ಆರ್ಥಿಕವಾಗಿ ಹಿಂದುಳಿದ ವರ್ಗ(ಇಡಬ್ಲ್ಯೂಎಸ್) ಗಳಿಗೆ ಒಕ್ಕೂಟ ಸರ್ಕಾರ ನೀಡಿರುವ 10% ಮೀಸಲಾತಿಯನ್ನು ಸುಪ್ರಿಂಕೋರ್ಟ್ ಸೋಮವಾರ ಎತ್ತಿ ಹಿಡಿದಿದೆ. ಇದನ್ನು ವಿರೋಧಿಸಿರುವ ತಮಿಳುನಾಡು ಮುಖ್ಯಮಂತ್ರಿ ಇಂದಿನ ತೀರ್ಪು ಸಾಮಾಜಿಕ ನ್ಯಾಯಕ್ಕಾಗಿ ನಡೆದ ಶತಮಾನದ ಹೋರಾಟಕ್ಕೆ ಹಿನ್ನಡೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡು ಸರ್ಕಾರ ಕೂಡಾ ಇಡಬ್ಲ್ಯೂಎಸ್‌ಗಳಿಗೆ 10% ಮೀಸಲಾತಿ ವಿರೋಧಿಸಿ ಸುಪ್ರಿಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಸುಪ್ರೀಂಕೋರ್ಟ್ ತಮಿಳುನಾಡು ಸೇರಿದಂತೆ ದೇಶದಾದ್ಯಂತ ದಾಖಲಿಸಲಾದ ಒಟ್ಟು 40 ಅರ್ಜಿಗಳನ್ನು ಆಲಿಸಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸೋಮವಾರ ತೀರ್ಪು ಪ್ರಕಟಿಸಿರುವ ಸುಪ್ರೀಂಕೋರ್ಟ್, “ಇಡಬ್ಲ್ಯೂಎಸ್ 10% ಮೀಸಲಾತಿ ತಾರತಮ್ಯವಲ್ಲ ಮತ್ತು ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುವುದಿಲ್ಲ. 50% ಸೀಲಿಂಗ್ ಮಿತಿಯ ನಿಯಮವನ್ನು ಉಲ್ಲಂಘಿಸುವುದಿಲ್ಲ” ಎಂದು ಹೇಳಿದೆ.
ಇದನ್ನೂ ಓದಿ: ಇಡಬ್ಲ್ಯುಎಸ್ ಮೀಸಲಾತಿಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್!
ಐವರು ನ್ಯಾಯಮೂರ್ತಿಗಳಲ್ಲಿ ನಾಳೆ ನಿವೃತ್ತರಾಗಲಿರುವ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಮತ್ತು ನ್ಯಾಯಮೂರ್ತಿ ರವೀಂದ್ರ ಭಟ್ ಮಾತ್ರ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಆರ್ಥಿಕ ದುರ್ಬಲತೆ, ಆರ್ಥಿಕ ಹಿಂದುಳಿದಿರುವಿಕೆ ಸಂವಿಧಾನ ಈ ತಿದ್ದುಪಡಿಯ ಬೆನ್ನೆಲುಬಾಗಿದೆ. ಆದರೆ ಈ ತಿದ್ದುಪಡಿಯು ಸಾಂವಿಧಾನಿಕವಾಗಿ ಅಸಮರ್ಥನೀಯವಾಗಿದೆ. ಜೊತೆಗೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳು, ಇತರೆ ಹಿಂದುಳಿದ ವರ್ಗಗಳು (ಒಬಿಸಿ) ಯಂತಹ ವರ್ಗಗಳನ್ನು ಈ ಮೀಸಲಾತಿಯಿಂದ ಹೊರತುಪಡಿಸಿರುವುದು ಸಂವಿಧಾನಾತ್ಮಕವಾಗಿ ಅನುಮತಿಸಲಾಗುವುದಿಲ್ಲ” ಎಂದು ರವೀಂದ್ರ ಭಟ್ ಹೇಳಿದ್ದಾರೆ.
