Homeಮುಖಪುಟಚುನಾವಣಾ ಬಾಂಡ್ ಖರೀದಿಸಲು ಆರೆಸ್ಸೆಸ್‌ನವರು ಎನ್ನಲಾದ ವ್ಯಕ್ತಿಗಳಿಗೆ ರೂ. 2.5 ಕೋಟಿ ನೀಡಿದ್ದ ಮಾಜಿ ನ್ಯಾಯಾಧೀಶರಿಗೆ...

ಚುನಾವಣಾ ಬಾಂಡ್ ಖರೀದಿಸಲು ಆರೆಸ್ಸೆಸ್‌ನವರು ಎನ್ನಲಾದ ವ್ಯಕ್ತಿಗಳಿಗೆ ರೂ. 2.5 ಕೋಟಿ ನೀಡಿದ್ದ ಮಾಜಿ ನ್ಯಾಯಾಧೀಶರಿಗೆ ವಂಚನೆ

- Advertisement -
- Advertisement -

ತಮ್ಮ ಕುಟುಂಬಕ್ಕೆ ಸಹಾಯ ಮಾಡಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಸಂಘಟನೆಗೆ ಸೇರಿದವರು ಎನ್ನಲಾದ ಇಬ್ಬರು ವ್ಯಕ್ತಿಗಳಿಗೆ ಕೋಟ್ಯಾಂತರ ರೂಪಾಯಿ ಹಣ ಕೊಟ್ಟ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರು ವಂಚನೆಗೆ ಒಳಗಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಆಂಧ್ರ ಪ್ರದೇಶ ಹೈಕೋರ್ಟ್ ಮತ್ತು ಇನ್ನೊಂದು ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದ ನಿವೃತ್ತ ನ್ಯಾಯಾಧೀಶರು, ಬಿಜೆಪಿಗೆ ಚುನಾವಣಾ ಬಾಂಡ್ ಖರೀದಿಸಲು ಎಂದು ಭಾವಿಸಿ ಇಬ್ಬರು ವ್ಯಕ್ತಿಗಳಿಗೆ 2.5 ಕೋಟಿ ರೂ. ನೀಡಿದ್ದರು. ಇದಕ್ಕೆ ಪ್ರತಿಯಾಗಿ ಆ ವ್ಯಕ್ತಿಗಳು ಯುಎಸ್‌ನಲ್ಲಿ ಅವರ ಮೊಮ್ಮಕ್ಕಳಿಗೆ ಉದ್ಯೋಗ ನೀಡುವ ಭರವಸೆ ಕೊಟ್ಟಿದ್ದರು ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಹೈದರಾಬಾದ್‌ನಲ್ಲಿ ನೆಲೆಸಿರುವ ಅನಿಲ್ ಮತ್ತು ಶ್ರೀಧರ್ (ಹೆಸರು ಬದಲಿಸಲಾಗಿದೆ) ಎಂಬ ವ್ಯಕ್ತಿಗಳಿಗೆ ನಾನು ಹಣ ನೀಡಿದ್ದೇನೆ. ಎರಡು ವರ್ಷಗಳಿಂದ ಆ ಹಣವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ನ್ಯಾಯಾಧೀಶರು ಅಸಹಾಯಕತೆ ತೋಡಿಕೊಂಡಿರುವುದಾಗಿ ನ್ಯೂಸ್ ಮಿನಿಟ್ ಹೇಳಿದೆ. ಇಬ್ಬರು ವ್ಯಕ್ತಿಗಳ ವಿರುದ್ದ ನ್ಯಾಯಾಧೀಶರು ದೂರು ದಾಖಲಿಸಿದ್ದಾರೆ. ಈ ಪೈಕಿ ಒಬ್ಬನಿಗೆ ಜಾಗತಿಕ ಹಿಂದೂ ಕಾಂಗ್ರೆಸ್ ಸಂಘಟನೆಯೊಂದಿಗೆ ಸಂಪರ್ಕವಿದೆ ಎನ್ನಲಾಗಿದೆ.

