ಮುಂಬೈನಲ್ಲಿ ಬಾರ್ಬರ್ (ಕ್ಷೌರಿಕ) ಜಿಹಾದ್ ಎಂದು ಬರೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿರುವ ಫೋಟೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ನಿಲುಮೆ ಎಂಬ ಫೇಸ್‌ಬುಕ್ ಗ್ರೂಪ್ ಒಂದರಲ್ಲಿ ಉಮಾ ಶಂಕರ್ ಎಂಬಾತ ಫೋಟೋ ಹಂಚಿಕೊಂಡು ಹೀಗೆ ಬರೆದಿದ್ದಾರೆ..”ಮುಂಬೈನಲ್ಲಿ ಬಾರ್ಬರ್ ಜಿಹಾದ್… ಮಸೀದಿಗಳಲ್ಲಿ ಹಿಂದೂಗಳ ಗಡ್ಡ/ಕೂದಲು ಕತ್ತರಿಸುವಾಗ ಏಡ್ಸ್ ಬ್ಲೇಡ್‌ಗಳಿಂದ ಲಘುವಾಗಿ ಕತ್ತರಿಸುವ ಕೌಶಲ್ಯವನ್ನು ಕಲಿಸಲಾಗುತ್ತದೆ ಮತ್ತು ಈ ಕೆಲಸಕ್ಕೆ ಅವರು ಅಲ್ಲಿಂದ ಹಣವನ್ನು ಪಡೆಯುತ್ತಾರೆ ಎಂದು ಈ ಹುಡುಗರು ಪೊಲೀಸರಿಗೆ ತಿಳಿಸಿದರು.”
“ಇದು ಹೊಸಾ ಜಿಹಾದ್, ಈ ಮೂಲಕ ಹಿಂದೂಗಳನ್ನು ಏಡ್ಸ್ ರೋಗಿಗಳನ್ನಾಗಿ ಮಾಡಿ ಕೊಲ್ಲಲಾಗುತ್ತಿದೆ.
ಶಸ್ತ್ರಾಸ್ತ್ರಗಳಿಲ್ಲದ ಹೋರಾಟಗಾರರನ್ನು ಈ ಆಂತರಿಕ ಯುದ್ಧಕ್ಕೆ ಸಿದ್ಧಪಡಿಸಲಾಗುತ್ತಿದೆ. ಆದ್ದರಿಂದ ಎಲ್ಲಾ ಹಿಂದೂಜರು ಶೇವಿಂಗ್ ಮತ್ತು ಕಟಿಂಗ್ ಅನ್ನು ಹಿಂದೂ ಕ್ಷೌರಿಕರಿಂದ ಮಾತ್ರ ಮಾಡಿಸಿಕೊಳ್ಳಿ, ಮಹಿಳೆಯರು ಕೂಡ ಹಿಂದೂಜರಿರುವ ಪಾರ್ಲರ್ಗೆ ಹೋಗಿ(.ನಾಗರಾಜ್ ಖೋಡೆ ನವರ ಪೇಜ್ ಇಂದ )”

ಇದೇ ರೀತಿಯ ಪೋಸ್ಟ್‌ಗಳನ್ನು ಅನೇಕ ಫೇಸ್‌ಬುಕ್ ಬಳಕೆದಾರರು ತಮ್ಮ ಖಾತೆಗಳಲ್ಲಿ ಹಾಕಿದ್ದಾರೆ.
ಫ್ಯಾಕ್ಟ್‌ಚೆಕ್ : ಫೇಸ್‌ಬುಕ್ ಖಾತೆಗಳಲ್ಲಿ ಹಂಚಿಕೊಂಡಿರುವ ವೈರಲ್ ಫೋಟೋದ ಕುರಿತು ನಾವು ಸತ್ಯಾಸತ್ಯತೆ ಪರಿಶೀಲಿಸಿದ್ದೇವೆ. ಈ ವೇಳೆ ಜುಲೈ 18,2013 ರಂದು ‘ಇಂಡಿಯಾ ಟಿವಿ‘ ಸುದ್ದಿ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯೊಂದರಲ್ಲಿ ಇದೇ ವೈರಲ್ ಫೋಟೋ ಕಂಡು ಬಂದಿದೆ.

