ಹಿರಿಯ ವಯಸ್ಸಿನ ವ್ಯಕ್ತಿಯೊಬ್ಬರು ತನ್ನ ಕತ್ತಿಗೆ ಮತ್ತೊಬ್ಬ ವ್ಯಕ್ತಿಯ ಫೋಟೋ ನೇತು ಹಾಕಿಕೊಂಡು ರಸ್ತೆಯಲ್ಲಿ ಕುಳಿತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ವಿಡಿಯೋದಲ್ಲಿ ಹಿರಿಯ ವ್ಯಕ್ತಿಯನ್ನು ಸಮವಸ್ತ್ರ ತೊಟ್ಟ ಸೇನಾ ಸಿಬ್ಬಂದಿ ಸುತ್ತುವರಿದಿರುವುದು ಮತ್ತು ಅವರು ಬೆಂಗಾಲಿ ಭಾಷೆಯಲ್ಲಿ “ನಾನು ಸಾಯುತ್ತೇನೆ, ಆದರೆ, ನನಗೆ ನ್ಯಾಯಬೇಕು. ನನ್ನ ಮಗುವಿಗೆ ನ್ಯಾಯಬೇಕು. ನನ್ನ ಮಗು ಎಲ್ಲಿ? ನನಗೆ ನ್ಯಾಯಬೇಕು. ನಾನು ಬಾಗಿಲಿನಿಂದ ಬಾಗಿಲಿಗೆ, ಕಚೇರಿಯಿಂದ ಕಚೇರಿಗೆ ಅಲೆದಾಡಿದ್ದೇನೆ. ಆದರೆ, ಒಬ್ಬರೂ ನನ್ನ ಅಳಲು ಕೇಳಿಲ್ಲ. ಇವತ್ತು ಬೆಳಿಗ್ಗಿಯೇ ನಾನಿಲ್ಲಿಗೆ ಬಂದಿದ್ದೇನೆ” ಎಂದು ಹೇಳುತ್ತಿರುವ ದೃಶ್ಯವಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಹಲವರು, ವಿಡಿಯೋದಲ್ಲಿರುವ ವ್ಯಕ್ತಿ ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂ, ಅವರ ಮಗ ನಾಪತ್ತೆಯಾಗಿದ್ದಾರೆ” ಎಂದು ಪ್ರತಿಪಾದಿಸಿದ್ದಾರೆ.
ವೈರಲ್ ವಿಡಿಯೋವನ್ನು ಮೊದಲು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು ಸುದ್ದಿ ಸಂಸ್ಥೆ ಎಎನ್‌ಐ. ವಿಡಿಯೋ ಜೊತೆಗೆ “ಬಾಂಗ್ಲಾದೇಶ : ಅಲ್ಪಸಂಖ್ಯಾತ ಹಿಂದೂ ಸಮುದಾಯದ ಸದಸ್ಯರೊಬ್ಬರು ತಮ್ಮ ಕಾಣೆಯಾದ ಮಗನ ಪೋಸ್ಟರ್‌ನೊಂದಿಗೆ ಪ್ರತಿಭಟಿಸುತ್ತಿದ್ದಾರೆ. “ನಾನು ನನ್ನ ಜೀವವನ್ನು ನೀಡುತ್ತೇನೆ, ಆದರೆ ನನ್ನ ಮಗುವಿಗೆ ನ್ಯಾಯಬೇಕು. ನನ್ನ ಮಗು ಎಲ್ಲಿ? ನನ್ನ ಮಗುವಿನ ಬಗ್ಗೆ ವಿಚಾರಿಸಲು ನಾನು ಬಾಗಿಲಿನಿಂದ ಬಾಗಿಲಿಗೆ ಹೋಗುತ್ತಿದ್ದೇನೆ. ಆದರೆ, ಯಾರೂ ನನ್ನ ಮಾತನ್ನು ಕೇಳುತ್ತಿಲ್ಲ” ಎಂದು ಎಎನ್‌ಐ ಬರೆದುಕೊಂಡಿತ್ತು.

ಎಎನ್‌ಐ ಪೋಸ್ಟ್ ಮಾಡಿದ್ದ ವಿಡಿಯೋ ಮತ್ತು ಅದರಲ್ಲಿರುವ ಮಾಹಿತಿಯನ್ನು ಅನೇಕ ಸುದ್ದಿವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಬಳಸಿಕೊಂಡಿದ್ದರು.
