Homeಕರ್ನಾಟಕಒಟ್ಟಿಗೆ ಕಲೆಯುವ, ಸಂವಾದ ಮಾಡುವಂತಹ ಹೊಸಕಾಲದ ಅಸ್ಮಿತೆಯ ಹುಡುಕಾಟ

ಒಟ್ಟಿಗೆ ಕಲೆಯುವ, ಸಂವಾದ ಮಾಡುವಂತಹ ಹೊಸಕಾಲದ ಅಸ್ಮಿತೆಯ ಹುಡುಕಾಟ

- Advertisement -
- Advertisement -

20ನೇ ಶತಮಾನದ ಮೊದಲ ದಶಕಗಳಲ್ಲಿ, ಮೈಸೂರು ಬೆಂಗಳೂರು ಧಾರವಾಡ ಮುಂತಾದ ನಗರಗಳಲ್ಲಿ ಬೇರೆಬೇರೆ ಜಾತಿಯ ಹಾಸ್ಟೆಲುಗಳು ಸ್ಥಾಪನೆಯಾದವು. ತಮ್ಮ ಮತಜಾತಿಯ ಹುಡುಗರು (ಹುಡುಗಿಯರಲ್ಲ), ಆಧುನಿಕ ಶಿಕ್ಷಣ ಪಡೆಯಬೇಕು ಮತ್ತು ಸರ್ಕಾರಿ ನೌಕರಿ ಗಳಿಸಬೇಕು ಎಂಬ ಉದ್ದೇಶದಿಂದ ಸ್ಥಾಪನೆಯಾದವು ಇವು. ಆಯಾ ಸಮುದಾಯದೊಳಗೇ ಇರುವ ವ್ಯಾಪಾರಸ್ಥರು ಜಮೀನುದಾರರು ಮಠಾಧೀಶರು ಇವುಗಳ ಹಿಂದಿದ್ದರು. ವಸಾಹತುಶಾಹಿ ಕಾಲದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಮೇಲ್ಚಲನೆಗಾಗಿ ಸಮುದಾಯಗಳು ಆಧುನಿಕತೆಯ ಜತೆಗೆ ಮಾಡಿದ ಅನುಸಂಧಾನದ ಸಾಕ್ಷ್ಯಗಳಾಗಿವೆ ಇವು. ಇವಕ್ಕೆ ಪೂರಕವಾಗಿ ಮೈಸೂರು ಮತ್ತು ಮುಂಬೈ ಕರ್ನಾಟಕಗಳಲ್ಲಿ, ಬ್ರಾಹ್ಮಣೇತರ ಜಾತಿಗಳಿಗೆ ನೌಕರಿ ಮತ್ತು ವಿದ್ಯಾಭ್ಯಾಸದಲ್ಲಿ ಉತ್ತೇಜನ ಕೊಡುವ ನೀತಿಗಳನ್ನು ಸರ್ಕಾರಗಳು ಜಾರಿಗೊಳಿಸಿದ್ದವು. ಈ ನೀತಿಗಳ ಹಿಂದೆ, ಮುಸ್ಲಿಮರನ್ನೂ ಒಳಗೊಂಡ ಬ್ರಾಹ್ಮಣೇತರ ಚಳವಳಿಗಳ ಒತ್ತಾಸೆಯೂ ಇತ್ತು. ಆಗಿನ್ನೂ ದಲಿತ ಚಳವಳಿಯಿರಲಿಲ್ಲ.

