Homeಅಂಕಣಗಳು`ನಾಳೆ ಬೆಳಿಗ್ಗೆ ಐತಿ ಮಹಾ ಮರಣ, ಶರಣಂತಾವ ನಮ್ಮ ಪಂಚ ಹರಣ'

`ನಾಳೆ ಬೆಳಿಗ್ಗೆ ಐತಿ ಮಹಾ ಮರಣ, ಶರಣಂತಾವ ನಮ್ಮ ಪಂಚ ಹರಣ’

- Advertisement -
- Advertisement -

’ನಾಳೆ ಬೆಳಿಗ್ಗೆ ಐತಿ ಮಹಾ ಮರಣ, ಶರಣಂತಾವ ನಮ್ಮ ಪಂಚ ಹರಣ’ ಎನ್ನುವುದು ದ.ರಾ. ಬೇಂದ್ರೆ ಅವರ ಆಲ್ ಟೈಮ್ ಫೇವರಿಟ್ ಕವಿತೆಗಳಲ್ಲಿ ಒಂದು.

ದೇಶಭಕ್ತನೊಬ್ಬನಿಗೆ ದೇಶದ್ರೋಹಿ ಪಟ್ಟ ಹೊರಸಿದ ಜನ ವಿರೋಧಿ, ಜನತಂತ್ರ ವಿರೋಧಿ ಸರ್ಕಾರದ ನಾಯಕರಿಗೆ ಸುಬುದ್ಧಿ ಸಿಗಲಿ ಅಂತ ಬೇಡಿಕೊಂಡು ಆ ದೇಶಭಕ್ತ ತನ್ನ ಗಲ್ಲು ಶಿಕ್ಷೆಯ ಕೆಲ ದಿನ ಮುಂಚೆ ಬರೆದ ಹಾಡು ಇದು.

ಉತ್ತರ ಕರ್ನಾಟಕದ ಲಾವಣಿ ಶೈಲಿಯಲ್ಲಿ ಬರೆದ ಈ ಹಾಡು ಭಾವಾನುವಾದವಾದರೂ ಕೂಡ ಸ್ವಂತ ಎನ್ನಿಸುವಷ್ಟು ಗಟ್ಟಿ. ಅದು ಫಿಲಿಪಾಯಿನ್ಸ್ ದೇಶದ ಅಪ್ರತಿಮ ನಾಯಕ ಡಾ. ಜೋಸೆ ರಿಜಾಲ ಅವರು ಬರೆದ ನನ್ನ ಕೊನೆಯ ನಮಸ್ಕಾರ (ಮೀ. ಅಲತಿಮೋ ಅಡಿಯೋಸ) ಸ್ಪ್ಯಾನಿಷ್ ಭಾಷೆಯ ಕವನದ ಅನುವಾದ. ಇದನ್ನ ನಿಕ್ ಯೋಕಿನ ಅನ್ನುವ ಕವಿ ಇಂಗ್ಲಿಷಿಗೆ ಭಾಷಾಂತರ ಮಾಡಿದ. ಅದನ್ನ ಬೇಂದ್ರೆ ಅವರು ಭಾರತೀಯ ಸಂಸ್ಕೃತಿಗೆ ಹೊಂದುವಂತೆ ಕನ್ನಡೀಕರಿಸಿದರು.

ದಾ.ರಾ. ಬೇಂದ್ರೆ 

ಇದರ ಹಿನ್ನೆಲೆ ನೋಡಲಿಕ್ಕೆ ಹೋದರೆ ಅದು ಇನ್ನೂ ಮಜಾ ಐತಿ.

