ಬಾಂಗ್ಲಾದೇಶದಲ್ಲಿ ರಾಜಕೀಯ ಅರಾಜಕತೆಯ ನಡುವೆ, ರವೀಂದ್ರನಾಥ ಟ್ಯಾಗೋರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ ಎಂದು ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ನರೇಶ್ ಪಾಂಡೆ (@ITechVision360)ಎಂಬ ಎಕ್ಸ್ ಬಳಕೆದಾರ ರವೀಂದ್ರನಾಥ ಟ್ಯಾಗೋರ್ ಅವರ ಭಗ್ನಗೊಂಡ ಪ್ರತಿಮೆಯ ತಲೆಯ ಭಾಗದ ಫೋಟೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು ” ಬಾಂಗ್ಲಾದೇಶದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಕಿರುಕುಳ ನೀಡಲಾಗುತ್ತಿದೆ. ಅವರ ದೇವಸ್ಥಾನ ಮತ್ತು ಮನೆಗಳನ್ನು ಧ್ವಂಸಗೊಳಿಸಲಾಗಿದೆ. ಬೆಂಕಿ ಹಚ್ಚಿ ಸುಡಲಾಗುತ್ತಿದೆ. ಹಿಂದೂಗಳ ಮನೆಗಳನ್ನು ದೋಚಲಾಗಿದೆ” ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಪ್ರತಿಪಾದನೆಯೊಂದಿಗೆ ಇನ್ನೂ ಕೆಲವರು ಎಕ್ಸ್‌ನಲ್ಲಿ ಪೋಸ್ಟ್‌ಗಳನ್ನು ಹಾಕಿದ್ದಾರೆ. ಹಾಗಾದರೆ, ಈ ವಿಚಾರ ನಿಜಾನಾ? ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ : ರವೀಂದ್ರನಾಥ ಟ್ಯಾಗೋರ್ ಅವರ ಪ್ರತಿಮೆಯ ತಲೆಯನ್ನು ಕಸದ ರಾಶಿಯಲ್ಲಿ ಎಸೆಯಲಾಗಿದೆ. ಇದು ಪ್ರಸ್ತುತ ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಯ ಭಾಗವಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, ಈ ಫೋಟೋ 2023ರಲ್ಲಿ ಢಾಕಾ ವಿಶ್ವವಿದ್ಯಾಲಯದಲ್ಲಿ ನಡೆದ ಘಟನೆಗೆ ಸಂಬಂಧಿಸಿದ್ದು ಎಂದು ತಿಳಿದು ಬಂದಿದೆ,
ಢಾಕಾ ಮೂಲದ ಬಂಗಾಳಿ ಸುದ್ದಿ ಸಂಸ್ಥೆ ಪ್ರೋಥೋಮ್ ಅಲೋ ಫೆಬ್ರವರಿ 17, 2023ರಂದು ಪ್ರಕಟಿಸಿದ ವರದಿಯ ಪ್ರಕಾರ, “ಢಾಕಾ ವಿಶ್ವವಿದ್ಯಾನಿಲಯದ ಫೈನ್ ಆರ್ಟ್ಸ್ ವಿಭಾಗದ ವಿದ್ಯಾರ್ಥಿಗಳು ಶಿಲ್ಪ ಕಲಾ ಪ್ರದರ್ಶನದ ಅಂಗವಾಗಿ 19 ಅಡಿ ಎತ್ತರದ ರವೀಂದ್ರನಾಥ ಟ್ಯಾಗೋರ್ ಅವರ ಪ್ರತಿಮೆಯನ್ನು ಸ್ಥಾಪಿಸಿದ್ದರು. ಎರಡು ದಿನಗಳ ನಂತರ, ಪ್ರತಿಮೆಯು ಕಾಣೆಯಾಗಿತ್ತು. ಬಳಿಕ ಅದರ ಮುರಿದ ತಲೆ ಮತ್ತು ಇತರ ಭಾಗಗಳು ಢಾಕಾದ ಸುಹ್ರವರ್ದಿ ಗಾರ್ಡನ್ಸ್‌ನಲ್ಲಿ ಕಂಡು ಬಂದಿತ್ತು”.
‘ಹಿಂದೂಸ್ತಾನ್ ಟೈಮ್ಸ್’ ವರದಿಯ ಪ್ರಕಾರ, ಟ್ಯಾಗೋರ್ ಅವರ ಪ್ರತಿಮೆ ಧ್ವಂಸಗೊಂಡ ರೀತಿಯಲ್ಲಿ ಪತ್ತೆಯಾದ ನಂತರ, ಅದನ್ನು ಸ್ಥಾಪಿಸಿದ್ದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಢಾಕಾ ವಿಶ್ವವಿದ್ಯಾನಿಲಯದ ಅಧಿಕಾರಿಗಳು ತಮಗೆ ತಿಳಿಸದೆ ಪ್ರತಿಮೆ ತೆರವುಗೊಳಿಸಿದ್ದಾರೆ ಎಂದು ಆರೋಪಿಸಿದ್ದರು. ಆರಂಭದಲ್ಲಿ, ವಿವಿ ಆರೋಪವನ್ನು ನಿರಾಕರಿಸಿತ್ತು. ನಂತರ ಪ್ರತಿಮೆ ತೆರವುಗೊಳಿಸಿರುವುದನ್ನು ಒಪ್ಪಿಕೊಂಡಿತ್ತು. ಅನುಮತಿಯಿಲ್ಲದೆ ಸ್ಥಾಪಿಸಿದ್ದ ಕಾರಣ ಪ್ರತಿಮೆ ತೆರವುಗೊಳಿಸಲಾಗಿದೆ” ಎಂದು ಹೇಳಿತ್ತು.
ನಾವು ಮೇಲೆ ಉಲ್ಲೇಖಿಸಿದ ವರದಿಗಳ ಪ್ರಕಾರ, ರವೀಂದ್ರನಾಥ ಟ್ಯಾಗೋರ್ ಅವರ ಪ್ರತಿಮೆ ಧ್ವಂಸಗೊಳಿಸಿರುವುದಕ್ಕೂ ಪ್ರಸ್ತುತ ನಡೆಯುತ್ತಿರುವ ಪ್ರತಿಭಟನೆಗೂ ಯಾವುದೇ ಸಂಬಂಧವಿಲ್ಲ. ಅದು ಢಾಕಾ ವಿವಿಯಲ್ಲಿ ಈ ಹಿಂದೆ ನಡೆದ ಘಟನೆಗೆ ಸಂಬಂಧಿಸಿದ್ದಾಗಿದೆ. ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಪ್ರತಿಪಾದನೆ ತಪ್ಪಾಗಿದೆ.
ಇದನ್ನೂ ಓದಿ : FACT CHECK : ಬಾಂಗ್ಲಾದಲ್ಲಿ ಹಿಂದೂ ಮಹಿಳೆಯರ ಮೇಲೆ ದಾಳಿ ಎಂದು ವಿದ್ಯಾರ್ಥಿ ಪ್ರತಿಭಟನೆಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