ಜಾಗರಣ್, ಹಿಂದೂಸ್ತಾನ್, ಎನ್‌ಡಿಟಿವಿ ಇಂಡಿಯಾ, ಮಿರರ್ ನೌ ಮುಂತಾದ ಸುದ್ದಿವಾಹಿನಿಗಳು ಹಿಂದೂ ವ್ಯಕ್ತಿಯೊಬ್ಬ ತನ್ನ ಮಗನಿಗಾಗಿ ಹತಾಶರಾಗಿ ಹುಡುಕುತ್ತಿರುವ ಬಗ್ಗೆ ವರದಿ ಮಾಡಿತ್ತು. ಹೆಚ್ಚಿನ ವರದಿಗಳು ಎಎನ್‌ಐ ಎಕ್ಸ್‌ನಲ್ಲಿ ಮಾಡಿದ್ದ ಪೋಸ್ಟ್ ಆಧರಿಸಿತ್ತು.
ಸುಮಾರು 3 ಲಕ್ಷ ಫಾಲೋವರ್ಸ್ ಇರುವ ಎಕ್ಸ್ ಬಳಕೆದಾರ ಬಾಲ (@erbmjha)ಆಗಸ್ಟ್ 13ರಂದು ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡು ” “ನಾನು ನನ್ನ ಪ್ರಾಣ ಕೊಡುತ್ತೇನೆ. ಆದರೆ ನನ್ನ ಮಗುವಿಗೆ ನ್ಯಾಯ ಬೇಕು. ನನ್ನ ಮಗು ಎಲ್ಲಿದೆ? ನನ್ನ ಮಗುವಿನ ಬಗ್ಗೆ ನಾನು ಬಾಗಿಲಿನಿಂದ ಬಾಗಿಲಿಗೆ ಹೋಗಿ ವಿಚಾರಿಸುತ್ತಿದ್ದೇನೆ. ಆದರೆ ಯಾರೂ ನನ್ನ ಮಾತನ್ನು ಕೇಳುತ್ತಿಲ್ಲ”
“ಅಸಹಾಯಕ ಹಿಂದೂ ತಂದೆಗೆ ಬಾಂಗ್ಲಾದೇಶದಲ್ಲಿ ಕಾಣೆಯಾದ ತನ್ನ ಮಗನಿಗೆ ನ್ಯಾಯಕ್ಕಾಗಿ ರಸ್ತೆಯಲ್ಲಿ ಮನವಿ ಮಾಡುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ” ಎಂದು ಬರೆದುಕೊಂಡಿದ್ದಾರೆ.

ಬಲಪಂಥೀಯ ಪ್ರಭಾವಿ ಎಕ್ಸ್ ಬಳಕೆದಾರರಾದ @MrSinha_, @VIKRAMPRATAPSIN,@RealBababanaras ಸೇರಿದಂತೆ ಹಲವರು ವೈರಲ್ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಬಳಿಕ ಅದನ್ನು ಡಿಲಿಟ್ ಮಾಡಿದ್ದಾರೆ.
ಫ್ಯಾಕ್ಟ್‌ಚೆಕ್ : ಅಸಲಿಗೆ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿರುವ ವಿಡಿಯೋದಲ್ಲಿರುವ ವ್ಯಕ್ತಿ ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂ ಸಮುದಾಯವರಲ್ಲ. ಅವರು ಬಹುಸಂಖ್ಯಾತ ಮುಸ್ಲಿಂ ಸಮುದಾಯದವರು.
ಎಎಎನ್‌ಐ ಸುದ್ದಿ ಸಂಸ್ಥೆ ತಪ್ಪಾಗಿ ರಸ್ತೆಯಲ್ಲಿ ಕುಳಿತವರು ಹಿಂದೂ ವ್ಯಕ್ತಿ ಎಂದು ಸುದ್ದಿ ಹಬ್ಬಿಸಿತ್ತು. ಬಳಿಕ ಅದು ತಪ್ಪಾಗಿರುವುದನ್ನು ಒಪ್ಪಿಕೊಂಡಿದೆ.
