ಶೋಷಿತ ಸಮುದಾಯಗಳ ಮಂಥನಾ ಸಮಾವೇಶ
ಬೆಂಗಳೂರು: ಶೋಷಿತ ಸಮುದಾಯಗಳು ತಮ್ಮ ಮುಂದಿನ ಸವಾಲುಗಳನ್ನು ಮತ್ತೆ ಮರುನಿರ್ವಚಿಸಿಕೊಂಡು ಅವುಗಳ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಪುರುಷೋತ್ತಮ ಬಿಳಿಮಲೆ ಹೇಳಿದರು.
ಕರ್ನಾಟಕ ಜನಶಕ್ತಿ ಸಂಘಟನೆಯು ಡಿ.16ರಂದು ಬೆಂಗಳೂರಿನ ಗಾಂಧೀ ಭವನದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ಮಹಾಪರಿನಿಬ್ಬಾಣ ದಿನದ ಅಂಗವಾಗಿ ʼಶೋಷಿತ ಸಮುದಾಯಗಳ ಮಂಥನಾ ಸಮಾವೇಶʼ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಉದ್ಘಾಟನೆ ಭಾಷಣದಲ್ಲಿ ಮಾತನಾಡುತ್ತಿದ್ದರು.
ಸಮಾವೇಶದ ಉದ್ಘಾಟನೆಯನ್ನು ಕೊಪ್ಪಳ ಜಿಲ್ಲೆಯ ಗಂಗಾವತಿಯ ಅಂಗನವಾಡಿಯಲ್ಲಿ ಓದುತ್ತಿರುವ ಬಾಲಕಿ ಜಾಂಬವಿ ಸಂವಿಧಾನದ ಪೀಠಿಕೆಯನ್ನು ಸಭೆಗೆ ಬೋಧಿಸುವ ಮೂಲಕ ನೆರವೇರಿಸಿದರು.
ದೆಹಲಿಯಲ್ಲಿ ನೋಯ್ಡಾ ಕೈಗಾರಿಕಾ ಪ್ರದೇಶವಿದೆ, ಅಲ್ಲಿ 12 ಲಕ್ಷ ಜನರು ಖಾಸಗಿ ಕಂಪೆನಿಗಳಲ್ಲಿ ದುಡಿಯುತ್ತಿದ್ದಾರೆ, ಅವರುಗಳಿಗೆ ಯಾವುದೇ ಮೀಸಲಾತಿ ಅಥವಾ ಉದ್ಯೋಗ ಭದ್ರತೆ ಇಲ್ಲ, ದೆಹಲಿ ನೇಮಕಾತಿ ಆಯೋಗವು ಕಳೆದ ವರ್ಷ ಸರ್ಕಾರಿ ಹುದ್ದೆಗಳೀಗೆ ನೇಮಕ ಮಾಡಿದ್ದು ಸುಮಾರು 600ರಷ್ಟು ಜನರನ್ನು ಮಾತ್ರ. ಅಂದರೆ ಎಲ್ಲ ಸಮುದಾಯಗಳೂ ಹೊಡೆದಾಡುತ್ತಿರುವ ಮೀಸಲಾತಿಯ ಹೋರಾಟ ಯಶಸ್ಸು ಕಂಡರೂ ಎಲ್ಲರೂ ಹಂಚಿಕೊಳ್ಳುವುದು ಈ 600 ಹುದ್ದೆಗಳನ್ನು, ಉಳಿದ 12 ಲಕ್ಷ ಉದ್ಯೋಗಗಳ ಕುರಿತ ಹೋರಾಟ ಇಂದು ನಮ್ಮ ಆದ್ಯತೆಯಾಗಬೇಕಿದೆ” ಎಂದು ಬಿಳಿಮಲೆ ಅಭಿಪ್ರಾಯಪಟ್ಟರು.
ಆರೆಸ್ಸೆಸ್‌ನ ವೆಬ್‌ಸೈಟ್ ನೋಡಿದರೆ ಅದು ಬಹಳ ಡಲ್ ಆಗಿ ಕಾಣತ್ತೆ, ಯಾಕೆಂದರೆ ಅವರಲ್ಲಿ ಪಾರದರ್ಶಕತೆಯೇ ಇಲ್ಲ, ತಮ್ಮ ಎಲ್ಲ ಬೆಂಕಿಹಚ್ಚುವ ಕೆಲಸವನ್ನೂ ಅವರು ನೇರವಾಗಿ ಜನಸಮುದಾಯಗಳ ನಡುವೆ ಒಯ್ಯುತ್ತಾರೆ, ಇಂತಹ ಹುನ್ನಾರವನ್ನು ಸಂವಿಧಾನಪರ ಶಕ್ತಿಗಳು ಗಂಭೀರವಾಗಿ ಪರಿಗಣಿಸಿ ಪಾರದರ್ಶಕ, ಪ್ರಜಾತಾಂತ್ರಿಕ ವ್ಯವಸ್ಥೆಗಾಗಿ ಒಗ್ಗೂಡಿ ಪ್ರಯತ್ನ ನಡೆಸಬೇಕು ಎಂದು ಕರೆ ನೀಡಿದರು.

