“ಮುಸ್ಲಿ ಯುವಕನೋರ್ವ ಹಿಂದೂಗಳ ವಿವಾಹ ಸಮಾರಂಭದಲ್ಲಿ ಸಿಹಿ ತಿಂಡಿಯ ಪಾತ್ರೆಗೆ ಮೂತ್ರ ವಿಸರ್ಜನೆ ಮಾಡಿದ್ದಾನೆ” ಎಂದು ಆರೋಪಿಸಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ.

ಅನೇಕ ಎಕ್ಸ್ ಬಳಕೆದಾರರು ಈ ವಿಡಿಯೋ ಪೋಸ್ಟ್ ಮಾಡಿ ‘ಫುಡ್ ಜಿಹಾದ್’ ಎಂದೆಲ್ಲ ಬರೆದುಕೊಂಡಿದ್ದಾರೆ.

ಸದಾ ಕೋಮುದ್ವೇಷದ ಸುಳ್ಳು ಸುದ್ದಿಗಳನ್ನು ಹರಡುವ ‘ಮಿಸ್ಟರ್ ಸಿನ್ಹಾ’ ಎಂಬ ಎಕ್ಸ್ ಬಳಕೆದಾರ ವಿಡಿಯೋ ಪೋಸ್ಟ್ ಮಾಡಿ ಅದನ್ನು ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಅವರಿಗೆ ಟ್ಯಾಗ್ ಮಾಡಿದ್ದು, “ನೀವಿದನ್ನು ತಿನ್ನುವಿರೇ? ಮೊದಲು ನೀವು ತಿಂದು ಬಳಿಕ ನಮಗೆ ತಿನ್ನಲು ಒತ್ತಾಯಿಸಿ ಎಂದು ಬರೆದುಕೊಂಡಿದ್ದಾರೆ. ವಿನೋದ್ ಎಂಬಾತ ‘ಸ್ಟ್ರಿಂಗ್’ ಎಂಬ ಎಕ್ಸ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿ, “ತೆಲಂಗಾಣದ ವಾರಂಗಲ್ ನಲ್ಲಿ ಮುಸ್ಲಿಮರು ನಡೆಸುತ್ತಿರುವ ಹೊಟೇಲ್‌ನಲ್ಲಿ ಆಹಾರದ ಮೇಲೆ ಮೂತ್ರ ವಿಸರ್ಜನೆ ಮಾಡಲಾಗಿದೆ” ಎಂದು ಬರೆದುಕೊಂಡಿದ್ದಾರೆ.


ಹಾಗಾದರೆ, ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿದಂತೆ ಮುಸ್ಲಿಂ ಯುವಕ ಹಿಂದೂಗಳ ಮದುವೆ ಸಮಾರಂಭದಲ್ಲಿ ಸಿಹಿ ತಿಂಡಿಯ ಪಾತ್ರೆಗೆ ಮೂತ್ರ ವಿಸರ್ಜನೆ ಮಾಡಿರುವುದು ನಿಜಾನಾ? ಎಂದು ನೋಡೋಣ.
ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆ ತಿಳಿಯಲು ನಾವು ವಿಡಿಯೋವನ್ನು ಮೊದಲು ಸೂಕ್ಷ್ಮವಾಗಿ ಗಮನಿಸಿದ್ದೇವೆ. ವಿಡಿಯೋದಲ್ಲಿ ಮೊದಲು ಯುವಕ ಪಾತ್ರೆಗೆ ಮೂತ್ರ ಮಾಡಿದಂತೆ ಕಂಡರೂ, ಬಳಿಕ ಆತ ಬಾಟಲಿಯೊಂದರಿಂದ ಪಾತ್ರೆಗೆ ಏನೋ ಸುರಿಯುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಹಾಗಾಗಿ, ಯುವಕ ಪಾತ್ರೆಗೆ ಮೂತ್ರ ಮಾಡಿದ್ದಾನೆ ಎಂಬ ಆರೋಪ ಸುಳ್ಳು ಎಂಬುವುದು ನಮಗೆ ಗೊತ್ತಾಗಿದೆ.

ಈ ಬಗ್ಗೆ ಇನ್ನಷ್ಟು ಖಚಿತಪಡಿಸಿಕೊಳ್ಳಲು ನಾವು ಮಾಹಿತಿ ಹುಡುಕಿದ್ದೇವೆ. ಈ ವೇಳೆ ಈ ವಿಡಿಯೋ 2022ರಲ್ಲೂ ಸುಳ್ಳು ಸಂದೇಶದೊಂದಿಗೆ ವೈರಲ್ ಆಗಿತ್ತು ಎಂದು ತಿಳಿದು ಬಂದಿದೆ.
ಡಿಸೆಂಬರ್ 2022ರಲ್ಲಿ ಝೀ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸುದ್ದಿ ವೆಬ್‌ಸೈಟ್ “बंदे ने शादी के लिए बन रहे खाने में किया कुछ ऐसा, देखकर आएगी घिन” (ಯುವಕ ಗುಲಾಬ್ ಜಾಮೂನ್ ಪಾತ್ರೆಗೆ ಮೂತ್ರ ಮಾಡಿದ್ದಾನೆ) ಎಂಬ ಶೀರ್ಷಿಕೆಯಲ್ಲಿ ವಿಡಿಯೋ ಕುರಿತು ಸುದ್ದಿ ಪ್ರಕಟಿಸಿತ್ತು. ಪ್ರಸ್ತುತ ಆ ಸುದ್ದಿಯನ್ನು ಡಿಲಿಟ್ ಮಾಡಲಾಗಿದೆ.