ಆದರೆ ಶಾಹು ಮಹಾರಾಜರು ದಲಿತ ಮತ್ತು ಕೆಳಜಾತಿಗಳನ್ನು ಒಳಗೊಂಡಂತೆ ಬ್ರಾಹ್ಮಣೇತರ ಶೂದ್ರರನ್ನು ನೌಕರಿ ಮತ್ತು ವಿದ್ಯಾಭ್ಯಾಸಕ್ಕೆ ಜೋಡಿಸುವ ಕೆಲಸವನ್ನು ಇದಕ್ಕೂ ಮೊದಲೇ ಆರಂಭಿಸಿದ್ದರು. ಶಾಹು ಅವರು ಈ ಜಾತಿಗಳು ತಮ್ಮ ಮಠ/ಹಾಸ್ಟೆಲ್ ಕಟ್ಟಿಕೊಳ್ಳಲು ಕೊಲ್ಹಾಪುರದ ನಡುಭಾಗದಲ್ಲಿ ಜಾಗಗಳನ್ನೂ ಹಂಚಿದರು. ಇವುಗಳ ಜತೆಗೆ ಬ್ರಾಹ್ಮಣ ಹಿನ್ನೆಲೆಯಿಂದ ಬಂದ ಕಾಕಾ ಕಾರಖಾನೀಸ್ ಬಿಜಾಪುರದಲ್ಲೂ ಹಾಗೂ ಕುದ್ಮಲ್ ರಂಗರಾವ್ ಮಂಗಳೂರಿನಲ್ಲೂ, ತಗಡೂರು ಸುಬ್ಬಣ್ಣನವರು ಮೈಸೂರಿನಲ್ಲೂ ಎಲ್ಲ ಜಾತಿಯ ಮಕ್ಕಳಿಗೆಂದು ಶಾಲೆ ಅಥವಾ ಹಾಸ್ಟೆಲುಗಳನ್ನು ಆರಂಭಿಸಿದರು. ತಮ್ಮ ಶಾಲೆಯಲ್ಲಿ ಓದಿದ ದಲಿತನೊಬ್ಬ ಅಧಿಕಾರಿಯಾಗಿ ಕಾರಲ್ಲಿ ಬಂದಾಗ ಹಾರುವ ಧೂಳು ತಮ್ಮ ಸಮಾಧಿಯ ಮೇಲೆ ಬೀಳಲಿ ಎಂದು ಘೋಷಿಸುವ ಮಟ್ಟಕ್ಕೆ ಕುದ್ಮಲ್ ತಮ್ಮ ಬದ್ಧತೆ ಪ್ರಕಟಿಸಿದರು. ತಮ್ಮ ಈ ನಡೆಗಳಿಗಾಗಿ ಕುದ್ಮಲ್ ಹಾಗೂ ಗಾಂಧಿವಾದಿಯಾಗಿದ್ದ ಕಾರಖಾನೀಸ್ ತಂತಮ್ಮ ಜಾತಿಗಳಿಂದ ಬಹಿಷ್ಕೃತರೂ ಆದರು.

ಇಂತಹುದೇ ಕೆಲಸವನ್ನು ಕರಾವಳಿಯಲ್ಲಿ ಮತ್ತು ಕೇರಳದಲ್ಲಿ ನಾರಾಯಣ ಗುರುಗಳು ಆಧ್ಯಾತ್ಮಿಕ ಚಳವಳಿಯ ಭಾಗವಾಗಿ ಹಮ್ಮಿಕೊಂಡರು. ಈ ಹಾಸ್ಟೆಲು, ಮಠ ಶಾಲೆಗಳ ನಿರ್ಮಾಣದ ಹಿಂದೆ ಎರಡು ಸಾಮಾಜಿಕ ಮಾದರಿಗಳಿದ್ದವು. 1. ಆರ್ಥಿಕವಾಗಿ ಸ್ಥಿತಿವಂತರಾದವರು ಅಪವರ್ಗೀಕರಣಗೊಂಡು ತಂತಮ್ಮ ಸಮುದಾಯಗಳಲ್ಲಿರುವ ಬಡ ವಿದ್ಯಾರ್ಥಿಗಳ ಉನ್ನತಿಗಾಗಿ ತಮ್ಮ ಸಂಪತ್ತನ್ನು ವಿನಿಯೋಗಿಸುವುದು. 2. ಉಚ್ಚಜಾತಿಯಿಂದ ಬಂದವರು, ಹೊಸ ರಾಷ್ಟ್ರವನ್ನು ಕಟ್ಟುವುದಕ್ಕೆ ತಮ್ಮ ನಿರ್ಜಾತೀಕರಣ ಅಗತ್ಯವೆಂದು ಭಾವಿಸುವುದು; ದಲಿತರ ಮತ್ತು ಹಿಂದುಳಿದ ವರ್ಗಗಳ ಏಳಿಗೆಗಾಗಿ ತಮ್ಮನ್ನು ತೆತ್ತುಕೊಳ್ಳುವುದು.

