“ಭಾರತ ಬೆಂಗಳೂರು ನಗರದಲ್ಲಿ ಬಸ್ ಅನ್ನು ಗುರಿಯಾಗಿಸಿಕೊಂಡು ಮ್ಯಾಗ್ನೆಟಿಕ್ ಬಾಂಬ್ ದಾಳಿ ನಡೆಸಲಾಗಿದ್ದು, ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್ (ಡಿಆರ್‌ಡಿಒ)ನ ಮೂವರು ಇಂಜಿನಿಯರ್‌ಗಳು ಸಾವನಪ್ಪಿರುವ ಸಾಧ್ಯತೆಯಿದೆ. ಘಟನೆಯು ಡಿಆರ್‌ಡಿಒ ಹೆಚ್‌ಎಎಲ್ ತೇಜಸ್ ವಿಮಾನ ಪರೀಕ್ಷಾ ಕೇಂದ್ರದಿಂದ ಪಶ್ಚಿಮಕ್ಕೆ 4 ಕಿಮೀ ದೂರದಲ್ಲಿ ನಡೆದಿದೆ” ಎಂದು ಪಾಕಿಸ್ತಾನ್ ಫಸ್ಟ್ (@Pak1stTeam) ಹೆಸರಿನ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಹಾಕಲಾಗಿದೆ. ಜೊತೆಗೆ ಬಿಎಂಟಿಸಿ ಬಸ್ಸೊಂದು ಹೊತ್ತಿ ಉರಿಯುತ್ತಿರುವ ವಿಡಿಯೋ ಹಂಚಿಕೊಳ್ಳಲಾಗಿದೆ.
ಫ್ಯಾಕ್ಟ್‌ಚೆಕ್ : ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿರುವುದು ಸಂಪೂರ್ಣ ಸುಳ್ಳು ಮಾಹಿತಿಯಾಗಿದೆ. ಪೋಸ್ಟ್‌ನಲ್ಲಿರುವ ವಿಡಿಯೋ ಇತ್ತೀಚೆಗೆ ಎಂ.ಜಿ ರಸ್ತೆಯಲ್ಲಿ ಬಿಎಂಟಿಸಿ ಬಸ್ ಬೆಂಕಿಗಾಹುತಿಯಾದ ಘಟನೆಯದ್ದಾಗಿದೆ.
ಜುಲೈ 9, 2024ರಂದು ಬಿಎಂಟಿಸಿ ಬಸ್ವೊಂದು ನಡು ರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ಬೆಂಗಳೂರಿನ ಎಂ.ಜಿ ರಸ್ತೆಯ ಅನಿಲ್ ಕುಂಬ್ಳೆ ಸರ್ಕಲ್ ಬಳಿ ನಡೆದಿದೆ.
ಬೆಂಕಿ ಕಾಣಿಸಿಕೊಳ್ಳುತ್ತಿದಂತೆ ಎಚ್ಚೆತ್ತ ನಿರ್ವಾಹಕ ಬಸ್‌ನಲ್ಲಿದ್ದ ಜನರನ್ನು ಕೆಳಗಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಘಟನೆಯಿಂದಾಗಿ ಎಂ.ಜಿ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಬಸ್ ಹೊತ್ತಿ ಉರಿಯುವಾಗ ಭಾರೀ ಪ್ರಮಾಣದ ಹೊಗೆ ಪಕ್ಕದಲ್ಲಿದ್ದ ಮೆಟ್ರೋ ನಿಲ್ದಾಣವನ್ನು ಸಹ ಆವರಿಸಿತ್ತು.
ಎಕ್ಸ್ ಪೋಸ್ಟ್‌ನಲ್ಲಿ ಡಿಆರ್‌ಡಿಒ ತೇಜಸ್ ವಿಮಾನ ಪರೀಕ್ಷಾ ಕೇಂದ್ರದಿಂದ 4 ಕಿಮೀ ಪಶ್ಚಿಮಕ್ಕೆ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಅಸಲಿಗೆ ಹೆಚ್‌ಎಲ್ ವಿಮಾನ ಪರೀಕ್ಷಾ ಕೇಂದ್ರದಿಂದ ಎಂ.ಜಿ ರಸ್ತೆಯ ಅನಿಲ್ ಕುಂಬ್ಳೆ ಸರ್ಕಲ್ ಸುಮಾರು 9 ಕಿಮೀ ದೂರದಲ್ಲಿದೆ.
ಇದನ್ನೂ ಓದಿ : FACT CHECK : ಶಾಂಪುವಿನ ವಿಡಂಬನಾತ್ಮಕ ಜಾಹೀರಾತು ಮುಸ್ಲಿಮರನ್ನು ಅಪಹಾಸ್ಯ ಮಾಡಲು ಹಂಚಿಕೊಳ್ಳಲಾಗ್ತಿದೆ