“ನನ್ನನ್ನು ರಾಜ್ಯಸಭೆಗೆ ಕಳುಹಿಸಿದ್ದು ಸೋನಿಯಾ ಗಾಂಧಿ, ಮತ್ಯಾರು ಅಲ್ಲ” ಎಂದು ಹೇಳುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತನ್ನನ್ನು ಹಲವಾರು ಬಾರಿ ಆಯ್ಕೆ ಮಾಡಿ ಸಂಸತ್‌ಗೆ ಕಳುಹಿಸಿರುವ ಕಲಬುರಗಿಯ ಜನತೆಗೆ ಅವಮಾನ ಮಾಡಿದ್ದಾರೆ ಎಂದು ಬಲಪಂಥೀಯ ಯೂಟ್ಯೂಬ್ ಚಾನೆಲ್ ಟಿವಿ ವಿಕ್ರಮ ವರದಿ ಮಾಡಿದೆ.
ಜುಲೈ 3, 2024ರಂದು “ಸೋನಿಯಾ ಗಾಂಧಿ ಕಾಲಿಗೆ ಅಡ್ಡಡ್ಡ ಬಿದ್ರು ಖರ್ಗೆ! ಛೀ ಎಂಥಾ ಗುಲಾಮಗಿರಿ ಇದು!” ಎಂಬ ಶೀರ್ಷಿಕೆಯಲ್ಲಿ ಯೂಟ್ಯೂಬ್‌ನಲ್ಲಿ ಟಿವಿ ವಿಕ್ರಮ ವಿಡಿಯೋ ಅಪ್ಲೋಡ್ ಮಾಡಿದೆ. ವಿಡಿಯೋದಲ್ಲಿ ‘ಮಿರ್ಚಿ ಮಂಡಕ್ಕಿ’ ಎಂಬ ವಿಶೇಷ ಕಾರ್ಯಕ್ರಮದ ನಿರೂಪಕಿ ಶ್ವೇತಾ ಅವರು ಈ ಕೆಳಗಿನಂತೆ ಹೇಳಿದ್ದಾರೆ.
“ನನ್ನನ್ನು ರಾಜ್ಯಸಭೆಗೆ ಕಳುಹಿಸಿದ್ದು ಸೋನಿಯಾ ಗಾಂಧಿಯವರು, ಮತ್ಯಾರು ಅಲ್ಲ ಎಂದು ಹೇಳುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತನ್ನನ್ನು ಹಲವಾರು ಬಾರಿ ಆಯ್ಕೆ ಮಾಡಿ ಸಂಸತ್‌ಗೆ ಕಳುಹಿಸಿರುವ ಕಲಬುರಗಿಯ ಜನರನ್ನು ಮರೆತಿದ್ದಾರೆ.”

“ಖರ್ಗೆಯವರೇ ಕಲಬುರಗಿ ಜನರು ನಿಮಗೆ ಮತ ಹಾಕದಿದ್ದಿದ್ರೆ, ಆಶಿರ್ವಾದ ಮಾಡಿಲ್ಲದ್ದಿದ್ರೆ, ಸತತವಾಗಿ ಗೆಲ್ಲಿಸದಿದ್ದಿದ್ರೆ ಸೋನಿಯಾ ಗಾಂಧಿ ಬಿಡಿ, ಅವರ ಮನೆ ನಾಯಿ ಕೂಡ ನಿಮ್ಮನ್ನು ಮೂಸುತ್ತಿರಲಿಲ್ಲ. ಊರ ಮಂದಿಗೆ ಅವಮಾನ ಮಾಡಿ ಬಿಟ್ರಲ್ಲ ನೀವು. ಅದಕ್ಕೆ ಅನ್ಸುತ್ತೆ ನೀವು ಹೋದ ಸಲ ಎಲ್ಲಿ ಸೋತಿದ್ರೋ, ಅಲ್ಲಿ ಈ ಬಾರಿ ಎಲೆಕ್ಷನ್ ಸಹವಾಸಕ್ಕೆ ಬಂದಿಲ್ಲ. ಆದ್ರೂ ಕುಟುಂಬ ರಾಜಕಾರಣ ಬಿಡ್ಲಿಲ್ಲ ನೋಡ್ರಿ. ಅಳಿಯನಿಗೆ ಟಿಕೆಟ್ ಕೊಟ್ರಲ್ಲ. ಈ ಏರಿದ ಏಣಿ ಒದಿಯುವಂತಹ ಕೆಲಸ ಮಾಡಬಾರದು. ಮುಂದೆ ಒಂದು ದಿನ ಅದೇ ಅಪಾಯ ತರುತ್ತದೆ.”
ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯ ಸಭೆಯಲ್ಲಿ ಮಾತನಾಡುವಾಗ “ನನ್ನನ್ನು ಈ ಸ್ಥಾನಕ್ಕೆ ತಂದವರು ಇಲ್ಲಿ ಕುಳಿತಿದ್ದಾರೆ, ಶ್ರೀಮತಿ ಸೋನಿಯಾ ಗಾಂಧಿಯವರು” ಎಂದು ಪಕ್ಕದಲ್ಲಿ ಕುಳಿತಿದ್ದ ಸೋನಿಯಾ ಗಾಂಧಿಯವರಿಗೆ ಕೈ ತೋರಿಸುವ ವಿಡಿಯೋ ತುಣುಕು ಕೂಡ ಟಿವಿ ವಿಕ್ರಮ ಪ್ರಸಾರ ಮಾಡಿದೆ.
ಫ್ಯಾಕ್ಟ್‌ಚೆಕ್ : ಟಿವಿ ವಿಕ್ರಮ ಹೇಳಿದಂತೆ ಮಲ್ಲಿಕಾರ್ಜುನ ಖರ್ಗೆಯವರು ತನ್ನನ್ನು ಉನ್ನತ ಸ್ಥಾನಕ್ಕೇರಿಸಿದ ಕಲಬುರಗಿಯ ಜನತೆಯನ್ನು ಮರೆತ್ರಾ? ತನ್ನ ಸಾಧನೆಯ ಎಲ್ಲಾ ಕ್ರೆಡಿಟ್ ಸೋನಿಯಾ ಗಾಂಧಿಯವರಿಗೆ ಮಾತ್ರ ಕೊಟ್ರಾ? ಎಂದು ನಾವು ಸತ್ಯಾಸತ್ಯತೆ ಪರಿಶೀಲಿಸಿದ್ದೇವೆ. ಈ ವೇಳೆ ಟಿವಿ ವಿಕ್ರಮ ಅರ್ಧಂಬರ್ಧ ವಿಡಿಯೋ ಪ್ರಸಾರ ಮಾಡಿ ಜನರನ್ನು ದಾರಿ ತಪ್ಪಿಸುವಂತಹ ಸುದ್ದಿ ಪ್ರಸಾರ ಮಾಡಿರುವುದು ಗೊತ್ತಾಗಿದೆ.
ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆ ಗಮನಿಸಲು ನಾವು ಮೊದಲು ಅವರ ಭಾಷಣದ ಪೂರ್ಣ ವಿಡಿಯೋ ಹುಡುಕಿದ್ದೇವೆ. ಈ ವೇಳೆ ಜುಲೈ 2ರಂದು ಇಂಡಿಯಾ ಟುಡೇ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ “Sonia Gandhi Made Me: Mallikarjun Kharge’s Fiery Reply To Jagdeep Dhankhar In Rajya Sabha” ಎಂಬ ಶೀರ್ಷಕೆಯಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋ ದೊರೆತಿದೆ.
ಈ ವಿಡಿಯೋದಲ್ಲಿ ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಸ್ಪೀಕರ್ ಜಗದೀಪ್ ಧನ್ಕರ್ ಮತ್ತು ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನಡುವೆ ನಡೆದ ವಾಗ್ವಾದವನ್ನು ನೋಡಬಹುದಾಗಿದೆ.

“ನನ್ನನ್ನು ಈ ಸ್ಥಾನಕ್ಕೆ ಬರುವಂತೆ ಮಾಡಿದವರು ಇಲ್ಲೇ ಕುಳಿತಿದ್ದಾರೆ, ಶ್ರೀಮತಿ ಸೋನಿಯಾ ಗಾಂಧಿಯವರು. ಇದಕ್ಕೆ ಜೈರಾಮ್ ರಮೇಶ್ ಅಥವಾ ನೀವು (ಸ್ಪೀಕರ್) ಕಾರಣವಲ್ಲ, ನನ್ನನ್ನು ಜನ ಈ ಸ್ಥಾನಕ್ಕೆ ತಂದಿದ್ದಾರೆ” ಎಂಬ ಅರ್ಥದಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಹೇಳಿಕೆ ನೀಡಿದ್ದಾರೆ. ಆದರೆ, ಇದರಲ್ಲಿ “ಜನರು ನನ್ನನ್ನು ಇಲ್ಲಿಗೆ ತಂದಿದ್ದಾರೆ” ಎಂಬ ಕ್ಲಿಪ್ ಅನ್ನು ಕಟ್ ಮಾಡಿ ಟಿವಿ ವಿಕ್ರಮ ಅರ್ಧಂಬರ್ಧ ವಿಡಿಯೋ ಹಂಚಿಕೊಂಡಿದೆ.