ಕುದ್ಮಲ್

ಸ್ವಾತಂತ್ರ್ಯಾನಂತರ ಮತ್ತು ಕರ್ನಾಟಕದ ಏಕೀಕರಣದ ಬಳಿಕ, ಸಾಮಾಜಿಕ ನ್ಯಾಯಕ್ಕಾಗಿ ಮೀಸಲಾತಿ ಮತ್ತು ಸಾರ್ವತ್ರಿಕ ಶಿಕ್ಷಣಗಳನ್ನು ನೀಡುವ ವೆಲ್‌ಫೇರ್ ಸ್ಟೇಟ್ ಆಶಯವುಳ್ಳ ಸರ್ಕಾರಗಳು, ಹಿಂದುಳಿದ ಜಾತಿ ಮತ್ತು ವರ್ಗಗಳಿಗೂ ದಲಿತರಿಗೂ ಮಹಿಳೆಯರಿಗೂ ಹಾಸ್ಟೆಲುಗಳನ್ನು ಕಟ್ಟಿ, ಮೊದಲ ಘಟ್ಟದ ಜಾತಿಸಂಘಟನೆಗಳ ಕಾರ್ಯವನ್ನು ಬೇರೊಂದು ಬಗೆಯಲ್ಲಿ ಮುಂದುವರೆಸಿದವು. ಸರ್ಕಾರದ ಈ ಸಾರ್ವಜನಿಕ ಶಾಲೆ-ಹಾಸ್ಟೆಲುಗಳ ಹಾಗೂ ಭೂಸುಧಾರಣೆಗಳ ಪರಿಣಾಮವಾಗಿ, 70-80ರ ದಶಕದಲ್ಲಿ ಮೂಡಿದ ತರುಣರು, ದಲಿತ, ಬಂಡಾಯ, ಜಾತಿವಿನಾಶ, ಬೂಸಾ ಮುಂತಾದ ಚಳವಳಿಗಳನ್ನು ಹುಟ್ಟುಹಾಕಿದರು. ಸಕ್ರಿಯ ರಾಜಕಾರಣಕ್ಕೆ ಸೇರಿದರು. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮನಸ್ಸನ್ನು ಕಟ್ಟುವ ಅಧ್ಯಾಪಕರಾದರು. ಇವರು ಹುಟ್ಟುಹಾಕಿದ ಚಳವಳಿಗಳು ದಲಿತ-ಶೂದ್ರ-ಮಹಿಳೆ ಇತ್ಯಾದಿ ಅಸ್ಮಿತೆಯ ನೆಲೆಯಲ್ಲಿದ್ದರೂ, ಪರಿಣಾಮದಲ್ಲಿ ಎಲ್ಲ ಸಮುದಾಯಗಳಲ್ಲಿರುವ ಜಾತೀಯತೆ, ಧರ್ಮಾಂಧತೆ, ಮೌಢ್ಯಾಚರಣೆಗಳನ್ನು ತಿರಸ್ಕರಿಸಿ, ಮಾನವತಾವಾದವನ್ನು ಎತ್ತಿಹಿಡಿದವು.

ಧರ್ಮವು ಒಂದು ಬಗೆಯ ಅಫೀಮು ಎಂದು ನಂಬಿದ್ದ ಇವು, ವಿಚಾರವಾದ, ವೈಜ್ಞಾನಿಕ ಮನೋಭಾವ, ಡೆಮಾಕ್ರಸಿ, ಸಮಾಜವಾದ ಇವನ್ನು ಹೊಸಕಾಲದ ಆದರ್ಶಮೌಲ್ಯಗಳೆಂದು ಪ್ರತಿಪಾದಿಸಿದವು. ಕುವೆಂಪುರವರ ಪ್ರಸಿದ್ಧ ಭಾಷಣಗಳಾದ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ‘ಸಂಸ್ಕೃತಿ ಕ್ರಾಂತಿಗೆ ಕಹಳೆನಾಂದಿ’ ಮೊದಲಾದವು ಜನಪ್ರಿಯ ಪಠ್ಯಗಳಾದವು. ಈ ಬೆಳವಣಿಗೆಯಲ್ಲಿ ಸಂವೇದನಾಶೀಲ ಮೇಲ್ಜಾತಿಯ ಜನರೂ ಭಾಗವಹಿಸಿದರು. ಅವರಲ್ಲಿ ಜಾತಿಗುರುತುಗಳು ಅಪರಾಧಿಭಾವವನ್ನು ಹುಟ್ಟಿಸಿದವು. ಅನೇಕರು ತಮ್ಮ ಹೆಸರಲ್ಲಿದ್ದ ಮೇಲ್ಜಾತಿಸೂಚಕ ಗುರುತುಗಳನ್ನು ಕತ್ತರಿಸಿ, ಅದರ ಜಾಗದಲ್ಲಿ ಊರ ಹೆಸರನ್ನು ಜೋಡಿಸಿಕೊಂಡರು. ಅಕ್ಷರಸ್ಥ ನೌಕರಸ್ಥ ದಲಿತರು-ಶೂದ್ರರು ಮೇಲ್ಜಾತಿಯಿಂದ ಬಂದ ಮಹಿಳೆಯರನ್ನು ತಮ್ಮ ಜೀವನ ಸಂಗಾತಿಗಳಾಗಿಸಿಕೊಂಡರು. ಅಂತರ್ಜಾತಿ-ಅಂತರ್‌ಧರ್‍ಮೀಯ ವಿವಾಹಗಳು ಆದರ್ಶವೆಂದು ಪರಿಗಣಿತವಾದವು.

