ಬಾಂಗ್ಲಾದೇಶದಲ್ಲಿ ಹಿಂದೂ ಬಾಲಕನ ಕತ್ತಿನಿಂದ ‘ತುಳಸಿ ಮಾಲೆ’ ಅಥವಾ ತಾಯತವನ್ನು ಮುಸ್ಲಿಮರು ಬಲವಂತವಾಗಿ ಕಿತ್ತು ಹಾಕಿದ್ದಾರೆ ಎಂದು ಆರೋಪಿಸಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಮೊಣಕಾಲು ಮಟ್ಟ ನೀರಿನಲ್ಲಿ ನಿಂತಿರುವ ಬಾಲಕನಿಗೆ ಆಹಾರ ಸಾಮಗ್ರಿ ನೀಡುವ ಮುಸ್ಲಿಂ ವ್ಯಕ್ತಿಯೊಬ್ಬರು, ಆತನ ಕತ್ತಿನಲ್ಲಿರುವ ತಾಯತವನ್ನು ಹಲ್ಲಿನಿಂದ ಕಚ್ಚಿ ಕತ್ತರಿಸಿ ತೆಗೆಯುವ ದೃಶ್ಯವಿದೆ. ವಿಡಿಯೋ ಮೇಲೆ ಬಾಂಗ್ಲಾ ಭಾಷೆಯಲ್ಲಿ “ನೊಖಾಲಿಯಲ್ಲಿ ರಿಲೀಫ್ ಸಾಮಗ್ರಿಗಳ ವಿತರಣೆಯ ಸಮಯದಲ್ಲಿ ಮಗುವಿಗೆ ಶಿರ್ಕ್‌ನಿಂದ ಮುಕ್ತಿ ದೊರೆಯಿತು” ಎಂದು ಬರೆಯಲಾಗಿದೆ.
ಆಗಾಗ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವ ಜಿತೇಂದ್ರ ಪ್ರತಾಪ್ ಸಿಂಗ್ (@jpsin1) ಎಂಬ ಎಕ್ಸ್ ಬಳಕೆದಾರ ಆಗಸ್ಟ್ 30ರಂದು ವಿಡಿಯೋ ಹಂಚಿಕೊಂಡು “ಬಾಂಗ್ಲಾದೇಶದ ಹೊಸ ಸರ್ಕಾರ ಹಿಂದೂಗಳನ್ನು ಹೇಗೆ ನಾಶ ಮಾಡುತ್ತಿದೆ ಎಂಬುವುದನ್ನು ನೋಡಿ. ನೊಖಾಲಿಯಲ್ಲಿ ಪ್ರವಾಹದಲ್ಲಿ ದಿನಗಟ್ಟಲೆ ಸಿಲುಕಿ ಹಸಿದಿದ್ದ ಹಿಂದೂ ಮಗುವನ್ನು ಜಮಾತ್-ಎ-ಇಸ್ಲಾಮಿಯ ಮೌಲ್ವಿಯೊಬ್ಬರು ಸಹಾಯ ಪಡೆಯುವ ಮೊದಲು ಕಲಿಮಾವನ್ನು ಪಠಿಸುವಂತೆ ಒತ್ತಾಯಿಸಿದರು. ನಂತರ ಮೌಲ್ವಿಯು ಮಗುವಿನ ಹಿಂದೂ ಸಂಕೇತವಾದ ತುಳಸಿ ಮಾಲೆಯನ್ನು ಬಲವಂತವಾಗಿ ತೆಗೆದು ಹಾಕಿದರು. ಅವನು ಇನ್ನು ಮುಂದೆ ಹಿಂದೂ ಅಲ್ಲ ಎಂದು ಮಗುವಿಗೆ ಹೇಳಿದರು. ಮಗು ಮಾಲೆಯನ್ನು ಹಿಂದಕ್ಕೆ ಕೇಳಿದಾಗ, ಅವರು ಇನ್ನು ಮುಂದೆ ಯಾವುದೇ ಪರಿಹಾರ ಸಾಮಗ್ರಿಗಳನ್ನು ಸಿಗುವುದಿಲ್ಲ ಎಂದು ಹೇಳಿದ್ದಾರೆ” ಎಂದು ಬರೆದುಕೊಂಡಿದ್ದರು.

