ಜಮ್ಮುಕಾಶ್ಮೀರದಲ್ಲಿ 370 ಆರ್ಟಿಕಲ್ ರದ್ದಾಗಿ ಮೂರು ತಿಂಗಳು ಕಳೆಯುತ್ತಿರುವ ಬೆನ್ನಲ್ಲೇ, ವಸ್ತುಸ್ಥಿತಿ ಅಧ್ಯಯನಕ್ಕೆ ಐರೋಪ್ಯ ಒಕ್ಕೂಟ ರಾಷ್ಟ್ರಗಳ ೨೮ ಮಂದಿಯ ತಂಡ ಮಂಗಳವಾರ ಭೇಟಿ ನೀಡಲಿದೆ. ಕಾಶ್ಮೀರದಲ್ಲಿ ಈಗಿನ ಪರಿಸ್ಥಿತಿ ಹೇಗಿದೆ..? ಗಡಿಯಲ್ಲಿ ಎಲ್ಲವೂ ಸರಿಯಾಗಿದೆಯಾ..? ಎಂಬ ಬಗ್ಗೆ ಸತ್ಯಾಸತ್ಯತೆ ತಿಳಿಯಲು ತಂಡ ಭೇಟಿ ನೀಡುತ್ತಿದೆ ಎಂದು ಪ್ರಧಾನಮಂತ್ರಿ ಸಚಿವಾಲಯ ಮಾಹಿತಿ ನೀಡಿದೆ.

ದೆಹಲಿ ಮತ್ತು ಶ್ರೀನಗರ ಮೂಲಗಳ ಮಾಹಿತಿ ಪ್ರಕಾರ ೨೮ ಮಂದಿಯ ಐರೋಪ್ಯ ಒಕ್ಕೂಟ ನಿಯೋಗ ಕಾಶ್ಮೀರಕ್ಕೆ ಭೇಟಿ ನೀಡಲಿದೆ. ಇಟಲಿ, ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ಪೋಲ್ಯಾಂಡ್ ರಾಷ್ಟ್ರಗಳ ಪ್ರಮುಖರು ಬರಲಿದ್ದಾರೆ. ವಸ್ತುಸ್ಥಿತಿಯ ಅಧ್ಯಯನ ಮಾಡಲಿದ್ದಾರೆ. ವಾಣಿಜ್ಯ, ವ್ಯಾಪಾರ-ವಹಿವಾಟು, ಹೂಡಿಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಅಂತಾ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಐರೋಪ್ಯ ಒಕ್ಕೂಟ ನಿಯೋಗಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದ್ದು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಿದ್ದಾರೆ. ನಿಯೋಗ ಕೆಲ ಕಾಶ್ಮೀರಿ ಜನತೆಯನ್ನು ಭೇಟಿ ಮಾಡಿ ಚರ್ಚೆ ನಡೆಸಲಿದೆ. ಪಿಡಿಪಿ ಪಕ್ಷದ ಮಾಜಿ ಸಚಿವ ಮುಜಫ್ಫರ್ ಬೇಗ್, ಜಮ್ಮುಕಾಶ್ಮೀರ ಬಿಡಿಸಿ ಚುನಾವಣೆಯಲ್ಲಿ ವಿಜೇತರಾದ ನಾಯಕರನ್ನೂ ಸಹ ನಿಯೋಗ ಭೇಟಿ ಮಾಡಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಕಾಶ್ಮೀರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಲಿರುವ ಐರೋಪ್ಯ ಒಕ್ಕೂಟ ನಿಯೋಗದ ಅಧ್ಯಯನ ಫಲಪ್ರದವಾಗಿರಲಿದೆ. ಜಮ್ಮು, ಕಾಶ್ಮೀರ ಮತ್ತು ಲಡಾಖ್‌ನಲ್ಲಿನ ಸಂಪ್ರದಾಯ, ಸಂಸ್ಕೃತಿ, ಧಾರ್ಮಿಕ ವೈವಿಧ್ಯತೆಯ ಅಧ್ಯಯನಕ್ಕೂ ಸಹಕಾರಿಯಾಗಲಿದೆ. ಪ್ರಾದೇಶಿಕವಾಗಿ ಕಾಶ್ಮೀರದ ಹಲವು ಭಾಗಗಳ ಅಭಿವೃದ್ಧಿಗೆ ಒತ್ತು ನೀಡುತ್ತಿರುವ ಬಗ್ಗೆಯೂ ನಿಯೋಗ ಮಾಹಿತಿ ಪಡೆದುಕೊಳ್ಳಲಿದೆ ಎಂದು ಹೇಳಿದರು.