ಆದರೆ ಈಗ, ಒಂದು ಶತಮಾನದ ಬಳಿಕ, ಕರ್ನಾಟಕದಲ್ಲಿ ಅಸ್ಮಿತೆಯ ರಾಜಕಾರಣ ಮತ್ತು ಚಳವಳಿಗಳು ಬೇರೊಂದು ರೂಪಾಂತರವನ್ನು ಪಡೆದಿವೆ. ಇವು ವಿಶಾಲ ಜಾತಿಗಳ ನೆಲೆಯಲ್ಲಿ ಮಾತ್ರವಲ್ಲದೆ, ಉಪಜಾತಿ ಪಂಗಡಗಳ ಸ್ತರದಲ್ಲೂ ಸಂಘಟಿತವಾಗುತ್ತಿವೆ. ಲಿಂಗಾಯತರೊಳಗೇ ಪಂಚಮಸಾಲಿಗಳು ಮೀಸಲಾತಿಗಾಗಿ; ದಲಿತರಲ್ಲಿನ ಎಡಗೈ ಬಣವು ಒಳಮೀಸಲಾತಿಗಾಗಿ; ಮುಸ್ಲಿಮರಲ್ಲಿ ಪಿಂಜಾರರು ಮೊದಲಾದ ಹಿಂದುಳಿದ ಪಂಗಡಗಳು ತಮ್ಮ ಪ್ರಾತಿನಿಧ್ಯಕ್ಕಾಗಿ ಮಾಡುತ್ತಿರುವ ಹೋರಾಟಗಳನ್ನು ಗಮನಿಸಬಹುದು. ಒಂದು ಬಗೆಯ ವಿಘಟನ ಅಥವಾ ಮತ್ತೊಂದು ಬಗೆಯಲ್ಲಿ ವಿಕೇಂದ್ರಿಕರಣದ ಈ ಪ್ರಕ್ರಿಯೆಯಲ್ಲಿ, 12ನೇ ಶತಮಾನದ ಶರಣ ಚಳವಳಿಯ ಏಕೀಕೃತ ಚೌಕಟ್ಟು ಒಡೆದು, ಅಲ್ಲಿಂದ ವಿಭಿನ್ನ ಶರಣರು ಬೇರೆಬೇರೆ ಉಪಜಾತಿಗಳ ಸಾಂಸ್ಕೃತಿಕ ನಾಯಕರಾಗಿದ್ದು ಸಹಜವಾಗಿದೆ. ಇದಕ್ಕೆ ಬೇಕಾದ ಸರ್ಕಾರಗಳೂ ಜಾತಿ ಪಂಗಡ ಆಧಾರಿತವಾದ ಸಾಂಸ್ಕೃತಿಕ ನಾಯಕರ ಜಯಂತಿಗಳನ್ನೂ, ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಪೀಠಗಳನ್ನೂ, ಪ್ರಾಧಿಕಾರಗಳನ್ನೂ ಘೋಷಿಸಿದವು. ಇದು ರಾಜಕೀಯ ಪಕ್ಷಗಳಿಗೆ ಚುನಾವಣಾ ರಾಜಕಾರಣದ ಕಾರ್ಯತಂತ್ರವೂ ಆಗಿತ್ತು. ಹೀಗಾಗಿ ಜಾತಿಮತದ ಗುರುತುಗಳನ್ನು ಅಡಗಿಸಲು ಯತ್ನಿಸುತ್ತಿದ್ದವರು, ಈಗ ವಾಹನ, ಮನೆ, ಟಿಶರ್ಟುಗಳ ಮೇಲೆ ತಮ್ಮ ಜಾತಿ-ಪಂಗಡಗಳ ಗುರುತುಗಳನ್ನು ಹೆಮ್ಮೆಯಿಂದ ಕಾಣಿಸುವಂತಾಯಿತು.