ನಮ್ಮನ್ನ ಹೆಂಗ ಬ್ರಿಟಿಷರು ಅಳಿದರೋ ಹಂಗ ಫಿಲಿಪಾಯಿನ್ಸ್ ದೇಶಾನ ಸ್ಪೇನು ದೇಶದ ರಾಜ ಮನೆತನ ನೂರಾರು ವರ್ಷ ಆಳಿತು. ಪೂರ್ವ ಏಷಿಯಾದ ಆ ಪುಟ್ಟ ದೇಶದ ಸ್ಥಳೀಯ ಭಾಷೆ, ಧರ್ಮ, ಸಂಸ್ಕೃತಿ, ಪರಂಪರೆ ಎಲ್ಲವನ್ನೂ ಅಳಿಸಿ ಹಾಕಿ ಯುರೋಪಿನ ಛಾಪು ಮೂಡಿಸಿತು.

ಅವರ ಸಾಂಸ್ಕೃತಿಕ ರಾಜಕಾರಣದ ವಿರುದ್ಧ ಸಿಡಿದು ಎದ್ದವರು ಡಾ. ಜೋಸೆ ರಿಜಾಲ. ಹಾಂಗ್‌ಕಾಂಗಿನಲ್ಲಿ ಕಣ್ಣಿನ ವೈದ್ಯನಾಗಿದ್ದ ಇವರು ತನ್ನ ದೇಶದ ಜನ ನರಳೂವುದನ್ನ ಕಂಡು ಸಿಟ್ಟಿಗೆದ್ದು ತನ್ನ ಊರಿಗೆ ಮರಳಿದರು. ಅಲ್ಲಿನ ಸ್ನೇಹಿತರ ಜತೆ ಸೇರಿಕೊಂಡು ಅಹಿಂಸಾತ್ಮಕ ಹೋರಾಟ ಹಾಗೂ ಅಸಹಕಾರ ಚಳವಳಿ ನಡೆಸಿದರು.

ಇವನ ಜನಪ್ರಿಯ ಪುಸ್ತಕಗಳಾದ `ನನ್ನನ್ನು ಮುಟ್ಟಬೇಡ’ ಹಾಗೂ `ನಮ್ಮನ್ನು ಆಳುವ ದುರಾಸೆ’ ಹಾಗೂ ಅಸಂಖ್ಯ ಕವನಗಳು ಜನರನ್ನು ಸರಕಾರದ ವಿರುದ್ಧ ರೊಚ್ಚಿಗೆ ಎಬ್ಬಿಸಿ, ಅವರಲ್ಲಿ ದೇಶದ್ರೋಹದ ಭಾವನೆ ತುಂಬಿ, ಅವರನ್ನು ರಕ್ತ ಕ್ರಾಂತಿಯ ಕಡೆಗೆ ದಬ್ಬಿದವು ಅಂತ ಸ್ಪೇನು ರಾಜರ ಪ್ರತಿನಿಧಿ ನಿರ್ಧರಿಸಿದ. ರಿಜಾಲನನ್ನು ಗುಂಡು ಹೊಡೆದು ಸಾಯಿಸಬೇಕು ಅನ್ನುವ ಫರಮಾನು ಹೊರಟಿತು.

ಅಲ್ಲಿನ ನ್ಯಾಯಾಲಯದ ನ್ಯಾಯಮೂರ್ತಿಗಳು ಸ್ಪೇನ್ ದೇಶದವರು ಹಾಗೂ ಫಿಲಿಪಾಯಿನ್ಸ್ನವರು ಇಬ್ಬರೂ ಇದ್ದರು. ಅವರಿಗೆ ಯಾರಿಗೂ ಈ ಕವಿಯ ಮೇಲೆ ಸುಳ್ಳು ಆರೋಪ ಹೊರಿಸಿ ಅನ್ಯಾಯವಾಗಿ ಗಲ್ಲಿಗೆ ಕಳಸಲಿಕ್ಕೆ ಹತ್ತಿದಾರು ಅಂತ ಅನ್ನಿಸಲಿಲ್ಲ.

