ಜಮ್ಮು ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಈಗಾಗಲೇ ಎರಡು ಹಂತಗಳ ಮತದಾನ ಮುಕ್ತಾಯಗೊಂಡಿದ್ದು, ಮೂರನೇ ಹಂತದ ಮತದಾನ ನಾಳೆ (ಅಕ್ಟೋಬರ್ 1) ನಡೆಯಲಿದೆ.
ಈ ನಡುವೆ ಲೋಕಸಭೆಯ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರಿಗೆ ಕಾಶ್ಮೀರಿ ಪಂಡಿತ ಸಮುದಾಯದ ಜನರು ಮುತ್ತಿಗೆ ಹಾಕಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವೈರಲ್ ವಿಡಿಯೋದಲ್ಲಿ ವಿಮಾನದೊಳಗೆ ಇತರ ನಾಯಕರೊಂದಿಗೆ ಕುಳಿತಿರುವ ರಾಹುಲ್ ಗಾಂಧಿಯವರನ್ನು ಒಂದಷ್ಟು ಜನರು, ವಿಶೇಷವಾಗಿ ಮಹಿಳೆಯರು ಸುತ್ತುವರಿದಿರುವ ಮತ್ತು ಒಬ್ಬರು ಮಹಿಳೆ “ಪುಟ್ಟ ಮಕ್ಕಳು ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ. ನನ್ನ ಸಹೋದರ ಹೃದಯ ರೋಗಿ, ಅವನು ತನ್ನ ಮಕ್ಕಳನ್ನು ಹುಡುಕಲು ಹೋದವ ವಾಪಸ್ ಬಂದಿಲ್ಲ. ಅವನ ಕುಟುಂಬ ಸದಸ್ಯರಿಗೆ ಕಳೆದ 10 ದಿನಗಳಿಂದ ಅವನು ಎಲ್ಲಿದ್ದಾನೆಂದು ತಿಳಿದಿಲ್ಲ. ನಾವು ತೊಂದರೆಯಲ್ಲಿದ್ದೇವೆ” ಎಂದು ಅಳುತ್ತಾ ಹೇಳುವುದು ನೋಡಬಹುದು.
ಸೆಪ್ಟೆಂಬರ್ 26ರಂದು ಎಕ್ಸ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿರುವ ‘ವಿಭೋರ್ ಆನಂದ್’ ಎಂಬ ಎಕ್ಸ್ ಬಳಕೆದಾರ “ಮಾರಾಟಗೊಂಡ ಭಾರತದ ಮಾಧ್ಯಮಗಳು ಈ ವಿಡಿಯೋ ತೋರಿಸುವುದಿಲ್ಲ. ಭಾರತ ವಿರೋಧಿ ನಿಲುವು ಮತ್ತು ಕಾಶ್ಮೀರಿ ಹಿಂದೂಗಳ ಸಮಸ್ಯೆಗಳ ಬಗ್ಗೆ ಗಮನ ಹರಿಸದ ರಾಹುಲ್ ಗಾಂಧಿಯನ್ನು ಕಾಶ್ಮೀರಿ ಪಂಡಿತ ಮಹಿಳೆಯೊಬ್ಬರು ವಿಮಾನದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದು ದೊಡ್ಡ ಮಟ್ಟದಲ್ಲಿ ವೈರಲ್ ಆಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ರಾಹುಲ್ ಗಾಂಧಿಗೆ ಟ್ಯಾಗ್ ಮಾಡಿ. 25 ಸಾವಿರದ ಗುರಿ” ಎಂದು ಬರೆದುಕೊಂಡಿದ್ದರು.

ಇನ್ನೂ ಕೆಲ ಎಕ್ಸ್ , ಫೇಸ್‌ಬುಕ್ ಬಳಕೆದಾರರು ಇದೇ ಪ್ರತಿಪಾದನೆಯೊಂದಿಗೆ ವಿಡಿಯೋ ಹಂಚಿಕೊಂಡಿದ್ದರು.
ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋ ಕುರಿತು ನಾವು ಸತ್ಯಾಸತ್ಯತೆ ಪರಿಶೀಲನೆ ನಡೆಸಿದ್ದೇವೆ. ಅಸಲಿಗೆ ಈ ವಿಡಿಯೋ 24 ಆಗಸ್ಟ್ 2019ರದ್ದು. ಆಗ ರಾಹುಲ್ ಗಾಂಧಿ ಮತ್ತು ಇತರ ನಾಯಕರು ಶ್ರೀನಗರಕ್ಕೆ ತೆರಳಲು ಮುಂದಾಗಿದ್ದರು. ಆದರೆ, ಅವರನ್ನು ಏರ್‌ಪೋರ್ಟ್‌ನಲ್ಲೇ ತಡೆಯಲಾಗಿತ್ತು.
ಆಗ, ಮಹಿಳೆಯೊಬ್ಬರು ವಿಮಾನದಲ್ಲೇ ರಾಹುಲ್ ಗಾಂಧಿಯನ್ನು ಭೇಟಿಯಾಗಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಆರ್ಟಿಕಲ್ 370ರ ರದ್ದತಿಯಿಂದ ಕಾಶ್ಮೀರ ಜನತೆ ಲಾಕ್‌ಡೌನ್‌ನಲ್ಲಿದ್ದೇವೆ ಎಂದು ಪರಿಸ್ಥಿತಿ ವಿವರಿಸಿದ್ದರು. ಆ ಕುರಿತು ವಿಡಿಯೋ ಆಗಿದೆ ವೈರಲ್ ಆಗಿರುವುದು.
ವೈರಲ್ ವಿಡಿಯೋ ಕುರಿತು ನಾವು ಮಾಹಿತಿ ಹುಡುಕಿದಾಗ ಅದಕ್ಕೆ ಸಂಬಂಧಿಸಿದ ಅನೇಕ ವರದಿಗಳು ಲಭ್ಯವಾಗಿದೆ.
ಆಗಸ್ಟ್ 25, 2019ರಂದು ಸ್ಕ್ರೋಲ್ ಪ್ರಕಟಿಸಿದ ವರದಿಯ ಪ್ರಕಾರ, ಶ್ರೀನಗರ ಪ್ರವೇಶಕ್ಕೆ ಅವಕಾಶ ನಿರಾಕರಿಸಿದ ನಂತರ ರಾಹುಲ್ ಗಾಂಧಿ ವಿಮಾನ ನಿಲ್ದಾಣದಿಂದಲೇ ಹಿಂದಿರುಗಲು ಮುಂದಾಗಿದ್ದರು. ಆಗ ಮಹಿಳೆ ಬಂದು ಅವರ ಬಳಿ ಅಳಲು ತೋಡಿಕೊಂಡಿದ್ದಾರೆ.

