HomeಮುಖಪುಟExplainer | ಒಂದು ದೇಶ, ಒಂದು ಚುನಾವಣೆ : ಕೇಂದ್ರದ ಮಸೂದೆಯಲ್ಲಿ ಏನಿದೆ?

Explainer | ಒಂದು ದೇಶ, ಒಂದು ಚುನಾವಣೆ : ಕೇಂದ್ರದ ಮಸೂದೆಯಲ್ಲಿ ಏನಿದೆ?

- Advertisement -
- Advertisement -

ದೇಶದಲ್ಲಿ ಪ್ರಸ್ತುತ ‘ಒಂದು ರಾಷ್ಟ್ರ ಒಂದು ಚುನಾವಣೆ‘ ಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ಪ್ರತಿಪಕ್ಷಗಳು ಮತ್ತು ದೇಶದ ಬಹುಪಾಲು ಜನರ ತೀವ್ರ ವಿರೋಧದ ನಡುವೆಯೂ ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರ ಮಂಗಳವಾರ (ಡಿ.17) ವಿವಾದಿತ ಮಸೂದೆಗಳನ್ನು ಮಂಡಿಸಿದೆ.

ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಗೆ ಸಂಬಂಧಿಸಿದಂತೆ ಎರಡು ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ.

ಈ ಪೈಕಿ ಒಂದು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರುವ ‘ಸಂವಿಧಾನ ಮಸೂದೆ-2024 ಅಥವಾ ಸಂವಿಧಾನದ 129ನೇ ತಿದ್ದುಪಡಿ ಮಸೂದೆ‘. ಇನ್ನೊಂದು ಸಂವಿಧಾನ ಮಸೂದೆಗೆ ಪೂರಕವಾಗಿ ‘ಕೇಂದ್ರಾಡಳಿತ ಪ್ರದೇಶಗಳ ಕಾಯ್ದೆಗಳ (ತಿದ್ದುಪಡಿ) ಮಸೂದೆ-2024‘.

ಸಂವಿಧಾನ ಮಸೂದೆ-2024 ಅಥವಾ ಸಂವಿಧಾನದ 129ನೇ ತಿದ್ದುಪಡಿ ಮಸೂದೆಯು ಪ್ರತಿ ಜನಗಣತಿಯ ನಂತರ ಸಂಸತ್ತಿನ ಸ್ಥಾನಗಳ ಮರು ವಿಂಗಡನೆಯ ಕುರಿತು ವಿವರಿಸುವ ಸಂವಿಧಾನದ 82ನೇ ವಿಧಿಯ ನಂತರ ’82ಎ’ ಎಂಬ ಹೊಸ ವಿಧಿಯನ್ನು ಸೇರ್ಪಡೆಗೊಳಿಸುವ ಬಗ್ಗೆ ಪ್ರಸ್ತಾಪಿಸುತ್ತದೆ.

ಇದರ ಜೊತೆಗೆ ಸಂಸತ್ತಿನ ಸದನಗಳ ಅವಧಿಯ ಕುರಿತು ವಿವರಿಸುವ ಸಂವಿಧಾನದ 83ನೇ ವಿಧಿಯ ಪರಿಚ್ಚೇದ (2) ರ ನಂತರ ಹೊಸದಾಗಿ ಐದು ಪರಿಚ್ಚೇದಗಳನ್ನು (ಪರಿಚ್ಚೇದ (3), (4), (5), (6) ಮತ್ತು ( 7) ಸೇರಿಸುವ ಬಗ್ಗೆ ಪ್ರಸ್ತಾಪಿಸುತ್ತದೆ.