ಈ ವಿದ್ಯಮಾನಗಳ ಹಿಂದೆ ಎರಡು ಆಯಾಮಗಳಿವೆ. 1. ಅಲ್ಪಸಂಖ್ಯಾತ ಸಣ್ಣಪುಟ್ಟ ಜಾತಿಗಳು, ಅಧಿಕಾರಸ್ಥ ರಾಜಕಾರಣದಲ್ಲಿ ಸಂಪತ್ತಿನಲ್ಲಿ ಶಿಕ್ಷಣ ಮತ್ತು ನೌಕರಿಗಳಲ್ಲಿ ತಮಗೆ ಸಲ್ಲಬೇಕಾದ ಸಾಮಾಜಿಕ ನ್ಯಾಯ ಪಡೆಯುವ ಆಯಾಮ; ಸ್ವಾತಂತ್ರ್ಯಾನಂತರ ಪ್ರ್ರಭುತ್ವಗಳು ಎಲ್ಲ ಸಮುದಾಯಗಳಲ್ಲಿರುವ ಬಡವರಿಗೆ ಅಧಿಕಾರ ಸವಲತ್ತು ಸಂಪನ್ಮೂಲಗಳನ್ನು ಸಮಾನವಾಗಿ ಹಂಚುವ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ, ನವ ಉದಾರವಾದಿ ಆರ್ಥಿಕ ನೀತಿ ಜಾರಿಬಂದಿತು. ಬಲಿಷ್ಠರು ಮಾತ್ರ ಬದುಕುವ ಸ್ಪರ್ಧಾಸಿದ್ಧಾಂತಕ್ಕೆ ಮಾನ್ಯತೆ ದೊರೆಯಿತು. ಆಗ ಅಭಿವೃದ್ಧಿ ಪಥದಲ್ಲಿ ಇನ್ನೂ ಹಿಂದುಳಿದಿದ್ದ ಸಮುದಾಯಗಳು ಧಾರ್ಮಿಕ -ರಾಜಕೀಯ ನಾಯಕತ್ವ ರೂಪಿಸಿಕೊಂಡು, ತಮ್ಮ ಪಾಲನ್ನು ಕೇಳಲು ಚೌಕಾಸಿ ಮಾಡುವ ಸಂಘಟನೆಗಳಾಗಿ ಮಾರ್ಪಟ್ಟವು. ಅವುಗಳ ಧಾರ್ಮಿಕ ಸಾಮಾಜಿಕ ರಾಜಕೀಯ ಆಶೋತ್ತರಗಳು ಏಕೀಭವಿಸಿದವು. ಅಸ್ಮಿತೆ ರಾಜಕಾರಣವು ಬೇರುಬಿಟ್ಟಿತು. 2. ಈಗಾಗಲೇ ಭೂಮಿ ವ್ಯಾಪಾರ ರಾಜಕೀಯ ಅಧಿಕಾರಗಳಲ್ಲಿ ದೊಡ್ಡ ಪಾಲನ್ನು ಪಡೆದಿರುವ ಉಚ್ಚಜಾತಿಯ ಸಮುದಾಯಗಳು, ತಮ್ಮ ಯಜಮಾನಿಕೆ ಉಳಿಸಿಕೊಳ್ಳಲು ಮತ್ತು ಹೆಚ್ಚಿಸಿಕೊಳ್ಳಲು ಅಸ್ಮಿತೆಯ ರಾಜಕಾರಣವನ್ನು ಬಳಸಿಕೊಂಡವು.

