ದೆಹಲಿಯಲ್ಲಿ ನಡೆದ ಕೋಮುಗಲಭೆಗೆ ಸಂಬಂಧಿಸಿದಂತೆ ಫೇಸ್‌ಬುಕ್ ಇಂಡಿಯಾಗೆ ದೆಹಲಿ ಶಾಸಕಾಂಗ ಸಮಿತಿ ನೀಡಿದ್ದ ನೋಟೀಸ್ ಅನ್ನು ಪ್ರಶ್ನಿಸಿ ಫೇಸ್‌ಬುಕ್ ಇಂಡಿಯಾದ ಉಪಾಧ್ಯಕ್ಷರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ, ದೆಹಲಿ ಶಾಸಕಾಂಗ ಸಮಿತಿಯು ಬುಧವಾರದ ವಿಚಾರಣಾ ಸಭೆಯನ್ನು ರದ್ದುಗೊಳಿಸಿದೆ.
ಫೇಸ್‌ಬುಕ್ ಇಂಡಿಯಾ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್ ಸಲ್ಲಿಸಿದ್ದ ಅರ್ಜಿಯ ಕುರಿತಂತೆ ಸುಪ್ರೀಂ ಕೋರ್ಟ್, ದೆಹಲಿ ವಿಧಾನಸಭೆಯ ಕಾರ್ಯದರ್ಶಿ, ಕಾನೂನು ಮತ್ತು ನ್ಯಾಯ ಸಚಿವಾಲಯ, ಎಲೆಕ್ಟ್ರಾನಿಕ್ ಮತ್ತು ಐಟಿ ಸಚಿವಾಲಯ ಹಾಗೂ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ನೋಟೀಸ್ ನೀಡಿದೆ.
ದೆಹಲಿ ಶಾಸಕಾಂಗ ಸಮಿತಿಯು ತನ್ನನ್ನು ವಿಚಾರಣೆಗೆ ಕರೆಸಿಕೊಳ್ಳದಂತೆ ಕೋರಿ ಅಜಿತ್ ಮೋಹನ್ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ದೆಹಲಿ ಹಿಂಸಾಚಾರದಲ್ಲಿ ಫೇಸ್‌ಬುಕ್ ಸಹ ಆರೋಪಿ: ಶಾಸಕಾಂಗ ಸಮಿತಿ
ಸುಪ್ರೀಂ, “ಮುಂದಿನ ವಿಚಾರಣೆಯ ದಿನಾಂಕವಾದ ಅಕ್ಟೋಬರ್ 15 ರವರೆಗೆ ಕಾರ್ಯನಿರ್ವಾಹಕರ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಬಾರದು” ಎಂದು ದೆಹಲಿ ಸದನ ಸಮಿತಿಗೆ ಹೇಳಿದೆ. ಇದಕ್ಕೆ ಒಪ್ಪಿದ ಸಮಿತಿ, “ಅವರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ” ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದೆ.
ಸಮಿತಿಯು ತನ್ನ ಮುಂದೆ ಹಾಜರಾಗುವಂತೆ ಎರಡು ಬಾರಿ ನೋಟಿಸ್ ನೀಡಿದ ನಂತರ ಮೋಹನ್ ಸುಪ್ರೀಂ ಕೋರ್ಟ್ ಮೊರೆ ಹೋದರು. ಮೊದಲ ನೋಟಿಸ್ ನಂತರ ಅವರು ಸಮಿತಿಯ ಮುಂದೆ ಹಾಜರಾಗದಿದ್ದಾಗ, ಸಮಿತಿಯ ಅಧ್ಯಕ್ಷರು ಮತ್ತು ಎಎಪಿ ಶಾಸಕರಾದ ರಾಘವ್ ಚಾಡ್ಡ, “ಮತ್ತೆ ಹಾಜರಾಗಲು ಫೇಸ್‌ಬುಕ್‌ನ ಅಧಿಕಾರಿಗಳು ವಿಫಲವಾದರೆ, ಅವರ ಮೇಲೆ ಶಿಸ್ತು ಕ್ರಮಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ” ಎಂದು ಹೇಳಿದ್ದರು.