ರಾಜ್ಯ ವಿಧಾನಸಭೆ ಮತ್ತು ವಿಧಾನಪರಿಷತ್‌ಗಳ ಅವಧಿಯ ಕುರಿತು ವಿವರಿಸುವ ಸಂವಿಧಾನ 172ನೇ ವಿಧಿಯ ಪರಿಚ್ಚೇದ (1) ನಂತರ ಹೊಸದಾಗಿ ಪರಿಚ್ಛೇದ (1ಎ) ಮತ್ತು ಪರಿಚ್ಛೇದ (2) ರ ನಂತರ ಹೊಸದಾಗಿ ಮೂರು ಪರಿಚ್ಛೇದಗಳನ್ನು (ಪರಿಚ್ಚೇದ (3), (4) ಮತ್ತು (5) ಸೇರ್ಪಡೆಗೊಳಿಸುವ ಬಗ್ಗೆ ಪ್ರಸ್ತಾಪಿಸುತ್ತದೆ.

ಶಾಸಕಾಂಗದ ಚುನಾವಣೆಗೆ ಸಂಬಂಧಿಸಿದಂತೆ ನಿಬಂಧನೆಗಳನ್ನು ಮಾಡಲು ಸಂಸತ್ತಿನ ಅಧಿಕಾರ ಕುರಿತು ವಿವರಿಸುವ ಸಂವಿಧಾನ 327ನೇ ವಿಧಿಗೆ ಸಣ್ಣ ತಿದ್ದುಪಡಿ ತಂದು ‘ಕ್ಷೇತ್ರಗಳ ಪುನರ್‌ವಿಂಗಡನೆ ಎಂಬ ಪದಗಳ ನಂತರ ಏಕಕಾಲಕ್ಕೆ ಚುನಾವಣೆ ನಡೆಸುವುದು’ ಎಂಬ ಪದಗಳನ್ನು ಸೇರಿಸುವ ಬಗ್ಗೆ ಪ್ರಸ್ತಾಪಿಸುತ್ತದೆ.

ಕೇಂದ್ರ ಸರ್ಕಾರ ಮಂಡಿಸಿರುವ ಮಸೂದೆಯಲ್ಲಿ ಪ್ರಸ್ತಾಪಿಸಿರುವ ಹೊಸ ವಿಧಿಗಳು ಮತ್ತು ಪರಿಚ್ಛೇದಗಳು ಏನು ಹೇಳುತ್ತದೆ ಎಂದು ವಿವರವಾಗಿ ನೋಡೋಣ…

ವಿಧಿ 82ಎ : ಈ ವಿಧಿಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ವಿವರಿಸುತ್ತದೆ. ಇದು ಏಳು ಪರಿಚ್ಛೇದಗಳನ್ನು ಒಳಗೊಂಡಿದೆ.

ಪರಿಚ್ಛೇದ (1) : ಸಾರ್ವತ್ರಿಕ ಚುನಾವಣೆಯ ನಂತರ ಲೋಕಸಭೆಯ ಮೊದಲ ಅಧಿವೇಶನದ ಆರಂಭದ ದಿನ ರಾಷ್ಟ್ರಪತಿ ಸಾರ್ವಜನಿಕ ಅಧಿಸೂಚನೆ ಹೊರಡಿಸುತ್ತಾರೆ. ಅಂದಿನಿಂದ ಈ ವಿಧಿಯ ನಿಯಮಗಳು ಜಾರಿಗೆ ಬರುತ್ತದೆ. ಅಧಿಸೂಚನೆ ಹೊರಡಿಸಿದ ದಿನವನ್ನು ‘ಅನುಷ್ಠಾನ ದಿನ’ ಎಂದು ಕರೆಯಲಾಗುತ್ತದೆ.

ಪರಿಚ್ಛೇದ (2) : ಅನುಷ್ಠಾನ ದಿನದ ನಂತರ ಮತ್ತು ಲೋಕಸಭೆಯ ಅವಧಿ ಪೂರ್ಣಗೊಳ್ಳುವುದಕ್ಕೂ ಮುನ್ನ ನಡೆದ ಚುನಾವಣೆಯ ಮೂಲಕ ಅಸ್ತಿತ್ವಕ್ಕೆ ಬಂದ ಎಲ್ಲಾ ವಿಧಾನಸಭೆಗಳ ಅವಧಿಯು ಲೋಕಸಭೆಯ ಅವಧಿ ಪೂರ್ಣಗೊಳ್ಳುವಾಗ ಕೊನೆಯಾಗಲಿದೆ.

