ಫೆಬ್ರವರಿ 25 ರ ಗುರುವಾರದಂದು ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಯ ಮುಂಬೈ ಮನೆಯ ಬಳಿ ಸ್ಫೋಟಕ ಸಾಮಗ್ರಿಗಳೊಂದಿಗೆ ನಿಲ್ಲಿಸಲಾಗಿದ್ದ ವಾಹನದ ಮಾಲಿಕ ಶವವಾಗಿ ಪತ್ತೆಯಾಗಿದ್ದಾರೆ ಎಂದು ಶುಕ್ರವಾರ ವರದಿಯಾಗಿದೆ. ಕಲ್ವಾ ಕ್ರೀಕ್‌ನಲ್ಲಿ ಅವರ ಶವ ಪತ್ತೆಯಾಗಿದ್ದು, ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಥಾಣೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮುಖೇಶ್ ಅಂಬಾನಿಯ ಮನೆ ಬಳಿ ಪತ್ತೆಯಾಗಿದ್ದ ಜಿಲೆಟಿನ್ ಕಡ್ಡಿಗಳು ತುಂಬಿದ್ದ ಸ್ಕಾರ್ಪಿಯೋ ಕಾರಿನ ಬಗ್ಗೆ ತನಿಖೆ ನಡೆಸಬೇಕೆಂದು ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಒತ್ತಾಯಿಸಿದ್ದರು. ಕಾರಿನ ಮಾಲಿಕನನ್ನು ಹಿರೀನ್ ಮನ್ಸುಖ್ ಎಂದು ಗುರುತಿಸಲಾಗಿದೆ. ಮುಂಬೈ ಪೊಲೀಸರ ಪ್ರಕಾರ ಈ ಕಾರನ್ನು ಮನ್‌ಕುರ್ದ್‌ನಿಂದ ಕಳವು ಮಾಡಿ, ಅಂಬಾನಿಯ ಮನೆಯಾದ ಅಂಟಿಲಿಯಾದಲ್ಲಿ ಉಪೇಕ್ಷಿಸಿ ಹೋಗಲಾಗಿತ್ತು.
ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ರಾಜ್ಯ ವಿಧಾನಸಭೆಯಲ್ಲಿ ಮಾತನಾಡುತ್ತಾ, ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾಯಿಸಬೇಕೆಂದು ಫಡ್ನವೀಸ್ ಒತ್ತಾಯಿಸಿದ್ದರು.
ಇದನ್ನೂ ಓದಿ: ಲಾಕ್‌ಡೌನ್ ಸಮಯದಲ್ಲಿ ಅಂಬಾನಿ 1 ಗಂಟೆಯಲ್ಲಿ ಗಳಿಸಿದ ಆದಾಯವನ್ನು ಸಾಮಾನ್ಯ ವ್ಯಕ್ತಿ ಗಳಿಸಲು ಎಷ್ಟು ವರ್ಷ ಬೇಕು ಗೊತ್ತೇ?
ಕುತೂಹಲಕಾರಿಯೆಂದರೆ, ವಾಹನದ ನೋಂದಣಿ ಸಂಖ್ಯೆ ಅಂಬಾನಿಯ ಭದ್ರತಾ ವ್ಯವಸ್ಥೆಯ ವಾಹನದ ನೋಂದಣಿ ಸಂಖ್ಯೆಗೆ ಹೊಂದಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದರು. ಸ್ಪೋಟಕ ತುಂಬಿದ ವಾಹನ ಪತ್ತೆಯಾದ ನಂತರ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾದ ಅಂಬಾನಿ, ದಕ್ಷಿಣ ಮುಂಬೈನ ಐಷಾರಾಮಿ ಕುಂಬಲ್ಲಾ ಹಿಲ್ ಪ್ರದೇಶದಲ್ಲಿ ಆಂಟಿಲಿಯಾ ಎಂಬ ಐಷಾರಾಮಿ, 27 ಅಂತಸ್ತಿನ, 400,000 ಚದರ ಅಡಿ ವಿಶಾಲವಾದ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ. ಅವರ ಕುಟುಂಬವು 2012 ರಲ್ಲಿ ಈ ಮನೆಗೆ ಸ್ಥಳಾಂತರಗೊಂಡಿತು.
ಚಿಕಾಗೊ ಮೂಲದ ಸಂಸ್ಥೆ ಪರ್ಕಿನ್ಸ್ ಮತ್ತು ವಿಲ್ ವಿನ್ಯಾಸಗೊಳಿಸಿದ ಇದು ಮೂರು ಹೆಲಿಪ್ಯಾಡ್‌ಗಳು, 168 ಕಾರುಗಳ ಗ್ಯಾರೇಜ್, ಬಾಲ್ ರೂಂ, ಒಂಬತ್ತು ಹೈಸ್ಪೀಡ್ ಎಲಿವೇಟರ್‌ಗಳು, 50 ಆಸನಗಳ ಥಿಯೇಟರ್, ಟೆರೇಸ್ ಗಾರ್ಡನ್ಸ್, ಈಜುಕೊಳ, ಸ್ಪಾ, ಹೆಲ್ತ್‌ಸೆಂಟರ್, ದೇವಾಲಯ ಮತ್ತು ಹಿಮ ಕೋಣೆಯನ್ನು ಹೊಂದಿದೆ.
ಇದನ್ನೂ ಓದಿ: ಅಂಬಾನಿ ಮನೆ ಹತ್ತಿರ ಇದ್ದ ವಾಹನದಲ್ಲಿ ಜಿಲೆಟಿನ್ ಸ್ಫೋಟಕ ಪತ್ತೆ: ಮಹಾರಾಷ್ಟ್ರ ಗೃಹ ಸಚಿವರು