ಇಡಬ್ಲ್ಯೂಎಸ್ ಮೀಸಲಾತಿಯನ್ನು ವಿರೋಧಿಸಿ ಆರಂಭದಿಂದಲೂ ಹೋರಾಟ ನಡೆಸುತ್ತಲೆ ಬಂದಿರುವ ಚಿಂತಕ ಶ್ರೀಪಾದ ಭಟ್ ಅವರು, ಸುಪ್ರಿಂಕೋರ್ಟ್‌ನ ತೀರ್ಪು ನಿರಾಶೆದಾಯಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಈ ವಿಚಾರವನ್ನು ಆರಂಭದಿಂದಲೂ ಗಂಭೀರವಾಗಿ ತೆಗೆದುಕೊಂಡು ಹೋರಾಟ ರೂಪಿಸದ ಸಾಮಾಜಿಕ ಸಂಘಟನೆಗಳ ಬಗ್ಗೆಯೂ ನನಗೆ ನಿರಾಸೆಯಿದೆ” ಎಂದು ಅವರು ಹೇಳುತ್ತಾರೆ.
ಇದನ್ನೂ ಓದಿ: 10% ಮೀಸಲಾತಿ: ಆರ್‌ಎಸ್‌ಎಸ್ ಮಂದಿ ಹಬ್ಬಿಸಿರುವ 100% ಸುಳ್ಳುಗಳು!
ನಾನುಗೌರಿ.ಕಾಂ ಜೊತೆಗೆ ಮಾತನಾಡಿ ಅವರು, “ಬಹಳ ಮುಖ್ಯವಾಗಿ ನ್ಯಾಯಾಂಗದಲ್ಲಿ ಪ್ರಾತಿನಿಧ್ಯವಿಲ್ಲದಿರುವುದು ಕೂಡಾ ಇಂತಹ ತೀರ್ಪಿಗೆ ಕಾರಣವಾಗುತ್ತದೆ. ಮುಸ್ಲಿಮರ ಪ್ರಾತಿನಿಧ್ಯವಿಲ್ಲ ಎಂದರೆ ಅವರ ಪರವಾಗಿ ತೀರ್ಪು ಬರುವುದಿಲ್ಲ. ದಲಿತರ ಪ್ರಾತಿನಿಧ್ಯವಿಲ್ಲ ಎಂದರೆ ದಲಿತರ ಪರವಾಗಿ ತೀರ್ಪು ಬರುವುದಿಲ್ಲ. ಹಾಗೆಂದ ಮಾತ್ರಕ್ಕೆ ಪ್ರಾತಿನಿಧ್ಯ ಇದ್ದ ಮಾತ್ರಕ್ಕೆ ಆಯಾ ಸಮುದಾಯದ ಪರವಾಗಿ ತೀರ್ಪು ನೀಡುತ್ತಾರೆ ಎಂದೇನೂ ಇಲ್ಲ. ಆದರೆ ಆಯಾ ಸಮುದಾಯದ ಪ್ರಾತಿನಿಧ್ಯ ಎಂಬುವುದು ಮೂಲಭೂತವಾದ ವಿಚಾರವಾಗಿದೆ” ಎಂದು ಶ್ರೀಪಾದ ಭಟ್ ಅವರು ಹೇಳುತ್ತಾರೆ.