ಈ ಉದ್ಘಾಟನಾ ಗೋಷ್ಟಿಯಲ್ಲಿ ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡ ಎನ್. ವೆಂಕಟೇಶ್ ಮತ್ತು ಕರ್ನಾಟಕ ಜನಾಂದೋಲನ ಸಮಿತಿಯ ಮರಿಯಪ್ಪ ತಮ್ಮ ಅನಿಸಿಕೆ ಮಂಡಿಸಿದರು. ನಂತರ ನಡೆದ ದಲಿತ ಮತ್ತು ಆದಿವಾಸಿ ಸಮುದಾಯದ ಗೋಷ್ಟಿಯಲ್ಲಿ ವಿಚಾರ ಮಂಡಿಸಿದ ಡಾ. ಕೆ.ವಿ ನೇತ್ರಾವತಿ, ಮೀಸಲಾತಿಯೆಂಬುದು ಸಾಂಕೇತಿಕವಾಗುತ್ತಿದೆ, ಎಲ್ಲ ಕ್ಷೇತ್ರಗಳಲ್ಲೂ ಮೀಸಲಾತಿಯನ್ನು ಸರ್ಕಾರ ಜಾರಿಗೊಳಿಸಬೇಕೆಂಬ ಆಗ್ರಹ ಮುಂದಿಡಬೇಕು. ರಾಜಕೀಯ ಪಕ್ಷಗಳು ಪಕ್ಷದ ಹುದ್ದೆಗಳಿಂದ ಹಿಡಿದು ಟಿಕೆಟ್‌ವರೆಗೆ ಶೋಷಿತ ಸಮುದಾಯಗಳಿಗೆ ಸಮಾನ ಪ್ರಾತಿನಿಧ್ಯ ಇರಬೇಕು ಎಂದರು.


ಆದಿವಾಸಿ ಸಮುದಾಯಗಳ ಕುರಿತು ಸೋಲಿಗ ಸಮುದಾಯದ ಮುಖಂಡ ಚಾಮರಾಜನಗರದ ಮುತ್ತಯ್ಯ ಮಾತನಾಡಿ, ಸರ್ಕಾರ ತಂದಿರುವ ಗ್ಯಾರಂಟಿಗಳು ಆದಿವಾಸಿ ಸಮುದಾಯಗಳಿಗೆ ಅರ್ಧದಷ್ಟೂ ಕೂಡಾ ಉಪಯೋಗ ಆಗುವುದಿಲ್ಲ, ಏಕೆಂದರೆ ನಾವು ಉಚಿತವಾಗಿ ಬಸ್‌ನಲ್ಲಿ ಪ್ರಯಾಣಿಸಬೇಕೆಂದರೆ ನಮ್ಮ ಹಾಡಿಗಳಿಗೆ ಬಸ್ ಬರಬೇಕಲ್ಲವೇ? ನಮ್ಮ ಮನೆಗಳಿಗೆ ವಿದ್ಯುತ್ ಸಂಪರ್ಕ ಇದ್ದರೆ ತಾನೆ ಉಚಿತ ವಿದ್ಯುತ್‌ನ ಪ್ರಯೋಜನ ನಮಗೆ ಸಿಗುವುದು? ಸರ್ಕಾರ ಕೇವಲ ಗ್ಯಾರಂಟಿಗಳನ್ನು ಕೊಟ್ಟರೆ ಸಾಲುವುದಿಲ್ಲ, ನಿಜವಾಗಿ ಸಮುದಾಯದ ಉನ್ನತಿಗೆ ಬೇಕಿರುವ ಕೆಲಸಗಳಾಗಬೇಕು. ಎಸ್‌ಸಿ ಮತ್ತು ಎಸ್‌ಟಿ ಎಂಬ ಕೆಟಗರಿಗಳಲ್ಲಿ ಸೇರಬೇಕಾದ ಅನೇಕ ಆದಿವಾಸಿ ಸಮುದಾಯಗಳಿಗೆ ಈ ಸವಲತ್ತುಗಳ ಪ್ರಯೋಜನ ಸಿಗಬೇಕು, ಒಳಮೀಸಲಾತಿ ಆದಿವಾಸಿ ಸಮುದಾಯಕ್ಕೂ ಅಗತ್ಯವಿದೆ ಮತ್ತು ಅದರ ಮಿತಿಯನ್ನು ಕೂಡಾ ಹೆಚ್ಚಿಸಬೇಕಿದೆ, ನಾಗರೀಕ ಸಮಾಜ ಮತ್ತು ಸರ್ಕಾರ ಆದಿವಾಸಿಗಳ ಆಮೂಲಾಗ್ರ ಅಭಿವೃದ್ಧಿಗೆ ನಾವು ಮುಂದಿಡುವ ಹಕ್ಕೊತ್ತಾಯಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.