ಅಸಲಿಗೆ @ashiq.billota ಎಂಬ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ತಮಾಷೆಗಾಗಿ ಈ ವಿಡಿಯೋ ಪೋಸ್ಟ್ ಮಾಡಲಾಗಿತ್ತು. ಅದು ಬಳಿಕ ಎಲ್ಲೆಡೆ ವೈರಲ್ ಆಗಿದೆ. ಆದರೆ, ಈಗ ಆ ಇನ್‌ಸ್ಟಾಗ್ರಾಂ ಪೇಜ್‌ನಲ್ಲೂ ವಿಡಿಯೋ ಇಲ್ಲ, ಡಿಲಿಟ್ ಮಾಡಲಾಗಿದೆ.

ಒಟ್ಟಿನಲ್ಲಿ, ಮುಸ್ಲಿಂ ಯುವಕ ಹಿಂದೂಗಳ ಮದುವೆ ಸಮಾರಂಭದ ಸಿಹಿ ತಿಂಡಿಯ ಪಾತ್ರೆಗೆ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂಬ ಆರೋಪಕ್ಕೆ ಯಾವುದೇ ಪುರಾವೆಗಳು ನಮಗೆ ಲಭ್ಯವಾಗಿಲ್ಲ. ವೈರಲ್ ವಿಡಿಯೋವನ್ನು ಮೊದಲು ಪೋಸ್ಟ್ ಮಾಡಿದ್ದ ಇನ್‌ಸ್ಟಾಗ್ರಾಂ ಪೇಜ್ ಮತ್ತು ಅದನ್ನು ಆಧಾರವಾಗಿಟ್ಟುಕೊಂಡು ಸುದ್ದಿ ಪ್ರಕಟಿಸಿದ್ದ ಝೀ ನ್ಯೂಸ್‌ನಲ್ಲೂ ಈಗ ವಿಡಿಯೋ ಇಲ್ಲ.
ಎಲ್ಲಾ ವಿಷಯಗಳಿಗೂ ಕೋಮು ಬಣ್ಣ ಬಳಿಯುವ ಕೆಲವೊಂದಿಷ್ಟು ಸಾಮಾಜಿಕ ಜಾಲತಾಣ ಬಳಕೆದಾರರು ನಮ್ಮಡೆಯಲ್ಲಿದ್ದಾರೆ. ಮುಖ್ಯವಾಗಿ ವಿಡಿಯೋಗಳನ್ನು ತಿರುಚಿ ಸುಳ್ಳು ಮಾಹಿತಿಯೊಂದಿಗೆ ಮುಸ್ಲಿಮರ ತಲೆಗೆ ಕಟ್ಟುವುದು ಕೆಲವರ ವಾಡಿಕೆಯಾಗಿದೆ. ಅಂಥವುಗಳಲ್ಲಿ ಈ ವಿಡಿಯೋ ಕೂಡ ಒಂದು.
ವೈರಲ್ ವಿಡಿಯೋ ಎಲ್ಲಿಯದ್ದು ಮತ್ತು ಮೂತ್ರ ಮಾಡಿದ್ದಾನೆ ಎಂದು ಆರೋಪಿಸಲಾದ ಯುವಕ ಮುಸ್ಲಿಂ ಎಂಬುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ, ಎಕ್ಸ್ ಬಳಕೆದಾರರು ಕೋಮುದ್ವೇಷ ಹರಡುವ ಸಲುವಾಗಿ ಸುಳ್ಳು ಸಂದೇಶದೊಂದಿಗೆ ವಿಡಿಯೋ ಹಂಚಿಕೊಂಡಿದ್ದಾರೆ.
ಇಬ್ಬರ ವಿರುದ್ದ ಪ್ರಕರಣ ದಾಖಲು
ತಮಾಷೆಯ ವಿಡಿಯೋವನ್ನು ಬಳಸಿಕೊಂಡು ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ ಮಿಸ್ಟರ್ ಸಿನ್ಹಾ ಮತ್ತು ವಿನೋದ್ ಎಂಬ ಎಕ್ಸ್ ಬಳಕೆದಾರರ ವಿರುದ್ದ ಹೈದರಾಬಾದ್‌ನಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ. ಬಲ ಪಂಥೀಯ ಸಾಮಾಜಿಕ ಜಾಲತಾಣದ ಪ್ರಭಾವಿ ಮಿಸ್ಟರ್ ಸಿನ್ಹಾ ಸದಾ ಸುಳ್ಳು, ಕೋಮುದ್ವೇಷಪೂರಿತ ಸುದ್ದಿಗಳನ್ನು ಹರಡುವುದರಲ್ಲಿ ಕುಖ್ಯಾತಿಯನ್ನು ಪಡೆದಿದ್ದಾನೆ.

ಇದನ್ನೂ ಓದಿ : FACT CHECK : 1951ರಲ್ಲಿ ಅಸ್ಸಾಂನಲ್ಲಿ ಶೇ.14ರಷ್ಟು ಮಾತ್ರ ಮುಸ್ಲಿಮರಿದ್ದರು ಎಂಬ ಸಿಎಂ ಶರ್ಮಾ ಹೇಳಿಕೆ ಸುಳ್ಳು