“ನ್ಯಾಯಾಲಯದಲ್ಲಿ ಕೂತಿರುವ ನ್ಯಾಯಮೂರ್ತಿಗಳು ಕೂಡಾ ನಮ್ಮ ತರ ಮನುಷ್ಯರೆ ಆಗಿದ್ದಾರೆ. ಅವರು ದಿನನಿತ್ಯದ ವಿದ್ಯಾಮಾನದಿಂದ ಪ್ರಭಾವಿತರಾಗಿ ತೀರ್ಪು ನೀಡುತ್ತಾ ಇರುತ್ತಾರೆ. ಆರಂಭದಿಂದಲೂ ಈ ಬಗ್ಗೆ ಹೋರಾಟವೆ ಇಲ್ಲದ್ದರಿಂದ ಅವರು ಕೂಡಾ ಇದರ ಬಗ್ಗೆ ಅಷ್ಟೆನೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಒಂದು ವೇಳೆ ಹೋರಾಟಗಳು ಆಗುತ್ತಿದ್ದರೆ, ಅವರು ಕೂಡಾ ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದರು. ಒಟ್ಟಿನಲ್ಲಿ ಮೀಸಲಾತಿ ಏನಕ್ಕೆ ಬೇಕು ಎಂದು ಕೇಳುತ್ತಿದ್ದವರಿಗೆ ಮೀಸಲಾತಿ ಸಿಕ್ಕಿದೆ” ಎಂದು ಶ್ರೀಪಾದ ಭಟ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
“10% ಮೀಸಲಾತಿ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಆಗಿಲ್ಲ. ಸಾಮಾಜಿಕ ಸಂಘಟನೆಗಳು ಕೂಡಾ ಇವುಗಳನ್ನು ಹಿಡಿದು ಹೋರಾಟ ರೂಪಿಸಿಲ್ಲ. ಸಂಸತ್ತಿನಲ್ಲಿ ಕೂಡಾ ಯಾವ ಚರ್ಚೆಯೂ ಆಗದೆ ಇವುಗಳನ್ನು ಪಾಸ್ ಮಾಡಲಾಗಿತ್ತು. ನ್ಯಾಯಾಂಗವು ಸಂವಿಧಾನಕ್ಕಿಂತ ದೊಡ್ಡದಲ್ಲ. ನ್ಯಾಯಾಂಗದಲ್ಲಿ ಇರುವ ಕಾನೂನು ಪರಿಣಿತರು, ಸಾಮಾಜಿಕ ಸಂಘಟನೆಗಳು, ಹೋರಾಟಗಾರರು ಸೇರಿಕೊಂಡು ಒಂದು ತಂಡ ರಚನೆಯಾಗಿ ಇವುಗಳ ಬಗ್ಗೆ ಚರ್ಚೆ ಮಾಡಬೇಕು. ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಈ ತೀರ್ಪು ನೀಡಿರುವುದರಿಂದ ಇದನ್ನು ಮೀರಿ ಹೇಗೆ ಹೋರಾಟ ರೂಪಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯಬೇಕು” ಎಂದು ಶ್ರೀಪಾದ ಭಟ್ ಹೇಳಿದರು.
ಇದನ್ನೂ ಓದಿ: ಮೀಸಲಾತಿ ಹೆಚ್ಚಳ ಮತ್ತು ಬಿಜೆಪಿಯ ಎರಡು ನಾಲಗೆ
ಈ ಪ್ರಕರಣವನ್ನು ಮೊದಲು ಮೂವರು ನ್ಯಾಯಾಧೀಶರ ಮುಂದೆ ತರಲಾಗಿತ್ತು. ಆದರೆ ಅವರು ಅದನ್ನು 2019 ರಲ್ಲಿ ಐದು ನ್ಯಾಯಾಧೀಶರ ದೊಡ್ಡ ಪೀಠಕ್ಕೆ ವರ್ಗಾಯಿಸಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ನ್ಯಾಯಾಲಯವು ಈ ಪ್ರಕರಣವನ್ನು ನಿರಂತರವಾಗಿ ಆರೂವರೆ ದಿನಗಳ ವಿಚಾರಣೆಯನ್ನು ನಡೆಸಿತು ಮತ್ತು ಅದರ ತೀರ್ಪನ್ನು ಕಾಯ್ದಿರಿಸಿತ್ತು.