ಒಳಮೀಸಲಾತಿಯ ಭರವಸೆಯನ್ನು ಈ ಸರ್ಕಾರವೂ ಜಾರಿ ಮಾಡದಿದ್ದರೆ ಯಾರು ಮಾಡಬೇಕು ಎಂದು ಒಳಮೀಸಲಾತಿ ಹೋರಾಟಗಾರರಾದ ಬಸವರಾಜ್ ಕೌತಾಳ್ ಮತ್ತು ಕರಿಯಪ್ಪ ಗುಡಿಮನಿ ಪ್ರಶ್ನಿಸಿದರು. ಅಲೆಮಾರಿ ಆದಿವಾಸಿಗಳನ್ನು ಮುಖ್ಯವಾಹಿನಿಯ ಸವಲತ್ತುಗಳ ಪರಿಧಿಗೆ ತರಬೇಕೆನ್ನುವ ಒತ್ತಾಯಕ್ಕೆ ಎಲ್ಲ ಚಳುವಳಿಗಳೂ ಬೆಂಬಲಿಸಬೇಕೆಂದು ಅಲೆಮಾರಿ ಆದಿವಾಸಿ ಹೋರಾಟಗಾರ ವೆಂಕಟರಮಣಯ್ಯ ಹೇಳಿದರು.


ಅಲ್ಪಸಂಖ್ಯಾತ ಸಮುದಾಯದ ಗೋಷ್ಟಿಯಲ್ಲಿ, ಇಂದು ದೇಶದಲ್ಲಿ ಕಟ್ಟಲ್ಪಡುತ್ತಿರುವ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ವಿರೋಧಿ ಕಥನದ ಬಗ್ಗೆ ಆತಂಕ ವ್ಯಕ್ತವಾಯಿತು. “ನಿಮಗೆಂದೇ ಒಂದು ದೇಶ ಕೊಟ್ಟ ಮೇಲೂ ನೀವು ಈ ದೇಶದಲ್ಲಿದ್ದು ಹಿಂದುಗಳಿಗೆ ಸಿಗಬೇಕಾದ ಅನುಕೂಲಗಳನ್ನು ಕಸಿಯುತ್ತಿದ್ದೀರಿ, ತೊಂದರೆ ಕೊಡುತ್ತಿದ್ದೀರಿ, ಪಾಕಿಸ್ತಾನಕ್ಕೆ ತೊಲಗಿ ಎಂಬಂತಹ ನರೇಟಿವ್ ಕಟ್ಟಿ ಅದಕ್ಕೆ ಜನರ ಒಪ್ಪಿಗೆಯನ್ನು ಸೃಷ್ಟಿಸಿಕೊಂಡಿರುವ ಬಲಪಂಥೀಯ ನಿರಂಕುಶಾಧಿಕಾರಿ ಸಂಘಟನೆಗಳು ಪ್ರತಿದಿನ ಗಲಭೆಗಳನ್ನು ಸೃಷ್ಟಿಸುತ್ತಿವೆ. ವಕ್ಫ್, ಅಲ್ಪಸಂಖ್ಯಾತರ ಪ್ರಾರ್ಥನಾ ಸ್ಥಳಗಳು ಎಲ್ಲವೂ ವಿವಾದದ ಮೂಲವಾಗುವಂತೆ ಯೋಜಿತವಾಗಿ ಜನರನ್ನು ಒಡೆಯುತ್ತಿವೆ. ಇದರ ವಿರುದ್ಧ ಅಲ್ಪಸಂಖ್ಯಾತ ಸಮುದಾಯ ತಿಳುವಳಿಕೆ ಪಡೆದು ಅಧ್ಯಯನ, ಭಾಷಣ ಮಾಡಿದರೆ ಅವರನ್ನು ಬಂಧಿಸುವುದು, ಮಾಧ್ಯಮಗಳು ಸುಳ್ಳು ಹೇಳುವಾಗ ಸತ್ಯವನ್ನು ಹೊರಗೆಳೆದರೆ ಅವರ ಮೇಲೆ ಕೇಸ್ ಹಾಕುವುದು- ಇದನ್ನೇ ಅಲ್ಲವೇ ಸರ್ಕಾರ ಮಾಡುತ್ತಿರುವುದು” ಎಂಬ ವಿಚಾರ ಮಂಡನೆಯಾಯಿತು.


