ 5 ಸತಿ ಸಹಗಮನ ಪದ್ದತಿಯ ವೈಭವೀಕರಣ ಅಥವಾ ಪ್ರಚಾರಕ್ಕೆ ಸಂಬಂಧಿಸಿದ್ದಾಗಿದೆ. ಅದಕ್ಕೂ ಮುನ್ನ ಸೆಕ್ಷನ್ 3ರ ಅಡಿ ಸತಿ ಸಹಗಮನ ನಡೆದಿದೆ ಎಂಬುವುದು ರುಜುವಾತಾಗಬೇಕಿದೆ. ಪ್ರಾಸಿಕ್ಯೂಷನ್ ಸೆಕ್ಷನ್ 3ರಡಿ ಸತಿ ಸಹಗಮನ ನಡೆದಿರುವುದನ್ನು ದೃಢೀಕರಿಸುವಲ್ಲಿ ವಿಫಲವಾಗಿದೆ. ಹಾಗಾಗಿ, ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಮಹೇಂದ್ರ ಸಿಂಗ್, ಶ್ರವಣ್ ಸಿಂಗ್, ನಿಹಾಲ್ ಸಿಂಗ್, ಜಿತೇಂದ್ರ ಸಿಂಗ್, ಉದಯ್ ಸಿಂಗ್, ದಶರಥ್ ಸಿಂಗ್, ಲಕ್ಷ್ಮಣ್ ಸಿಂಗ್ ಮತ್ತು ಭನ್ವರ್ ಸಿಂಗ್ ಖುಲಾಸೆಗೊಂಡ ಆರೋಪಿಗಳು. ಇವರಿಗೆ ಈ ಪ್ರಕರಣದಲ್ಲಿ ಈಗಾಗಲೇ ಜಾಮೀನು ಕೂಡ ಸಿಕ್ಕಿತ್ತು.
ಪ್ರಕರಣದ 25 ಮಂದಿ ಆರೋಪಿಗಳನ್ನು ಸಾಕ್ಷ್ಯಾಧಾರದ ಕೊರತೆಯಿಂದ 2004ರಲ್ಲಿ ಖುಲಾಸೆಗೊಳಿಸಲಾಗಿದೆ. ಇನ್ನೂ ನಾಲ್ವರು ತಲೆಮರೆಸಿಕೊಂಡಿದ್ದು, ಉಳಿದ ಎಂಟು ಮಂದಿ ಸಾವನ್ನಪ್ಪಿದ್ದಾರೆ.
ಈ ವರದಿಯಲ್ಲಿ ಉಲ್ಲೇಖಿಸಿದ ಪ್ರಕರಣವನ್ನು ಭಾರತದಲ್ಲಿ ವರದಿಯಾದ ಕೊನೆಯ ಸತಿ ಸಹಗಮನ ಪ್ರಕರಣ ಎಂದು ಹೇಳಲಾಗುತ್ತಿದೆ. ಆದರೆ, ವಾಸ್ತವತೆ ಬೇರೆಯೇ ಇದೆ. ನೇರವಾಗಿ ನಡೆಯದಿದ್ದರೂ, ವಿವಿಧ ರೂಪಗಳಲ್ಲಿ ಈ ಅನಿಷ್ಟ ಪದ್ದತಿ ಈಗಲೂ ಚಾಲ್ತಿಯಲ್ಲಿದೆ. ಅದನ್ನು ದೃಢೀಕರಿಸುವ ಘಟನೆಗಳು ಹಲವು ಭಾರೀ ನಡೆದಿದೆ. ಕಳೆದ ವರ್ಷ ಗುಜರಾತ್‌ನಲ್ಲಿ ನಡೆದ ಘಟನೆಯ ವರದಿಯೊಂದು ಕೆಳಗಿದೆ.
ಅನಿಷ್ಟ ಸತಿ ಪದ್ದತಿ ಇನ್ನೂ ಜೀವಂತ: ಸತಿ ಹಾರಬೇಕೆಂಬ ಒತ್ತಡಕ್ಕೆ ಬೇಸೆತ್ತು ಇಂಜಿನಿಯರ್ ಮಹಿಳೆ ಆತ್ಮಹತ್ಯೆ