ಮೊದಲು ತಪ್ಪಾಗಿ ಹಾಕಿದ್ದ ಪೋಸ್ಟ್‌ನ ಸ್ಕ್ರೀನ್ ಶಾಟ್ ಹಂಚಿಕೊಂಡ ಎಎನ್‌ಐ “ತಿದ್ದುಪಡಿ: ಈ ವ್ಯಕ್ತಿಯು ಅಲ್ಪಸಂಖ್ಯಾತ ಹಿಂದೂ ಸಮುದಾಯದವರಲ್ಲದ ಕಾರಣ ಕೆಳಗಿನ ಟ್ವೀಟ್ ಅನ್ನು ಅಳಿಸಲಾಗಿದೆ. ತಪ್ಪಿಗೆ ವಿಷಾದಿಸುತ್ತೇವೆ” ಎಂದು ಬರೆದುಕೊಂಡಿದೆ.

ಹಾಗಾದರೆ, ಆ ವಿಡಿಯೋ ಯಾವ ಘಟನೆಗೆ ಸಂಬಂಧಿಸಿದ್ದು ಎಂದು ನಾವು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸ್ಕ್ರೀಟ್ ಶಾಟ್ ಹಾಕಿ ಸರ್ಚ್ ಮಾಡಿದ್ದೇವೆ. ಈ ವೇಳೆ ಬಾಂಗ್ಲಾದೇಶದ ಸುದ್ದಿವಾಹಿನಿ ‘Barta24’ತನ್ನ ಫೇಸ್‌ಬುಕ್ ಖಾತೆಯಲ್ಲಿ ಮಾಡಿರುವ ಲೈವ್ ವಿಡಿಯೋ ಒಂದು ಲಭ್ಯವಾಗಿದೆ.
ಆ ವಿಡಿಯೋಗೆ ಬೆಂಗಾಲಿ ಭಾಷೆಯಲ್ಲಿ “ನಮ್ಮ ಪ್ರೀತಿ ಪಾತ್ರರನ್ನು ಹಿಂತಿರುಗಿಸಿ, ರಹಸ್ಯ ಬಂಧನ ಕೇಂದ್ರಗಳನ್ನು ಒಡೆಯಿರಿ’- ಮಾನವ ಸರಪಳಿ ಪ್ರತಿಭಟನೆಯ ಸಂದರ್ಭದಲ್ಲಿ ಕಣ್ಮರೆಯಾದವರ ಕುಟುಂಬ ಸದಸ್ಯರು ರಸ್ತೆ ತಡೆ ನಡೆಸಿದರು” ಎಂದು ಶೀರ್ಷಿಕೆ ಕೊಡಲಾಗಿದೆ.
ವೈರಲ್ ವಿಡಿಯೋದಲ್ಲಿ ಕಂಡು ಬರುವ ಹಿರಿಯ ವ್ಯಕ್ತಿ ಈ ಫೇಸ್‌ಬುಕ್ ಲೈವ್‌ನಲ್ಲಿ ಬೀದಿಯಲ್ಲಿ ಕುಳಿತು ‘ನಮ್ಮ ಪ್ರೀತಿ ಪಾತ್ರರನ್ನು ಹಿಂತಿರುಗಿ’ ಮತ್ತು ‘ಅವರನ್ನು ಮುಕ್ತಗೊಳಿಸಿ’ ಎಂಬ ಘೋಷಣೆಗಳನ್ನು ಕೂಗುತ್ತಿರುವುದನ್ನು ಕಾಣಬಹುದು. ಅಲ್ಲದೆ, ಅವರು ಟೋಪಿ ಧರಿಸಿರುವುದೂ ವಿಡಿಯೋದಲ್ಲಿ ಇದೆ.

ಲೈವ್ ವಿಡಿಯೋದ 1:45 ನಿಮಿಷದಲ್ಲಿ ವರದಿಗಾರೊಬ್ಬರು ಹಿರಿಯ ವ್ಯಕ್ತಿಯನ್ನು ಕೇಳುತ್ತಾರೆ ” ನೀವು ಫೋಟೋ ಹಿಡಿದುಕೊಂಡಿರುವ ವ್ಯಕ್ತಿ ಯಾರು ಮತ್ತು ಅವರು ಹೇಗೆ ಕಾಣೆಯಾದರು?
