ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (ಎಎಪಿ) 14 ಸ್ಥಾನಗಳನ್ನು ಗೆದ್ದಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಎಚ್ಚರಿಕೆಯನ್ನು ಕಾಂಗ್ರೆಸ್ ಹಾಗೂ ಬಿಜೆಪಿಗೆ ಆಮ್ ಆದ್ಮಿ ನೀಡಿದೆ.
ಬಿಜೆಪಿ 10, ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದಿದ್ದರೆ ಆಮ್ ಆದ್ಮಿ ಪಕ್ಷ ಮುಂದಿದೆ. ಇಲ್ಲಿಯವರೆಗೆ ಪ್ರಕಟವಾದ ಫಲಿತಾಂಶಗಳ ಪ್ರಕಾರ ಬಿಜೆಪಿಯ ರವಿಕಾಂತ್ ಶರ್ಮಾ (ಮೇಯರ್) ಅವರು ಎಎಪಿ ಅಭ್ಯರ್ಥಿ ದಮನ್‌ಪ್ರೀತ್ ಸಿಂಗ್ ಅವರಿಂದ ಸೋಲನ್ನಪ್ಪಿದ್ದಾರೆ.
ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ್ದ 25 ವರ್ಷದ ನೇಹಾ ಎಂಬ ಯುವತಿ, ಬಿಜೆಪಿ ಅಭ್ಯರ್ಥಿಯನ್ನು 804 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ವಾರ್ಡ್ ನಂ. 4ರಲ್ಲಿ ಆಪ್ ಅಭ್ಯರ್ಥಿ ಸುಮನ್ ದೇವಿ ಕೇವಲ 12 ಮತಗಳ ಅಂತರದಲ್ಲಿ ಗೆದ್ದಿದ್ದಾರೆ.
ಪಂಜಾಬ್ ಮತ್ತು ಹರಿಯಾಣದ ರಾಜಧಾನಿ ಚಂಡೀಗಢದಲ್ಲಿ 35 ಪಾಲಿಕೆ ಸದಸ್ಯ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆದಿತ್ತು. ಚಂಡೀಗಢ ಪಾಲಿಕೆಯಲ್ಲಿ ಮೊದಲ ಬಾರಿಗೆ ಎಎಪಿ ಸ್ಪರ್ಧಿಸಿದ್ದು, ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿಗೆ ಚುನಾವಣಾ ಫಲಿತಾಂಶ ಎಚ್ಚರಿಕೆಯನ್ನು ನೀಡಿದೆ.
ಕಳೆದ ಚುನಾವಣೆಯಲ್ಲಿ ಬಿಜೆಪಿ 20, ಅಕಾಲಿದಳ ಒಂದು ಸ್ಥಾನ, ಕಾಂಗ್ರೆಸ್ ನಾಲ್ಕು ಸ್ಥಾನಗಳನ್ನು ಗೆದ್ದಿದ್ದವು. ಸಾಂಪ್ರದಾಯಿಕವಾಗಿ, ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿಯಾಗಿರುತ್ತಿತ್ತು. ಆದರೆ ಈ ಬಾರಿ ಪಂಜಾಬ್‌ನ ಆಡಳಿತಾರೂಢ ಕಾಂಗ್ರೆಸ್, ಎಎಪಿ, ಬಿಜೆಪಿ ಮತ್ತು ಅಕಾಲಿದಳ-ಬಿಎಸ್‌ಪಿ ಮೈತ್ರಿಕೂಟದ ನಡುವೆ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ.
ಇದನ್ನೂ ಓದಿರಿ: ಉಡುಪಿ ದ್ವೇಷ ಭಾಷಣ: ಬೇಷರತ್ ಕ್ಷಮೆ ಕೇಳಿದ ತೇಜಸ್ವಿ ಸೂರ್ಯ