ಇದೇ ಘಟನೆಯ ಕುರಿತು ಇಂಡಿಯನ್ ಎಕ್ಸ್‌ಪ್ರೆಸ್ ಕೂಡ ವರದಿ ಪ್ರಕಟಿಸಿತ್ತು. ಅದರಲ್ಲಿ ರಾಹುಲ್ ಗಾಂಧಿ, ಇತ್ತೀಚೆಗೆ ನಿಧನರಾದ ಸೀತಾರಾಂ ಯೆಚೂರಿ ಮತ್ತು ಗುಲಾಂ ನಬಿ ಆಝಾದ್ ಸೇರಿದಂತೆ ಆಗಿನ ಪ್ರತಿಪಕ್ಷ ನಾಯಕರು 2019ರಲ್ಲಿ ಶ್ರೀನಗರಕ್ಕೆ ಭೇಟಿ ನೀಡಲು ತೆರಳಿದ್ದರು. ಆರ್ಟಿಕಲ್ 370ಅನ್ನು ರದ್ದುಪಡಿಸಿ ಸಮಯವಾದ್ದರಿಂದ ಪ್ರತಿಪಕ್ಷ ನಾಯಕರ ಭೇಟಿಗೆ ಅವಕಾಶ ನಿರಕಾರಿಸಲಾಗಿತ್ತು. ಆದ್ದರಿಂದ ವಿಮಾನದಿಂದ ಇಳಿಯದೆ ಅವರು ವಾಪಸ್ ಬಂದಿದ್ದರು.

ಘಟನೆಯ ವಿಡಿಯೋವನ್ನು ಆಗಸ್ಟ್ 25, 2019ರಂದು ಎಕ್ಸ್‌ನಲ್ಲಿ ರಿಟ್ವೀಟ್ ಮಾಡಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ” ಇದು ಎಷ್ಟು ದಿನ ಹೀಗೆ ಮುಂದುವರಿಯಲಿದೆ? ರಾಷ್ಟ್ರೀಯತೆ ಹೆಸರಿನಲ್ಲಿ ಧ್ವನಿ ಅಡಗಿಸಿದ ಲಕ್ಷಾಂತರ ಜನರಲ್ಲಿ ಇವರು ಒಬ್ಬರು. ಪ್ರತಿಪಕ್ಷಗಳು ವಿಷಯವನ್ನು ರಾಜಕೀಯ ಮಾಡುತ್ತಿದೆ ಎನ್ನುವವರಿಗೆ ಇದು ಅರ್ಪಣೆ” ಎಂದು ಬರೆದುಕೊಂಡಿದ್ದರು.
How long is this going to continue?This is one out of millions of people who are being silenced and crushed in the name of “Nationalism”.
For those who accuse the opposition of ‘politicising’ this issue: https://t.co/IMLmnTtbLb
— Priyanka Gandhi Vadra (@priyankagandhi) August 25, 2019
ಒಟ್ಟಿನಲ್ಲಿ 2019ರಲ್ಲಿ ಆರ್ಟಿಕಲ್ 370 ರದ್ದು ಮಾಡಿದ್ದ ಸಂದರ್ಭ ರಾಹುಲ್ ಗಾಂಧಿ ಸೇರಿದಂತೆ ಪ್ರತಿಪಕ್ಷ ನಾಯಕರು ಶ್ರೀನಗರ ಭೇಟಿಗೆ ತೆರಳಿದ್ದರು. ಆಗ ಅವರನ್ನು ವಿಮಾನ ನಿಲ್ದಾಣದಲ್ಲೇ ತಡೆಯಲಾಗಿತ್ತು. ಆಗ ಅಲ್ಲಿಗೆ ಆಗಮಿಸಿದ್ದ ಕೆಲ ಜನರ ಪೈಕಿ ಮಹಿಳೆಯೊಬ್ಬರು ತಮ್ಮ ಸಮಸ್ಯೆ ತೋಡಿಕೊಂಡಿದ್ದರು. ಆ ವಿಡಿಯೋವನ್ನು ರಾಹುಲ್ ಗಾಂಧಿಗೆ ಕಾಶ್ಮೀರಿ ಪಂಡಿತರು ಮುತ್ತಿಗೆ ಹಾಕಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ : FACT CHECK : ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ‘ವೀಟೋ ಅಧಿಕಾರ’ ದೊರೆತಿದೆ ಎಂಬುವುದು ಸುಳ್ಳು


