ಬಾಂಗ್ಲಾದೇಶದ ಪ್ರಧಾನಿಯಾಗಿದ್ದ ಶೇಖ್ ಹಸೀನಾ ನೇತೃತ್ವದ ಸರ್ಕಾರದ ವಿರುದ್ದ ಜನರು ದಂಗೆಯೆದ್ದ ಕಾರಣ, ಶೇಖ್ ಹಸೀನಾ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. ಪ್ರಸ್ತುತ ಅಲ್ಲಿ ನೋಬೆಲ್ ಪುರಸ್ಕತ ಮೊಹಮ್ಮದ್ ಯೂನುಸ್ ಅವರ ನೇತೃತ್ವದ ಮಧ್ಯಂತರ ಸರ್ಕಾರ ದೇಶವನ್ನು ಮುನ್ನಡೆಸುತ್ತಿದೆ.
ಈ ನಡುವೆ ಬಾಂಗ್ಲಾದಲ್ಲಿ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳನ್ನು ಗುರಿಯಾಗಿಸಿ ಬಹುಸಂಖ್ಯಾತ ಮುಸ್ಲಿಮರು ದಾಳಿ ನಡೆಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಸಂಬಂಧ ಅನೇಕ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅವುಗಳಲ್ಲಿ ಬಹುತೇಕ ಫೋಟೋ, ವಿಡಿಯೋಗಳ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದು, ಜನರಿಗೆ ನಿಜಾಂಶ ಏನು ಎಂಬುವುದನ್ನು ತಿಳಿಸುವ ಪ್ರಯತ್ನ ಮಾಡಿದ್ದೇವೆ.
ಇದೀಗ ಹೊಸದಾಗಿ ಕಳೆದ ಎರಡು ದಿನಗಳಿಂದ “ಬಾಂಗ್ಲಾದೇಶದಲ್ಲಿ ಹಿಂದೂ ದೇವಸ್ಥಾನಕ್ಕೆ ಬೆಂಕಿ ಹಚ್ಚಲಾಗಿದೆ” ಎಂದು ಪ್ರತಿಪಾದಿಸಿ ವಿಡಿಯೋವೊಂದು ಎಲ್ಲೆಡೆ ಹರಿದಾಡುತ್ತಿದೆ.
BREAKING:
The ethnic violence continues in Bangladesh.
Islamist have set a Hindu business on fire pic.twitter.com/RsJXRET74s
— Visegrád 24 (@visegrad24) August 6, 2024
‘ಝೀ ನ್ಯೂಸ್ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ, ನ್ಯೂಸ್ 24 ಹಿಂದಿ‘ ಸೇರಿದಂತೆ ಕೆಲ ಮಾಧ್ಯಮಗಳು ತಮ್ಮ ವರದಿಗಳಲ್ಲಿ ವಿಡಿಯೋ, ಫೋಟೋ ಹಂಚಿಕೊಂಡಿವೆ. ಸಾಮಾಜಿಕ ಜಾಲತಾಣ ಬಳಕೆದಾರರು ವಿಡಿಯೋ ಹಂಚಿಕೊಂಡು “ಹಿಂದೂ ದೇವಸ್ಥಾನಕ್ಕೆ ಬೆಂಕಿ ಹಚ್ಚಲಾಗಿದೆ” ಎಂದಿದ್ದಾರೆ.


ಫ್ಯಾಕ್ಟ್‌ಚೆಕ್ : ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ಹಂಚಿಕೊಂಡಿರುವ ವಿಡಿಯೋದ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ಈ ವೇಳೆ “ವೈರಲ್ ವಿಡಿಯೋದಲ್ಲಿರುವುದು ಹಿಂದೂ ದೇವಸ್ಥಾನವಲ್ಲ, ಅದು ಬಾಂಗ್ಲಾದೇಶದ ಸತಿಖ್ರಾ ಎಂಬ ಪ್ರದೇಶದ ಒಂದು ರೆಸ್ಟೋರೆಂಟ್” ಎಂದು ಗೊತ್ತಾಗಿದೆ.
ಬಾಂಗ್ಲಾದೇಶದ ಫ್ಯಾಕ್ಟ್‌ಚೆಕ್ಕರ್ ಸೊಹಾನುರ್ ರಹಮಾನ್ ಆಗಸ್ಟ್ 6,2024ರಂದು ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದಾರೆ. ಆ ಪೋಸ್ಟ್‌ನಲ್ಲಿ ವೈರಲ್ ವಿಡಿಯೋದಲ್ಲಿರುವ ಕಟ್ಟಡ ಸಂಬಂಧಿತ ಎರಡು ಸ್ಕ್ರೀನ್ ಶಾಟ್‌ಗಳಿವೆ. ಸ್ಕ್ರೀನ್ ಶಾಟ್‌ನಲ್ಲಿ ‘রাজ প্রাসাদ কফি শপ এন্ড রেস্টুরেন্ট কলারোয়া সাতক্ষীরা’(ರಾಜ್ ಪ್ರಸಾದ್ ಕಾಫಿ ಶಾಪ್ & ರೆಸ್ಟೋರೆಂಟ್ ಕಲೋರ ಸತಿಖ್ರಾ) ಎಂದು ಬರೆಯಲಾಗಿದೆ. ಇದು ದೇವಸ್ಥಾನವಲ್ಲ, ಸತಿಖ್ರಾದ ರೆಸ್ಟೋರೆಂಟ್ ಎಂದು ಸೊಹಾನುರ್ ರಹಮಾನ್ ಕೂಡ ಬರೆದುಕೊಂಡಿದ್ದಾರೆ.