ಪರಿಚ್ಛೇದ (3) : ಲೋಕಸಭೆಯ ಅವಧಿ ಮುಕ್ತಾಯಗೊಳ್ಳುವ ಮೊದಲು ಭಾರತೀಯ ಚುನಾವಣಾ ಆಯೋಗ ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಸಬೇಕು. ಚುನಾವಣೆಗೆ ಸಂಬಂಧಿಸಿದಂತೆ ಸಂವಿಧಾನದ 15ನೇ (XV) ಅಧ್ಯಾಯವನ್ನು ಈ ಚುನಾವಣೆಗೆ ಅನ್ವಯಿಸಬೇಕು. ಏನಾದರು ಬದಲಾವಣೆಗಳು ಅಗತ್ಯವಿದ್ದರೆ, ಆಯೋಗವು ನಿರ್ದಿಷ್ಟ ಆದೇಶವನ್ನು ಹೊರಡಿಸಬೇಕು.

ಪರಿಚ್ಛೇದ (4) : ವಿಧಿಯಲ್ಲಿ ಬರುವ ‘ಏಕಕಾಲಕ್ಕೆ ಚುನಾವಣೆ’ ಎಂದರೆ ಲೋಕಸಭೆ ಮತ್ತು ಎಲ್ಲಾ ವಿಧಾನಸಭೆಗಳ ರಚನೆಗಾಗಿ ನಡೆಯುವ ‘ಸಾರ್ವತ್ರಿಕ ಚುನಾವಣೆ’ ಎಂದರ್ಥ.

ಪರಿಚ್ಛೇದ (5) : ಲೋಕಸಭೆಯ ಸಾರ್ವತ್ರಿಕ ಚುನಾವಣೆಯ ವೇಳೆ ಯಾವುದಾದರು ವಿಧಾನಸಭೆಗೆ ಚುನಾವಣೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಕಂಡು ಬಂದರೆ, ಆ ವಿಧಾನಸಭೆಗೆ ಬೇರೊಂದು ದಿನ ಚುನಾವಣೆ ನಡೆಸುವ ಸಂಬಂಧ ಆದೇಶ ಹೊರಡಿಸುವಂತೆ ರಾಷ್ಟ್ರಪತಿಗೆ ಚುನಾವಣಾ ಆಯೋಗ ಶಿಫಾರಸು ಮಾಡಬಹುದು.

ಪರಿಚ್ಛೇದ (6) : ಪರಿಚ್ಛೇದ (5) ರ ಅಡಿಯಲ್ಲಿ ವಿಧಾನಸಭೆ ಚುನಾವಣೆ ಮುಂದೂಡಿಕೆಯಾಗಿ ನಂತರ ಅಲ್ಲಿ ಅಸ್ತಿತ್ವಕ್ಕೆ ಬರುವ ಹೊಸ ವಿಧಾನಸಭೆಯ ಅವಧಿಯು ಸಾರ್ವತ್ರಿಕ ಚುನಾವಣೆಯ ನಂತರ ರಚನೆಯಾದ ಲೋಕಸಭೆಯ ಅವಧಿ ಪೂರ್ಣಗೊಂಡ ದಿನದಂದೇ ಕೊನೆಗೊಳ್ಳುತ್ತದೆ.

ಪರಿಚ್ಛೇದ (7) : ಚುನಾವಣಾ ಆಯೋಗವು ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಹೊರಿಸುವಾಗಲೇ ಅದರ ಅವಧಿ ಯಾವಾಗ ಮುಕ್ತಾಯವಾಗುತ್ತದೆ ಎಂದು ಘೋಷಿಸಬೇಕು.