ಸಾಮಾಜಿಕ ಚಿಂತಕರು ಹಾಗೂ ಪತ್ರಕರ್ತರಾದ ರಾ ಚಿಂತನ್ ಮಾತನಾಡಿ, ಒಂದು ಡಬ್ಬಿಯಲ್ಲಿ ಕಪ್ಪು ಬಿಳುಪಿನ ಇರುವೆಗಳನ್ನು ಹಾಕಲಾಗಿತ್ತು, ಶಾಂತವಾಗಿದ್ದವು, ಶಾಂತವಾಗಿದ್ದಾವಲ್ಲ ಎಂದು ಮೇಲಿನಂದ ಡಬ್ಬಿಯನ್ನು ಅಲುಗಾಡಿಸಲಾಯಿತು. ಆಗ ಡಬ್ಬಿಯಲ್ಲಿದ್ದ ಇರುವೆಗಳು ಪರಸ್ಪರ ಕಚ್ಚಾಡಿಕೊಂಡವು. ನಾವು ಮಾಡಬೇಕಿದ್ದದ್ದು ಅಲುಗಾಡಿಸಿದವರನ್ನು ಕಚ್ಚಬೇಕೇ ಹೊರತು ನಾವೇ ಕಚ್ಚಾಡಬಾರದು. ಅಮೇರಿಕದ ಚಿಂತಕ ಬರಹಗಾರ ಮಾರ್ಕ್ ಟ್ವೈನ್ ಹೇಳುವ ದೃಷ್ಟಾಂತ ಒಂದಿದೆ. ಕಪ್ಪು ಮತ್ತು ಕೆಂಪು ಇರುವೆಗಳನ್ನು ಒಂದೇ ಜಾಡಿಯಲ್ಲಿ ಹಾಕಿದರೂ ಅವು ಒಂದರ ತಂಟೆಗೆ ಒಂದು ಹೋಗದೆ ಶಾಂತಿಯಿಂದ ಇರುತ್ತವೆ. ಆದರೆ ಜಾಡಿಯನ್ನು ಯಾರಾದರೂ ಅಲುಗಾಡಿಸಿದರೆ ಅವೆರಡೂ ತಮ್ಮ ಮೇಲೆ ಮತ್ತೊಂದು ಇರುವೆ ದಾಳಿ ಮಾಡುತ್ತಿದೆಯೆಂದು ಭಾವಿಸಿ ಪರಸ್ಪರ ಕಚ್ಚಾಡಿ ಸಾಯುತ್ತವೆ. ಹಾಗೆ ರಾಜಕಾರಣಿಗಳ ಆಟದಲ್ಲಿ ಹಿಂದು ಮುಸ್ಲಿಮರ ನಡುವೆ ದ್ವೇಷ ಹಬ್ಬಿದೆ, ಇದನ್ನು ನಾವು ಅರ್ಥೈಸಿಕೊಂಡು ಒಂದಾಗಬೇಕು ಎಂದು ಅವರು ಹೇಳಿದರು.


