“ಸ್ವೀಡನ್‌ನಲ್ಲಿ ರಸ್ತೆ ಮೇಲೆ ಎಲೆಕ್ಟ್ರಿಕ್ ಚಾರ್ಜಿಂಗ್ ಲೇನ್ ಅನ್ನು ಅಳವಡಿಸಲಾಗಿದೆ. ವಾಹನಗಳು ಅದರ ಮೇಲೆ ಚಲಿಸುವಾಗಲೇ ವಿದ್ಯುತ್ ಪಾಸ್ ಆಗಿ ಚಾರ್ಜ್ ಆಗುತ್ತೆ” ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

ಫ್ಯಾಕ್ಟ್‌ಚೆಕ್ : ವೈರಲ್ ಪೋಸ್ಟ್‌ನ ಸತ್ಯಾಸತ್ಯತೆ ಪರಿಶೀಲಿಸಲು ನಾವು ಪೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹಾಕಿ ಮಾಹಿತಿ ಹುಡುಕಿದ್ದೇವೆ. ಈ ವೇಳೆ ಬಿಬಿಸಿಯ ಟಾಪ್ ಗಿಯರ್ ವೆಬ್‌ಸೈಟ್ 16 ಮೇ 2023ರಲ್ಲಿ ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ.

ವರದಿಯಲ್ಲಿ “ಸ್ವೀಡನ್ ವಿಶ್ವದ ಮೊದಲ ಇವಿ ಚಾರ್ಜಿಂಗ್ ರಸ್ತೆ ನಿರ್ಮಿಸಲಿದೆ. ಎಲೆಕ್ಟ್ರಿಕ್ ವಾಹನವನ್ನು ಚಾರ್ಜ್ ಮಾಡುವ ಇ-ಮೋಟಾರು ವೇ ಇದಾಗಿದ್ದು, ಚಾರ್ಜ್‌ಗಾಗಿ ದೀರ್ಘ ವಿರಾಮದ ಅಗತ್ಯವನ್ನು ಇದು ತಪ್ಪಿಸಲಿದೆ. ವಿವಿಧ ಪ್ರಾಯೋಗಿಕ ಯೋಜನೆಗಳ ನಂತರ, 2025ರ ವೇಳೆಗೆ ರಸ್ತೆ ನಿರ್ಮಿಸಲು ನಿರ್ಧರಿಸಲಾಗಿದೆ. ಯೋಜನೆಯ ಇಂಜಿನಿಯರ್‌ಗಳು ಯಾವ ತಂತ್ರಜ್ಞಾನ ಹೆಚ್ಚು ಸೂಕ್ತವಾಗಿರುತ್ತದೆ ಎಂಬುವುದರ ಕುರಿತ ಇನ್ನೂ ಕೆಲಸ ಮಾಡುತ್ತಿದ್ದಾರೆ” ಎಂದಿದೆ.

ಮೇ 8,2023ರಲ್ಲಿ ಆಟೋ ಹಿಂದೂಸ್ತಾನ್ ಟೈಮ್ಸ್ ಪ್ರಕಟಿಸಿದ ವರದಿಯಲ್ಲಿ “ಸ್ವೀಡನ್ 2025ರವೇಳೆಗೆ ವಿಶ್ವದ ಮೊದಲ ಇಲೆಕ್ಟ್ರಿಫೈಡ್ ರಸ್ತೆಯನ್ನು ತೆರೆಯಲಿದೆ. ಇದು ವಾಹನಗಳು ಸಂಚರಿಸುವಾಗಲೇ ಚಾರ್ಜ್ ಆಗಲು ಸಹಾಯ ಮಾಡಲಿದೆ. ಯುರೋಪಿಯನ್ ದೇಶವು 3 ಸಾವಿರ ಕಿ.ಮೀಗಳಿಗೂ ಹೆಚ್ಚಿನ ರಸ್ತೆಯನ್ನು ಎಲೆಕ್ಟ್ರಿಫೈ ಮಾಡಲು ಉದ್ದೇಶಿಸಿದೆ” ಎಂದಿದೆ.

ನಾವು ನಡೆಸಿದ ಪರಿಶೀಲನೆಯಲ್ಲಿ ವೈರಲ್ ಪೋಸ್ಟ್‌ನಲ್ಲಿ ಇರುವ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ರಸ್ತೆ ಎನ್ನಲಾದ ಫೋಟೋ ಒಂದು ಊಹಾತ್ಮಕ ಫೋಟೋ ಆಗಿದೆ. ಸ್ವೀಡನ್ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ರಸ್ತೆ ನಿರ್ಮಿಸಲು ಮುಂದಾಗಿರುವುದು ಹೌದು. ಆದರೆ, ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. 2025ರ ಹೊತ್ತಿಗೆ ರಸ್ತೆ ಲೋಕಾರ್ಪಣೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : FACT CHECK : ಬೆಂಗಳೂರಿನಲ್ಲಿ BMTC ಬಸ್ ಅನ್ನು ಮ್ಯಾಗ್ನೆಟಿಕ್ ಬಾಂಬ್ ದಾಳಿಯಿಂದ ಸ್ಪೋಟಿಸಲಾಗಿದೆ ಎಂಬುವುದು ಸುಳ್ಳು