83ನೇ ವಿಧಿಗೆ ತಿದ್ದುಪಡಿ : ಕೇಂದ್ರ ಸರ್ಕಾರದ ಮಸೂದೆಯಲ್ಲಿ ಸಂವಿಧಾನದ 83ನೇ ವಿಧಿಯ ಪರಿಚ್ಛೇದ 2ರ ನಂತರ ನಾಲ್ಕು ಹೊಸ ಪರಿಚ್ಛೇದಗಳ ಸೇರ್ಪಡೆ ಬಗ್ಗೆ ಪ್ರಸ್ತಾಪಿಸಲಾಗಿದೆ. ಅವುಗಳ ಬಗ್ಗೆ ನೋಡೋಣ…

ಪರಿಚ್ಚೇದ (3) : ಸಾರ್ವತ್ರಿಕ ಚುನಾವಣೆಯ ನಂತರ ಅಸ್ತಿತ್ವಕ್ಕೆ ಬಂದ ಲೋಕಸಭೆಯ ಮೊದಲ ಅಧಿವೇಶನದ ಮೊದಲ ದಿನದಿಂದ ಮುಂದಿನ ಐದು ವರ್ಷಗಳವರೆಗಿನ ಅವಧಿಯನ್ನು ಲೋಕಸಭೆಯ ‘ಪೂರ್ಣ ಅವಧಿ’ ಎಂದು ಪರಿಗಣಿಸಬೇಕು.

ಪರಿಚ್ಛೇದ (4) : ಪೂರ್ಣಾವಧಿಗೂ ಮೊದಲೇ ಲೋಕಸಭೆ ವಿಸರ್ಜನೆಯಾದರೆ, ವಿಸರ್ಜನೆಯಾದ ದಿನದಿಂದ ಲೋಕಸಭೆಯ ಕೊನೆಯ ದಿನದವರೆಗಿನ ಅವಧಿಯನ್ನು ಆ ಲೋಕಸಭೆಯ ‘ಬಾಕಿ ಉಳಿದಿರುವ’ ಅವಧಿ ಎಂದು ಕರೆಯಬೇಕು.

ಪರಿಚ್ಛೇದ (5) : ಲೋಕಸಭೆಯನ್ನು ಅವಧಿಗೂ ಮುನ್ನ ವಿಸರ್ಜನೆ ಮಾಡಿದ ಸಂದರ್ಭದಲ್ಲಿ ಚುನಾವಣೆಯ ಮೂಲಕ ಅಸ್ತಿತ್ವಕ್ಕೆ ಬರಲಿರುವ ಹೊಸ ಲೋಕಸಭೆಯು ಹಿಂದಿನ ಲೋಕಸಭೆಯ ಬಾಕಿ ಉಳಿದಿರುವ ಕಾರ್ಯನಿರ್ವಹಿಸುತ್ತದೆ. ಈ ಅವಧಿ ಮುಕ್ತಾಯವಾದರೆ ಸದನವು ವಿಸರ್ಜನೆಯಾದಂತೆ.

ಪರಿಚ್ಛೇದ (6) : ಪರಿಚ್ಛೇದ (5) ಅಡಿ ರಚನೆಯಾದ ಲೋಕಸಭೆಯ ಹಿಂದಿನ ಲೋಕಸಭೆಯ ಮುಂದುವರಿಕೆಯಲ್ಲ. ಪರಿಚ್ಛೇದ (4) ರಲ್ಲಿ ವಿವರಿಸಲಾದ ಸದನ ವಿಸರ್ಜನೆಗೆ ಸಂಬಂಧಿಸಿದ ಪ್ರಕ್ರಿಯೆಗೆ ಅನ್ವಯಿಸುತ್ತದೆ.

ಪರಿಚ್ಛೇದ (7) : ಬಾಕಿ ಉಳಿದಿರುವ ಅವಧಿಗಾಗಿ ಲೋಕಸಭೆ ರಚಿಸಲು ನಡೆಸಲಾಗುವ ಚುನಾವಣೆಯನ್ನು ‘ಮಧ್ಯಂತರ ಚುನಾವಣೆ’ ಎಂದು ಕರೆಯಬೇಕು. ಪೂರ್ಣಾವಧಿ ಕೊನೆಗೊಂಡ ನಂತರ ನಡೆಸುವ ಚುನಾವಣೆಯನ್ನು ‘ಸಾರ್ವತ್ರಿಕ ಚುನಾವಣೆ’ ಎಂದು ಕರೆಯಬೇಕು.

