ಕಾರ್ಪೋರೇಟ್ ಫಂಡಿಂಗ್‍ಗೆ ನಿಷೇಧ, ರಾಷ್ಟ್ರೀಯ ಚುನಾವಣಾ ನಿಧಿ ಸ್ಥಾಪನೆಗೆ ಒತ್ತಾಯ: ಮಾಜಿ ಮುಖ್ಯ ಚುನಾವಣಾ ಆಯುಕ್ತರೊಬ್ಬರ ಆಗ್ರಹ
ದೇಶದಲ್ಲಿ ಚುನಾವಣಾ ಸುಧಾರಣೆಗಳನ್ನು ತ್ವರಿತವಾಗಿ ಜಾರಿ ಮಾಡಬೇಕಿದೆ ಎಂದಿರುವ ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಈ ಕೃಷ್ಣಮೂರ್ತಿ, ರಾಷ್ಟ್ರೀಯ ಚುನಾವಣಾ ನಿದಿಯೊಂದನ್ನು ಸ್ಥಾಪಿಸಬೇಕು ಮತ್ತು ಕಾರ್ಪೋರೇಟ್‍ಗಳು ಪಕ್ಷಗಳಿಗೆ ನೀಡುವ ಫಂಡಿಂಗ್‍ಗೆ ನಿಷೇಧ ಹಾಕಬೇಕು ಎಂದು ಸರ್ಕಾರ ಮತ್ತು ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ ಎಂದು ಪಿಟಿಐ ವರದಿ ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮಂಗಳವಾರ ಹೈದರಾಬಾದಿನಲ್ಲಿ ಮಾತನಾಡಿದ ಅವರು, ‘ಈ ರಾಷ್ಟ್ರೀಯ ನಿಧಿಗೆ ಜನರಿಂದ ಪಾರದರ್ಶಕವಾಗಿ ದೇಣಿಗೆ ಪಡೆಯಬೇಕು. ಚುನಾವಣಾ ಆಯೋಗವು ಎಲ್ಲ ಪಕ್ಷಗಳೊಂದಿಗೆ ಸಮಾಲೋಚಿಸಿ ಈ ನಿಧಿಯನ್ನು ಚುನಾವಣಾ ಕಾರ್ಯಕ್ಕೆ ಹೇಗೆ ಬಳಸಬಹುದು ಎಂದು ನಿಯಮ ರೂಪಿಸಬೇಕು. ಕಾರ್ಪೋರೇಟ್ ಕಂಪನಿಗಳು ಈಗ ಪಕ್ಷಗಳಿಗೆ ನೀಡುತ್ತಿರುವ ಬೃಹತ್ ನಿಧಿಗಳು ಗೌಪ್ಯವಾಗಿದ್ದು ಇದು ಭ್ರಷ್ಟಾಚಾರಕ್ಕೆ ಆಸ್ಪದ ನೀಡುತ್ತಿದೆ ಎಂದಿದ್ದಾರೆ.
2004ರಲ್ಲಿ ಚುನಾವಣಾ ನಿರ್ವಹಣೆ ಜವಾಬ್ದಾರಿ ನಿರ್ವಹಿಸಿದ್ದ ಕೃಷ್ಣಮೂರ್ತಿ, ಈ ಸಲದ ಚುನಾವಣೆಯಲ್ಲಿ 60 ಸಾವಿರ ಕೋಟಿಗೂ ಹೆಚ್ಚು ಹಣ ಖರ್ಚಾಗಿದೆ ಎಂಬ ಚಿಂತಕರ ಕೂಟವೊಂದರ ವರದಿಯ ಬಗ್ಗೆ ನೇರ ಉತ್ತರ ನೀಡಲು ನಿರಾಕರಿಸದರು. ‘ಪಕ್ಷಗಳು ಮತ್ತು ಅಭ್ಯರ್ಥಿಗಳು ಹೆಚ್ಚಾಗಿರುವವುದರಿಂದ ಚುನಾವಣಾ ವೆಚ್ಚವೂ ಏರಿರಬಹುದು’ ಎಂದು ಅವರು ಅಭಿಪ್ರಾಯ ಪಟ್ಟರು.
ಇದಕ್ಕಿಂತ ಕಳವಳಕಾರಿ ಸಂಗತಿ ಎಂದರೆ ಕಾರ್ಪೋರೇಟ್ ಕಂಪನಿಗಳಿಂದ ನೀಡಲ್ಪಡುವ ಅಪಾರದರ್ಶಿಕ ದೇಣಿಗೆಗಳು’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಯಾವೊಂದು ಪಕ್ಷವೂ ಚುನಾವಣಾ ಸುಧಾರಣೆಗಳ ಬಗ್ಗೆ ಗಂಭೀರ ನಿಲುವನ್ನೇ ಹೊಂದಿಲ್ಲದಿರುವುದು ಆತಂಕದ ವಿಷಯ ಎಂದು ಅವರು ಬೇಸರ ವ್ಯಕ್ತಪಡಿಸಿದರು.
‘ಈ ಚುನಾವಣಾ ವ್ಯವಸ್ಥೆಯ ಬಗ್ಗೇ ಅವರಿಗೆ (ರಾಜಕಾರಣಿಗಳಿಗೆ) ವೈಯಕ್ತಿಕವಾದ ಸಂತೋಷವಿಲ್ಲ. ಆದರೆ ಒಟ್ಟಾಗಿ, ಈಗಿರುವ ಯಥಾಸ್ಥಿತಿಯೇ ಮುಂದುವರೆಯಲೆಂದು ಅವರೆಲ್ಲ ಬಯಸಿದ್ದಾರೆ’ ಎಂದೂ ಕೃಷ್ಣಮೂರ್ತಿ ಟೀಕಿಸಿದರು. ವಿ.ವಿ ಪ್ಯಾಟ್‍ಗಳಿಲ್ಲದೆಯೂ ಇವಿಯಂಗಳು ವಿಶ್ವಾಸಾರ್ಹ ಎಂದು ತಮ್ಮ ಹಿಂದಿನ ನಿಲುವನ್ನು ಮತ್ತೆ ಸ್ಪಷ್ಟಪಡಿಸಿದರು.