ಚುನಾವಣಾ ಬಾಂಡ್‌ಗಳು ಬಡ್ಡಿ ರಹಿತ ಬಾಂಡ್‌ಗಳಾಗಿವೆ. ಇದನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ನಾಗರಿಕರು ಅಥವಾ ಕಾರ್ಪೊರೇಟ್ ಸಂಸ್ಥೆಗಳು ಯಾವುದೇ ಮೌಲ್ಯಕ್ಕೆ ಖರೀದಿಸಬಹುದು ಮತ್ತು ನೋಂದಾಯಿತ ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ನೀಡಬಹುದು. ಇತ್ತೀಚಿನ ಐತಿಹಾಸಿಕ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್‌ ಯೋಜನೆಯನ್ನು ರದ್ದುಗೊಳಿಸಿದೆ. ಅದು ಅಸಂವಿಧಾನಿಕ ಎಂದಿದೆ. ಇದರಿಂದ ಅಪರಿಚಿತರಿಗೆ ಹಣ ಕೊಟ್ಟಿರುವ ನ್ಯಾಯಾಧೀಶರು ಬಾಂಡ್‌ಗಳನ್ನು ಪಡೆಯಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಣ ಪಡೆದ ಇಬ್ಬರ ವಿರುದ್ದ ವಂಚನೆ ದೂರು ದಾಖಲಿಸಿದ್ದಾರೆ.

ನ್ಯಾಯಾಧೀಶರ ಪ್ರಕಾರ, ತಾವು ದೂರು ನೀಡಿರುವ ಅನಿಲ್ ಎಂಬ ವ್ಯಕ್ತಿಯು ತನ್ನ ಅಳಿಯನಿಗೆ ಪರಿಚಿತನಿದ್ದ. ಅವರು ನಾವು ಆರೆಸ್ಸೆಸ್‌ನ ಪ್ರಮುಖ ನಾಯಕರು ಎಂಬಂತೆ ಬಿಂಬಿಸಿಕೊಂಡಿದ್ದರು. ನಾವು ಹಣದೊಂದಿಗೆ ಚುನಾವಣಾ ಬಾಂಡ್ ಗಳನ್ನು ಖರೀದಿಸಬಲ್ಲೆವು. ಅದಕ್ಕೆ ಪ್ರತಿಯಾಗಿ ಅಮೆರಿಕಾದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರುವ ನಿಮ್ಮ ಮೊಮ್ಮಕ್ಕಳಿಗೆ ಉದ್ಯೋಗ ದೊರಕಿಸಿಕೊಡಬಲ್ಲೆವು ಎಂದು ಭರವಸೆ ನೀಡಿದ್ದರು ಎಂದು ಹೇಳಲಾಗಿದೆ.

ಈ ಭರವಸೆಯನ್ನು ನಂಬಿದ್ದ 72 ವರ್ಷದ ನ್ಯಾಯಾಧೀಶರು ತಮ್ಮ ಪತ್ನಿ ಹಾಗೂ ತಮ್ಮ ಖಾತೆಯಿಂದ ಹಣವನ್ನು ಡ್ರಾ ಮಾಡಿ, ಆ ಇಬ್ಬರು ವ್ಯಕ್ತಿಗಳಿಗೆ ನೀಡಿದ್ದರು. ನಾನು ನೀಡಿದ ಪ್ರತಿ ಪೈಸೆಯೂ ಬಿಳಿ ಹಣವಾಗಿತ್ತು ಎಂದು ತಮ್ಮ ವಹಿವಾಟಿನ ಕುರಿತು ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ. ಹಣ ಕೊಟ್ಟ ಬಳಿಕ ಚುನಾವಣಾ ಬಾಂಡ್‌ಗಳನ್ನು ಪಡೆಯಲು ಹಾಗೂ ಆ ಇಬ್ಬರು ವ್ಯಕ್ತಿಗಳು ತಮ್ಮ ಭರವಸೆ ಈಡೇರಿಸುತ್ತಾರೆ ಎಂದು ಕಾದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನ್ಯಾಯಾಧೀಶರು ಅಳಲು ತೋಡಿಕೊಂಡಿದ್ದಾರೆ.