ಈ ಬೆಳವಣಿಗೆಗಳ ಪರಿಣಾಮವೆಂದರೆ, ಸರ್ವ ಜಾತಿ-ಧರ್ಮ-ವರ್ಗಗಳಲ್ಲಿರುವ ಸಮಾನ ದುಃಖಿತರು, ನ್ಯಾಯಬದ್ಧ ಹಕ್ಕುಗಳಿಗಾಗಿ ಒಂದಾಗುವ ಸಾಧ್ಯತೆ ಕ್ಷೀಣಗೊಳಿಸುತ್ತ ಹೋಗಿದ್ದು; ಅಂದರೆ, ಬಡತನ, ಆರೋಗ್ಯ, ಕನ್ನಡತನ, ಲಿಂಗಭೇದ, ಪ್ರಜಾಪ್ರಭುತ್ವದ ಉಳಿವು, ರೈತಸಮಸ್ಯೆ, ಕಾರ್ಮಿಕಹಕ್ಕು, ಕೋಮುಸಾಮರಸ್ಯ, ಹಿಂದಿವಿರೋಧ, ಭ್ರಷ್ಟಾಚಾರವಿರೋಧ, ಭೂಮಿಹಕ್ಕು, ಮಾರುಕಟ್ಟೆವಾದ ವಿರೋಧ, ಪರಿಸರರಕ್ಷಣೆ, ನೈಸರ್ಗಿಕಕೃಷಿ, ಸಾಹಿತ್ಯಪ್ರೀತಿ-ಮುಂತಾದ ವಿಶಾಲ ನೆಲೆಯ ಹೋರಾಟಗಳಿಗೆ ಕಾರಣವಾಗಬಲ್ಲ ವಿಷಯಗಳು ಹಿನ್ನಡೆಗೊಂಡಿದ್ದು; ಸಮುದಾಯಗಳು ವರ್ಗಗಳಾಗಿ ರೂಪಾಂತರಗೊಳ್ಳುವ ಬದಲಾಗಿ ವರ್ಗಗಳೇ ಸಮುದಾಯ ರಾಜಕಾರಣದತ್ತ ಸರಿದಿದ್ದು. ಈ ಹಿನ್ನಡೆಯ ಹಿಂದೆ, ಅಸ್ಪೃಶ್ಯತೆ, ಲಿಂಗಭೇದ, ಜಾತಿಭೇದ, ಕೋಮುವಾದಂತಹ ಸಾಮಾಜಿಕ ಸಂಗತಿಗಳಿಗೆ ಹೆಚ್ಚಿನ ಗಮನಕೊಡದ ಶುದ್ಧ ವರ್ಗಚಳವಳಿಗಳ ವಿಫಲತೆಯ ಪಾಲೂ ಇದೆ. ಸಮಸ್ಯೆಯೆಂದರೆ, ಮತಧರ್ಮದ ಹೆಸರಲ್ಲಿ ಜನರನ್ನು ವಿಭಜಿಸುವವರಲ್ಲಿ, ದೇಶವನ್ನು ಕಾರ್ಪೊರೇಟ್ ವಲಯದ ಲೂಟಿಗೆ ತೆರೆಯುವವರಲ್ಲಿ ಏರ್ಪಟ್ಟ ಅಭೂತಪೂರ್ವ ಸಹಮತ; ಸರ್ವರೂ ಘನತೆಯಿಂದ ಸಮಾನತೆಯಿಂದ ನೆಮ್ಮದಿಯಿಂದ ಬದುಕುವ ಸಮಾಜ ಕಟ್ಟುವ ಕನಸುಳ್ಳವರು ಸೈದ್ಧಾಂತಿಕ ಭಿನ್ನಮತ ಮತ್ತು ಶಂಕೆಗಳಿಂದ ಛಿಧ್ರಗೊಂಡಿದ್ದು.

