“ನಿಮ್ಮ ಮನೆಯಿಂದ 60 ಕಿ.ಮೀ. ದೂರದೊಳಗೆ ಯಾವುದೇ ಟೋಲ್ ಬೂತ್ ಇದ್ದರೂ ನೀವು ಟೋಲ್ ಶುಲ್ಕ ಕಟ್ಟುವಂತಿಲ್ಲ” ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ ಎಂಬ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ವಾಟ್ಸಾಪ್ ನಲ್ಲಿ ಕಂಡು ಬಂದ ಮೆಸೇಜ್‌ನಲ್ಲಿ “ನಿಮ್ಮ ಮನೆಯಿಂದ 60 ಕಿಮೀ ದೂರದೊಳಗೆ ಯಾವುದೇ ಟೋಲ್ ಬೂತ್ ಇದ್ದರೂ ಆ ಬೂತಲ್ಲಿ ಟೋಲ್ ಫೀ ಕಟ್ಟುವಂತಿಲ್ಲ. ಅದಕ್ಕೆ ನಿಮ್ಮ ಆಧಾರ್ ಕಾರ್ಡ್ ಮೂಲಕ ಪಾಸ್ ಮಾಡಿಸಿಕೊಳ್ಳತಕ್ಕದ್ದು. ಇದನ್ನು ಹೆಚ್ಚು ಫಾರ್ವರ್ಡ್ ಮಾಡಿ ಜನರಿಗೆ ತಿಳಿಸುವ ಕೆಲಸ ಮಾಡಿ. ಇದು ಕೇಂದ್ರ ಸರಕಾರದ ಆಜ್ಞೆ” ಎಂದು ಬರೆಯಲಾಗಿದೆ. ಜೊತೆಗೆ ವಿಡಿಯೋ ಹಂಚಿಕೊಳ್ಳಲಾಗಿದೆ.

ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆ ತಿಳಿಯಲು ನಾವು ಅದರ ಸ್ಕ್ರೀನ್ ಶಾಟ್ ಅನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹಾಕಿ ಮಾಹಿತಿ ಹುಡುಕಿದ್ದೇವೆ. ಈ ವೇಳೆ ನಿತಿನ್ ಗಡ್ಕರಿ ಹೇಳಿಕೆಯ ಪೂರ್ಣ ವಿಡಿಯೋ ಲಭ್ಯವಾಗಿದೆ. ಅದರಲ್ಲಿ 0.36 ಸೆಕೆಂಡಿನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಲೋಕಸಭೆಯಲ್ಲಿ ನೀಡಿರುವ ಹೇಳಿಕೆ ಹೀಗಿದೆ “ಸ್ಥಳೀಯ ಜನರು ಅವರ ಆಧಾರ್ ಕಾರ್ಡ್ ತೋರಿಸಿದರೆ ಪಾಸ್ ನೀಡಲಾಗುವುದು. ಎರಡನೆಯ ವಿಷಯವೆಂದರೆ 60 ಕಿಮೀ ದೂರದಲ್ಲಿ ಒಂದಕ್ಕಿಂತ ಹೆಚ್ಚು ಟೋಲ್ ಪ್ಲಾಜಾಗಳು ಇರುವಂತಿಲ್ಲ, ಒಂದು ವೇಳೆ ಇದ್ದರೆ ಅದು ಕಾನೂನು ಬಾಹಿರವಾಗಿದೆ ಮತ್ತು ಅದನ್ನು ಪರಿಶೀಲಿಸಿ ಮೂರು ತಿಂಗಳೊಳಗೆ ತೆಗೆದುಹಾಕಲಾಗುವುದು.”
ಈ ಕುರಿತು ನಾವು ಇನ್ನಷ್ಟು ಮಾಹಿತಿ ಹುಡುಕಿದಾಗ “ಮಾರ್ಚ್ 22, 2022ರಂದು ಡೆಕ್ಕನ್ ಹೆರಾಲ್ಡ್ ಪ್ರಕಟಿಸಿದ ವರದಿ ಲಭ್ಯವಾಗಿದೆ. ವರದಿಯಲ್ಲಿ “ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪರಸ್ಪರ 60 ಕಿಲೋಮೀಟರ್ ಅಂತರದಲ್ಲಿರುವ ಎಲ್ಲಾ ಟೋಲ್ ಪ್ಲಾಝಾಗಳನ್ನು ಮುಂದಿನ ಮೂರು ತಿಂಗಳಲ್ಲಿ ತೆಗೆದು ಹಾಕಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳವಾರ ಘೋಷಿಸಿದ್ದಾರೆ” ಎಂದಿದೆ.