ಬರೇ 35 ವರ್ಷದ ಅವನನ್ನು ತಿಂಗಳಾನು ಗಟ್ಟಲೆ ಜೈಲಿಗೆ ಹಾಕಲಾಯಿತು. ಜೈಲ್ ಅಧಿಕಾರಿಗಳು ಅವನಿಂದ ಪೆನ್ನು – ಕಾಗದ ಕಸಕೊಂಡರು. ಬಿಳಿ ಅರಿವೆ ಕೊಟ್ಟರೆ ಅದರ ಮೇಲೆ ಕವನ ಗೀಚಿಬಿಟ್ಟಾನು ಅಂತ ಅವನಿಗೆ ಕಡು ನೀಲಿ ಬಣ್ಣದ ಅರಿವೆ ಹಾಕಿದರು.

ಡಾ. ಜೋಸೆ ರಿಜಾಲ

ಅವನ ದೊಡ್ಡ ಕುಟುಂಬ ಹಾಗೂ ಅಸಂಖ್ಯ ಹಿಂಬಾಲಕರ ಪರವಾಗಿ ಅವನ ತಂಗಿ ಸೇಚುರ ನೀನಾ ಹಿಡಲಗೋನ್ನ ಮಾತ್ರ ಭೇಟಿ ಆಗಲಿಕ್ಕೆ ಅವಕಾಶಕೊಟ್ಟರು. ಅಕಿ ಮುಂದ ಅವ `ನಮ್ಮ ಮನಿಯೊಳಗ ಇದ್ದಲಿ ವಲಿಯೊಳಗ ನೋಡು, ನನ್ನ ಬೂಟಿನ ಒಳಗ ನೋಡು’ ಅಂತ ಹೇಳಿ ಕಳಿಸಿದ.

ಕಡೆ ದಿವಸ, `ಸಾಯೋ ಮುಂಚೆ ಏನಾದರೂ ಹೇಳು’ ಅಂತ ವಧಾಳು ಕೇಳಿದಾಗ `ಎಲ್ಲದಕ್ಕೂ ಒಂದು ಅಂತ್ಯ ಅನ್ನೋದು ಐತಿ’, ಅನ್ನುವ ಯೇಸು ಕ್ರಿಸ್ತನ ಮಾತು ಹೇಳಿದ. ಶಾಂತಚಿತ್ತದಿಂದ ಗುಂಡುಗಳನ್ನು ಎದುರಿಸಿದ.

ರಿಜಾಲ ಶರಣನ ಮರಣದ ನಂತರ ಅವನ ದೇಹವನ್ನ ಎಲ್ಲಿ ಧಪನ ಮಾಡಿದ್ದೇವೆ ಅಂತ ದುರುಳ ಆಡಳಿತಗಾರರು ಹೇಳಲಿಲ್ಲ. ಅವನ ಸಮಾಧಿ ಸ್ಥಳ ಗೊತ್ತಾಗಿಬಿಟ್ಟರೆ ಜನ ಅದನ್ನ ಯಾತ್ರಾ ಸ್ಥಳ ಮಾಡಿ ಬಿಡತಾರ. ಅದರಿಂದ ಮತ್ತೆ ಕ್ರಾಂತಿ ಜಾಸ್ತಿಯಾಗ್ತೇತಿ ಅಂತ ಹೇಳಿ ಮುಚ್ಚಿ ಇಟ್ಟರು.

ರಿಜಾಲನ ತಂಗಿ ಸೇಚುರ ನೀನಾ ತಮ್ಮ ಜಿಲ್ಲೆಯೊಳಗಿನ ಎಲ್ಲ ರುದ್ರಭೂಮಿ ಓಡಾಡಿ, ಎಲ್ಲಿ ಹೊಸ ಗುಂಡಿ ತಗದರೂ ಅಂತ ಪತ್ತೆ ಹಚ್ಚಿದಳು. ಆ ಸ್ಮಶಾನ ಕಾವಲುಗಾರನಿಗೆ ಒಂದು ಇಷ್ಟು ರೊಕ್ಕ ಕೊಟ್ಟು ಆ ಹೊಸ ಸಮಾಧಿಯ ಮ್ಯಾಲೆ ಮೂರು ಅಕ್ಷರ ಬರೆದು ಗುರ್ತು ಇಡೋ ಹಂಗ ಮಾಡಿದಳು.