ಹೈದಾರಾಬಾದ್‌ನ ಫಿಲ್ಮ್ ನಗರ್ ಪೊಲೀಸ್ ಠಾಣೆಗೆ ದೂರು ನೀಡಿರುವ ನ್ಯಾಯಾಧೀಶರು, “ಇಬ್ಬರು ವ್ಯಕ್ತಿಗಳ ಮಾತನ್ನು ನಂಬಿ ನನ್ನ ಪತ್ನಿ ಮತ್ತು ಪುತ್ರಿಯರು ಕಾಲ ಕಾಲಕ್ಕೆ ಅವರ ಖಾತೆಗೆ ಸುಮಾರು 2.5 ಕೋಟಿ ರೂ. ಹಣ ಕಳುಹಿಸಿದ್ದಾರೆ. ಇದಕ್ಕೆ ನನ್ನ ಬಳಿ ವಾಟ್ಸಾಪ್ ಸಂದೇಶ ಸಾಕ್ಷಿಯಿದೆ. ನಾವು ದೊಡ್ಡ ಮೊತ್ತ ನೀಡಿ ಮನವಿ ಮಾಡಿಕೊಂಡರೂ ಅವರು ನಮಗೆ ಯಾವುದೇ ಬಾಂಡ್ ಕೊಟ್ಟಿಲ್ಲ. ಅಲ್ಲದೆ, ನಮ್ಮ ಮೊಮ್ಮಕ್ಕಳಿಗೆ ಯುಎಸ್‌ನಲ್ಲಿ ಉದ್ಯೋಗ ಕೊಡಿಸುವ ಭರವಸೆಯನ್ನೂ ಈಡೇರಿಸಿಲ್ಲ. ಇದು ಚುನಾವಣಾ ಬಾಂಡ್‌ಗಳ ಹೆಸರಿನಲ್ಲಿ ಹಣ ಸಂಗ್ರಹಿಸುವುದನ್ನು ವಿರೋಧಿಸುವ ಸುಪ್ರೀಂ ಕೋರ್ಟ್ ಇತ್ತೀಚಿನ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಯಾವುದೇ ಬಾಂಡ್‌ಗಳನ್ನು ನೀಡದೆ ನನ್ನ ಬಳಿಯಿಂದ ಬರೋಬ್ಬರಿ 2.5 ಕೋಟಿ ರೂ. ಮೊತ್ತ ಸಂಗ್ರಹಿಸಿರುವುದು ಹಣ ದುರುಪಯೋಗಪಡಿಸಿಕೊಂಡಿರುವುದನ್ನು ಸ್ಪಷ್ಟಪಡಿಸುತ್ತದೆ” ಎಂದು ನ್ಯಾಯಾಧೀಶರು ಹೇಳಿದ್ದಾರೆ.