ಬಲಪಂಥೀಯ ಸುದ್ದಿ ವೆಬ್‌ಸೈಟ್ ‘ಓಪ್ಇಂಡಿಯಾ’ ಕೂಡ ವಿಡಿಯೋ ಕುರಿತು ಆಗಸ್ಟ್ 30ರಂದು ವರದಿ ಪ್ರಕಟಿಸಿತ್ತು. ವರದಿಯಲ್ಲಿ ಹಿಂದೂ ಮಗುವಿನಿಂದ ಮೌಲ್ವಿ ತುಳಸಿ ಮಾಲೆಯನ್ನು ತೆಗೆದಿದ್ದಾರೆ ಎಂದು ಆರೋಪಿಸಿತ್ತು. ಬಳಿಕ, ಮಗುವಿನ ಧರ್ಮವನ್ನು ಖಚಿತವಾಗಿ ದೃಢೀಕರಿಸಲು ಸಾಧ್ಯವಿಲ್ಲ ಎಂದು ಸುದ್ದಿಯಲ್ಲಿ ತಿದ್ದುಪಡಿ ಮಾಡಿತ್ತು. ಆದರೆ, ಸುದ್ದಿಯ ಯುಆರ್‌ಎಲ್ ಲಿಂಕ್‌ನಲ್ಲಿ ಇನ್ನೂ ಕೂಡ ಹಿಂದೂ ಮಗು ಎಂದೇ ಇದೆ.

ಬಲಪಂಥೀಯ ಎಕ್ಸ್ ಬಳಕೆದಾರ ರೌಶನ್ ಸಿನ್ಹಾ ಅಥವಾ ಮಿ. ಸಿನ್ಹಾ ಆಗಸ್ಟ್ 30ರಂದು ವಿಡಿಯೋ ಹಂಚಿಕೊಂಡು ” ಬಾಂಗ್ಲಾದೇಶದಲ್ಲಿ ಇಸ್ಲಾಮಿಸ್ಟ್‌ಗಳು ಪರಿಹಾರ ಸಾಮಾಗ್ರಿ ನೀಡಲು ಹಿಂದೂ ಮಕ್ಕಳ ಕುತ್ತಿಗೆಯಿಂದ ಧಾರ್ಮಿಕ ದಾರವನ್ನು ತೆಗೆದಿದ್ದಾರೆ. ಭಾರತದಲ್ಲಿ ಯಾವುದಾದರೂ ಸಹಾಯಕ್ಕೆ ಬದಲಾಗಿ ಯಾವುದೇ ಹಿಂದೂ ಸ್ವಾಮಿ ಮುಸ್ಲಿಂ ವ್ಯಕ್ತಿಗೆ ಇದೇ ರೀತಿ ಮಾಡಿದರೆ ಏನಾಗುತ್ತಿತ್ತು ಊಹಿಸಿ” ಎಂದು ಬರೆದಕೊಂಡಿದ್ದರು.

ಮತ್ತೊಂದು ಬಲಪಂಥೀಯ ಎಕ್ಸ್ ಖಾತೆ ಫ್ರಂಟಲ್ ಫೋರ್ಸ್ (@FrontalForce) ಕೂಡ ಮಿ. ಸಿನ್ಹಾನಂತೆ ಬರೆದುಕೊಂಡು ಆಗಸ್ಟ್ 30ರಂದು ವಿಡಿಯೋ ಹಂಚಿಕೊಂಡಿತ್ತು.

ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆ ತಿಳಿಯಲು ನಾವು ಆ ಕುರಿತು ಮಾಹಿತಿ ಹುಡುಕಿದ್ದೇವೆ. ಈ ವೇಳೆ ಖ್ಯಾತ ಫ್ಯಾಕ್ಟ್‌ಚೆಕ್ ಸಂಸ್ಥೆ ಆಲ್ಟ್ ನ್ಯೂಸ್ ವಿಡಿಯೋ ಕುರಿತು ಸುದ್ದಿ ಮಾಡಿರುವುದು ಕಂಡು ಬಂದಿದೆ.
ಆಲ್ಟ್ ನ್ಯೂಸ್ ಸುದ್ದಿಯಲ್ಲಿ “ನಾವು ಬಾಂಗ್ಲಾದೇಶದ ಫ್ಯಾಕ್ಟ್‌ಚೆಕ್ಕರ್ ಸೊಹಾನುರ್ಹ್ಮಾನ್ ಅವರೊಂದಿಗೆ ಮಾತನಾಡಿದ್ದೇವೆ. ಅವರು ವಿಡಿಯೋದಲ್ಲಿರುವ ಬಾಲಕ ಹಿಂದೂ ಧರ್ಮವದನಲ್ಲ, ಮುಸ್ಲಿಂ. ಅಲ್ಲದೆ, ಆತನ ಕತ್ತಿನಿಂದ ತುಳಸಿ ಮಾಲೆಯನ್ನಲ್ಲ ತೆಗೆದಿರುವುದು. ಅದು ತಲಿಸ್ಮನ್ (ಮುಸ್ಲಿಮರು ಧರಿಸುವ ತಾಯತ) ಎಂದು ಹೇಳಿದ್ದಾರೆ ಎಂದು ತಿಳಿಸಲಾಗಿದೆ.