ಆದರೆ, ಇದರ ಅಸಲಿ ವಿಡಿಯೋವನ್ನು ಕಾಂಗ್ರೆಸ್ ಬೆಂಬಲಿಗರು ಸೇರಿದಂತೆ ಹಲವರು ತಮ್ಮ ಎಕ್ಸ್ ಖಾತೆಯಲ್ಲಿ ಎಡಿಟೆಡ್ ವಿಡಿಯೋ ಮತ್ತು ನಿಜವಾದ ವಿಡಿಯೋ ಯಾವುದು ಎಂದು ಹಂಚಿಕೊಂಡಿದ್ದಾರೆ.

ಅರ್ಧಂಬರ್ಧ ವಿಡಿಯೋವನ್ನು ಟಿವಿ ವಿಕ್ರಮ ಮಾತ್ರವಲ್ಲದೆ ಸದಾ ಸುಳ್ಳು ಸುದ್ದಿಗಳನ್ನು ಹರಡುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಕೂಡ ಹಂಚಿಕೊಂಡು ” ಇದು ಕಾಂಗ್ರೆಸ್‌ನ ಮೆಚ್ಚುಗೆಯ ಬ್ರ್ಯಾಂಡ್‌ನಂತೆ ತೋರುತ್ತಿದೆ” ಎಂದು ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಮಲ್ಲಿಕಾರ್ಜುನ ಖರ್ಗೆಯವರು “ನನ್ನನ್ನು ಈ ಸ್ಥಾನಕ್ಕೆ ತಂದಿರುವುದು ಸೋನಿಯಾ ಗಾಂಧಿಯವರು ಮತ್ತು ಜನರು” ಎಂದು ಹೇಳಿದ್ದಾರೆ. ಆದರೆ, ಟಿವಿ ವಿಕ್ರಮ ‘ಸೋನಿಯಾ ಗಾಂಧಿಯವರು’ ಎಂದು ಹೇಳುವ ಅರ್ಧ ವಿಡಿಯೋ ಪ್ರಸಾರ ಮಾಡಿ ಜನರನ್ನು ದಾರಿ ತಪ್ಪಿಸುತ್ತಿದೆ.
ಮಹೇಶ್ ವಿಕ್ರಮ್ ಹೆಗ್ಡೆ ನೇತೃತ್ವದ ಟಿವಿ ವಿಕ್ರಮ ಮತ್ತು ಪೋಸ್ಟ್ ಕಾರ್ಡ್ ಈ ಹಿಂದೆಯೂ ಹಲವು ಬಾರಿ ಸುಳ್ಳು ಮತ್ತು ದಾರಿ ತಪ್ಪಿಸುವಂತಹ ಸುದ್ದಿಗಳನ್ನು ಪ್ರಸಾರ ಮಾಡಿತ್ತು. ಈ ಕುರಿತು ನಾನುಗೌರಿ ನಡೆಸಿರುವ ಕೆಲವು ಫ್ಯಾಕ್ಟ್‌ಚೆಕ್ ಸುದ್ದಿಗಳ ಲಿಂಕ್‌ಗಳು ಕೆಳಗಿದೆ.
Fact Check: ಪಾಕಿಸ್ತಾನದಿಂದ ಕಾಂಗ್ರೆಸ್ ₹10 ಕೋಟಿ ದೇಣಿಗೆ ಪಡೆದಿದೆ ಎಂದು ಸುಳ್ಳು ಸುದ್ದಿ ಹರಡಿದ ಟಿವಿ ವಿಕ್ರಮ
FACT CHEK : ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಎಂದು ರಾಹುಲ್ ಗಾಂಧಿ ಹೇಳಿಲ್ಲ
Fact Check : ಜೆಎನ್‌ಯು ಚುನಾವಣೆಯ ಕುರಿತು ಸುಳ್ಳು ಸುದ್ದಿ ಪ್ರಕಟಿಸಿದ ಸುವರ್ಣ ನ್ಯೂಸ್, ಪೋಸ್ಟ್ ಕಾರ್ಡ್


