ತೆಲುಗು ದೇಶಂ ಪಕ್ಷದ ಮುಖ್ಯಸ್ಥ, ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಕೌಶಲ ಅಭಿವೃದ್ಧಿ ನಿಗಮದ ಹಗರಣ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಆಂಧ್ರ ಪ್ರದೇಶ ಸಿಐಡಿಯ ತಂಡವು ರಾಜಮಹೇಂದ್ರವರಂನ ಕೇಂದ್ರ ಕಾರಾಗೃಹದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ವಿಚಾರಣೆಯನ್ನು ನಡೆಸುತ್ತಿದೆ.
ನಿನ್ನೆ ವಿಜಯವಾಡದ ಎಸಿಬಿ ನ್ಯಾಯಾಲಯವು ನಾಯ್ಡು ಅವರನ್ನು ಹೆಚ್ಚಿನ ವಿಚಾರಣೆಗಾಗಿ ಸಿಐಡಿಗೆ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಆಂಧ್ರಪ್ರದೇಶ ಕೌಶಲ್ಯ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಚಂದ್ರಬಾಬು ನಾಯ್ಡು ಅವರ ನ್ಯಾಯಾಂಗ ಬಂಧನವನ್ನು ವಿಜಯವಾಡ ನ್ಯಾಯಾಲಯ ಶುಕ್ರವಾರ ಸೆ. 24 ರವರೆಗೆ ವಿಸ್ತರಿಸಿತ್ತು.
ಸೆ.23 ಮತ್ತು ಸೆ. 24ರಂದು ಬೆಳಗ್ಗೆ 9.30 ರಿಂದ ಸಂಜೆ 5 ಗಂಟೆಯವರೆಗೆ ನಾಯ್ಡು ಅವರ ವಿಚಾರಣೆಗೆ ನ್ಯಾಯಾಲಯ ಅವಕಾಶ ನೀಡಿದೆ.
ಚಂದ್ರಬಾಬು ನಾಯ್ಡು ಅವರ ಎಫ್‌ಐಆರ್ ರದ್ದು ಅರ್ಜಿಯನ್ನು ಆಂಧ್ರಪ್ರದೇಶ ಹೈಕೋರ್ಟ್ ವಜಾಗೊಳಿಸಿದ ಹಿನ್ನೆಲೆಯಲ್ಲಿ ಪಕ್ಷದ ಕಾನೂನು ವಿಭಾಗವು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಲಿದೆ ಎಂದು ಟಿಡಿಪಿ ರಾಜ್ಯಾಧ್ಯಕ್ಷ ಕೆ ಅಚ್ಚನ್ ನಾಯ್ಡು ಶುಕ್ರವಾರ ಹೇಳಿದ್ದಾರೆ.
ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ವಿರೋಧ ಪಕ್ಷದ ವಿರುದ್ಧ ಸೇಡು ತೀರಿಸಿಕೊಳ್ಳುವ ವಿಧಾನವನ್ನು ಅನುಸರಿಸಿದ್ದಾರೆ ಎಂದು ಅಚ್ಚನ್ ನಾಯ್ಡು ಆರೋಪಿಸಿದ್ದಾರೆ.
ಕೌಶಲ್ಯ ಅಭಿವೃದ್ಧಿ ನಿಗಮದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಸೆಪ್ಟೆಂಬರ್ 9 ರಂದು ನಾಯ್ಡು ಅವರನ್ನು ಬಂಧಿಸಲಾಗಿತ್ತು. ಈ ಹಗರಣದಿಂದ ರಾಜ್ಯ ಸರ್ಕಾರಕ್ಕೆ 300 ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನು ಓದಿ: “ಸಿಂಗಂ”ನಂತಹ ಚಲನಚಿತ್ರಗಳು ಹಾನಿಕಾರಕ ಸಂದೇಶವನ್ನು ರವಾನಿಸುತ್ತದೆ: ಹೈಕೋರ್ಟ್ ಜಡ್ಜ್ ಹೇಳಿಕೆ