ಈ ಬಿಕ್ಕಟ್ಟಿನ ಚಾರಿತ್ರಿಕ ಸಂದರ್ಭದ ಫಲಾನುಭವಿ ಎಂದರೆ ಭಾರತದ ಬಲಪಂಥೀಯ ಸಿದ್ಧಾಂತ ಮತ್ತು ರಾಜಕಾರಣ. ಈಚಿನ ದಿನಗಳಲ್ಲಿ ಸರ್ವ ಜಾತಿಮತಗಳಿಗೆ ಸೇರಿದ ಜನರನ್ನು ತನ್ನ ಅಜೆಂಡಾಗಳಿಗೆ ಒಗ್ಗೂಡಿಸಲು ಹೆಚ್ಚು ಯಶಸ್ಸು ಸಿಕ್ಕಿರುವುದು ಅವು ರೂಪಿಸಿದ ಕಾರ್ಯಕ್ರಮಗಳಿಗೇ. ‘ಚಳವಳಿ’ ಎಂಬ ಪರಿಕಲ್ಪನೆಯನ್ನು ಚೆನ್ನಾಗಿ ದುಡಿಸಿಕೊಂಡಿರುವುದು ತಬ್ಬಲಿಗಳ ಪರವಾಗಿರುವ ಸಿದ್ಧಾಂತ, ರಾಜಕೀಯ ಪಕ್ಷ ಮತ್ತು ಆಂದೋಲನಗಳಲ್ಲ. ಧರ್ಮದ ಹೆಸರಲ್ಲಿ ದ್ವೇಷವನ್ನು ಹುಟ್ಟಿಸುತ್ತಿರುವವರು; ಮಹಿಳೆಯ ಹಕ್ಕುಗಳನ್ನು ದಮನಿಸುತ್ತಿರುವ ಗಂಡಾಳಿಕೆಯ ವಾದಗಳು; ಲಾಭ ಮತ್ತು ಸ್ಪರ್ಧೆಗಳನ್ನು ಆದರ್ಶವಾಗಿಸಿರುವ ಮಾರುಕಟ್ಟೆವಾದಿಗಳು; ಸಾಮಾಜಿಕ ತರತಮಗಳು ಅಂತರ್ಗತವಾಗಿರುವ ಸಮಾಜಗಳಲ್ಲಿ ವಿಶಾಲನೆಲೆಯ ಜಾತ್ಯತೀತ ಅಥವಾ ವರ್ಗ ಚಳವಳಿಗಿಂತ, ಜಾತಿಅಸ್ಮಿತೆ ಮತ್ತು ಧಾರ್ಮಿಕದ್ವೇಷದ ಚಳವಳಿಗಳನ್ನು ರೂಪಿಸುವುದು ಸುಲಭ.

photo Courtesy: Star of mysore

ಇದರಿಂದ ಜಾತಿಮತಾತೀತ ನೆಲೆಯಲ್ಲಿರುವ ವಿಷಯವೂ, ಜಾತಿ ಇಲ್ಲವೇ ಮತಧರ್ಮದ ಚೌಕಟ್ಟಿನೊಳಗೆ ಜಾರಿಬಿಡುತ್ತದೆ. ಉದಾ: ಯೋಗ ಮತ್ತು ಅಯುರ್ವೇದ ಕುರಿತಾಗಿ ಈಚೆಗೆ ಜನರಲ್ಲಿ ಉಂಟಾಗಿರುವ ಆಸ್ಥೆಯನ್ನು ಗಮನಿಸಬಹುದು. ಇದಕ್ಕೆ ಬೇಕಾದ ಕೋರ್ಸು, ಆಶ್ರಮ, ಶಾಲೆ, ಆಧ್ಯಾತ್ಮಿಕ ಗುರುವರ್ಗಗಳು ವ್ಯಾಪಕವಾಗಿ ಹುಟ್ಟಿಕೊಂಡಿವೆ. ಆದರೆ ಇವುಗಳ ನೇತೃತ್ವ ವಹಿಸಿರುವ ಹೆಚ್ಚಿನವರು ‘ರಾಷ್ಟ್ರಭಕ್ತಿ’ಯ ಹೆಸರಲ್ಲಿ ಮತೀಯ ರಾಜಕಾರಣದ ಸಮರ್ಥಕರಾಗಿದ್ದಾರೆ. ಹಿಂದೆ ಸಾಹಿತ್ಯ, ರಂಗಭೂಮಿ, ಚಿತ್ರಕಲೆಯಂತಹ ಕಲಾಮಾಧ್ಯಮಗಳಲ್ಲಿ ಬಲಪಂಥೀಯರು ಇರಲಿಲ್ಲ. ಈಗ ಅಲ್ಲೂ ಅವರ ನುಗ್ಗುವಿಕೆಯಿದೆ. ಸ್ಪರ್ಧಾತ್ಮಕ ವಾತಾವರಣದಲ್ಲಿ ತರುಣ ಸಮುದಾಯ ಯಶಸ್ವೀ ವ್ಯಕ್ತಿಯಾಗಿ ತಮ್ಮನ್ನು ಹೇಗೆ ಮಂಡಿಸಿಕೊಳ್ಳಬೇಕು ಎಂಬುದನ್ನು ಪ್ರತಿಪಾದಿಸುವ ವ್ಯಕ್ತಿತ್ವ ನಿರ್ಮಾಣ ಚಿಂತಕರು, ಒಂದೋ ಆಸುಪಾಸು ಬದುಕುತ್ತಿರುವವರ ಬಗ್ಗೆ ಕಾಳಜಿಯಿಲ್ಲದ ಸ್ವಕೇಂದ್ರಿತ ಮನೋಧರ್ಮವನ್ನು ಹುಟ್ಟುಹಾಕುತ್ತಿದ್ದಾರೆ. ಇಲ್ಲವೇ ಮತೀಯವಾದೀ ರಾಷ್ಟ್ರೀಯತೆಗೆ ತಮ್ಮ ಚಿಂತನೆಯನ್ನು ಜೋಡಿಸಿಬಿಡುತ್ತಿದ್ದಾರೆ.