ನಾವು ಸೊಹಾನುರ್ಹ್ಮಾನ್ ಅವರ ಎಕ್ಸ್ ಖಾತೆಯನ್ನು ಪರಿಶೀಲಿಸಿದಾಗ, ಆಗಸ್ಟ್ 30ರಂದು ಅವರು ವಿಡಿಯೋ ಕುರಿತು ಸ್ಪಷ್ಟನೆ ಕೊಟ್ಟಿರುವುದು ಕಂಡು ಬಂದಿದೆ.
ಸೊಹಾನುರ್ಹ್ಮಾನ್ ಹೇಳಿರುವಂತೆ “ವೈರಲ್ ವಿಡಿಯೋವನ್ನು ಆಗಸ್ಟ್ 26ರಂದ ರಸೇಲ್ ಖಾನ್ ಎಂಬವರು ಮೊದಲು ಫೇಸ್‌ಬುಕ್‌ನಲ್ಲಿ ಅಪ್ಲೋಡ್ ಮಾಡಿದ್ದರು. ವಿಡಿಯೋದಲ್ಲಿ ಘಟನೆ ನಡೆದಿರುವುದು ನೊಖಾಲಿ ಪ್ರದೇಶದಲ್ಲಿ ಎಂದಿದೆ. ಆ ಪ್ರದೇಶದಲ್ಲಿ ಚಂದ್‌ಪುರದ ‘ತೌಹಿದ್ ಅಕಾಡೆಮಿ ಮತ್ತು ಇಸ್ಲಾಮಿಕ್ ಸೆಂಟರ್’ ಎಂಬ ಹೆಸರಿನ ಸಲಫಿ ಇಸ್ಲಾಮಿಕ್ ಶಾಲೆಯು ಜನರಿಗೆ ಪರಿಹಾರ ಸಾಮಾಗ್ರಿಗಳನ್ನು ವಿತರಿಸಿತ್ತು. ಸಲಫಿ/ಅಹ್ಲೆ ಹದೀಸ್ ಅನುಯಾಯಿಗಳು ತವೀಜ್ (ತಾಯತ) ಧರಿಸುವುದನ್ನು ವಿರೋಧಿಸುತ್ತಾರೆ. ಸಲಫಿಗಳು ಅನೇಕ ಕಡೆಗಳಲ್ಲಿ ಜನರ ಕತ್ತಿನಿಂದ ತಾಯತ ಕತ್ತರಿಸಿದ ವಿಡಿಯೋಗಳು ಲಭ್ಯವಿದೆ”
The boy is not Hindu, and it was not a Tulsi mala; rather it was a Taweez.
There is Bangla text on the video that reads: "With the relief distribution, this boy was made 'Shirik-free.'"
The video was uploaded on August 26, by Rasel Khan. It is from Noakhali, where a Salafi… https://t.co/NmVBmDURV1 pic.twitter.com/32eEAvf7yo
— Shohanur Rahman (@Sohan_RSB) August 30, 2024
“ಹಿಂದೂ ಬಾಲಕನ ತಾಯತ ಕತ್ತರಿಸಿ ಆತನನ್ನು ಶಿರ್ಕ್‌ನಿಂದ ಹೊರತರಲು ಸಾಧ್ಯವಿಲ್ಲ. ಈ ಶಿರ್ಕ್ ಅನ್ನುವುದು ಅಲ್ಲಾಹನನ್ನು ಆರಾಧಿಸುವ ಮುಸ್ಲಿಮರಿಗೆ ಸಂಬಂಧಿಸಿದ್ದಾಗಿದೆ. ಇಸ್ಲಾಮಿನಲ್ಲಿ ಬಹು ದೈವಾರಾಧನೆ ಶಿರ್ಕ್ ಎಂದು ಪರಿಗಣಿಸಲಾಗುತ್ತದೆ. ಸಲಫಿಗಳು ತಾಯತ ಧರಿಸುವುದನ್ನೂ ಬಹು ದೈವಾರಾಧನೆ ಎಂದು ಹೇಳುತ್ತಾರೆ. ಹಾಗಾಗಿ, ಮುಸ್ಲಿಂ ಬಾಲಕನ ಕತ್ತಿನಿಂದ ತಾಯತ ತೆಗೆದಿದ್ದಾರೆ” ಎಂದು ಸೊಹಾನುರ್ಹ್ಮಾನ್ ವಿವರಿಸಿದ್ದಾರೆ.