ವರದಿಯಲ್ಲಿ ಕ್ರೆಡಿಟ್ ಕಾರ್ಡ್ ಕಳ್ಳತನ ಮತ್ತು ವಂಚನೆ ಆರೋಪದ ಮೇಲೆ ಮುಂಬೈ ಪೋಲೀಸರು ಭೋಜ್ಪುರಿ ನಟ ಇರ್ಫಾನ್ ಖಾನ್ ಮತ್ತು ಆತನ ಸ್ನೇಹಿತ ಸಂಜಯ್ ಯಾದವ್ ಅವರನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ. “ಕ್ರೆಡಿಟ್ ಕಾರ್ಡ್‌ಗಳು, ಚೆಕ್ ಪುಸ್ತಕಗಳು ಮತ್ತು ಬಿಲ್ ಪುಸ್ತಕಗಳನ್ನು ಕದ್ದು, ನಂತರ ಬೆಲೆ ಬಾಳುವ ವಸ್ತುಗಳನ್ನು ಖರೀದಿಸಿದ ಆರೋಪದ ಮೇಲೆ ಇರ್ಫಾನ್ ಖಾನ್ ಮತ್ತು ಸಂಜಯ್ ಯಾದವ್ ಅವರನ್ನು ಮುಂಬೈ ಪೊಲೀಸರು ಬಿಹಾರದ ಛಾಪ್ರಾ ಜಿಲ್ಲೆಯಿಂದ ಬಂಧಿಸಿದ್ದಾರೆ” ಎಂದು ವರದಿ ವಿವರಿಸಿದೆ.
ಜುಲೈ 18, 2013ರಂದು ಎಬಿಪಿ ನ್ಯೂಸ್ ಮತ್ತು ಟಿವಿ9 ಗುಜರಾತ್ ಕೂಡ ಇದೇ ಪ್ರಕರಣದ ಕುರಿತು ವರದಿ ಮಾಡಿತ್ತು. ಎರಡೂ ವರದಿಗಳಲ್ಲೂ ಕಳ್ಳತನ ಮತ್ತು ವಂಚನೆ ಆರೋಪದ ಮೇಲೆ ಇರ್ಫಾನ್ ಖಾನ್ ಮತ್ತು ಸಂಜಯ್ ಯಾದವ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಹೇಳಲಾಗಿತ್ತು.
ಮಾಧ್ಯಮ ವರದಿಗಳ ಪ್ರಕಾರ, ವೈರಲ್ ಫೋಟೋ 2013ರಲ್ಲಿ ನಡೆದ ಕಳ್ಳತನ ಪ್ರಕರಣವೊಂದರಲ್ಲಿ ಆರೋಪಿಗಳನ್ನು ಬಂಧಿಸಿದ್ದಾಗಿದೆ. ಅಲ್ಲದೆ, ಬಾರ್ಬರ್ ಜಿಹಾದ್, ಹಿಂದೂಗಳಿಗೆ ಏಡ್ಸ್ ಹರಡುವುದಕ್ಕೆ ಸಂಬಂಧಿಸಿದಲ್ಲ. ಸಾಮಾಜಿಕ ಜಾಲತಾಣದ ಸುಳ್ಳು ಪೋಸ್ಟ್‌ಗಳು ಮುಸ್ಲಿಮರ ವಿರುದ್ದ ಕೋಮು ವೈಷಮ್ಯ ಹರಡುವ ಉದ್ದೇಶಕ್ಕೆ ಹಂಚಿಕೊಂಡಿರುವುದು ಸ್ಪಷ್ಟವಾಗಿದೆ.
ಇದನ್ನೂ ಓದಿ : FACT CHECK : ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ತರಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಟಿವಿ ವಿಕ್ರಮ


