ಜುಲೈ 23, 2024ರಂದು ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮ್ ಬಜೆಟ್ ಮಂಡನೆ ಮಾಡಿದ್ದರು. ಈ ಬಜೆಟ್ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ಚರ್ಚೆಗೆ ಒಳಗಾಗಿತ್ತು.
ಬಜೆಟ್ ಕುರಿತು ಜುಲೈ 29ರಂದು ಲೋಕಸಭೆಯಲ್ಲಿ ಮಾತನಾಡಿದ್ದ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಬಜೆಟ್ ಮಂಡನೆಗೂ ಮುನ್ನ ಸಂಪ್ರದಾಯದಂತೆ ನಡೆದ ಹಲ್ವಾ ಸಮಾರಂಭದ ಫೋಟೋ ಪ್ರದರ್ಶಿಸಿ ” ಸರ್ ಇದು ಬಜೆಟ್ ಮಂಡನೆಗೂ ಮುನ್ನ ನಡೆದ ಹಲ್ವಾ ಸಮಾರಂಭದ ಫೋಟೋ. ಇದರಲ್ಲಿ ನನಗೆ ಒಬ್ಬನೇ ಒಬ್ಬ ಒಬಿಸಿ, ಆದಿವಾಸಿ ಮತ್ತು ದಲಿತ ಅಧಿಕಾರಿ ಕಾಣುತ್ತಿಲ್ಲ. ಕೇವಲ 20 ಅಧಿಕಾರಿಗಳು ಸೇರಿಕೊಂಡು ಬಜೆಟ್ ಸಿದ್ದಪಡಿಸಿದ್ದಾರೆ. ಇದರರ್ಥ ಭಾರತ ಹಲ್ವಾವನ್ನು 20 ಅಧಿಕಾರಿಗಳು ಹಂಚಿಕೊಂಡಿದ್ದಾರೆ” ಎಂದಿದ್ದರು.
ರಾಹುಲ್ ಗಾಂಧಿ ಹಲ್ವಾ ಸಮಾರಂಭ ಉಲ್ಲೇಖಿಸಿ ಜಾತಿ ತಾರತಮ್ಯದ ಗಂಭೀರತೆಯನ್ನು ಪ್ರಸ್ತಾಪಿಸುವಾಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮುಖವನ್ನು ಕೈಯಿಂದ ಮುಚ್ಚಿಕೊಂಡು, ನಗುವ ಮೂಲಕ ಪ್ರತಿಪಕ್ಷ ನಾಯಕನ ಹೇಳಿಕೆಯನ್ನು ತಮಾಷೆಯಾಗಿ ಕಂಡಿದ್ದರು.
ರಾಹುಲ್ ಗಾಂಧಿಯ ಹೇಳಿಕೆಗೆ ಪ್ರತಿಯಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದ ಅನೇಕ ಬಳಕೆದಾರರು ” ಯುಪಿಎ ಸರ್ಕಾರದ ಅವಧಿಯಲ್ಲಿ ಪಿ.ಚಿದಂಬರಂ ಹಣಕಾಸು ಸಚಿವರಾಗಿದ್ದಾಗ ಬಜೆಟ್ ಮಂಡನೆಗೂ ಮುನ್ನ ನಡೆದ ಹಲ್ವಾ ಸಮಾರಂಭದಲ್ಲಿ ಎಷ್ಟು ದಲಿತರಿದ್ದರು? ಎಂದು ಪ್ರಶ್ನಿಸಿದ್ದರು. ಅಂದರೆ, ಯುಪಿಎ ಸರ್ಕಾರದ ಅವಧಿಯಲ್ಲೂ ಹಲ್ವಾ ಸಮಾರಂಭದಲ್ಲಿ ಒಬಿಸಿ, ಎಸ್‌ಸಿ, ಎಸ್‌ಟಿ ಸಮುದಾಯಗಳ ಯಾವೊಬ್ಬ ಅಧಿಕಾರಿಯೂ ಭಾಗಿಯಾಗಿರಲಿಲ್ಲ ಎಂದು ಪ್ರತಿಪಾದಿಸಿದ್ದರು.