ಬಾಬಾಸಾಹೇಬರು ಏಕೆ ಬೌದ್ಧಧರ್ಮಕ್ಕೆ ಮತಾಂತರವಾಗುವ ಸ್ಥಿತಿ ಉಂಟಾಯಿತು ಎಂಬುದನ್ನು ಮೊದಲು ಬಹುಸಂಖ್ಯಾತ ಸಮುದಾಯ ತನ್ನನ್ನು ತಾನು ಪ್ರಶ್ನಿಸಿಕೊಂಡು, ಕ್ರಿಶ್ಚಿಯನ್ನರ ಮೇಲೆ ಮತಾಂತರದ ಬಗ್ಗೆ ಸುಳ್ಳು ಆರೋಪ ಹೊರಿಸುವುದನ್ನು ನಿಲ್ಲಿಸಬೇಕು” ಎಂದು ಈ ಗೋಷ್ಟಿಯಲ್ಲಿ ಆಗ್ರಹ ಮೊಳಗಿತು. ಪೀಪಲ್ಸ್ ಲಾಯರ್ಸ್ ಗಿಲ್ಡ್‌ನ ಸಂಸ್ಥಾಪಕರಾದ ನ್ಯಾಯವಾದಿ ಅನೀಸ್ ಪಾಶಾ, ರೆವರೆಂಡ್ ಫಾದರ್ ಮನೋಹರ್ ಚಂದ್ರ ಪ್ರಸಾದ್, ಫಾದರ್ ಅರುಣ್ ಲೂಯಿಸ್, ಮಾಜಿ ಪೊಲೀಸ್ ಅಧಿಕಾರಿ ಸುಹೈಲ್ ಅಹ್ಮದ್, ಹಿರಿಯ ಚಿಂತಕಿ ಡಾ. ಕೆ ಶರೀಫಾ, ಸಾಮಾಜಿಕ ಕಾರ್ಯಕರ್ತ ರಾ ಚಿಂತನ್ ಗೋಷ್ಟಿಯಲ್ಲಿದ್ದರು.

ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯ ಖಾಸಗಿ ಮತ್ತು ಸಾರ್ವಜನಿಕ- ಎರಡೂ ಹಂತಗಳಲ್ಲಿ ತೀವ್ರ ಅಸಮಾನತೆ ಮತ್ತು ದೌರ್ಜನ್ಯಗಳಿಗೆ ಗುರಿಯಾಗಿವೆ. ಆಕ್ಸ್‌ಫಾಮ್ ವರದಿಯ ಪ್ರಕಾರ ಉದ್ಯೋಗಸ್ಥರಾದ ಪುರುಷರ ಸಂಖ್ಯೆ ಶೇ.18 ಇದ್ದರೆ, ಮಹಿಳೆಯರು ಆದಾಯ ತರುವ ಉದ್ದಿಮೆಯ ಕ್ಷೇತ್ರದಲ್ಲಿರುವುದು ಶೇ.26 ಮಾತ್ರ. ಅದರಲ್ಲೂ ಅಸಂಘಟಿತ ಮತ್ತು ಅನೌಪಚಾರಿಕ ವಲಯದಲ್ಲೇ ಹೆಚ್ಚು. ಅತ್ಯಾಚಾರ, ಲೈಂಗಿಕ ಕಿರುಕುಳದ ಬಗ್ಗೆ ಕಾನೂನುಗಳು ಬಂದಿವೆ, ಆದರೆ ವಾಸ್ತವದಲ್ಲಿ ಪೌರ ಕಾರ್ಮಿಕ ಮಹಿಳೆಯರು ದುಡಿಮೆಯ ಸ್ಥಳದಲ್ಲಿ ಮನೆಗಳ ಮಾಲೀಕರಿಂದ ಕಿರುಕುಳಕ್ಕೆ ಒಳಗಾದರೆ ಅವರಿಗೆ ನ್ಯಾಯ ದೊರಕಿಸಲು ಪ್ರಾಯೋಗಿಕವಾದ ಯಾವ ಕ್ರಮ ಜಾರಿಯಲ್ಲಿದೆ? ಶಿಕ್ಷಣದಲ್ಲಿ ಆರಂಭದಿಂದಲೇ ಇವೆಲ್ಲ ಒಳಗೊಳ್ಳಬೇಕು, ಸಿಲಬಸ್ ರೂಪಿಸುವಾಗಲೇ ಮಹಿಳೆಯರು, ಅದರಲ್ಲೂ ಶೋಷಿತ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರ ಸಂವೇದನೆ ಇರುವಂತಾಗಬೇಕು ಎಂದು ದಲಿತ ಸ್ತ್ರೀವಾದಿ ಚಿಂತಕಿ, ಹೋರಾಟಗಾರ್ತಿ ಡಾ.ದು,ಸರಸ್ವತಿ ಪ್ರಶ್ನಿಸಿದರು.