172ನೇ ವಿಧಿಯ ತಿದ್ದುಪಡಿ : ಕೇಂದ್ರದ ಮಸೂದೆಯು ಸಂವಿಧಾನ ವಿಧಿ 172ರ ಪರಿಚ್ಛೇದ (1) ನಂತರ (1ಎ) ಮತ್ತು ಪರಿಚ್ಛೇದ (2) ರ ನಂತರ ಮೂರು ಹೊಸ ಪರಿಚ್ಛೇದಗಳನ್ನು ಸೇರ್ಪಡೆಗೊಳಿಸುವ ಬಗ್ಗೆ ಪ್ರಸ್ತಾಪಿಸುತ್ತದೆ.

ಪರಿಚ್ಛೇದ (1ಎ) : ರಾಜ್ಯ ವಿಧಾನಸಭೆಯ ಮೊದಲ ಅಧಿವೇಶನದ ಮೊದಲ ದಿನದಿಂದ ಮುಂದಿನ ಐದು ವರ್ಷಗಳನ್ನು ರಾಜ್ಯ ವಿಧಾನಸಭೆಯ ಪೂರ್ಣಾವಧಿ ಎಂದು ಕರೆಯಲಾಗುತ್ತದೆ.

ಪರಿಚ್ಛೇದ (3) : ಪೂರ್ಣಾವಧಿಗೂ ಮುನ್ನ ರಾಜ್ಯ ವಿಧಾನಸಭೆ ವಿಸರ್ಜನೆಯಾದರೆ, ವಿಸರ್ಜನೆಯಾದ ದಿನದಿಂದ ಆ ವಿಧಾನಸಭೆಯ ಕೊನೆಯ ದಿನದವರೆಗಿನ ಅವಧಿಯನ್ನು ‘ಬಾಕಿ ಉಳಿದಿರುವ ಅವಧಿ’ ಎಂದು ಕರೆಯಬೇಕು.

ಪರಿಚ್ಛೇದ (4): ವಿಧಾನಸಭೆಯನ್ನು ಅವಧಿಗೂ ಮುನ್ನ ವಿಸರ್ಜನೆ ಮಾಡಿದ ಸಂದರ್ಭದಲ್ಲಿ, ಚುನಾವಣೆಯ ಮೂಲಕ ಅಸ್ತಿತ್ವಕ್ಕೆ ಬರಲಿರುವ ಹೊಸ ವಿಧಾನಸಭೆಯು ಹಿಂದಿನ ವಿಧಾನಸಭೆಯ ಬಾಕಿ ಉಳಿದಿರುವ ಅವಧಿಗೆ ಕಾರ್ಯನಿರ್ವಹಿಸುತ್ತದೆ. ಈ ಅವಧಿಯು ಮುಕ್ತಾಯವಾದಾಗ ಹೊಸ ವಿಧಾನಸಭೆಯು ವಿಸರ್ಜನೆಯಾಯಿತು ಎಂದು ಪರಿಗಣಿಸಬೇಕು.

ಪರಿಚ್ಛೇದ (5) : ಪರಿಚ್ಛೇದ (4) ರ ಅಡಿ ರಚನೆಯಾದ ರಾಜ್ಯ ವಿಧಾನಸಭೆಯು ಹಿಂದಿನ ರಾಜ್ಯ ವಿಧಾನಸಭೆಯ ಮುಂದುವರಿಕೆಯಲ್ಲ. ಪರಿಚ್ಛೇದ (3)ರಲ್ಲಿ ಉಲ್ಲೇಖಿಸಲಾಗಿರುವ ಸದನದ ವಿಸರ್ಜನೆಗೆ ಸಂಬಂಧಿಸಿದ ಎಲ್ಲಾ ವಿವರಗಳು ಈ ವಿಧಾನಸಭೆಗೆ ಅನ್ವಯಿಸುತ್ತದೆ.