ಹಾಗಾದರೆ, ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಲ್ಲಿ ಮಾಡಿರುವ ಆರೋಪವೇ ನಿಜವೇ ಎಂದು ಪರಿಶೀಲಿಸೋಣ
ಫ್ಯಾಕ್ಟ್‌ಚೆಕ್ : ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಂತೆ, ಯುಪಿಎ ಸರ್ಕಾರದ ಅವಧಿಯಲ್ಲಿ ಪಿ.ಚಿದಂಬರಂ ಹಣಕಾಸು ಸಚಿವರಾಗಿ ಬಜೆಟ್ ಕಲಾಪದಲ್ಲಿ ಭಾಗವಹಿಸುವ ಮುನ್ನ ನಡೆದ ಸಂಪ್ರದಾಯಿಕ ಹಲ್ವಾ ಸಮಾರಂಭದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದ ಅಧಿಕಾರಿಗಳು ಭಾಗವಹಿಸಿರಲಿಲ್ಲ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾದ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಅದು ಫೆಬ್ರವರಿ 2014ರಲ್ಲಿ ಮಧ್ಯಂತರ ಬಜೆಟ್ ಸಮಯದಲ್ಲಿ ತೆಗೆದ ಫೋಟೋ ಎಂದು ಗೊತ್ತಾಗಿದೆ.

ಫೋಟೋದ ಶೀರ್ಷಿಕೆಯು ಫೆಬ್ರವರಿ 07, 2014 ರಂದು ನವದೆಹಲಿಯಲ್ಲಿ “ಕೇಂದ್ರ ಹಣಕಾಸು ಸಚಿವ, ಪಿ. ಚಿದಂಬರಂ ಅವರು ಮಧ್ಯಂತರ ಬಜೆಟ್ ಮುದ್ರಣ ಪ್ರಕ್ರಿಯೆಯ ಪ್ರಾರಂಭವನ್ನು ಗುರುತಿಸುವ ಹಲ್ವಾ ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ಹಣಕಾಸು ಖಾತೆಯ ರಾಜ್ಯ ಮಂತ್ರಿಗಳಾದ ಜೇಸುದಾಸು ಶೀಲಂ ಮತ್ತು ನಮೋ ನಾರಾಯಣ್ ಮೀನಾ ಅವರು ಕೂಡ ಚಿದಂಬರಂ ಜೊತೆಗಿದ್ದರು ಎಂದು ಪಿಐಬಿ ಸ್ಪಷ್ಟಪಡಿಸಿದೆ.
ರಾಜ್ಯ ಸಚಿವರ ಹಿನ್ನೆಲೆ ನೋಡಿದಾಗ ಜೇಸುದಾಸು ಶೀಲಂ ಪರಿಶಿಷ್ಟ ಜಾತಿಗೆ ಮತ್ತು ನಮೋ ನರೇನ್ ಮೀನಾ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಎಂದು ತಿಳಿದುಬಂದಿದೆ.
ಹಾಗಾಗಿ, ಪಿ.ಚಿದಂಬರಂ ಅವರು ಕೇಂದ್ರ ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಬಜೆಟ್ ಮುದ್ರಣಕ್ಕೂ ಮುನ್ನ ನಡೆದ ಹಲ್ವಾ ಸಮಾರಂಭದ ವೇಳೆ ತೆಗೆದ ಫೋಟೋದಲ್ಲಿ ದಲಿತ ಮತ್ತು ಬುಡಕಟ್ಟು ವ್ಯಕ್ತಿಗಳು ಇರುವುದು ದೃಢಪಟ್ಟಿದೆ. ಆದ್ದರಿಂದ ಸಾಮಾಜಿಕ ಮಾಧ್ಯಮಗಳ ಪ್ರತಿಪಾದನೆಗಳು ಸುಳ್ಳು.
ಇದನ್ನೂ ಓದಿ : FACT CHECK : ಮೋದಿ ಸರ್ಕಾರಕ್ಕೂ ಮುನ್ನ ಭಾರತ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರಲಿಲ್ಲ ಎಂಬ ಶೋಭಾ ಕರಂದ್ಲಾಜೆ ಹೇಳಿಕೆ ಸುಳ್ಳು