ನೂರಾರು ಬಾಣಂತಿಯರು ಸಾವಿಗೀಡಾಗುತ್ತಿದ್ದಾರೆ, ಇವು ಅಪೌಷ್ಟಿಕತೆಯಿಂದ ಆಗುತ್ತಿರುವ ಸಾವುಗಳು, ಮನೆಗಳ ಎಲ್ಲರನ್ನೂ ಉಣ್ಣಿಸಿ ಸಲಹುವ ಮಹಿಳೆಯರಿಗೆ ಪೌಷ್ಟಿಕ ಆಹಾರ ಉಣ್ಣಿಸುವವರು ಯಾರೂ ಇಲ್ಲವೆ? ಎಂದು ಡಾ. ಆರ್ ಸುನಂದಮ್ಮ ಆತಂಕ ಪಟ್ಟರು.

ಲಿಂಗತ್ವ ಅಲ್ಪಸಂಖ್ಯಾತರ ಒಕ್ಕೂಟದ ರಿಯಾನ್ ರಾಜು ಮತ್ತು ಮಲ್ಲು ಕುಂಬಾರ್ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರಿಗೆ ಭಿಕ್ಷಾಟನೆ ಮತ್ತು ವೇಶ್ಯಾವೃತ್ತಿ ಆಯ್ಕೆಯಲ್ಲ, ಒತ್ತಾಯದ ಅನಿವಾರ್ಯತೆ; ಈವರೆಗೆ ಸರ್ಕಾರ ಯಾವುದೂ ಉದ್ಯೋಗದ ಕ್ಷೇತ್ರಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಸ್ಥಾನ ಕಲ್ಪಿಸಿಕೊಟ್ಟಿಲ್ಲ. ಸಮಾಜವಾಗಲೀ ಸರ್ಕಾರವಾಗಲೀ ಅವರನ್ನು ಗೌರವಿಸುವುದಿಲ್ಲ, ಇದು ಬದಲಾಗಲೇಬೇಕು, ಆರೋಗ್ಯ, ಶಿಕ್ಷಣ, ಉದ್ಯೋಗಗಳಲ್ಲಿ ನಮಗೆ ಸೂಕ್ತ ಭದ್ರತೆ ಮತ್ತು ಅವಕಾಶ ದೊರಕಬೇಕು ಎಂದರು.

ಗೋಷ್ಟಿಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ಜನಶಕ್ತಿಯ ಪ್ರಧಾನ ಕಾರ್ಯದರ್ಶಿ ಮಲ್ಲಿಗೆ, ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರ ವಾಸ್ತವ ಸ್ಥಿತಿಗತಿ ತಿಳಿಯುವ ಸಮಗ್ರ ಅಧ್ಯಯನ ನಡೆಯಬೇಕು, ಈ ಸಮುದಾಯಗಳ ಪರ ಕೆಲಸ ಮಾಡುವ ಎಲ್ಲ ಸಂಘಟನೆಗಳು ಮತ್ತು ವ್ಯಕ್ತಿಗಳನ್ನು ಸರ್ಕಾರ ಕರೆದು ಸಭೆ ಮಾಡಿ ಅವರ ಸೂಚನೆಯನ್ವಯ ಕೆಲಸಕ್ಕೆ ಮುಂದಡಿಯಿಡಬೇಕೆಂದು ಆಗ್ರಹಿಸಿದರು.

