ಅಪ್ರಾಪ್ತ ವಿದ್ಯಾರ್ಥಿಗಳು ಎಂಟು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಬಳಿಕ ಹತ್ಯೆಗೈದಿರುವ ಆಘಾತಕಾರಿ ಘಟನೆ ಆಂಧ್ರ ಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ನಡೆದಿದೆ.
ಮೃತ ಬಾಲಕಿ ಮೂರನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಆಕೆಯ ಸೀನಿಯರ್‌ಗಳಾದ ಆರನೇ ತರಗತಿಯಲ್ಲಿ ಓದುತ್ತಿರುವ 12 ಮತ್ತು 13 ವರ್ಷ ವಯಸ್ಸಿನ ಇಬ್ಬರು ಬಾಲಕರು ಅತ್ಯಾಚಾರವೆಸಗಿ, ಬಳಿಕ ಕೊಲೆ ಮಾಡಿದ್ದಾರೆ. ಸಾಕ್ಷ್ಯ ನಾಶಕ್ಕಾಗಿ ಬಾಲಕಿಯ ಮೃತದೇಹವನ್ನು ಕಾಲುವೆಯೊಂದಕ್ಕೆ ಎಸೆದಿದ್ದಾರೆ ಎಂದು ವರದಿಗಳು ಹೇಳಿವೆ.
8-yr-old girl, class 3 student, allegedly raped, murdered by 3 minor boys, her seniors in school, two of them 12 yrs, in class VI, & a 13-yr-old in class 7; sniffer dog led police to homes of accused who reportedly asked her to play with them, raped, threw body in canal #Nandyala pic.twitter.com/CDC5i0Zdab
— Uma Sudhir (@umasudhir) July 11, 2024
ಆಂಧ್ರ ಪ್ರದೇಶದ ರಾಜಧಾನಿ ಅಮರಾವತಿಯಿಂದ 300 ಕಿಮೀ ದೂರದಲ್ಲಿರುವ ಮುಚ್ಚುಮರ್ರಿಯಲ್ಲಿ ಈ ಘಟನೆ ನಡೆದಿದೆ. ಬಾಲಕಿಯ ಮೃತದೇಹ ಇನ್ನೂ ಪತ್ತೆಯಾಗಿಲ್ಲ ಎಂದು ಎನ್‌ಡಿವಿ ವರದಿ ಮಾಡಿದೆ.
ಬಾಲಕಿ ಭಾನುವಾರದಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಾಲಕಿ ಮುಚ್ಚುಮರ್ರಿ ಪಾರ್ಕ್‌ನಲ್ಲಿ ಆಟವಾಡುತ್ತಿದ್ದಳು, ಆದರೆ ಮನೆಗೆ ವಾಪಸ್ ಬಂದಿಲ್ಲ ಎಂದು ದೂರಿನಲ್ಲಿ ಹೇಳಿದ್ದರು. ಪೊಲೀಸರು ಹುಡುಕಾಟ ಆರಂಭಿಸಿ ಸ್ಥಳೀಯ ನಿವಾಸಿಗಳನ್ನು ವಿಚಾರಿಸಿದರೂ, ಬಾಲಕಿ ಪತ್ತೆಯಾಗಿರಲಿಲ್ಲ.
ಕೊನೆಗೆ ಬಾಲಕಿಯ ಪತ್ತೆ ಕಾರ್ಯಕ್ಕೆ ಪೊಲೀಸರು ಶ್ವಾನಗಳನ್ನು ಬಳಸಿದ್ದರು. ಶ್ವಾನವು ಬಾಲಕಿ ಹೋಗುತ್ತಿದ್ದ ಶಾಲೆಯ ವಿದ್ಯಾರ್ಥಿಗಳಾದ ಮೂವರು ಬಾಲಕರ ಮನೆ ಮುಂದೆ ಹೋಗಿ ನಿಂತಿತ್ತು. ಇಬ್ಬರು ಬಾಲಕರು 12 ವರ್ಷದವರಾಗಿದ್ದು 6 ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇನ್ನೋರ್ವ 13 ವರ್ಷದ ಬಾಲಕ 7 ತರಗತಿಯ ವಿದ್ಯಾರ್ಥಿಯಾಗಿದ್ದ. ಪೊಲೀಸರು ಬಾಲಕರನ್ನು ವಿಚಾರಣೆಗೆ ಒಳಪಡಿಸಿದಾಗ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಿರುವ ವಿಚಾರವನ್ನು ಅವರು ಬಾಯ್ಬಿಟ್ಟಿದ್ದಾರೆ ಎಂದು ವರದಿಗಳು ಹೇಳಿವೆ.
“ಬಾಲಕಿ ಪಾರ್ಕ್‌ನಲ್ಲಿ ಆಟವಾಡುತ್ತಿದ್ದುದನ್ನು ನೋಡಿದ ನಾವು, ಆಕೆಯ ಜೊತೆ ಸೇರಿಕೊಂಡೆವು. ಬಳಿಕ ಆಕೆಯನ್ನು ಮುಚ್ಚುಮರ್ರಿ ಅಣೆಕಟ್ಟಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದೆವು. ಆಕೆ ಪೋಷಕರಿಗೆ ವಿಷಯ ತಿಳಿಸಬಹುದು ಎಂದು ಭಯಪಟ್ಟು ಕೊಲೆ ಮಾಡಿ ಮೃತದೇಹವನ್ನು ಸಮೀಪದ ಕಾಲುವೆಗೆ ಎಸೆದೆವು” ಎಂದು ಬಾಲಕರು ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ಶವ ಇನ್ನೂ ಪತ್ತೆಯಾಗದ ಕಾರಣ ನಾಪತ್ತೆ ಪ್ರಕರಣವಾಗಿ ಪರಿಗಣಿಸಿದ್ದೇವೆ ಎಂದು ಮುಚ್ಚುಮರ್ರಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಜಯಶೇಖರ್ ಹೇಳಿದ್ದಾರೆ.
ಇದನ್ನೂ ಓದಿ : ‘ಅತ್ಯಂತ ವಿಷಾದಕರ’: ಜಾತಿ ತಾರತಮ್ಯ ಉತ್ತೇಜಿಸುವ ಜೈಲು ಕೈಪಿಡಿಗಳ ಕುರಿತು ಸುಪ್ರೀಂ ಕೋರ್ಟ್ ಹೇಳಿಕೆ