ವೈರಲ್ ವಿಡಿಯೋದಲ್ಲಿರುವ ಮೌಲ್ವಿಯ ಹೆಸರು ಅಬ್ದುಲ್ ಮಲೆಕ್ ಮಿಯಾಜಿ. ತೌಹೀದ್ ಅಕಾಡೆಮಿ ಮತ್ತು ಇಸ್ಲಾಮಿಕ್ ಸೆಂಟರ್ ನಿರ್ವಹಿಸುತ್ತಿರುವ ಜಾಮಿಯಾ ದಾರುತೌಹೀದ್‌ನ ಸಹಾಯಕ ಪ್ರಾಂಶುಪಾಲರಾಗಿದ್ದಾರೆ. ಅವರೊಂದಿಗೆ ಸೊಹಾನುರ್ಹ್ಮಾನ್ ಮಾತನಾಡಿದ್ದು,” ವಿಡಿಯೋದಲ್ಲಿ ಬಾಲಕನ ಕತ್ತಿನಿಂದ ತಾಯತ ಕತ್ತರಿಸಿದ್ದು ನಾನೆ. ನೊವಾಖಾಲಿಯಲ್ಲಿ ಪರಿಹಾರ ಸಾಮಾಗ್ರಿಗಳನ್ನು ವಿತರಿಸುತ್ತಿದ್ದಾಗ ಆ ವಿಡಿಯೋ ಚಿತ್ರೀಕರಿಸಲಾಗಿದೆ. ವಿಡಿಯೋದಲ್ಲಿರುವ ಮಗುವಿನ ಹೆಸರು ಸೊಹೈಲ್ ಎಂದಾಗಿದ್ದು, ಆತ ಸ್ಥಳೀಯ ಮದ್ರಾಸದಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದಾನೆ. ಆತನ ತಂದೆಯ ಹೆಸರು ಅಬ್ದುಲ್ ಹಕ್, ಮತ್ತು ತಾಯಿ ರಜಿಯಾ ಖಾತುನ್ ಎಂದಾಗಿದೆ. ಇಬ್ಬರೂ ನೌಖಾಲಿಯ ಚಾರ್ ಅಲಗಿ ಗ್ರಾಮದವರು” ಎಂದು ವಿವರಿಸಿದ್ದಾರೆ.
ಒಟ್ಟಿನಲ್ಲಿ, ಬಾಂಗ್ಲಾದೇಶದ ನೊವಾಖಾಲಿಯಲ್ಲಿ ಪ್ರವಾಹ ಬಂದಾಗ, ಅಲ್ಲಿನ ಸ್ಥಳೀಯ ಸಲಫಿ ಸಂಸ್ಥೆ ತೌಹೀದ್ ಅಕಾಡೆಮಿ ಜನರಿಗೆ ಪರಿಹಾರ ಸಾಮಾಗ್ರಿಗಳನ್ನು ವಿತರಿಸಿತ್ತು. ಈ ವೇಳೆ ಪರಿಹಾರ ಸ್ವೀಕರಿಸಲು ಬಂದ ಸೊಹೈಲ್ ಎಂಬ ಬಾಲಕನ ಕತ್ತಿನಲ್ಲಿ ತಾಯತ ಕಂಡು, ಅದನ್ನು ಮೌಲ್ವಿ ಕತ್ತರಿಸಿ ತೆಗೆದಿದ್ದಾರೆ. ಆ ವಿಡಿಯೋವನ್ನು ಹಿಂದೂ ಬಾಲಕನ ತುಳಸಿ ಮಾಲೆಯನ್ನು ಮುಸ್ಲಿಮರು ಕತ್ತರಿಸಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ : FACT CHECK : ತಂದೆ ಇಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ 24 ಸಾವಿರ ರೂ. ಸ್ಕಾಲರ್‌ಶಿಪ್…ವೈರಲ್ ಸಂದೇಶದ ಸತ್ಯಾಸತ್ಯತೆ ಏನು?


