ಕರೊನಾ ವೈರಸ್‌ನ ಡೆಲ್ಟಾ ಪ್ಲಸ್ ರೂಪಾಂತರಿಯು ದೇಶದಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದ್ದು ಕರೊನಾ ಮೂರನೇ ಅಲೆಯ ಸಾಧ್ಯತೆಯ ಕುರಿತು ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ. ಡೆಲ್ಟಾ ಪ್ಲಸ್ ರೂಪಾಂತರಿಯ ಜೊತೆಗೆ ಇತರ ನಾಲ್ಕು ಕೊರೊನಾ ರೂಪಾಂತರಿಗಳಿವೆ ಎಂದು ತಜ್ಞರು ತಿಳಿಸಿದ್ದಾರೆ. ಅಂತರಾಷ್ಟ್ರೀಯ ವಿಮಾನಯಾನವನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸುವ ಮೊದಲು ಜಗತ್ತನ್ನು ಕಾಡುತ್ತಿರುವ ಇತರ ನಾಲ್ಕು ರೂಪಾಂತರಿ ವೈರಸ್‌ಗಳು ದೇಶವನ್ನು ಪ್ರವೇಶಿಸದಂತೆ ವಿಮಾನ ನಿಲ್ಧಾಣಗಳಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ತಜ್ಞರು ಸರ್ಕಾರಕ್ಕೆ ಕಠಿಣ ಎಚ್ಚರಿಕೆಯನ್ನು ನೀಡಿದ್ದಾರೆ. ಹೊಸದಾಗಿ ಕಾಣಿಸಿಕೊಂಡಿರುವ B.1.617.3, B.1.1.318 ವೇರಿಯಂಟ್‌ಗಳು ಮತ್ತು ಲಾಂಬ್ಡಾ ಮತ್ತು ಕಾಪ್ಪಾ ರೂಪಾಂತರಿಗಳು ಯುರೋಪಿಯನ್ ದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿವೆ ಈ ಕುರಿತು ದೇಶ ಮೊದಲೇ ಎಚ್ಚರಿಕೆಯನ್ನು ವಹಿಸಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹೈದರಾಬಾದ್‌ನ ಯಶೋಧಾ ಆಸ್ಪತ್ರೆಯ ಹಿರಿಯ ವೈದ್ಯ ಡಾ. ವಿಘ್ನೇಶ್ ನಾಯ್ಡು ಒಂದು ರೂಪಾಂತರಿ ತಳಿ ಇನ್ನೂ ಬೇರೆ ಬೇರೆ ರೀತಿಯಲ್ಲಿ ಹೊಸ ರೂಪಾಂತರ ಪಡೆದುಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕರೊನಾ ವೈರಸ್‌ನ ಮೂಲಸ್ವರೂಪವೇ ಬದಲಾಗಿ ಹೊಸ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತಿರುವುದು ಲಸಿಕೆ ಮತ್ತು ಚಿಕಿತ್ಸಾ ವಿಧಾನಗಳ ಪರಿಣಾಮವನ್ನು ಕುಂಠಿತಗೊಳಿಸುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರೂಪಾಂತರಿ ತಳಿಗಳು ವೈರಸ್‌ನ ಹರಡುವಿಕೆಯ ಸಾಮರ್ಥ್ಯವನ್ನು ಅಗಾಧಗೊಳಿಸಿವೆ. ಮೂಲ ವೈರಸ್‌ಗಿಂತ ರೂಪಾಂತರಿಗಳು ಹಲವು ಪಟ್ಟು ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯಗಳನ್ನು ಪಡೆದುಕೊಂಡಿರುವುದು ಗಮನಕ್ಕೆ ಬಂದಿದೆ ಎಂದು ಡಾ. ನಾಯ್ಡು ಎಚ್ಚರಿಕೆ ನೀಡಿದ್ದಾರೆ.
ಭಾರತ ಸೇರಿದಂತೆ 16 ದೇಶಗಳಲ್ಲಿನ 25% ಕರೋನಾ ಪ್ರಕರಣಗಳು ಡೆಲ್ಟಾ ಪ್ಲಸ್‌ಗೆ ಸಂಬಂಧಿಸಿದ್ದಾಗಿದೆ. ಆಸ್ಟ್ರೇಲಿಯಾ, ಬಹರಿನ್, ಬಾಂಗ್ಲಾದೇಶ್, ಭಾರತ, ಇಂಡೊನೇಷಿಯಾ, ಇಸ್ರೇಲ್, ಜಪಾನ್, ಕೀನ್ಯಾ, ಮಯನ್ಮಾರ್, ಪೆರು, ರಷ್ಯಾ, ಪೋರ್ಚುಗಲ್, ಬ್ರಿಟನ್ , ಸಿಂಗಪೋರ್, ಅಮೆರಿಕ ದೇಶಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿಯು ತೀವ್ರವಾಗಿ ಹರಡುತ್ತಿರುವುದು ಪತ್ತೆಯಾಗಿದೆ. ಕೋವಾಕ್ಸಿನ್ ಮತ್ತು ಕೋವಿಶೋಲ್ಡ್ ಲಸಿಕೆಗಳು ಅಲ್ಪಾ, ಬೀಟಾ, ಗಾಮಾ ಮತ್ತು ಡೆಲ್ಟಾ ರೂಪಾಂತರಿಗಳ ವಿರುದ್ಧ ಪರಿಣಾಮಕಾರಿಯಾಗಿ ಕೆಲಸಮಾಡುತ್ತವೆ. ಆದರೆ ಡೆಲ್ಟಾ ಪ್ಲಸ್ ವೇರಿಯಂಟ್ ವಿರುದ್ಧ ಲಸಿಕೆಗಳ ಪ್ರಭಾವ ಕಡಿಮೆಯಾಗಿರುವುದು ಸಂಶೊಧನೆಯಿಂದ ಬಹಿರಂಗಗೊಂಡಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನ ಸಂಸ್ಥೆ ( ICMR)ಯ ಮುಖ್ಯ ನಿರ್ದೇಶಕರಾದ ಡಾ. ಬಲರಾಮ್ ಭಾರ್ಗವ್ ತಿಳಿಸಿದ್ದಾರೆ.
ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಡಾ. ಬಲರಾಮ್ ಭಾರ್ಗವ್ ಅವರು ಅಲ್ಪಾ, ಬೀಟಾ, ಗಾಮಾ, ಗಾಮಾ ಮತ್ತು ಡೆಲ್ಟಾ ರೂಪಾಂತರಿಗಳು ಹೆಚ್ಚು ಅಪಾಯಕಾರಿಯಾಗಿವೆ. ಡೆಲ್ಟಾ ರೂಪಾಂತರಿಯ ಉಪ ವೈರಸ್ ಡೆಲ್ಟಾ ಪ್ಲಸ್ ಈ ಸಂದರ್ಭದಲ್ಲಿ ಹೆಚ್ಚು ಆತಂಕವನ್ನು ಸೃಷ್ಟಿಸಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಬಿಜೆಪಿ ವಿರುದ್ಧದ ಮೈತ್ರಿಕೂಟ ರಚನೆಯಲ್ಲಿ ಕಾಂಗ್ರೆಸ್ ಪಾತ್ರ ಮಹತ್ವವಾದುದು: ತೇಜಸ್ವಿ ಯಾದವ್