ಕೇಂದ್ರಾಡಳಿತ ಪ್ರದೇಶಗಳ ಕಾಯ್ದೆಗಳ (ತಿದ್ದುಪಡಿ) ಮಸೂದೆ-2024

ಸಂವಿಧಾನ ತಿದ್ದುಪಡಿ ಮಸೂದೆಗೆ ಪೂರಕವಾಗಿ ಕೇಂದ್ರಾಡಳಿತ ಪ್ರದೇಶಗಳ ಕಾಯ್ದೆಗಳ (ತಿದ್ದುಪಡಿ) ಮಸೂದೆ-2024 ಅನ್ನು ಕೇಂದ್ರ ಸರ್ಕಾರ ಮಂಗಳವಾರ (ಡಿ.17) ಮಂಡಿಸಿದೆ.

ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳಿಗೆ ಚುನಾವಣೆ ನಡೆಸಲು ಅನುವು ಮಾಡಿಕೊಡುವ ಈ ಮಸೂದೆಯು 1963ರ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ ಕಾಯ್ದೆ, ದೆಹಲಿಯ ರಾಷ್ಟ್ರ ರಾಜಧಾನಿ ಪ್ರದೇಶಗಳ ಸರ್ಕಾರ ಕಾಯ್ದೆ-1991 ಮತ್ತು ಜಮ್ಮು ಮತ್ತು ಕಾಶ್ಮೀರ ಪುನರ್‌ರಚನೆ ಕಾಯ್ದೆ-2019ಕ್ಕೆ ತಿದ್ದುಪಡಿ ತರಲು ಪ್ರಸ್ತಾಪಿಸುತ್ತದೆ.

ಮಸೂದೆ ಮಂಡನೆ ಆಯ್ತು ಮುಂದೇನು?

ಲೋಕಸಭೆಯಲ್ಲಿ ಮಂಗಳವಾರ (ಡಿ.17) ಮಸೂದೆಗಳ ಮಂಡನೆ ಬಳಿಕ, ಅದಕ್ಕೆ ಒಪ್ಪಿಗೆ ಪಡೆಯಲು ಮತಯಂತ್ರದ ಮೂಲಕ ನಡೆದ ಮತ ಚಲಾವಣೆ ಪ್ರಕ್ರಿಯೆಯಲ್ಲಿ 269 ಸದಸ್ಯರು ಮಸೂದೆಯ ಪರವಾಗಿ ಹಾಗೂ 198 ಸದಸ್ಯರು ವಿರೋಧವಾಗಿ ಮತ ಹಾಕಿದ್ದಾರೆ.

ಮಸೂದೆಗಳ ಮಂಡನೆಯ ನಂತರ, ಅವುಗಳ ಕುರಿತು ವಿಸ್ಕೃತ ಚರ್ಚೆಗಾಗಿ ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಕಳುಹಿಸಲು ಕೇಂದ್ರ ಸರ್ಕಾರ ಸ್ಪೀಕರ್‌ಗೆ ಮನವಿ ಮಾಡಿದೆ.

ಲೋಕಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳ ಪ್ರಕಾರ, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಜೆಪಿಸಿ ರಚನೆಯ ಬಗ್ಗೆ ಪ್ರಕಟಿಸಲಿದ್ದಾರೆ. ನಿಯಮಗಳ ಪ್ರಕಾರ, ಸಂಸತ್ತಿನ ಉಭಯ ಸದನಗಳ ಸದಸ್ಯರು ಸೇರಿ ಜೆಪಿಸಿಯಲ್ಲಿ ಗರಿಷ್ಠ 31 ಜನರು ಇರುತ್ತಾರೆ. ಈ ಪೈಕಿ ಲೋಕಸಭೆಯ 21 ಮತ್ತು ರಾಜ್ಯಸಭೆಯ 10 ಸದಸ್ಯರು ಇರಲಿದ್ದಾರೆ.

ಸಂವಿಧಾನ ತಿದ್ದುಪಡಿ ಮಸೂದೆಯ ಜೆಪಿಸಿಯ ಅಧ್ಯಕ್ಷ ಸ್ಥಾನ ಬಿಜೆಪಿಗೆ ಸಿಗುವ ಸಾಧ್ಯತೆ ಇದೆ. ಬಹುಮತದ ಆಧಾರದ ಮೇಲೆ ಬಿಜೆಪಿಗೆ ಜೆಪಿಸಿಯಲ್ಲಿ ಹೆಚ್ಚಿನ ಸ್ಥಾನವೂ ಸಿಗಲಿದೆ.