ಅವ ಸತ್ತು ಹೋದ ಎಷ್ಟೋ ದಿನದ ನಂತರ ಸ್ಪೇನು ದೇಶ ಅಮೆರಿಕದ ಜೊತೆ ಯುದ್ಧ ಮಾಡಿ ಸೋತು ಹೋತು. ಆ ಅಮೆರಿಕದ ಸರಕಾರ ರಿಜಾಲನ ಕುಟುಂಬದವರಿಗೆ ಅವನ ಮನಿ ವಾಪಸ್ ಕೊಟ್ಟಿತು. ಅದರ ಇದ್ದಲಿ ವಲಿ ಗೂಡಿನಾಗ ನನ್ನ ಕೊನೆಯ ನಮಸ್ಕಾರ ಅನ್ನೋ ಕವನ ಇತ್ತು. ಅದು ಇವತ್ತು ಬರೇ ಫಿಲಿಪಾಯಿನಸ ಅಲ್ಲ, ಇಡೀ ಪೂರ್ವ ಏಶಿಯದ ಜನರಿಗೆ ದಾರಿ ದೀಪ ಅನ್ನೋ ಥರ ಆಗೇದ. ತನ್ನ ಕಾಲನಿಯ ಜನರನ್ನ ಪಶುಗಳಿಗಿಂತ ಕೆಟ್ಟದಾಗಿ ನಡೆಸಿಕೊಂಡ ಸ್ಪೇನು ದೇಶದಾಗ ಸಹಿತ ಈ ಹಾಡು ಜನಪ್ರಿಯ.

ನಾಳೆ ಬೆಳಿಗ್ಗೆ ಐತಿ ಮಹಾ ಮರಣ ಅನ್ನೋ ಹಾಡನ್ನು ಕನ್ನಡಮ್ಮನ ಚೊಚ್ಚಲ ಮಗ ಡಾ. ಎಂ.ಎಂ. ಕಲಬುರಗಿ ಅವರು ಲಾವಣಿ ಶೈಲಿಯೊಳಗ ಓದಿದಾರು. ಅದನ್ನ ಯುವ ಕಲಾ ಪರಿಚಾರಕ ಸಮಂತ ಪತ್ತಾರ ಅವರು ತಮ್ಮ ಬೇಂದ್ರೆಪೀಡಿಯ ತಾಣದಾಗ ಹಾಕಿದಾರ. ಅದನ್ನ ನೋಡುವಾಗ ಇಷ್ಟೆಲ್ಲಾ ನೆನಪ ಆತು.

ಎಂ. ಎಂ. ಕಲ್ಬುರ್ಗಿ

ಅದು ಯಾಕ ಆತು ಅಂತೀರಿ? ಕಂಪನಿ ಹಾಗೂ ಬ್ರಿಟಿಷ್ ಸರಕಾರದ ವಿರುದ್ಧ ಮೂರು ನೂರು ವರ್ಷ ನಡೆದ ಸ್ವಾತಂತ್ರ‍್ಯ ಸಂಗ್ರಾಮದ ನಂತರ ನಮ್ಮದೇ ಆದ ಸರಕಾರ ಬಂದದ. ಈ ಘನ ಸರಕಾರದ ಮುಖ್ಯಸ್ಥರು ಟೀಕೆ – ಟಿಪ್ಪಣಿ ಮೀರಿದವರಾಗಿ ಬೆಳದು ಬಿಟ್ಟಾರ.