ಅತಿ ಹಿಂದುಳಿದ ಸಮುದಾಯಗಳು ಇಂದು ಬಲಪಂಥೀಯ ಸಂಘಟನೆಗಳ ಕಾಲಾಳುಗಳಾಗಿದ್ದಾರೆ, ಕರಾವಳಿಯ ಜೈಲುಗಳಲ್ಲಿ ಧರ್ಮದ ಕಾರಣಕ್ಕೆ ನಡೆದ ಗಲಭೆಗಳ ಕಾರಣಕ್ಕೆ ಬಂಧನಕ್ಕೊಳಗಾದವರೆಲ್ಲ ಮುಸ್ಲಿಮರು ಮತ್ತು ಅತಿ ಹಿಂದುಳಿದವರು. ಯಾವ ಬ್ರಾಹ್ಮಣರೂ ಜೈಲುಗಳಲ್ಲಿಲ್ಲ, ಬಂಧಿತರಾದವರೆಲ್ಲ ಬಿಲ್ಲವರು, ಮೊಗವೀರರು ಮೊದಲಾದ ಹಿಂದುಳಿದವರೇ. ಅತಿ ಹಿಂದುಳಿದ ಸಮುದಾಯಗಳ ಉನ್ನತಿಗಾಗಿ ಯೋಜನೆಗಳಿಲ್ಲ, ಇದ್ದರೂ ಅವು ಕಡಿತಗೊಳ್ಳುತ್ತಾ ಹೋಗಿವೆ, ಆದರೆ ಸದಾ ಮೀಸಲಾತಿಯ ವಿರುದ್ಧ ಕಿಡಿಕಾರುವ ಬ್ರಾಹ್ಮಣ ಸಮುದಾಯದ ಏಳ್ಗೆಗೆ ಸುಮಾರು ೨೬ ಯೋಜನೆಗಳು ಕರ್ನಾಟಕದಲ್ಲಿವೆ. ಉಪನಯನಕ್ಕೂ ಕೂಡಾ ಸರ್ಕಾರ ನೆರವು ಕೊಡುತ್ತದೆ, ಅಂದರೆ ಉಳಿದವರಿಗಿಂತ ನಾನು ಶ್ರೇಷ್ಠ ಎಂಬ ಅಸ್ಪೃಶ್ಯತೆಯ ಆಚರಣೆಯನ್ನೂ ಸರ್ಕಾರ ಪೋಷಿಸುತ್ತಿದೆ. ಅತಿ ಹಿಂದುಳಿದ ಸಮುದಾಯಗಳು ಹಿಂದು ನಾವೆಲ್ಲ ಒಂದು ಎಂದು ಘೋಷಿಸಿದ ದಿನದಿಂದ ಅವರ ಪ್ರಾತಿನಿಧ್ಯ ಕಡಿಮೆಯಾಯಿತು, ಉನ್ನತ ಹಂತಗಳಲ್ಲಿ ಅವರ ದನಿ ಅಡಗಿತು ಎಂದು ಸಾಮಾಜಿಕ ಕಳಕಳಿಯ ಪತ್ರಕರ್ತ, ಬರಹಗಾರ ನವೀನ್ ಸೂರಿಂಜೆ ಅಭಿಪ್ರಾಯಪಟ್ಟರು.

ನಾವೆಲ್ಲ ಒಂದು ಎಂದು ಭಾವಿಸಿ ಹೋರಾಡಬೇಕು, ಅಲೆಮಾರಿಗಳು, ದಲಿತರು, ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು ಮೊದಲಾದ ಎಲ್ಲರೂ ನಾವೇ ಎಂದು ಅವರ ನೋವು ನಮ್ಮದೇ ಎಂದು ಭಾವಿಸಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು” ಎಂದು ನಿವೃತ್ತ ಪ್ರಾಂಶುಪಾಲರಾದ ಎನ್. ಇಂದಿರಮ್ಮ ಕರೆ ನೀಡಿದರು.
ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿಗಳಾದ ಕೆ ಎಲ್ ಅಶೋಕ್ ಉಪಸ್ಥಿತರಿದ್ದರು.

ಸಮಾರೋಪ ಗೋಷ್ಟಿಯಲ್ಲಿ ಪ್ರಗತಿಪರ ಚಿಂತಕರೂ ಮಾಜಿ ಸಚಿವರೂ ಆದ ಬಿ ಟಿ ಲಲಿತಾ ನಾಯ್ಕ್ ಮಾತನಾಡಿ, ಈ ಎಲ್ಲ ಬಗೆಯ ಶೋಷಿತ ಸಮುದಾಯಗಳ ಐಕ್ಯತೆಯ ಅಗತ್ಯವಿದೆ ಎಂದರು.
ಮುಸ್ಲಿಮ್ ಸಮುದಾಯದ ನಾಯಕರಾದ ಮೌಲಾನಾ ಮಹಮ್ಮದ್ ಯೂಸುಫ್ ಕನ್ನಿಯವರು ಮಾತನಾಡಿದರು.