ಕಲೋರಾ ಸ್ಪೀಚ್ ಎಂಬ ಫೇಸ್‌ಬುಕ್ ಪೇಜೊಂದರಲ್ಲಿ ಆಗಸ್ಟ್ 6, 2024ರಂದು ಹಾಕಿರುವ ಪೋಸ್ಟ್‌ನಲ್ಲೂ ವೈರಲ್ ವಿಡಿಯೋದ ಸ್ಕ್ರೀನ್‌ಶಾಟ್ ಮತ್ತು ಮೇಲೆ ನಾವು ಹೆಸರಿಸಿದ ರೆಸ್ಟೋರೆಂಟ್‌ನ ಫೋಟೋ ಹಂಚಿಕೊಳ್ಳಲಾಗಿದ್ದು, “ವೈರಲ್ ವಿಡಿಯೋದಲ್ಲಿ ಹೊತ್ತಿ ಉರಿಯುತ್ತಿರುವ ಕಟ್ಟಡ ದೇವಸ್ಥಾನವಲ್ಲ” ಎಂದು ಖಚಿತಪಡಿಸಲಾಗಿದೆ.

ವಿಡಿಯೋದಲ್ಲಿ ಹೊತ್ತಿ ಉರಿಯುತ್ತಿರುವುದು ರೆಸ್ಟೋರೆಂಟ್ ಎಂದು ಹೇಳಿರುವುದರಿಂದ, ಆ ರೆಸ್ಟೋರೆಂಟ್ ಕುರಿತು ನಾವು ಗೂಗಲ್ ಮ್ಯಾಪ್‌ನಲ್ಲಿ ಹುಡುಕಿದ್ದೇವೆ. ಈ ವೇಳೆ ಮ್ಯಾಪ್‌ನಲ್ಲಿ ರೆಸ್ಟೋರೆಂಟ್ ಫೋಟೋ ಕಂಡು ಬಂದಿದೆ.

ಬಳಿಕ ನಾವು ಯೂಟ್ಯೂಬ್‌ನಲ್ಲೂ ರೆಸ್ಟೋರೆಂಟ್ ಕುರಿತು ಮಾಹಿತಿ ಹುಡುಕಿದ್ದು, ಈ ವೇಳೆ ರೆಸ್ಟೋರೆಂಟ್ ಕುರಿತು ಹಲವು ಹಲವು ವಿಡಿಯೋಗಳು ಲಭ್ಯವಾಗಿದೆ. ಅವುಗಳಲ್ಲಿ ಒಂದು ಕೆಳಗಿದೆ.

ಇನ್ನು, ಆ ರೆಸ್ಟೋರೆಂಟ್ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್‌ನ ಯುವ ವಿಭಾಗವಾದ ಜೂಬೋ ಲೀಗ್‌ನ ನಾಯಕ ಕಾಝಿ ಅಸಾದುಜ್ಜಮಾನ್ ಶಹಜಾದಾ ಅವರ ಒಡೆತನದಲ್ಲಿದೆ ಎಂದು ತಿಳಿದು ಬಂದಿದೆ.
ರೆಸ್ಟೋರೆಂಟ್ ಹೊತ್ತಿ ಉರಿದಿದ್ದು ಹೇಗೆ?
ಆಗಸ್ಟ್ 5, 2024ರಂದು ಕಲ್ಬೇಲ ಎಂಬ ಬಾಂಗ್ಲಾದೇಶದ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ವರದಿಯ ಪ್ರಕಾರ, ಶೇಕ್ ಹಸೀನಾ ಅವರು ಬಾಂಗ್ಲಾದೇಶದಿಂದ ನಿರ್ಗಮಿಸಿದ ನಂತರ ಹಲವಾರು ಸ್ಥಳಗಳಲ್ಲಿ ಜನರು ಬೆಂಕಿ ಹಚ್ಚುವುದು, ಸಾರ್ವಜನಿಕ ಆಸ್ತಿಗಳನ್ನು ಧ್ವಂಸಗೊಳಿಸುವುದರಲ್ಲಿ ತೊಡಗಿಕೊಂಡಿದ್ದಾರೆ. ಇದೇ ವೇಳೆ ಈ ರೆಸ್ಟೋರೆಂಟ್‌ಗೂ ಬೆಂಕಿ ಹಚ್ಚಿದ್ದಾರೆ.

ರೆಸ್ಟೋರೆಂಟ್ ಮಾಲೀಕ ಶೇಖ್ ಹಸೀನಾ ಪಕ್ಷದವರಾಗಿರುವುದರಿಂದ ರಾಜಕೀಯ ದ್ವೇಷಕ್ಕೆ ಬೆಂಕಿ ಹಚ್ಚಿರಬಹುದು ಎಂದು ನಾವು ಊಹಿಸಿದ್ದೇವೆ. ಏಕೆಂದರೆ, ಹಸೀನಾ ಅವರ ಪಕ್ಷದ ನಾಯಕರ ಆಸ್ತಿಗಳ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.
ಇದನ್ನೂ ಓದಿ : FACT CHECK : ಬಾಂಗ್ಲಾದೇಶದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ರವೀಂದ್ರನಾಥ ಟ್ಯಾಗೋರ್ ಪ್ರತಿಮೆ ಧ್ವಂಸಗೊಳಿಸಲಾಗಿದೆ ಎಂಬುವುದು ಸುಳ್ಳು