ಈಗಿನ ಅಡಿಗಿ ಮನಿಯೊಳಗ ನಾನ್‌ಸ್ಟಿಕ್ ಹಂಚು ಇರತವಲ್ಲ, ಅದಕ್ಕ ಪಾಲಿ ಟೆಟ್ರ ಫ್ಲೊರೋಯಿತೇಲಿನ ಅಂತ ಒಂದು ಬಣ್ಣ ಹಚ್ಚಿರತರ. ಅದಕ್ಕನ, ಅದಕ್ಕ ಎಣ್ಣೆ, ಗಸಿ, ಹೊಲಸು, ಏನೂ ಅಂಟಿಕೊಳ್ಳೋದಿಲ್ಲ. ಅದಕ್ಕ ಟೆಫ್ಲಾನು ಅಂತ ಹೆಸರು. ನಮ್ಮ ಸರ್ಕಾರಕ್ಕ ಟೆಫ್ಲಾನು ಹತ್ತಿಬಿಟ್ಟದ.

ಈ ಯಿತೇಲಿನ ಅಂದ್ರ ಏನು ಅಂತ ಮಾಡಿರಿ? ಅದು ಒಂದು ರೀತಿ ಅಲಕೋಹಾಲು. ಹಂಗ ಅಂತ ಮತ್ತು ಬರಿಸುವ ಮದ್ಯ ಅಲ್ಲ. ಜೀವ ತೆಗಿಯೋ ಮದ್ಯ. ಸರಕಾರವನ್ನ ಇಷ್ಟ ನಾನ್ ಸ್ಟಿಕ್ ಮಾಡಿರುವ ನಮ್ಮ ಜನ ಅದು ಎಲ್ಲಿ ಮಟಾ ಅಮಲಿನ ಒಳಗ ಮುಳುಗಿ ಬಿಟ್ಟಾರ ಅನ್ನೋದು ನೀವ ವಿಚಾರ ಮಾಡರಿ.

ಅದರಾಗ ಕೆಲವರು ಚಿಂತಕರು, ಜನಪರ ಹೋರಾಟಗಾರರು, ಕವಿ- ಸಾಹಿತಿಗಳು ಮಾತು ಆಡಲಿಕ್ಕೆ ಹತ್ತಿದರು. ಅವರ ಮಾತು ಇವರಿಗೆ ಸಹನ ಆಗಲಿಲ್ಲ. ಇವರು ಅವರನ್ನು ಹಿಡದು ಹಿಡದು ಒಳಗ ಹಾಕಿದರು.

ಜನರ ದರ್ಬಾರಿನ ಕವಿ ಹಬೀಬ ಜಾಲಿಬ ಒಂದು ಖಾಸ್ ಮಾತು ಹೇಳಿದ್ದರು. “ನೀನು ಎಷ್ಟು ಛೋಲೋ ಇದ್ದಿ ಅಂದ್ರ ನಿನ್ನ ಕಾಲದಾಗ ಜನ ತಮ್ಮ ಸ್ವಂತ ಖರ್ಚ್ದಾಗ ಜೈಲಿನಾಗ ಅದಾರ’’. (ಅಪ್ನೆ ಖರ್ಚ್ ಪರ ಹೈ ಲೋಗ ಕೈದ ತೆರೆ ರಾಜ್ ಮೇ)

ನಾಳೆ ಅವರು ಹೇಳಿದಂಗ ಒಂದು ಕಾಲ ಬರಬಹುದು. “ನಮ್ಮನ್ನು ಎಷ್ಟು ಆಳುವವರು, ಇವರನ್ನು ನಿಂದಿಸಿ ನಾನು ಏನು ಸಾಧಿಸಿದೆ’’ ಅಂತ ಹಳ ಹಳಿಸಿ ಎಲ್ಲ ಕವಿಗಳು ತಾವೇ ತಾವಾಗಿ ಜೈಲಿಗೆ ಹೋಗಬಹುದು. ಅಲ್ಲಿ ತನಕಾ ಅಂತೂ ನಮ್ಮ ಸರಕಾರ ನಮ್ಮ ಪರವಾಗಿ ವಿಚಾರ ಮಾಡೋ ಚಿಂತಕ – ಕವಿಗಳನ್ನ ಹಿಡಿದು ಒಳಗಹಾಕತದ. ಅವರಿಗೆ ನ್ಯಾಯಾಲಯಗಳು ಬೆಂಬಲ ಕೊಡತಾವು.