ಇಂತಹ ವೈರುಧ್ಯಕರ ಸನ್ನಿವೇಶದಲ್ಲಿ, ಪ್ರಜಾಸತ್ತಾತ್ಮಕ ಮತ್ತು ಸಮಾಜವಾದಿ ಪರ್ಯಾಯ ಕಟ್ಟಬಯಸುವವರು ಹೊಸತಲೆಮಾರಿನೊಂದಿಗೆ ಸಂವಾದ ಮಾಡಬೇಕಿದೆ. ಎಲ್ಲ ಜನಪರ ಸಿದ್ಧಾಂತ, ಸಂಘಟನೆ, ಚಳವಳಿಗಳು, ಎಲ್ಲ ಮತಧರ್ಮಕ್ಕೆ ಸೇರಿದ ಸಮಾನಮನಸ್ಕರು ಒಟ್ಟಿಗೆ ಕಲೆಯುವ, ಸಂವಾದ ಮಾಡುವಂತಹ ಹೊಸ ಅಸ್ಮಿತೆಗಳನ್ನು ಹುಡುಕುವ ಜರೂರತ್ತಿದೆ. ಹಲವು ಸೈದ್ಧಾಂತಿಕ ಧಾರೆಗಳಿಂದ, ಸಾಮಾಜಿಕ ಧಾರ್ಮಿಕ ನೆಲೆಗಳಿಂದ ಬರುವ ಸಮಾನತೆಯ ಸಮಾಜ ಕಟ್ಟುವ ಕನಸುಳ್ಳವರನ್ನು ಒಟ್ಟುಗೂಡಿಸುವ ಕೇಂದ್ರಗಳನ್ನು ರೂಪಿಸಬೇಕಿದೆ. ಅಂತಹ ಕೇಂದ್ರಗಳು ಬಹುಶಃ ಹೊಸಚಳವಳಿಗಳನ್ನು ಹಡೆಯುವ ಗರ್ಭಗಳಾಗಬಲ್ಲವು; ಹೊಸ ಮಾಧ್ಯಮ ಸಾಧ್ಯತೆಗಳನ್ನು ಅನ್ವೇಷಿಸಬಲ್ಲವು. ಹೊಸ ಕರ್ನಾಟಕದ ಕನಸನ್ನು ಸಾಕಾರಗೊಳಿಸುವ ದಿಸೆಯಲ್ಲಿ ಹೆಜ್ಜೆ ಮೂಡಿಸಬಲ್ಲವು ಎನಿಸುತ್ತಿದೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ


ಇದನ್ನೂ ಓದಿ: 66ನೇ ಕನ್ನಡ ರಾಜ್ಯೋತ್ಸವ; ಹಿಂದೆಂದೂ ಕಾಣದ ದೆಹಲಿ ದಾಸ್ಯದ ಸುಳಿಯಲ್ಲಿ ಕರ್ನಾಟಕ!

ಇದನ್ನೂ ಓದಿ: ಕನ್ನಡದ ಓದು ಕಟ್ಟಿಕೊಟ್ಟ ವೈವಿಧ್ಯತೆಯ, ಸಹನೆಯ, ಬಹುತ್ವದ ವಿವೇಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...