ಇದೇ ವರದಿಯಲ್ಲಿ “ಹೆದ್ದಾರಿಗಳಲ್ಲಿ ಸುಗಮ ಸಂಚಾರಕ್ಕಾಗಿ ಟೋಲ್ ಪ್ಲಾಜಾಗಳ ಬಳಿ ಇರುವ ಸ್ಥಳೀಯ ನಿವಾಸಿಗಳಿಗೆ ಅವರ ಆಧಾರ್ ಕಾರ್ಡ್ ವಿಳಾಸವನ್ನು ಆಧರಿಸಿ ಸರ್ಕಾರ ಉಚಿತ ಪಾಸ್‌ಗಳನ್ನು ನೀಡುತ್ತದೆ ಎಂದು ಗಡ್ಕರಿ ಹೇಳಿದರು. ಲೋಕಸಭೆಯಲ್ಲಿ ಮುಂದಿನ ಹಣಕಾಸು ವರ್ಷಕ್ಕೆ ಬಜೆಟ್‌ನಲ್ಲಿ ರಸ್ತೆಗಳು ಮತ್ತು ಹೆದ್ದಾರಿಗಳ ಹಂಚಿಕೆ ಕುರಿತ ಚರ್ಚೆಗೆ ಉತ್ತರಿಸಿದರು” ಎಂದು ಹೇಳಲಾಗಿದೆ.
ಮಾರ್ಚ್ 22, 2023ರಂದು ಪ್ರಕಟಗೊಂಡ ದಿ ಹಿಂದೂ ವರದಿಯಲ್ಲಿ, “ರಾಷ್ಟ್ರೀಯ ಹೆದ್ದಾರಿಗಳಲ್ಲಿ 60 ಕಿ.ಮೀ ದೂರಕ್ಕೆ ಒಂದೇ ಟೋಲ್ ಪ್ಲಾಝಾ ಇರಲಿದ್ದು, ಒಂದಕ್ಕಿಂತ ಹೆಚ್ಚು ಟೋಲ್ ಪ್ಲಾಝಾಗಳಿದ್ದರೆ ಮುಂದಿನ ಮೂರು ತಿಂಗಳಲ್ಲಿ ಅಂತವುಗಳನ್ನು ಮುಚ್ಚಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಂಗಳವಾರ ಲೋಕಸಭೆಯಲ್ಲಿ ಘೋಷಿಸಿದ್ದಾರೆ” ಎಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಚಿವ ನಿತಿನ್ ಗಡ್ಕರಿಯವರು ಟೋಲ್ ಪ್ಲಾಝಾ ವ್ಯಾಪ್ತಿಯ ಸ್ಥಳೀಯರಿಗೆ ಆಧಾರ್ ಮೂಲಕ ಉಚಿತ ಪಾಸ್ ಮತ್ತು 60 ಕಿ.ಮೀ. ಅಂತರದಲ್ಲಿ ಒಂದಕ್ಕಿಂತ ಹೆಚ್ಚು ಟೋಲ್ ಗಳು ಇರುವಂತಿಲ್ಲ ಎಂದು ಹೇಳಿದ್ದಾರೆ. ಇದು ವೈರಲ್ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಆದರೆ, ವಿಡಿಯೋ ಜೊತೆಗೆ ಹಂಚಿಕೊಳ್ಳಲಾದ ಹೇಳಿಕೆಯಲ್ಲಿ ನಿಮ್ಮ ಮನೆಯಿಂದ 60 ಕಿ.ಮೀ. ದೂರದೊಳಗೆ ಯಾವುದೇ ಟೋಲ್ ಗೇಟ್ ಇದ್ದರೂ ಟೋಲ್ ಫೀ ಕಟ್ಟುವಂತಿಲ್ಲ ಎಂದು ಹೇಳಿರುವುದು ಸುಳ್ಳು ಪ್ರತಿಪಾದನೆಯಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಇದನ್ನೂ ಓದಿ : FACT CHECK : ಮುಂಬೈನಲ್ಲಿ ಬಾರ್ಬರ್ ಜಿಹಾದ್ ಎಂದು ಸಂಬಂಧವಿಲ್ಲದ ಫೋಟೋ ಹಂಚಿಕೊಳ್ಳಲಾಗುತ್ತಿದೆ