“ಬಿಜೆಪಿ ಇಂತಹ ವಂಚನೆ ಮಾಡುತ್ತದೆ ಎಂದು ನಾನು ಭಾವಿಸುವುದಿಲ್ಲ. ಇಬ್ಬರು ವ್ಯಕ್ತಿಗಳು ಆರ್‌ಎಸ್‌ಎಸ್ ಮತ್ತು ಬಿಜೆಪಿ ಹೆಸರು ಬಳಸಿಕೊಂಡು ನಮಗೆ ವಂಚಿಸಿದ್ದಾರೆ. ನಾನು ಯಾವುದೇ ರಾಜಕೀಯ ಪಕ್ಷದ ಬೆಂಬಲಿಗ ಅಲ್ಲ. ನನ್ನ ಮೊಮ್ಮಕ್ಕಳಿಗಾಗಿ ಇದೆಲ್ಲವನ್ನು ಮಾಡಿದ್ದೇನೆ. ಈ 74ನೇ ವಯಸ್ಸಿನಲ್ಲಿ ನಾನು ನನಗಾಗಿ ಏನು ಬಯಸಲು ಸಾಧ್ಯ? ನನ್ನ ಮೊಮ್ಮಕ್ಕಳು ಕೆಲಸ ಪಡೆದು ಅವರ ಫೋಷಕರನ್ನು ಚೆನ್ನಾಗಿ ನೋಡಿಕೊಳ್ಳಲಿ ಎಂಬ ಉದ್ದೇಶದಿಂದ ಇದನ್ನು ಮಾಡಿದೆ ಎಂದಿದ್ದಾರೆ.

ಚುನಾವಣಾ ಬಾಂಡ್‌ ಯೋಜನೆಯನ್ನು ರದ್ದುಗೊಳಿಸಿರುವ ಫೆಬ್ರವರಿ 15,2024 ರ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಉಲ್ಲೇಖಿಸಿದ ನ್ಯಾಯಾಧೀಶರು, ನನಗೆ ಬಾಂಡ್‌ಗಳನ್ನು ನೀಡಬೇಕೆಂದು ನಾನು ಒತ್ತಾಯಿಸಿದರೂ, ನೀಡದೆ ಹಣ ಸಂಗ್ರಹಿಸಿರುವುದು ಅಪರಾಧವಾಗಿದೆ. ಇದು ನಂಬಿಕೆಯ ಉಲ್ಲಂಘನೆ, ಕ್ರಿಮಿನಲ್ ದುರ್ಬಳಕೆ, ವಂಚನೆಯಾಗಿದೆ. ಆರೋಪಿಗಳು ಈ ವಿಷಯವನ್ನು ಇತ್ಯರ್ಥಪಡಿಸಿದರೆ, ನಾನು ಪ್ರಕರಣವನ್ನು ಹಿಂಪಡೆಯುತ್ತೇನೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ನ್ಯೂಸ್‌ ಮಿನಿಟ್ ಸುದ್ದಿ ಸಂಸ್ಥೆಯು ನ್ಯಾಯಾಧೀಶರು ಹೆಸರಿಸಿರುವ ಅನಿಲ್ ಅವರನ್ನು ಸಂಪರ್ಕಿಸಿದಾಗ ಅವರು ಆರೋಪಗಳನ್ನು ಅಲ್ಲಗಳೆದಿದ್ದಾರೆ. “ನ್ಯಾಯಾಧೀಶರ ಆರೋಪ ಸುಳ್ಳಾಗಿದೆ. ನಾನೊಬ್ಬ ಸಣ್ಣ ವ್ಯಕ್ತಿ. ನನಗೆ ಆರ್‌ಎಸ್‌ಎಸ್‌ ಅಥವಾ ಬಿಜೆಪಿಯೊಂದಿಗೆ ಯಾವುದೇ ಸಂಪರ್ಕವಿಲ್ಲ. ನಾವು ಎಂದಿಗೂ ಹಣ ಪಡೆದುಕೊಂಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ತನಗೆ ಮಾಜಿ ನ್ಯಾಯಾಧೀಶರ ಪರಿಚಯವಿದೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಎಲ್ಲರನ್ನೂ ಬಲ್ಲಂತೆ ನನಗೆ ನ್ಯಾಯಾಧೀಶರ ಪರಿಚಯವಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಆದರೆ, ಅನಿಲ್ ಅವರ ಲಿಂಕ್ಡ್ ಇನ್ ವ್ಯಕ್ತಿ ವಿವರದ ಪ್ರಕಾರ, ಅವರು ಆರೆಸ್ಸೆಸ್ ನೊಂದಿಗೆ ನಿಕಟವಾಗಿ ಕಾರ್ಯಾಚರಿಸುವ ವಿಶ್ವ ಹಿಂದೂ ಆರ್ಥಿಕ ವೇದಿಕೆಯ ಭಾಗವಾದ ವಿಶ್ವ ಹಿಂದೂ ಕಾಂಗ್ರೆಸ್ ಸಂಘಟನೆಯ ಸಮನ್ವಯಕಾರರಾಗಿದ್ದಾರೆ ಎಂದು ತಿಳಿದು ಬಂದಿದೆ.