ಆಳುವ ಪಕ್ಷದ ರಾಜಕಾರಣಿಗಳು ಹೊಸ ವಿಚಾರ ಮಾಡುವ ಜನರನ್ನ ದೇಶದ್ರೋಹಿಗಳು ಅಂತ ಕರಿಲಿಕ್ಕೆ ಶುರುಮಾಡತಾರ. ವಿಶ್ವವಿದ್ಯಾಲಯದವರು, ಜನರ ನಡುವೆ ಇದ್ದು ಆಂದೋಲನ ಮಾಡೋರು, ಪರಿಸರ ವಾದಿಗಳು, ವಿಜ್ಞಾನಿಗಳು, ಕಡಿಕೆ ಬ್ಯಾರೆ ಯಾರೂ ಸಿಗಲಿಲ್ಲ ಅಂದ್ರ ಟೆಲಿಫೋನ್ ಇಲಾಖೆಯವರು ದೇಶದ್ರೋಹಿಗಳು ಅಂತ ಹೇಳತಾರ.

ಪೊಲೀಸ್ ಇಲಾಖೆಯ ಎಲ್ಲ ಸಿಬ್ಬಂದಿ ಕನಿಷ್ಟ ಬಿಲ್ಲೆಗಳು ಥರ ಆಡಲಿಕ್ಕೆ ಶುರು ಮಾಡತಾರ. ಆಳುವವರ ಹೆಬ್ಬೆಟ್ಟ ಗುರುತನ್ನ ತಮ್ಮ ಹಣೆ ಮ್ಯಾಲೆ ಹಚ್ಚಿಕೊಂಡು ವಿಚಾರ ಶಕ್ತಿ ಇರೋ ಎಲ್ಲರನ್ನೂ ಹುಡುಕಲಿಕ್ಕೆ ಶುರುಮಾಡತಾರ. ನಮ್ಮ ವೋಟು ತೊಗೊಂಡು ಬೆಂಗಳೂರು- ದೆಹಲಿಗೆ ಹೋದ ನಮ್ಮವರು `ದಂಗೆ’ ಅಡಗಿಸಲು ಆದೇಶ ಕೊಡತಾರ.

ಸ್ವಾತಂತ್ರ‍್ಯ ಸಂಗ್ರಾಮವನ್ನು `ದಂಗೆ’ ಅಂತ ಕರೆದು ಹತ್ತಿಕ್ಕಿದ ಬ್ರಿಟಿಷರು ಮಾಡಿದ ಒಂದು ನೂರ ಐವತ್ತು ವರ್ಷದ ಹಳೆ ಅಪರಾಧ ಕಾನೂನುಗಳನ್ನು ಬಳಸಿ ನಮ್ಮವರು ನಮ್ಮನ್ನು ವರ್ಷಗಟ್ಟಲೆ ಒಳಗೆ ಹಾಕಲಿಕ್ಕೆ ಹತ್ಯಾರ.