ಅದಕ್ಕೆ ಉತ್ತರಿಸಿದ ಹಿರಿಯ ವ್ಯಕ್ತಿ “ಇದು ನನ್ನ ಹಿರಿಯ ಮಗ ಮೊಹಮ್ಮದ್ ಸನ್ನಿ ಹವ್ಲಾದರ್ ಮತ್ತು ನಾನು ಬಾಬುಲ್ ಹವ್ಲಾದರ್. ವೃತ್ತಿಯಲ್ಲಿ ದಿನಗೂಲಿ ಕಾರ್ಮಿಕನಾಗಿದ್ದ ಮತ್ತು ಬಿಎನ್‌ಪಿ (ಶೇಖ್ ಹಸೀನಾ ಅವರ ಅವಾಮಿ ಲೀಗ್ ಅಧಿಕಾರದಲ್ಲಿದ್ದಾಗ ಬಾಂಗ್ಲಾದೇಶದ ವಿರೋಧ ಪಕ್ಷ) ಬೆಂಬಲಿಗನಾಗಿದ್ದ ತನ್ನ ಹಿರಿಯ ಮಗ ಸನ್ನಿಯನ್ನು ಜನವರಿ 10, 2013 ರಂದು ಕರೆದುಕೊಂಡು ಹೋಗಿದ್ದಾರೆ. ಅಂದಿನಿಂದ ಆತ ಕಾಣೆಯಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಲು ವರ್ಷಗಳಿಂದ ಓಡಾಡುತ್ತಿದ್ದೇನೆ. ನನಗೆ ಬೆದರಿಕೆಗಳು ಬರುತ್ತಿವೆ. ಇದು ಹೀಗೇ ಮುಂದುವರೆದರೆ, ನನ್ನ ಮತ್ತು ನನ್ನ ಕಿರಿಯ ಮಗ ಇಬ್ಬರನ್ನೂ ಹಿರಿಯ ಮಗನ ಶೈಲಿಯಲ್ಲಿ ಕರೆದೊಯ್ಯುತ್ತಾರೆ” ಎಂದು ಹೇಳುತ್ತಾರೆ.
ವಿಡಿಯೋದಲ್ಲಿ, ವರದಿಗಾರ ಪ್ರತಿಭಟನೆಯಲ್ಲಿ ಭಾಗವಹಿಸಿದ ಇತರರೊಂದಿಗೆ ಮಾತನಾಡುವುದನ್ನು ಕಾಣಬಹುದು, “ಅವರು ಕೂಡ ಕಾಣೆಯಾದ ಕುಟುಂಬ ಸದಸ್ಯರ ಬಗ್ಗೆ ಇದೇ ರೀತಿಯ ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ”
ಆಗಸ್ಟ್ 14 ರಂದು ಬಾಂಗ್ಲಾದ ಸುದ್ದಿ ಸಂಸ್ಥೆ ಪ್ರೋಥೋಮ್ ಅಲೋ ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ. ವರದಿಯಲ್ಲಿ “ಆಗಸ್ಟ್ 13 ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಹಲವಾರು ನಾಪತ್ತೆಯಾದ ವ್ಯಕ್ತಿಗಳ ಕುಟುಂಬ ಸದಸ್ಯರು ತಮ್ಮ ಕಾಣೆಯಾದ ಸಂಬಂಧಿಕರ ಚಿತ್ರಗಳು ಮತ್ತು ಬ್ಯಾನರ್‌ಗಳೊಂದಿಗೆ ಹರೇ ರಸ್ತೆಯಲ್ಲಿರುವ ಜಮುನಾ ರಾಜ್ಯ ಅತಿಥಿ ಗೃಹದ ಮುಂದೆ ಜಮಾಯಿಸಿದರು. ಅವಾಮಿ ಲೀಗ್ ಪಕ್ಷ ಅಧಿಕಾರದಲ್ಲಿದ್ದಾಗ ನಾಪತ್ತೆಯಾಗಿರುವ ತಮ್ಮ ಸಂಬಂಧಿಕರನ್ನು ಹಿಂದಿರುಗಿಸುವಂತೆ ಒತ್ತಾಯಿಸಿದರು. ಇನ್ನೂ ‘ಐನಾಘರ್’ (ರಹಸ್ಯ ಬಂಧನ ಕೇಂದ್ರಗಳು) ದಲ್ಲಿ ಬಂಧಿತರಾಗಿರುವವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಅವರು ಒತ್ತಾಯಿಸಿದರು” ಎಂದು ಹೇಳಲಾಗಿದೆ.