ಮಸೂದೆಯು ಜೆಪಿಸಿಗೆ ಹೋದ ಬಳಿಕ, ಅಲ್ಲಿ ವಿಸ್ಕೃತ ಚರ್ಚೆ ನಡೆಯಲಿದೆ. ಅಲ್ಲದೆ, ದೇಶದ ರಾಜಕೀಯ ಪಕ್ಷಗಳ ಸದಸ್ಯರು, ಮಾಜಿ ನ್ಯಾಯಾಧೀಶರು, ಹಿರಿಯ ವಕೀಲರು, ಮಾಜಿ ಅಥವಾ ಪ್ರಸ್ತುತ ಚುನಾವಣಾ ಆಯುಕ್ತರು, ರಾಜ್ಯ ವಿಧಾನಸಭೆಗಳ ಸ್ಪೀಕರ್‌ಗಳು, ರಾಜ್ಯ ಚುನಾವಣಾ ಆಯುಕ್ತರು ಮತ್ತು ಸಾರ್ವಜನಿಕರ ಅಭಿಪ್ರಾಯಗಳನ್ನು ಪಡೆಯಲಾಗುತ್ತದೆ.

ಜೆಪಿಸಿಯಲ್ಲಿ ವಿಸ್ಕೃತ ಚರ್ಚೆಯ ನಂತರ ಮಸೂದೆಗೆ ತಿದ್ದುಪಡಿಗಳನ್ನು ಮಾಡಿ, ಅದನ್ನು ಲೋಕಸಭೆಯ ಸ್ಪೀಕರ್‌ಗೆ ಸಲ್ಲಿಸಲಿದ್ದಾರೆ. ಬಳಿಕ ಅದನ್ನು ಸಂಸತ್ತಿನಲ್ಲಿ ಮಂಡಿಸಲು ಸಮಯ ನಿಗದಿ ಮಾಡಲಾಗುತ್ತದೆ. ನಿಯಮದ ಪ್ರಕಾರ, ಲೋಕಸಭೆ ಸ್ಪೀಕರ್ ಜೆಪಿಸಿ ತನ್ನ ವರದಿಯನ್ನು ಸಲ್ಲಿಸಲು ಕನಿಷ್ಠ ಆರು ತಿಂಗಳ ಕಾಲಮಿತಿಯನ್ನು ನಿಗದಿಪಡಿಸಬಹುದು.

ಕೇಂದ್ರ ಸರ್ಕಾರ ಮಂಡಿಸಿರುವ ಸಂವಿಧಾನ (129ನೇ ತಿದ್ದುಪಡಿ) ಮಸೂದೆ-2024ರ ಪ್ರತಿಯನ್ನು ಲೋಕಸಭೆಯ ಎಲ್ಲಾಸಂಸದರಿಗೆ ನೀಡಲಾಗಿದೆ. ಸಾಂವಿಧಾನಿಕ ನಿಬಂಧನೆಗಳ ಪ್ರಕಾರ, ಮಸೂದೆಯಲ್ಲಿ ಪ್ರಸ್ತಾಪಿಸಿರುವ ಐದು ತಿದ್ದುಪಡಿಗಳ ಅನುಮೋದನೆಗೆ ಸಂಸತ್ತಿನ ಮೂರನೇ ಎರಡರಷ್ಟು ಸದಸ್ಯರ ಬೆಂಬಲದ ಅಗತ್ಯವಿದೆ.

ಕೃಪೆ : ಪ್ರಜಾವಾಣಿ, indiatoday.in

ಇದನ್ನೂ ಓದಿ : Explainer | ಹೈಕೋರ್ಟ್‌ ನ್ಯಾಯಾಧೀಶರನ್ನು ಹುದ್ದೆಯಿಂದ ಕೆಳಗಿಳಿಸುವುದು ಸಾಧ್ಯನಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...