ಫಿಲ್ಮ್ ನಗರ್ ಠಾಣೆ ಪೊಲೀಸರು ಈ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406 (ಕ್ರಿಮಿನಲ್ ವಿಶ್ವಾಸಘಾತುಕತನ), ಸೆಕ್ಷನ್420(ವಂಚನೆಯ ಕೆಲಸ)ದೊಂದಿಗೆ ಸೆಕ್ಷನ್ 34 (ಸಾಮಾನ್ಯ ಉದ್ದೇಶದೊಂದಿಗೆ ಹಲವಾರು ವ್ಯಕ್ತಿಗಳಿಗೆ ಎಸಗುವ ವಂಚನೆ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಾರಂಭಿಸಿದ್ದಾರೆ.

ಆದರೆ, ನ್ಯೂಸ್ ಮಿನಿಟ್‌ನಲ್ಲಿ ವರದಿ ಪ್ರಕಟವಾಗುತ್ತಿದ್ದಂತೆಯೆ, ನ್ಯಾಯಾಧೀಶರು ಪೊಲೀಸ್ ಠಾಣೆಯಿಂದ ತಮ್ಮ ದೂರನ್ನು ಹಿಂಪಡೆದಿದ್ದಾರೆ. ದೂರನ್ನು ಮುಕ್ತಾಯಗೊಳಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ್ದ ವಕೀಲ್‌ ಹಸನ್‌ ನಿವಾಸವನ್ನು ಕೆಡವಿದ ಸ್ಥಳೀಯಾಡಳಿತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...

ವಿಬಿ-ಜಿ ರಾಮ್ ಜಿ ಮಸೂದೆ ‘ರಾಜ್ಯ ವಿರೋಧಿ’ ಮತ್ತು ‘ಗ್ರಾಮ ವಿರೋಧಿ’: ರಾಹುಲ್ ಗಾಂಧಿ

ಎರಡು ದಶಕಗಳ ಕಾಲದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ)ಯನ್ನು ಒಂದೇ ದಿನದಲ್ಲಿ ಮೋದಿ ಸರ್ಕಾರ ರದ್ದುಗೊಳಿಸಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ...

ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ನಂತರ ರಾಜಧಾನಿ ಢಾಕಾದಲ್ಲಿ ಭುಗಿಲೆದ್ದ ಹಿಂಸಾಚಾರ

ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಬಳಿಕ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶುಕ್ರವಾರ ಬೆಳಗಿನ ಜಾವ ಹಿಂಸಾಚಾರ ಭುಗಿಲೆದ್ದಿದೆ. ಹತ್ಯೆ ಯತ್ನದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ ಹಾದಿ, ಸಿಂಗಾಪುರದ ಆಸ್ಪತ್ರೆಯಲ್ಲಿ...

ಸತ್ನಾದಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್: ಮಧ್ಯಪ್ರದೇಶ ಸರ್ಕಾರದಿಂದ ರಕ್ತ ನಿಧಿಯ ಮುಖ್ಯಸ್ಥ ಸೇರಿ ಮೂವರು ಅಮಾನತು

ಭೋಪಾಲ್: ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರ ಗುರುವಾರ ರಕ್ತ ನಿಧಿಯ ಉಸ್ತುವಾರಿ ಮತ್ತು ಇಬ್ಬರು ಪ್ರಯೋಗಾಲಯ...

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...