ಸಮಿತಿಯು ಸೆಪ್ಟೆಂಬರ್ 18 ರಂದು ಎರಡನೇ ನೋಟಿಸ್ ನೀಡಿ ಬುಧವಾರ (ಸೆಪ್ಟೆಂಬರ್ 23) ತನ್ನ ಮುಂದೆ ಹಾಜರಾಗುವಂತೆ ನಿರ್ದೇಶಿಸಿತ್ತು.
ಇದನ್ನೂ ಓದಿ: ದೆಹಲಿ ವಿಧಾನಸಭಾ ಪ್ಯಾನಲ್ ಮುಂದೆ ಹಾಜರಾಗದ ಫೇಸ್‌ಬುಕ್: ಅಂತಿಮ ಎಚ್ಚರಿಕೆ ನೀಡಿದ ಸಮಿತಿ
ಅಜಿತ್ ಮೋಹನ್, ತಮ್ಮ ವಕೀಲರ ಮೂಲಕ, “ಈ ಸಮನ್ಸ್ ನಮ್ಮ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ. ನಾವು ಸಾರ್ವಜನಿಕ ಸೇವಕರಲ್ಲ. ನಮ್ಮದು ಅಮೇರಿಕನ್ ಕಂಪನಿ” ಎಂದು ಕೋರ್ಟ್‌ಗೆ ತಿಳಿಸಿದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಸಮಿತಿಯ ಪರ ವಕೀಲರಾದ ಅಭಿಷೇಕ್ ಮುನು ಸಿಂಘ್ವಿ, “ಸಮಿತಿಯು ಕಂಪನಿಯ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಂಡಿಲ್ಲ. ಸೋಷಿಯಲ್ ಮೀಡಿಯಾದ ದುರುಪಯೋಗವನ್ನು ತಡೆಗಟ್ಟುವ ಮಾರ್ಗಗಳ ಬಗ್ಗೆ ಕಂಪನಿಯಿಂದ ಮಾಹಿತಿ ಪಡೆಯಲು ಸಮನ್ಸ್ ಜಾರಿಗೊಳಿಸಲಾಗಿದೆ. ಫೇಸ್‌ಬುಕ್ ಅನ್ನು ಆರೋಪಿ ಎಂದು ಕರೆದಿಲ್ಲ. ಆದರೆ ದೆಹಲಿ ಗಲಭೆಯ ಸಂದರ್ಭದಲ್ಲಿ ಫೇಸ್‌ಬುಕ್ ಅನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ” ಎಂದು ನ್ಯಾಯಾಲಯಕ್ಕೆ ಹೇಳಿದರು.
ವಾಲ್‌ಸ್ಟ್ರೀಟ್ ಜರ್ನಲ್ ಕಳೆದ ತಿಂಗಳು ಬಿಡುಗಡೆ ಮಾಡಿದ್ದ ವರದಿಯ ಆಧಾರದ ಮೇಲೆ, ದ್ವೇಷ ಭಾಷಣ ನಿಯಂತ್ರಣದಲ್ಲಿ ಪಕ್ಷಪಾತವೆಸಗಿದ ಫೇಸ್‌ಬುಕ್‌ನ ಪಾತ್ರವನ್ನು ಪರಿಶೀಲಿಸಲು ದೆಹಲಿ ವಿಧಾನಸಭೆಯ ವಿಶೇಷ ಸಮಿತಿಯು ಫೇಸ್‌ಬುಕ್‌ಗೆ ನೋಟೀಸ್ ನೀಡಿತ್ತು.
ಇದನ್ನೂ ಓದಿ: ಫೇಸ್‍ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್‌ಗೆ ನಿವೃತ್ತ ಐಎಎಸ್ ಅಧಿಕಾರಿಗಳ ಬಹಿರಂಗ ಪತ್ರ