ಇನ್ನು ಕಾಶ್ಮೀರಕ್ಕೆ ಭೇಟಿ ನೀಡಲು ಐರೋಪ್ಯ ಒಕ್ಕೂಟ ನಿಯೋಗಕ್ಕೆ ಅನುಮತಿ ನೀಡಿರುವ ಪ್ರಧಾನಮಂತ್ರಿ ಸಚಿವಾಲಯ ವಿಪಕ್ಷ ನಾಯಕರ ಭೇಟಿಗೆ ಅನುಮತಿ ನೀಡುತ್ತಿಲ್ಲ ಏಕೆ..? ಎಂದು ವಿಪಕ್ಷಗಳು ತರಾಟೆ ತೆಗೆದುಕೊಂಡಿವೆ.
ಕಾಂಗ್ರೆಸ್‌ನ ಹಿರಿಯ ನಾಯಕ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ. ವಿಪಕ್ಷ ನಾಯಕರು ಕಾಶ್ಮೀರಕ್ಕೆ ಭೇಟಿ ನೀಡುವ ಪ್ರಸ್ತಾಪಕ್ಕೆ ಅನುಮತಿ ನೀಡದ ಕೇಂದ್ರ ಸರ್ಕಾರ, ಐರೋಪ್ಯ ಒಕ್ಕೂಟ ನಿಯೋಗದ ವಸ್ತುಸ್ಥಿತಿ ಅಧ್ಯಯನಕ್ಕೆ ಅನುಮತಿ ನೀಡುತ್ತಿದೆ. ಈ ಮೂಲಕ ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ದ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
’ರಾಷ್ಟ್ರೀಯ ನಾಯಕನೆಂದು ಎದೆ ತಟ್ಟಿಕೊಂಡು ಹೇಳುವ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ನಾಯಕರಿಗೆ ಕಾಶ್ಮೀರ ಭೇಟಿಗೆ ಅವಕಾಶ ನೀಡದೆ, ವಿದೇಶಿ ನಾಯಕರಿಗೆ ಅನುಮತಿ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು. ಕಾಂಗ್ರೆಸ್ ಯುವ ನಾಯಕ ಜೈವೀರ್ ಶೇರ್‌ಗಿಲ್ ಮಾತನಾಡಿ, ವಿಪಕ್ಷಗಳ ನಿಯೋಗಕ್ಕೆ ಭೇಟಿಗೆ ಅವಕಾಶ ನೀಡದಿರುವ ಕ್ರಮ ಎಷ್ಟು ಸರಿ..?, ಜಮ್ಮುಕಾಶ್ಮೀರಕ್ಕೆ ಮೂಲ ಸೌಲಭ್ಯಗಳ ಅಗತ್ಯತೆ ಇದೆ. ಜನರಿಗೆ ಇಂಟರ್ನೆಟ್ ಅವಶ್ಯಕತೆಯಿದೆ. ಆದರೆ ಅದನ್ನೇ ಅಲ್ಲಿಯ ಜನತೆಗೆ ನೀಡುತ್ತಿಲ್ಲ ಎಂದು ವಿಪಕ್ಷದ ಪ್ರಮುಖರು ಕೇಂದ್ರದ ನಿಲುವನ್ನು ಖಂಡಿಸಿದ್ದಾರೆ.