ವರವರ ರಾವು, ಮಹೇಶ್ ರಾವುತ, ವರನಾನು ಗೋನಸಾಲವಿಸ, ಡಾ. ಆನಂದ್ ತೇಲುತುಂಬಡೆ, ಸುಧಾ ಭಾರದ್ವಾಜ್, ಷರಾಜಿಲು ಇಮಾಮು, ಸೇರಿದಂತೆ ನೂರಾರು ಮಂದಿ ಚಿಂತಕ, ಹೋರಾಟಗಾರ, ಕವಿಗಳನ್ನ ಈ ಸರಕಾರ ಕೈದು ಮಾಡಿದೆ. ಕೊರೊನಾ ಮಹಾಮಾರಿ ಜೈಲುಗಳಲ್ಲಿ ತಾಂಡವವಾಡುತ್ತಿದ್ದಾಗ ಕೊಲೆ, ದರೋಡೆ, ಅತ್ಯಾಚಾರ ಮಾಡಿದ ಕೆಲವು ಕೈದಿ ಗಳನ್ನ ಹೊರಗೆಬಿಟ್ಟರು. ಆದರೆ ಇವರನ್ನ ಬಿಡಲಿಲ್ಲ. ಆ ಅಪರಾಧಗಳಿಗಿಂತ ಸ್ವತಂತ್ರ ಚಿಂತನೆ ಮಾಡೋದು ಘೋರ ಅಂತ ಅವರು ತಿಳ್ಕೊಂಡಿರಬಹುದು.

ಇದರಾಗ ಎರಡು ಮುಖ್ಯ ವಿಷಯ ತಿಳಕೋಬೇಕು. ಫಿಲಿಪಾಯಿನ್ಸ್ ಪಕ್ಕದ ಕೊಂಬೊಡಿಯ ದೇಶದಾಗ ಒಬ್ಬ ಪೋಲು ಪೋಟು ಅಂತ ಭಯಂಕರ ಮನುಷ್ಯ ಇದ್ದ. ನಾನೇ ದೇವರು ಅಂತ ಘೋಷಿಸಿಕೊಂಡಿದ್ದ. ಒಂದು ದಿವಸ ತನ್ನನ್ನು ಕುರ್ಚಿಯಿಂದ ಇಳಿಸಲಿಕ್ಕೆ ವಿರೋಧಿಗಳು ಷಡ್ಯಂತ್ರ ನಡೆಸಲಿಕ್ಕೆ ಹೊಂಟಾರ ಅಂತ ಹೇಳಿ ಆ ನಾಯಕ ಹೆದರಲಿಕ್ಕೆ ಹತ್ತಿದ.

ಆ ದೇಶದಾಗ ಯಾರು ಯಾರು ಕನ್ನಡಕ ಹಾಕಿಕೊಂಡಿದ್ದರೋ ಅವರು ಎಲ್ಲಾರನ್ನ ಕೊಲ್ಲಲಿಕ್ಕೆ ಆದೇಶ ಕೊಟ್ಟ. ಅದು ಪೂರ್ತಿಯಾಗೋ ಒಳಗ ಅವನ ಆಡಳಿತ ಮುಗೀತು ಅದು ಬ್ಯಾರೆ ವಿಷಯ. ಕನ್ನಡಕ ಯಾಕೆ ಟಾರ್ಗೆಟ್ ಆತು? ಯಾಕ್ ಅಂದ್ರ ಅದನ್ನ ಹಾಕಿಕೊಂಡವರಿಗೆ ಓದಲಿಕ್ಕೆ ಬರತೀತಿ. ಓದಿದರ ನನ್ನ ವಿರುದ್ಧ ಮಸಲತ್ತು ಮಾಡತಾರ, ಇತ್ಯಾದಿ.

ಇನ್ನ ಬ್ರಿಟೀಷ ಸಾಮ್ರಾಜ್ಯದ ಮಾದರಿ ಆಡಳಿತ ನಮಗ ಏನು ಹೊಸದಲ್ಲ. ಎಪ್ಪತ್ತು – ಎಂಬತ್ತು ದಶಕದಲ್ಲಿ ನಮ್ಮನ್ನು ಆಳಿದ ಶ್ರೀಮತಿ ಇಂದಿರಾ ಗಾಂಧಿ ಅವರು ಹಿಂಗ ಮಾಡಿದರು. ಒಂದು ಅಂದಾಜಿನ ಪ್ರಕಾರ 7,000 ಜನ ಸಾಹಿತಿ- ಪತ್ರಕರ್ತರನ್ನ ಜೈಲಿಗೆ ಹಾಕಿದರು. ಪೊಲೀಸರು ಅವರಿಗೆ ಚಿತ್ರ ಹಿಂಸೆ ಕೊಟ್ಟರು. ಆ ನಂತರ ಜನ ನನ್ನ ಬಗ್ಗೆ ಏನು ಮಾತು ಆಡಲಿಕ್ಕೆ ಹತ್ತಿದಾರ ಅನ್ನೋದು ನಂಗ ಗೊತ್ತ ಆಗಲಿಲ್ಲ ಅಂತ ಖುಷ್ವಂತ ಸಿಂಗ್ ಅವರ ಹತ್ತಿರ ಹೇಳಿಕೊಂಡರಂತ.

