ವೇಗವಾಗಿ ಬಂದ ಟ್ರಕ್ ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಹಿಳಾ ಕಾರ್ಮಿಕರು ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ (ಏ.1) ಸಂಜೆ ನಡೆದಿದೆ.
ಎಕ್ಸ್‌ಪ್ರೆಸ್‌ವೇಯ ಸ್ವಚ್ಚತಾ ಕೆಲಸ ಮುಗಿಸಿ ಕಾರ್ಮಿಕರು ಮನೆಗೆ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ.
ಟೆಂಪೋದಲ್ಲಿ ಚಾಲಕ ಸೇರಿದಂತೆ 11 ಜನರಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಟೆಂಪೋ ಕಾರ್ಮಿಕರನ್ನು ಹತ್ತಿಸಿಕೊಂಡು ಚಲಿಸಲು ಸಿದ್ಧವಾಗುತ್ತಿದ್ದಂತೆ, ವೇಗವಾಗಿ ಮುಂಬೈ ಕಡೆಗೆ ಸಂಚರಿಸುತ್ತಿದ್ದ ಟ್ರಕ್ ಕಡ್ವಾಂಚಿ ಗ್ರಾಮದ ಬಳಿ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿ ಹೇಳಿದ್ದಾರೆ. ಏಳು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬರು ಜಲ್ನಾದ ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮೃತರನ್ನು ಜಲ್ನಾ ತಹಸಿಲ್ ನಿವಾಸಿಗಳಾದ ಅಲ್ಕಾಬಾಯಿ ಅದ್ಮನೆ (45), ಲಕ್ಷ್ಮಿಬಾಯಿ ಮದನ್ (35), ಮೀನಾ ಅದ್ಮನೆ (45), ಕಾಂಚನ್ ಅದ್ಮನೆ (50), ತಾರಾಬಾಯಿ ಚೌಧರಿ (60), ಕಡುಬಾಯಿ ಮದನ್ (55) ಮತ್ತು ಸುಮನ್ ಅದ್ಮನೆ (70) ಎಂದು ಗುರುತಿಸಲಾಗಿದೆ. ಎಂಟನೇ ಮಹಿಳೆಯ ಗುರುತು ಇನ್ನೂ ದೃಢಪಟ್ಟಿಲ್ಲ. ಗಾಯಗೊಂಡ ಮೂವರು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸರು ಟ್ರಕ್ ಚಾಲಕನನ್ನು ಬಂಧಿಸಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸಂಬಂಧಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದಾರೆ. ಘಟನೆಯ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ದುಃಖ ವ್ಯಕ್ತಪಡಿಸಿದ್ದು, ಇದು ಅತ್ಯಂತ ದುರದೃಷ್ಟಕರ ಎಂದು ಹೇಳಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳ ಆರ್ಥಿಕ ನೆರವು ಘೋಷಿಸಿದ್ದಾರೆ.