ಒಟ್ಟಿನಲ್ಲಿ ‘ರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದ ಹಿರಿಯ ವ್ಯಕ್ತಿ ಬಾಂಗ್ಲಾದೇಶದವರೇ, ಆದರೆ, ಅವರು ಅಲ್ಪಸಂಖ್ಯಾತ ಹಿಂದೂ ಸಮುದಾಯದವರಲ್ಲ ಎಂಬುವುದು ನಮ್ಮ ಪರಿಶೀಲನೆಯಲ್ಲಿ ಗೊತ್ತಾಗಿದೆ.
ವೈರಲ್ ವಿಡಿಯೋ ಯಾವುದೇ ಕೋಮು ಸಂಘರ್ಷಕ್ಕೆ ಅಥವಾ ಅಲ್ಪಸಂಖ್ಯಾತರ ಮೇಲಿನ ದಾಳಿಗೆ ಸಂಬಂಧಿಸಿದಲ್ಲ. ಬಾಂಗ್ಲಾದಲ್ಲಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಅಧಿಕಾರದಲ್ಲಿದ್ದಾಗ, ಸರ್ಕಾರ ವಿರೋಧ ಪಕ್ಷದ ಕಾರ್ಯಕರ್ತರು ಅಥವಾ ವಿರೋಧಿಗಳನ್ನು ಅಪಹರಿಸಿ ರಹಸ್ಯ ಬಂಧನ ಕೇಂದ್ರಗಳಲ್ಲಿ ಇಟ್ಟಿದೆ ಎಂಬ ಆರೋಪಗಳು ಕೇಳಿ ಬಂದಿತ್ತು.
ಹೀಗೆ, ಆಪಾದಿತ ಅಪಹರಣಕ್ಕೆ ಒಳಗಾಗಿರುವ ಅಥವಾ ನಾಪತ್ತೆಯಾಗಿರುವ ತನ್ನ ಮಗನನ್ನು ಹುಡುಕಿಕೊಡುವಂತೆ ಹಿರಿಯ ವ್ಯಕ್ತಿ ರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದ್ದಾರೆ. ಇವರ ಮಗನಂತೆ ನಾಪತ್ತೆಯಾಗಿರುವ ಇನ್ನೂ ಅನೇಕ ವ್ಯಕ್ತಿಗಳ ಕುಟುಂಬಸ್ಥರು ಕೂಡ ಅದೇ ರೀತಿ ರಸ್ತೆಯಲ್ಲಿ ಕುಳಿತು ನ್ಯಾಯಕ್ಕಾಗಿ ಪ್ರತಿಭಟಿಸಿದ್ದಾರೆ.
ಎಎನ್‌ಐ ಸುದ್ದಿ ಸಂಸ್ಥೆ ತಪ್ಪು ಮಾಹಿತಿಯೊಂದಿಗೆ ವಿಡಿಯೋ ಪೋಸ್ಟ್ ಮಾಡಿತ್ತು. ಬಳಿಕ ಅದನ್ನು ಅಳಿಸಿದೆ. ಆದರೆ, ಅಷ್ಟೊತ್ತಿಗೆ ಎಎನ್‌ಐ ಪೋಸ್ಟ್ ಆಧರಿಸಿ ಅನೇಕ ಮಾಧ್ಯಮಗಳು ಸುದ್ದಿ ಮಾಡಿ ಆಗಿದೆ. ಸುಳ್ಳು ಸುದ್ದಿ ಎಲ್ಲೆಡೆ ತಲುಪಿದೆ.
ಇದನ್ನೂ ಓದಿ : FACT CHECK : ಮಾಲ್ಡೀವ್ಸ್ ತನ್ನ 28 ದ್ವೀಪಗಳನ್ನು ಭಾರತಕ್ಕೆ ಬಿಟ್ಟು ಕೊಟ್ಟಿರುವುದು ನಿಜಾನಾ?