ತುರ್ತು ಪರಿಸ್ಥಿತಿ ಹೇರಿಕೆಯ ನೆನಪು: ಪ್ರಜಾಪ್ರಭುತ್ವ ಸಾಯುವ ಬಗೆ ಬದಲಾಗಿದೆ

ಜನರ ಪರವಾಗಿ ಚಿಂತನೆ ಮಾಡೋರು, ಕವನ ಬರಿಯೋರು, ಲೇಖನ ಬರಿಯೋರು, ಟೀಕೆ ಮಾಡೋರು ಎಲ್ಲರನ್ನೂ ಹಿಡದು, ಒಳಗ ಹಾಕಿದರ, ಕಡಿಕೆ ಜನ ಏನು ಮಾತು ಆಡಲಿಕ್ಕೆ ಹತ್ಯಾರ ಅನ್ನೋದು ಮ್ಯಾಲೆ ಕೂತವರಿಗೆ ಗೊತ್ತು ಆಗೋದಿಲ್ಲ. ಅವರ ದಂತಗೋಪುರದೊಳಗ, ಹೊಗಳು ಭಟ್ಟರ ಭಜನೆ ಸದ್ದು ಜನರ ಕ್ಷೀಣ ದನಿಯನ್ನು ಮುಳುಗಿಸಿಬಿಡತದ.

ಇಪ್ಪತ್ತು ವರ್ಷ ಆಡಳಿತ ನಡೆಸಿದ ಪಕ್ಷ ಹಾಗೂ ಅದರ ಹಿಂದಿನ ಒಂದು ನೂರು ವರ್ಷದ ಇತಿಹಾಸ ಹೊಂದಿರುವ ಸಂಘಟಕರಿಗೆ ಇದು ಗೊತ್ತು ಇರಲಾರದೇ ಇರಲಿಕ್ಕೆ ಸಾಧ್ಯವೇ ಇಲ್ಲ. ಅಲ್ಲವೇ, ಮನೋಲ್ಲಾಸಿನಿ?


ಓದಿ: ಕಾಶಿ ಮತ್ತು ಮಥುರಾದಲ್ಲಿ ಇನ್ನೂ ಎರಡು ಉಳಿದಿವೆ ಅವುಗಳನ್ನು ಅಳಿಸಿಹಾಕಬೇಕು: ಕೆ. ಎಸ್. ಈಶ್ವರಪ್ಪ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ‘ನಾಳೆ ಐತಿ…’ –ತುಂಬ ಅರ್ಥಪೂರ್ಣ ಬರಹ. ಕ್ಲಿಷ್ಟ ವಿಷಯಗಳನ್ನು ಜನಮಾನಸಕ್ಕೆ ಇಳಿಯುವಂತೆ ಭಾಷೆಯನ್ನು ಒಗ್ಗಿಸಿಕೊಂಡಿದ್ದು ಮತ್ತು ಅಪಾರ ಮಾಹಿತಿಯನ್ನು ಸರಳಿಕರಿಸಿ ನೀಡಿದ್ದು ಇಷ್ಟವಾಯಿತು.
    ಮಲ್ಲನಗೌಡರ್ ಪಿಕೆ, ಗದಗ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...