ಕರ್ನಾಟಕ ಜನಶಕ್ತಿಯ ರಾಜ್ಯಾಧ್ಯಕ್ಷರಾದ ನೂರ್ ಶ್ರೀಧರ್ ಸಮಾರೋಪ ಮಾತುಳನ್ನಾಡುತ್ತಾ, ಇಲ್ಲಿ ನೆರೆದಿರುವ ದಲಿತ, ಅಲ್ಪಸಂಖ್ಯಾತ, ಮಹಿಳಾ ಮತ್ತು ಹಿಂದುಳಿದ ಸಮುದಾಯಗಳ ಕಳಕಳಿಯ ಕಾರಣಕ್ಕೆ ಇಂದು ರಾಜ್ಯವನ್ನು ಆಳುತ್ತಿರುವ ಸರ್ಕಾರ ಅಧಿಕಾರಕ್ಕೆ ಬಂತು. ಆದರೆ, ಅದಾದ ನಂತರ ಈ ಸಮುದಾಯಗಳ ಒಂದು ಹಕ್ಕೊತ್ತಾಯವನ್ನಾದರೂ ಈಡೇರಿಸುವ ಪ್ರಯತ್ನ ಮಾಡಿಲ್ಲ. ನಾವೆಲ್ಲ ಕರ್ನಾಟಕದ ಜನಚಳುವಳಿಗಳು ಮತ್ತು ನಾಗರೀಕ ಸಮಾಜ ಸಂವಿಧಾನ ವಿರೋಧಿ ಶಕ್ತಿಗಳನ್ನು ಅಧಿಕಾರದಿಂದ ಇಳಿಸಬೇಕೆಂದು ಕೆಲಸ ಮಾಡಿದೆವು, ಇಂದು ನಾವೆಲ್ಲ ಒಗ್ಗೂಡಿ ಎಲ್ಲ ಶೋಷಿತ ಸಮುದಾಯಗಳ ಪರವಾಗಿ ದನಿಯೆತ್ತಿದ್ದರೆ ನಾವೂ ರಾಜಕಾರಣಿಗಳಂತೆ ಪುಢಾರಿಗಳಾಗುತ್ತೇವೆ. ಆದ್ದರಿಂದ ಇಂದು ನಡೆದ ಪ್ರಯತ್ನ ಒಂದು ಕಾರ್ಯಕ್ರಮವಲ್ಲ, ನಿರಂತರ ಪ್ರಕ್ರಿಯೆ. ಸರ್ಕಾರವನ್ನು ಆಗ್ರಹಿಸಿ, ಕೆಲಸಕ್ಕೆ ಹಚ್ಚುವ ಜವಾಬ್ದಾರಿ ಇಂದು ಚಳುವಳಿಗಳ ಮೇಲಿದೆ. ಇದರಲ್ಲಿ ಆದಿವಾಸಿಗಳ ಹೋರಾಟ ಅವರದ್ದು, ಮಹಿಳೆಯರ ಹೋರಾಟ ಮಹಿಳೆಯರದ್ದಷ್ಟೇ ಎಂಬ ದೃಷ್ಟಿ ಸರಿಯಲ್ಲ, ಎಲ್ಲರೂ ಐಕ್ಯಮತದಿಂದ ಮುಂದುವರೆದು ಎಲ್ಲರ ಸಾಮೂಹಿಕ ಒಳಿತಿಗಾಗಿ ಶ್ರಮಿಸೋಣ ಎಂದರು.

ಅಂಬೇಡ್ಕರ್ ಅವರು ʼಸ್ವಾತಂತ್ರ್ಯ, ಸಮಾನತೆ, ಸಹೋದರತೆʼಯ ಫ್ರೆಂಚ್ ಕ್ರಾಂತಿಯ ಆಶಯಗಳಿಗೆ ʼಸಾಮಾಜಿಕ ನ್ಯಾಯʼದ ನಾಲ್ಕನೇ ಆಯಾಮವನ್ನು ಸೇರಿಸಿ ಹೊಸ ಮೆರುವು ಕೊಟ್ಟವರು. ಶೋಷಿತರ ಸಾವಿರಾರು ವರ್ಷಗಳ ಬಂಡಾಯದ ಆಶಯವನ್ನು ಉನ್ನತ ಹಂತಕ್ಕೆ ಒಯ್ದು ಒಗ್ಗೂಡಿಸಿ ಒಂದು ರೂಪಕ್ಕೆ ತಂದವರು ಅವರು, ಅದೇ ಸಂವಿಧಾನ. ಸಂವಿಧಾನವನ್ನು ಕಳೆದುಕೊಂಡರೆ ಈ 800 ವರ್ಷಗಳ ಸಾಧನೆಯನ್ನು ಕಳೆದುಕೊಂಡಂತೆ. ಅದನ್ನು ಗಂಭೀರವಾಗಿ ಪರಿಗಣಿಸಿ ಈ ಪ್ರಕ್ರಿಯೆಯಲ್ಲಿ ಮುಂದುವರೆಯೋಣ ಎಂದರು.
ಇದನ್ನೂ ಓದಿ…ಮಾ. 2026ರೊಳಗೆ ನಕ್ಸಲೀಯರ ಸಂಪೂರ್ಣ ತೊಡೆದು ಹಾಕಲು ಜಂಟಿ ಸಿದ್ಧತೆ: ಅಮಿತ್ ಶಾ


